ಈಸ್ಟರ್ ದ್ವೀಪದ ಮೋವಾಯ್ ಪ್ರತಿಮೆಗಳು
ಜನರ ವಾಸ ಇಲ್ಲದಿರುವ ಈ ಈಸ್ಟರ್ ದ್ವೀಪ ಪೆಸಿಪಿಕ್ ಸಾಗರದಲ್ಲಿದೆ. ಇದು ದಕ್ಶಿಣ ಅಮೇರಿಕಾದ ಪಶ್ಚಿಮಕ್ಕೆ ಸುಮಾರು 3700 ಕಿಲೋಮೀಟರ್ ದೂರದಲ್ಲಿದೆ. ಇದು ಪ್ರಕ್ಯಾತವಾಗಿರುವುದು ಇಲ್ಲಿರುವ ದೈತ್ಯ ಮೋವಾಯ್ ಪ್ರತಿಮೆಗಳಿಂದ. ಈ ಮೋವಾಯ್ ಪ್ರತಿಮೆಗಳು ಹದಿಮೂರು ಅಡಿ ಎತ್ತರ ಹಾಗೂ ಹದಿಮೂರು ಟನ್ ತೂಕದ ಕಲ್ಲಿನ ಕೆತ್ತನೆಗಳಾಗಿದ್ದು, ಈಸ್ಟರ್ ದ್ವೀಪದ ಕಡಲ ತೀರದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ನಿಂತಿವೆ. ಸಮುದ್ರದ ಕಡೆಯಿಂದ ಬೀಸುವ ಯಾವುದೇ ದುಶ್ಟ ಶಕ್ತಿಯನ್ನು ದ್ವೀಪದೊಳಗೆ ಹೋಗದಂತೆ ತಡೆಯುವ ಕಾವಲುಗಾರನಂತೆ ಕಾಣುತ್ತವೆ. ಮೋವಾಯ್ ಪ್ರತಿಮೆಗಳನ್ನು ಜ್ವಾಲಾಮುಕಿಯ ಬೂದಿ, ಬಸಾಲ್ಟ್ (ಅಗ್ನಿಶಿಲೆ), ಸ್ಕೋರಿಯಾ (ಸರಂದ್ರ ಲಾವಾ) ಇವುಗಳ ಸಂಯುಕ್ತ ಪದಾರ‍್ತದಿಂದ ತಯಾರಿಸಲಾಗಿದೆ.
ಕ್ರಿ.ಶ.800 ರಿಂದ ಕ್ರಿ.ಶ.1200 ರ ಸುಮಾರಿಗೆ ಈ ದ್ವೀಪದಲ್ಲಿ ಪಾಲಿನೇಶ್ಯನ್ ಜನರು ನೆಲೆಸಿದ್ದರು. ಇಲ್ಲಿನ ಜನರು ತಮ್ಮದೇ ಆದ ವಿಶಿಶ್ಟ ಸಂಸ್ಕ್ರುತಿ ಮತ್ತು ಬಾಶೆಯನ್ನು ರಚಿಸಿಕೊಳ್ಳಲು ಇವರುಗಳು ಇತರೆ ನಾಗರೀಕತೆಯಿಂದ ಬಹಳ ದೂರವಿದ್ದದ್ದೇ ಕಾರಣವಾಯಿತು. ”ಈ ಪಾಲಿನೇಶ್ಯನ್ ವಸಾಹತುಗಾರರೇ ಮೋವಾಯ್ ಪ್ರತಿಮೆಗಳ ಸ್ರುಶ್ಟಿಕರ‍್ತರೇ?” ಎಂಬ ವಿಚಾರ ಇನ್ನೂ ಪೂರ‍್ಣವಾಗಿ ಸಾಬೀತಾಗಿಲ್ಲ. ಇದರ ಸಂಶೋದನೆಯಲ್ಲಿ ನಿರತರಾಗಿರುವವರ ಮುಂದೆ ಪಾಲಿನೇಶ್ಯನ್ ವಸಾಹತುಗಾರರು ಇದನ್ನು ಹೇಗೆ ರಚಿಸಿದರು? ಮೋವಾಯ್ ಪ್ರತಿಮೆಗಳು ಎಂದರೆ ಏನು? ಈ ಕಾವಲುಗಾರರ ಸ್ರುಶ್ಟಿಗೆ ಕಾರಣವಾದ ಅಂಶ ಯಾವುದು? ಪ್ರೇರಣೆ ಏನು? ಅವರುಗಳೇ ಹುಟ್ಟುಹಾಕಿದ ಸಂಸ್ಕ್ರುತಿ ಏನಾಯಿತು? ಇವೇ ಮುಂತಾದ ಪ್ರಶ್ನೆಗಳು ಇನ್ನೂ ಚರ‍್ಚೆಯ ಹಂತದಲ್ಲೇ ಇವೆಯೇ ಹೊರತು ಯಾವುದಕ್ಕೂ ನಿಕರವಾದ ಉತ್ತರ ದೊರಕಿಲ್ಲ.
