ಇಟಲಿಯ ರಿಮಿನಿಯಲ್ಲಿರುವ ಏವಿಯೇಶನ್ ​​ಪಾರ‍್ಕ್

– .

ಇಟಲಿಯ ರಿಮಿನಿಯಲ್ಲಿ 1988ರಲ್ಲಿ “ಕೋಲ್ಡ್ ವಾರ್ ಏವಿಯೇಶನ್ ಮ್ಯೂಸಿಯಂ” ಸ್ತಾಪನೆಯಾಯಿತು. ಬರ‍್ಲಿನ್ ಗೋಡೆಯ ಪತನದ ನಂತರ ಅಂದರೆ 1989ರ ನಂತರದಲ್ಲಿ ಈ ಉದ್ಯಾನವನ್ನು ಅಬಿವ್ರುದ್ದಿಗೊಳಿಸಲಾಯಿತು. ಸೋವಿಯತ್ ಪ್ರಬಾವದ ಪ್ರದೇಶದಿಂದ ಹೊರ ಬಂದ ದೇಶಗಳು ಎರಡನೆಯ ಮಹಾಯುದ್ದದಲ್ಲಿ ಬಳಕೆಯಾದ ವಿಮಾನಗಳನ್ನು ಹಿಂದಕ್ಕೆ ಪಡೆಯಲು ಪ್ರಾರಂಬಿಸಿದವು. ಇದು 20ನೇ ಶತಮಾನದ ದ್ವಿತೀಯಾರ‍್ದದಲ್ಲಾದ ಗಟನೆ. ಹೀಗೆ ಹಿಂದಕ್ಕೆ ಪಡೆದ ವಿಮಾನಗಳನ್ನು ಒಂದೆಡೆ ನೆಲೆಗಾಣಿಸಿದ್ದು, ಐತಿಹಾಸಿಕ ಉದ್ಯಾನವದ ಸ್ತಾಪನೆಗೆ ಕಾರಣವಾಯಿತು.

ಮ್ಯೂಸಿಯಂನಲ್ಲಿ ಏನಿದೆ?

ರಿಮಿನಿಯಲ್ಲಿರುವ ಈ ಮ್ಯೂಸಿಯಂನ ಪ್ರವಾಸ ಸುಮಾರು ಎರಡು ಗಂಟೆಯ ಅವದಿಯದ್ದು. ಮುಕ್ಯ ದ್ವಾರದ ಮೂಲಕ ಒಳಗೆ ಕಾಲಿಟ್ಟರೆ ಮೊದಲು ಎದುರಾಗುವುದು ಎರಡು ಆಸನಗಳ ಮಿಗ್ -21ರ ಕ್ಯಾಬಿನ್. ಮಿಗ್-21 ಇಂದಿಗೂ ಕಾರ‍್ಯನಿರತವಾಗಿರುವ ಯುದ್ದ ವಿಮಾನ. ಇದನ್ನು ಹತ್ತಿ ಒಳ ಹೋದರೆ, ಮಿಗ್-21ರಲ್ಲಿ ಕುಳಿತಾಗ ಹೊರ ಪ್ರಪಂಚ ಹೇಗೆ ಕಾಣುತ್ತದೆ ಎಂಬ ದ್ರುಶ್ಯ ಕಣ್ಣಮುಂದೆ ಬರುತ್ತದೆ. ಇಲ್ಲಿ ವಿವಿದ ಕೋನಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಇದರ ನಂತರ ಕಂಡು ಬರುವುದು ತರೆಹೇವಾರಿ ಇಂಜಿನ್ನುಗಳು. ಎರಡನೇ ಮಹಾಯುದ್ದದ ಕಾಲದಲ್ಲಿ ಬಳಸುತ್ತಿದ್ದ ಪಿಸ್ಟನ್ ಇಂಜಿನ್‌ನಿಂದ ಮೊದೊಲ್ಗೊಂಡು ಆದುನಿಕ ಟರ‍್ಬೋಜೆಟ್ ಇಂಜಿನ್‌ವರೆಗೂ ವಿಮಾನಗಳ ಇಂಜಿನ್ ಗಳ ಸರಣಿಯನ್ನು ವೀಕ್ಶಿಸಬಹುದು.

ಈ ಏವಿಯೇಶನ್ ಮ್ಯೂಸಿಯಂನಲ್ಲಿನ ವಿಮಾನಗಳ ಸಂಕ್ಯೆ ನಲವತ್ತಕ್ಕೂ ಹೆಚ್ಚಿದೆ. ಇವುಗಳನ್ನು ಎರಡು ಬಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಬಾಗವನ್ನು ನಾಟೋಗೆ (NATO) ಮೀಸಲಿಡಲಾಗಿದೆ. ಇಲ್ಲಿ ಪ್ರಮುಕವಾಗಿ ಇಟಾಲಿಯನ್, ಬ್ರಿಟೀಶ್ ಮತ್ತು ಅಮೇರಿಕನ್ ಉತ್ಪಾದನೆಯ ವಿಮಾನಗಳು ಹಾಗೂ ಇತರೆ ಮಿಲಿಟರಿ ಉಪಕರಣಗಳು ಹಾಗೂ ವಿಮಾನ-ವಿರೋದಿ ಕ್ಶಿಪಣಿಗಳ ನೆಲೆಯನ್ನು ಕಾಣಬಹುದು. ಉದ್ಯಾನದ ದಕ್ಶಿಣದ ಕಡೆಗೆ ಹೊರಟರೆ ಅಲ್ಲಿ ಎರಡನೇ ವಿಬಾಗ ಕಾಣುತ್ತದೆ. ಇದು ಪೂರ‍್ವ ಯೂರೋಪಿನ ಮತ್ತು ‘ವಾರ‍್ಸಾ ಒಪ್ಪಂದ’ಕ್ಕೆ ಮೀಸಲಾದ ಬಾಗವಾಗಿದೆ. ಇಲ್ಲಿ ಸೋವಿಯತ್ ನಿರ‍್ಮಿತ ವಿಮಾನಗಳು ಮತ್ತು ಮಿಲಿಟರಿ ವಾಹನಗಳನ್ನು ಸಾರ‍್ವಜನಿಕರ ಪ್ರದರ‍್ಶನಕ್ಕೆ ಇಡಲಾಗಿದೆ. ಇದರಾಚೆಗೆ ಮಕ್ಕಳ ಆಟದ ಮೈದಾನ ಮತ್ತು ಹೊರಾಂಗಣ ಪಿಕ್ನಿಕ್ ಪ್ರದೇಶವನ್ನು ಕಾಣಬಹುದು.

ಕೊನೆಯಲ್ಲಿ ಇಟಾಲಿಯನ್ ವಾಯು ಸೇನೆಗೆ ಸೇರಿದ F86K “ಕಪ್ಪೋನ್” ಮತ್ತು ಏವಿಯೇಟರ್ ಗಳಿಗಾಗಿ ನಿರ‍್ಮಿಸಿದ ಸ್ಮಾರಕ ಎದುರಾಗುತ್ತವೆ. ಇದರೊಳಗೆ ಪ್ರವೇಶಿಸಿದರೆ ಅಲ್ಲಿ “ಇಟಾಲೋ ಬಾಲ್ಬೊ” ಮ್ಯೂಸಿಯಂ ಇದೆ. ಇದರಲ್ಲಿ ಐತಿಹಾಸಿಕ ಏರೋ ಮಾದರಿಗಳನ್ನು ಸಂಗ್ರಹಿಸಿಡಲಾಗಿದೆ. ಇಲ್ಲಿಂದ ಹಾರಿ ಬಿಟ್ಟು ನಿಯಮಿತ ಸರಹದ್ದಿನಲ್ಲಿ ಹಾರಾಡಿ ಮತ್ತೆ ಇಲ್ಲಿಗೇ ಬಂದಿಳಿಯುವ ವಿಮಾನಗಳ ವಿಶ್ವ ಚಾಂಪಿಯನ್‌ಶಿಪ್ ಗಾಗಿ ರನ್ ವೇ ಸಹ ಈ ಉದ್ಯಾನದಲ್ಲಿದೆ.

ಏವಿಯೇಶನ್ ಮ್ಯೂಸಿಯಂನ ಒಳಾಂಗಣ

ಹೊರಾಂಗಣದ ವೀಕ್ಶಣೆಯ ನಂತರ ಒಳಾಂಗಣಕ್ಕೆ ಬಂದಲ್ಲಿ, ಇಲ್ಲಿ ಪೈಲಟ್ ಗಳು ಎರಡನೇ ಮಹಾಯುದ್ದದ ಕಾಲದಲ್ಲಿ ದರಿಸುತ್ತಿದ್ದ ಕಾಲದಿಂದ ಇಂದಿನ ದಿನದ ಪೈಲಟ್ ಗಳು ದರಿಸುವ ಸಮವಸ್ತ್ರಗಳ ಸಂಗ್ರಹವನ್ನು ಕಾಣಬಹುದು. ಇದು ರೋಚಕ ಇತಿಹಾಸವನ್ನು ಬಿಚ್ಚಿಡುತ್ತದೆ. ಇಲ್ಲಿರುವ ಚಾಯಾಚಿತ್ರಗಳು, ಬ್ಯಾಡ್ಜ್ ಗಳು, ಪ್ರಶಸ್ತಿಗಳು ಐತಿಹಾಸಿಕ ದಾಕಲೆಗಳನ್ನೂ ಕೂಡ ನೋಡಬಹುದು. ನೆಲಮಾಳಿಗೆಯಲ್ಲಿ ಅಮೇರಿಕನ್ ಮತ್ತು ಜರ‍್ಮನ್ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ. 20ನೇ ಶತಮಾನದ ಇಟಾಲಿಯನ್ ಪದಕಗಳ ಸಂಗ್ರಹ ಸಹ ಇಲ್ಲಿದೆ.

ಈ ವಸ್ತು ಸಂಗ್ರಹಾಲಯದ “ಎಪ್ ರಿಜಿ” ಎಂದು ಗುರುತಿಸುವ ವಿಬಾಗದ ಕೊಟಡಿಯಲ್ಲಿ ಇಟಾಲಿಯನ್ ಸೈನ್ಯದ ವಿಮಾನ ವಿರೋದಿ ಆರ‍್ಟಿಲರಿಯ 121ನೇ ರೆಜಿಮೆಂಟಿನ ಮ್ಯೂಸಿಯಂ ಇದೆ. ಇದರೊಂದಿಗೆ ಅಲ್ಲಿ ರಿಮಿನಿಯಲ್ಲಿರುವ ಹಿಂದಿನ ಬ್ಯಾರಕ್ಕುಗಳಲ್ಲಿನ ವಸ್ತುಗಳ ಸಂಗ್ರಹವಿದೆ. ರಿಮಿನಿ ವಸ್ತು ಸಂಗ್ರಹಾಲಯದ ಬದಿಯಲ್ಲಿ ‘ಸೆಂಟ್ರೊ ಸ್ಟುಡಿ ಲೀನಿಯಾ ಗಿಲ್ಲಾ’ (ಹಳದಿ ರೇಕೆಯ ಅದ್ಯಯನ ಕೇಂದ್ರ) ಇದೆ. ಇದರಲ್ಲಿ ಎರಡನೇ ವಿಶ್ವ ಸಮರದ ಸಮಯದಲ್ಲಿ “ಹಳದಿ ರೇಕೆ” ಮತ್ತು ರಿಮಿನಿ ಮುಂದಾಳತ್ವದಲ್ಲಿ ನಡೆದ ಯುದ್ದದ ಕುರಿತಾದ ಹಲವಾರು ಪುಸ್ತಕಗಳಿವೆ. ಇಲ್ಲಿನ ಸಾಂಸ್ಕ್ರುತಿಕ ಅಸೋಸಿಯೇಶನ್, ‘ಸುಲ್ಲೆ ಅಲಿ ಡೆಲ್ಲಾ ಸ್ಟೋರಿಯಾ’ (ಆನ್ ದಿ ವಿಂಗ್ಸ್ ಆಪ್ ಹಿಸ್ಟರಿ), ನಿಕರವಾದ ಸಂಶೋದನೆಯ ಮೂಲಕ ವೈಮಾನಿಕ ಅಬಿವ್ರುದ್ದಿಯ ವಿವರವನ್ನು ಪುನರ್ ದಾಕಲಿಸಿದೆ. ಈ ಏವಿಯೇಶನ್ ಮ್ಯೂಸಿಯಂ ನೋಡಲು ಹಾಗೂ ವಿಮಾನಗಳ ಇತಿಹಾಸವನ್ನು ಅರಿಯಲು ನಿಜಕ್ಕೂ ಪ್ರಶಸ್ತ ಸ್ತಳವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: abcvacanze.it, visitrimini.com, riminiturismo.it)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *