ರವೀಂದ್ರನಾತ ಟ್ಯಾಗೋರರ ಕವನಗಳು ಓದು – 10 ನೆಯ ಕಂತು
– ಸಿ.ಪಿ.ನಾಗರಾಜ.
ಹಣತೆ “ಅಣ್ಣಾ” ಎಂದು ಗಾಜಿನಾ ದೀಪವನು
ಕರೆಯೆ ಹೇಳಿತು ದೀಪ ಕೋಪವನು ತಾಳಿ
“ಹೀನಕುಲ ಸಂಜಾತ, ನೀನು ಮಣ್ಣಿನ ಹಣತೆ
ನನ್ನನಣ್ಣಾ ಎಂದು ಕರೆಯಬೇಡಿನ್ನು”
ಮತ್ತೆ ಸಂಜೆಯ ವೇಳೆ ಚಂದ್ರಮನು ಉದಯಿಸಲು
ಮೃದುವಾದ ತಂಗದಿರು ಜಗವ ಬೆಳಗಿಸಿತು
ಮುಖದಲ್ಲಿ ಒಣನಗುವ ತಂದು ಗಾಜಿನ ದೀಪ
“ಅಣ್ಣ ಬಾರ” ಎಂದು ಚಂದ್ರಮನ ಕರೆದಿತ್ತು.
ನಿತ್ಯ ಜೀವನದ ವ್ಯವಹಾರಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಅಂತಸ್ತಿನಲ್ಲಿ ತನಗಿಂತ ಕಡಿಮೆ ಇರುವವರನ್ನು ಕೀಳಾಗಿ ಕಾಣುತ್ತಾನೆ. ತನಗಿಂತ ಮೇಲಿನವರನ್ನು ಹಿರಿದಾಗಿ ಕಾಣುತ್ತಾನೆ ಎಂಬ ವಾಸ್ತವದ ಸಂಗತಿಯನ್ನು ರೂಪಕವೊಂದರ ಮೂಲಕ ಈ ಕವನದಲ್ಲಿ ಚಿತ್ರಿಸಲಾಗಿದೆ.
‘ಸಾಮಾಜಿಕ ಅಂತಸ್ತು’ ಎಂದರೆ ವ್ಯಕ್ತಿಯು ಹುಟ್ಟಿರುವ ಜಾತಿ ಮತ್ತು ಮತ; ಹೊಂದಿರುವ ಆಸ್ತಿ ಒಡವೆ ವಸ್ತು; ಪಡೆದಿರುವ ಆಡಳಿತದ ಗದ್ದುಗೆಯನ್ನು ಅಳತೆಗೋಲನ್ನಾಗಿ ಮಾಡಿಕೊಂಡು ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮಟ್ಟವನ್ನು ಗೊತ್ತುಪಡಿಸುವುದು.
ಈ ಮಾನದಂಡದಿಂದಲೇ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಮೇಲುಜಾತಿ/ನಡುವಣ ಜಾತಿ/ಕೀಳುಜಾತಿ ಎಂಬ ನೆಲೆಯಲ್ಲಿ; ಅತಿ ಸಿರಿವಂತ/ಸಿರಿವಂತ/ಸಾಮಾನ್ಯ ಅನುಕೂಲವಂತ/ಬಡವ ಎಂಬ ಸಂಪತ್ತಿನ ನೆಲೆಯಲ್ಲಿ; ಆಡಳಿತದ ಬೇರೆ ಬೇರೆ ರಂಗಗಳಲ್ಲಿ ಹುದ್ದೆಯಲ್ಲಿ ಇರುವವನು/ಯಾವುದೇ ಹುದ್ದೆಯಲ್ಲಿಯೂ ಇಲ್ಲದವನು ಎಂಬ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ನೆಲೆಗಳಿಂದಲೇ ವ್ಯಕ್ತಿಗೆ ಸಾಮಾಜಿಕವಾದ ಸ್ತಾನಮಾನ ಮತ್ತು ಅವಕಾಶಗಳು ದೊರೆಯುತ್ತವೆ ಇಲ್ಲವೇ ತಪ್ಪಿಹೋಗುತ್ತವೆ.