ಈಸ್ಟರ್ ದ್ವೀಪವು ಜ್ವಾಲಾಮುಕಿಯ ಪ್ರದೇಶವಾಗಿದ್ದು, ಸುತ್ತಮುತ್ತಲಿನ ಎಲ್ಲಾ ದ್ವೀಪಗಳೂ ಸಹ ಜ್ವಾಲಾಮುಕಿಯನ್ನು ಹೊಂದಿವೆ. ಜ್ವಾಲಾಮುಕಿಯಿಂದ ಹರಿದು ಬರುವ ಲಾವಾ ಆರಿ ತಣ್ಣಗಾದ ಮೇಲೆ ಗಟ್ಟಿಯಾದ ಬಂಡೆಯಾಗುತ್ತದೆ. ಈ ಬಂಡೆಗಳನ್ನು ಕೆತ್ತಿ ಮೋವಾಯ್ ಪ್ರತಿಮೆಗಳನ್ನು ರಚಿಸಿದ್ದಾರೆ. ಜ್ವಾಲಾಮುಕಿಯ ಬೆಟ್ಟದ ಮೇಲ್ಬಾಗದಲ್ಲಿ ಈ ಪ್ರತಿಮೆಗಳನ್ನು ಕೆತ್ತಿ, ಹದಿಮೂರು ಟನ್ನಿಗೂ ಹೆಚ್ಚು ತೂಕದ ಪ್ರತಿಮೆಗಳನ್ನು 450 ಕೋನದ ಇಳಿಜಾರಿನಲ್ಲಿ ಕೆಳಗಿಳಿಸಿ, ಕಡಲ ತೀರಕ್ಕೆ ಹೇಗೆ ಸಾಗಿಸಿದರು ಹಾಗೂ ಅವುಗಳನ್ನು ಒಂದರ ಪಕ್ಕ ಮತ್ತೊಂದು ಬರುವಂತೆ ಜೋಡಿಸಿದ್ದಾದರೂ ಹೇಗೆ? ಎಂಬುದು ಇನ್ನೂ ಬಗೆಹರಿಯದ ನಿಗೂಡತೆಯಿಂದಲೇ ಕೂಡಿದೆ.
ಸಂಶೋದನೆಗಳಿಂದ ಕಂಡು ಬಂದ ವಿಚಾರವೇನೆಂದರೆ, ಮರದ ರೋಲರ್ ಗಳನ್ನು ಹಾಗೂ ಹಗ್ಗಗಳನ್ನು ಬಳಸಿ ಮೇಲಿನಿಂದ ಕೆಳಕ್ಕೆ ಹಾಗೂ ಅಲ್ಲಿಂದ ಕಡಲ ತೀರಕ್ಕೆ, ಅಂದಾಜು 15 ಕಿಲೋಮೀಟರ್ ದೂರ ಸಾಗಿಸಿರಬಹುದು ಎಂದು ಊಹಿಸಲಾಗಿದೆ. ಆದರೆ ಈ ರೀತಿ ರೋಲರ್ ಬಳಸಿ ಸಾಗಿಸಲು ನೆಲೆ ಸಮತಟ್ಟಾಗಿರಬೇಕು, ಇಲ್ಲಿ ಆ ಕಾಲದಲ್ಲಿ ಅಂತಹ ಸಮತಟ್ಟಾದ ಪ್ರದೇಶ ಇದ್ದಂತೆ ಕಾಣುವುದಿಲ್ಲ. ಇಲ್ಲಿನ ಪ್ರದೇಶವು ಉಬ್ಬು ತಗ್ಗುಗಳಿಂದ ಕೂಡಿದೆ. ಬೇರಾವುದೋ ರೀತಿಯಲ್ಲಿ ಅವರು ಸಾಗಿಸಿರಬೇಕು ಎಂಬ ಸಂಶಯ ಸಂಶೋದಕರಲ್ಲಿದೆ. ಈ ಪ್ರತಿಮೆಗಳನ್ನು ಹೇಗೆ ತಯಾರಿಸಲಾಯಿತು?, ಅವುಗಳನ್ನು ಈಗಿನ ಸ್ತಳಕ್ಕೆ ಹೇಗೆ ತರಲಾಯಿತು? ಎಂಬ ವಿಚಾರದ ಬಗ್ಗೆ ಸಂಶೋದಕರಲ್ಲೇ ಗೊಂದಲಗಳಿವೆ. ಯಾವುದೇ ನಿಕರವಾದ ಮಾಹಿತಿ ಸಿಗದ ಕಾರಣ ಹೀಗೆ ಕೆಳಗಿಳಿಸಿ ಸಾಗಿಸಿದ್ದಾರೆ ಎಂದು ಊಹಿಸಲು ಪುರಾತತ್ವ ಶಾಸ್ತ್ರದ ಮಾಹಿತಿಯಿಲ್ಲ. ಇದೇ ಕಾರಣಕ್ಕೆ ಪುರಾತತ್ವಜ್ನರು , ಮಾನವಶಾಸ್ತ್ರಜ್ನರು ಮತ್ತು ಇತಿಹಾಸಕಾರರು ಈ ರಹಸ್ಯದಿಂದ ಆಕರ‍್ಶಿತರಾಗುತ್ತಿದ್ದು, ಇದರ ಹಿಂದೆ ಇರಬಹುದಾದ ರಹಸ್ಯವನ್ನು ಹೊರಗೆಳೆಯಲು ಸತತ ಪ್ರಯತ್ನ ಮುಂದುವರೆದಿದೆ.
ಧನ್ಯವಾದ ಸರ್