ಪೀಡೆನಾಶಕಗಳ ಜಗತ್ತು – 3 ನೇ ಕಂತು
ಹಿಂದಿನ ಕಂತಿನಲ್ಲಿ ಪೀಡೆ ನಾಶಕಗಳು ಕೀಟದ ದೇಹಬಾಗಗಳ ಮೇಲೆ ನಿರ‍್ವಹಿಸುವ ಕಾರ‍್ಯವಿದಾನದ ಆದಾರದ ಮೇಲೆ ವಿಂಗಡಿಸಲಾದ 5 ವರ‍್ಗಗಳು ಯಾವುವೆಂದು ತಿಳಿದುಕೊಂಡಿದ್ದೆವು. ಈ ಕೊನೆಯ ಕಂತಿನಲ್ಲಿ ಆ 5 ವರ‍್ಗಗಳ ಬಗ್ಗೆ ವಿವರವಾಗಿ ತಿಳಿಯೋಣ.
1. ನರಮಂಡಲ ಮತ್ತು ಮಾಂಸಕಂಡ – 15 ಪ್ರವರ‍್ಗಗಳು – 25 ಗುಂಪುಗಳು
ಸದ್ಯ ಬಳಕೆಯಲ್ಲಿರುವ ಕೀಟನಾಶಕಗಳಲ್ಲಿ ಶೇ. 90 ರಶ್ಟು ಕೀಟನಾಶಕಗಳು ಕಾರ‍್ಯನಿರ‍್ವಹಿಸುವುದು ಕೀಟದ ನರಮಂಡಲದ ಮೇಲೆಯೆ ಈ ವಿಬಾಗದ ರಾಸಾಯನಿಕಗಳು ನರಮಂಡಲದ ಮೂಲಕ ಮಾಂಸಕಂಡಗಳನ್ನು ಗುರಿಯಾಗಿಸಿ ಕೆಲಸ ನಿರ‍್ವಹಿಸುವ ರಾಸಾಯನಿಕಗಳು. ಇವುಗಳು ನರಮಂಡಲದ ಮಾಹಿತಿ ಸಂವಹನದ ಪ್ರಮುಕ ಬಾಗವಾದ ನರಕೋಶದಲ್ಲಿರುವ ಅಸಿಟೈಲ್‍ಕೋಲಿನ್‍ಈಸ್ಟ್ರೇಸ್ ಕಿಣ್ವ, ಕ್ಲೋರೈಡ್ ಚಾನೆಲ್ಲುಗಳು, ಸೋಡಿಯಂ ಚಾನೆಲ್ಲುಗಳು, ಪೊಟ್ಯಾಶಿಯಂ ಚಾನೆಲ್ಲುಗಳು ಹಾಗೂ ಕೀಲುಗಳ ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕೀಟಗಳನ್ನು ನಿಯಂತ್ರಿಸುತ್ತವೆ.
2. ಬೆಳವಣಿಗೆ – 7 ಪ್ರವರ‍್ಗಗಳು – 10 ಗುಂಪುಗಳು
ಕೀಟಗಳ ಜೀವನಚಕ್ರದಲ್ಲಿ ಪೊರೆ ಬಿಡುವುದು (ಮೌಲ್ಟಿಂಗ್) ತುಂಬಾ ಅವಶ್ಯಕ ಪ್ರಕ್ರಿಯೆ. ಈ ಪೊರೆಯ ರಚನೆಗೆ ‘ಕೈಟಿನ್’ ಎಂಬ ಪ್ರೋಟೀನ್ ಅತ್ಯಗತ್ಯ. ಇದರ ರಚನಾ ಕ್ರಿಯೆಯು ‘ಎಕ್ಡೋಸೈನ್’ ಹಾಗೂ ‘ಜುವೆನೈಲ್ ಹಾರ‍್ಮೋನ್’ ಎಂಬ ಎರಡು ಹಾರ‍್ಮೋನಿಗಳಿಂದ ನಡೆಯುವ ವ್ಯವಸ್ತಿತ ಕ್ರಿಯೆ. ‘ಎಕ್ಡೋಸೈನ್’ ಹಾರ‍್ಮೋನು ಪೊರೆ ಬಿಡುವ ಪ್ರಕ್ರಿಯೆಯನ್ನು ಶುರುಗೊಳಿಸಿದರೆ ‘ಜುವೆನೈಲ್ ಹಾರ‍್ಮೋನ್’ ಆ ಕ್ರಿಯೆಯನ್ನು ಸರಿಯಾದ ಸಮಯಕ್ಕೆ ಕೊನೆಗೊಳಿಸುತ್ತದೆ. ಈ ಹಾರ‍್ಮೋನುಗಳಲ್ಲಾಗುವ ಏರುಪೇರು ಕೀಟದ ಸಾವಿಗೆ ಕಾರಣವಾಗಬಹುದು. ಈ ವರ‍್ಗದ ಕೀಟನಾಶಕಗಳು ಈ ಎರಡು ಹಾರ‍್ಮೋನುಗಳ ಮೇಲೆ ಹಾಗೂ ‘ಕೈಟಿನ್’ನ ರಚನೆಯ ಮೇಲೆ ಪರಿಣಾಮ ಬೀರಿ ಕೀಟಗಳನ್ನು ನಿಯಂತ್ರಿಸುತ್ತವೆ.
3. ಉಸಿರಾಟ – 7 ಪ್ರವರ‍್ಗಗಳು – 16 ಗುಂಪುಗಳು
ಮನುಶ್ಯರಂತೆಯೇ ಕೀಟಗಳಿಗೂ ಕೂಡ ತಮ್ಮ ಜೀವಕೋಶಗಳಲ್ಲಿನ ಮೈಟೋಕಾಂಡ್ರಿಯಾಗಳೇ ಶಕ್ತಿ ಉತ್ಪಾದನಾ ಕೇಂದ್ರಗಳು. ಉಸಿರಾಟ ಕ್ರಿಯೆಯಿಂದ ದೊರೆಯುವ ಆಮ್ಲಜನಕದ ಸಹಾಯದಿಂದ ಈ ಮೈಟೋಕಾಂಡ್ರಿಯಾಗಳಲ್ಲಿ ಶಕ್ತಿಯು ‘ಏ.ಟಿ.ಪಿ’ ಎಂಬ ಅಣುಗಳ ರೂಪದಲ್ಲಿ ಬಿಡುಗಡೆಯಾಗುತ್ತದೆ. ಈ ವರ‍್ಗದ ಕೀಟನಾಶಕಗಳು ‘ಏ.ಟಿ.ಪಿ’ ಉತ್ಪಾದನೆಯ ವಿವಿದ ಹಂತಗಳಲ್ಲಿ ಎಲೆಕ್ಟ್ರಾನ್ ಸರಬರಾಜನ್ನು ಅವ್ಯವಸ್ತಗೊಳಿಸಿ ‘ಏ.ಟಿ.ಪಿ’ಗಳ ಉತ್ಪಾದನೆಯನ್ನು ಸ್ತಗಿತಗೊಳಿಸುವ ಮೂಲಕ ಕೀಟಗಳನ್ನು ನಿಯಂತ್ರಿಸುತ್ತವೆ.
4. ಉದರ – 2 ಪ್ರವರ‍್ಗಗಳು – 3 ಗುಂಪುಗಳು
ಈ ವರ‍್ಗದ ಕೀಟನಾಶಕಗಳು ನಿರ‍್ದಿಶ್ಟವಾಗಿ ಚಿಟ್ಟೆ ಮತ್ತು ಪತಂಗ(ಲೆಪೆಡೋಪ್ಟೆರಾ) ಜಾತಿಯ ಕೀಟಗಳ ಮೇಲೆ ಪರಿಣಾಮ ಬೀರುತ್ತವೆ. ಕೀಟಗಳ ದೇಹ ಸೇರಿ ಅವುಗಳ ಕರುಳು ತಲುಪಿ, ಕರುಳಿನ ಜೀವಕೋಶಗಳನ್ನು ಚಿದ್ರಗೊಳಿಸುತ್ತವೆ. ಇದರಿಂದ ಕೀಟದ ಜೀರ‍್ಣಾವ್ಯಸ್ತೆ ಅಸ್ತವ್ಯಸ್ತಗೊಂಡು ಕೀಟದ ಸಾವು ಸಂಬವಿಸುತ್ತದೆ.
5. ಗುರುತಿಸಲಾಗದ ಅತವಾ ಬಹು ಅಂಗಗಳ ಮೇಲೆ ಪರಿಣಮಿಸುವ – 10 ಪ್ರವರ‍್ಗಗಳು – 18 ಗುಂಪುಗಳು
ಕೀಟನಾಶಕವು ಕಾರ‍್ಯನಿರ‍್ವಹಿಸುತ್ತಿದ್ದರೂ ಅದರ ಕಾರ‍್ಯನಿರ‍್ವಹಿಸುವ ವಿದಾನವನ್ನು ಪತ್ತೆಹಚ್ಚಲಾಗಿಲ್ಲ ಅತವಾ ಅದು ಒಂದಕ್ಕಿಂತ ಹೆಚ್ಚು ದೇಹಬಾಗಗಳ ಮೇಲೆ ಕಾರ‍್ಯನಿರ‍್ವಹಿಸುತ್ತಿರಬಹುದು.
ವಿಶೇಶ ಸೂಚನೆ: ಮೇಲೆ ಉಲ್ಲೇಕಿಸಲಾದ ವಿಂಗಡಣೆಯು ಪರಿಪೂರ‍್ಣವಾಗಿರುವುದಿಲ್ಲ. ಕೇವಲ ಪರಿಚಿತವಿರುವ ಕೆಲವು ರಾಸಾಯನಿಕಗಳನ್ನು ಅವುಗಳು ಸೇರುವ ಗುಂಪಿಗೆ ಅನುಸಾರವಾಗಿ ನಮೂದಿಸಲಾದೆ.
ಪೀಡೆನಾಶಕಗಳ ಪ್ರತಿರೋದಕತೆ, ಸದ್ಯದ ಪರಿಸ್ತಿತಿಯಲ್ಲಿ ಒಂದು ಗಂಬೀರ ಸಮಸ್ಯೆಯಾಗಿದ್ದು ಇದನ್ನು ನಿಯಂತ್ರಿಸಲು ಪೀಡೆನಾಶಕಗಳ ಶಿಸ್ತಿನ ಬಳಕೆ ಅತ್ಯಗತ್ಯ. ಇದರಿಂದ ಉತ್ಪಾದನಾ ವೆಚ್ಚವೂ ಕಡಿಮೆಯಾಗುವುದಲ್ಲದೇ ಪೀಡೆಗಳನ್ನೂ ಕೂಡ ಸಮರ‍್ತವಾಗಿ ನಿಯಂತ್ರಿಸಬಹುದು. ಕೀಟನಾಶಕಗಳಂತೆ ಶಿಲೀಂದ್ರನಾಶಕಗಳು ಹಾಗೂ ಕಳೆನಾಶಕಗಳೂ ಕೂಡ ವ್ಯವಸ್ತಿತ ವಿಂಗಡಣೆಯನ್ನು ಹೊಂದಿವೆ. ಶಿಲೀಂದ್ರನಾಶಕಗಳನ್ನು ಎಪ್.ಆರ್.ಏ.ಸಿ (ಪಂಗೀಸೈಡ್ ರೆಸಿಸ್ಟನ್ಸ್ ಆ್ಯಕ್ಶನ್ ಕಮೀಟಿ) ಹಾಗೂ ಕಳೆನಾಶಕಗಳನ್ನು ಹೆಚ್.ಆರ್.ಏ.ಸಿ (ಹರ‍್ಬೀಸೈಡ್ ರೆಸಿಸ್ಟನ್ಸ್ ಆ್ಯಕ್ಶನ್ ಕಮೀಟಿ)ಸಂಸ್ತೆಗಳು ಅವುಗಳ ಕಾರ‍್ಯವಿದಾನದ ಆದಾರದ ಮೇಲೆ ವಿಂಗಡಿಸುತ್ತವೆ. ರೈತರಿಗೆ ಸಿಂಪಡಣಾ ಸಲಹೆ ನೀಡುವ ಪ್ರತಿಯೊಬ್ಬರು ಈ ವಿಂಗಡಣೆಗಳನ್ನು ಅರಿತಾಗ ಅವರಿಗೆ ಸಮಂಜಸ ಸಿಂಪಡಣಾ ಸಲಹೆಗಳನ್ನು ನೀಡಬಲ್ಲರು.
(ಚಿತ್ರ ಹಾಗೂ ಮಾಹಿತಿ ಸೆಲೆ: pixabay.com, irac-online )
ಇತ್ತೀಚಿನ ಅನಿಸಿಕೆಗಳು