ಹಣತೆ=ಮಣ್ಣಿನ ದೀಪ/ಸೊಡರು ; ಅಣ್ಣ=ಗಂಡಸನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಗಾಜಿನ ದೀಪ=ಬೆಳಗುತ್ತಿರುವ ದೀಪದ ಕುಡಿಯು ಗಾಳಿ ಬೀಸಿದಾಗ ನಂದಿಹೋಗದಂತೆ ಅದರ ಸುತ್ತಲೂ ಗಾಜನ್ನು ಅಳವಡಿಸಿ ಮಾಡಿರುವ ದೀಪ;
ಕರೆ=ಕೂಗು/ಮಾತನಾಡು;
ಹಣತೆ “ಅಣ್ಣಾ” ಎಂದು ಗಾಜಿನಾ ದೀಪವನು ಕರೆಯೆ=ಮಣ್ಣಿನ ದೀಪವು ಗಾಜಿನ ದೀಪವನ್ನು ‘ಅಣ್ಣಾ’ ಎಂದು ಪ್ರೀತಿಯಿಂದ ಕರೆದಾಗ;
ಕೋಪ=ಸಿಟ್ಟು; ತಾಳು=ಹೊಂದಿ; ಹೀನ=ಕೀಳಾದ; ಕುಲ=ಜಾತಿ/ಕುಲ; ಹೀನಕುಲ=ಕೆಳಜಾತಿ; ಸಂಜಾತ=ಹುಟ್ಟಿದವನು; ಹೀನಕುಲ ಸಂಜಾತ=ಕೀಳು ಜಾತಿಯವನು/ಸಾಮಾಜಿಕವಾಗಿ ಕೆಳಹಂತದವನು;
ನನ್ನನ್+ಅಣ್ಣಾ; ಕರೆಯಬೇಡ+ಇನ್ನು; ಇನ್ನು=ಇನ್ನು ಮುಂದೆ;
“ಹೀನಕುಲ ಸಂಜಾತ ನೀನು ಮಣ್ಣಿನ ಹಣತೆ… ನನ್ನನಣ್ಣಾ ಎಂದು ಕರೆಯಬೇಡಿನ್ನು”=ಗಾಳಿ ಬೀಸಿದಾಗ ನಂದಿಹೋಗುವ ಮಣ್ಣಿನ ದೀಪಕ್ಕಿಂತಲೂ “ನಾನು ದೊಡ್ಡವನು/ ನಾನು ಉತ್ತಮ” ಎಂಬ ನಿಲುವನ್ನು ಮತ್ತು ಅಹಂಕಾರವನ್ನು ಗಾಜಿನ ದೀಪ ಹೊಂದಿದೆ; ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಯು ತನಗಿಂತ ಸಾಮಾಜಿಕ ಅಂತಸ್ತಿನಲ್ಲಿ ಕೆಳಮಟ್ಟದಲ್ಲಿರುವ ವ್ಯಕ್ತಿಯೊಡನೆ ಆತ್ಮೀಯವಾದ ನಂಟನ್ನಾಗಲಿ ಇಲ್ಲವೇ ಸರಿಸಮಾನತೆಯ ಗೆಳೆತನದ ಒಡನಾಟವನ್ನಾಗಲಿ ಹೊಂದಲು ಇಲ್ಲವೇ ಮುಂದುವರಿಸಲು ಇಚ್ಚಿಸುವುದಿಲ್ಲ; ಅಂತಹವರಿಂದ ಮಾನಸಿಕವಾಗಿ ದೂರವಿರಲು ಪ್ರಯತ್ನಿಸುತ್ತಾನೆ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ;
ಮತ್ತೆ=ಬಳಿಕ/ನಂತರ/ಆಮೇಲೆ; ಸಂಜೆ=ಸಾಯಂಕಾಲ; ಮತ್ತೆ ಸಂಜೆ=ಮತ್ತೊಂದು ದಿನ ಸಾಯಂಕಾಲದ ಸಮಯದಲ್ಲಿ;
ಚಂದ್ರಮ=ಚಂದ್ರ; ಉದಯ=ಹುಟ್ಟು; ಮೃದು=ಕೋಮಲವಾದ/ಪ್ರಶಾಂತವಾದ; ತಣ್ಣನೆಯ+ಕದಿರು; ತಣ್ಣನೆ=ತಂಪಾಗಿರುವ; ಕದಿರು=ಕಿರಣ; ತಂಗದಿರು=ಬೆಳುದಿಂಗಳು; ಜಗ=ಪ್ರಪಂಚ/ಲೋಕ; ಬೆಳಗು=ಹೊಳೆ/ಪ್ರಕಾಶಿಸು;
ಮತ್ತೆ ಸಂಜೆಯ ವೇಳೆ ಚಂದ್ರಮನು ಉದಯಿಸಲು ಮೃದುವಾದ ತಂಗದಿರು ಜಗವ ಬೆಳಗಿಸಿತು=ಮತ್ತೊಂದು ದಿನ ಸಂಜೆ ಸಮಯದಲ್ಲಿ ಚಂದ್ರನು ಮೂಡಿಬರಲು, ತಂಪಾದ ಬೆಳದಿಂಗಳು ಎಲ್ಲೆಡೆಯಲ್ಲಿಯೂ ಹರಡಿ ಕಂಗೊಳಿಸತೊಡಗಿತು;
ಒಣನಗು=ತೋರಿಕೆಯ ನಗು/ವ್ಯಕ್ತಿಯ ಮನಸ್ಸಿನಲ್ಲಿ ಮತ್ತೊಬ್ಬನ ಬಗ್ಗೆ ಯಾವುದೇ ಒಲವು ನಲಿವು ಇಲ್ಲದಿದ್ದರೂ, ಅವನನ್ನು ಮೆಚ್ಚಿಸಿಕೊಂಡು ನಂಟನ್ನು ಇಲ್ಲವೇ ಗೆಳೆತನವನ್ನು ಪಡೆಯುವುದಕ್ಕಾಗಿ ಬೀರುವ ನಗು; ಬಾರ=ಬನ್ನಿರಿ; ಕರೆದು+ಇತ್ತು; ಕರೆದಿತ್ತು=ಮಾತನಾಡಿಸಿತು;
ಮುಖದಲ್ಲಿ ಒಣನಗುವ ತಂದು ಗಾಜಿನ ದೀಪ “ಅಣ್ಣ… ಬಾರ” ಎಂದು ಚಂದ್ರಮನ ಕರೆದಿತ್ತು=ತನಗಿಂತ ಸಾವಿರಾರುಪಟ್ಟು ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಿರುವ ಚಂದ್ರನ ಬಗ್ಗೆ ಮನದೊಳಗೆ ಯಾವುದೇ ಬಗೆಯ ಪ್ರೀತಿಯಿಲ್ಲದಿದ್ದರೂ, ದೊಡ್ಡವನಾದ ಚಂದ್ರನನ್ನು ಮೆಚ್ಚಿಸಿಕೊಳ್ಳುವುದಕ್ಕಾಗಿ ಗಾಜಿನ ದೀಪವು “ಅಣ್ಣಾ… ಬಾರಾ” ಎಂದು ಕರೆಯುತ್ತಿದೆ;
ಪ್ರತಿನಿತ್ಯದ ವ್ಯವಹಾರಗಳಲ್ಲಿ ವ್ಯಕ್ತಿಯು ಮೇಲುಜಾತಿಯವರ/ಸಿರಿವಂತರ/ಆಡಳಿತದ ಉನ್ನತ ಗದ್ದುಗೆಯಲ್ಲಿ ಇರುವವರ ಮುಂದೆ ಅತ್ಯಂತ ವಿನಯದಿಂದ ನಡೆದುಕೊಂಡು ಅವರೊಡನೆ ನಂಟನ್ನು ಪಡೆಯಲು ಹಂಬಲಿಸುವ ಮತ್ತು ಕೆಳಜಾತಿಯವರನ್ನು/ಬಡವರನ್ನು/ಆಡಳಿತದ ಗದ್ದುಗೆಯಿಲ್ಲದವರನ್ನು ಕಡೆಗಣಿಸಿ, ಅವರಿಂದ ದೂರವಿರಲು ಬಯಸುವ ಇಬ್ಬಗೆಯ ನಡೆನುಡಿಯನ್ನು ಗಾಜಿನ ದೀಪದ ಮಾತಿನ ರೂಪಕದ ಮೂಲಕ ಚಿತ್ರಿಸಲಾಗಿದೆ.
ತಾರತಮ್ಯದಿಂದ ಕೂಡಿದ ಇಂತಹ ಇಬ್ಬಗೆಯ ನಡೆನುಡಿಯು ನಮ್ಮನ್ನೂ ಒಳಗೊಂಡಂತೆ ಎಲ್ಲ ಕಾಲದಲ್ಲಿಯೂ ಎಲ್ಲ ವ್ಯಕ್ತಿಗಳಲ್ಲಿಯೂ ಒಂದಲ್ಲ ಒಂದು ಪ್ರಮಾಣದಲ್ಲಿ ಇರುವ ವಾಸ್ತವವನ್ನು ಈ ಕವನದಲ್ಲಿನ ಸಂಗತಿಯು ಸೂಚಿಸುತ್ತಿದೆ;
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು