ಮೂಳೆ ಮತ್ತು ತಲೆ ಬುರುಡೆಗಳ ಬಯಾನಕ ಚರ‍್ಚ್

– .

ಪೋರ‍್ಚುಗಲ್ಲಿನ ರಾಜದಾನಿ ಲಿಸ್ಬೆನ್ ನಗರದಿಂದ 140 ಕಿಲೋಮೀಟರ್ ದೂರದಲ್ಲಿರುವ ಎವೊರಾ ಪಟ್ಟಣದಲ್ಲಿ ಸ್ಯಾನ್ ಪ್ರಾನ್ಸಿಸ್ಕೋ ಚರ‍್ಚ್ ಇದೆ. ಇದರೊಳಗೆ ಹಿಂದೊಮ್ಮೆ ಕ್ರೈಸ್ತ ಪಾದ್ರಿಗಳು ವಾಸವಿದ್ದ ಕಿರು ಕೋಣೆಗಳ ಸ್ತಳದಲ್ಲೇ ಮೂಳೆಗಳು ಹಾಗೂ ತಲೆ ಬುರುಡೆಗಳಿಂದ ಕಟ್ಟಲಾದ ಬಯಾನಕ ಚರ‍್ಚ್ ಇದೆ. ಇದನ್ನು ಕ್ಯಾಪೆಲ ಡೊಸ್ ಆಸುಸ್ (Capela dos Ossos) ಎಂದು ಕರೆಯಲಾಗುತ್ತದೆ. ಪೋರ‍್ಚುಗೀಸ್ ನುಡಿಯಲ್ಲಿ ಹೀಗೆಂದರೆ ಮೂಳೆಗಳ ಚರ‍್ಚ್. ಸಾಮಾನ್ಯವಾಗಿ ಯಾವುದೇ ದರ‍್ಮದ ಪ್ರಾರ‍್ತನಾ ಮಂದಿರವನ್ನು ಮಾನವನ ದೇಹದ ಅವಶೇಶಗಳನ್ನು ಬಳಸಿ ನಿರ‍್ಮಿಸುವುದಿಲ್ಲ, ಆದ್ದರಿಂದಲೇ ಇದು ಬಲು ಅಪರೂಪ ಮತ್ತು ಆಶ್ಚರ‍್ಯದಾಯಕ. ಚರ‍್ಚ್ ಅನ್ನು ಮೂಳೆ ಮತ್ತು ತಲೆ ಬುರುಡೆಗಳನ್ನು ಬಳಸಿ ಕಟ್ಟಲು ಕಾರಣವೇನು? ಎಲ್ಲರನ್ನೂ ಕಾಡುವ ಪ್ರಶ್ನೆ ಇದು. ಮಾನವನ ಮೂಳೆ ಮತ್ತು ತಲೆ ಬುರುಡೆಯನ್ನು ಯಾಕಾಗಿ ಇಲ್ಲಿ ಬಳಸಿದ್ದಾರೆ?

ಈ ವಿಲಕ್ಶಣವಾದ ಪ್ರಾರ‍್ತನಾ ಮಂದಿರವನ್ನು ಹದಿನೈದು (1460) ಮತ್ತು ಹದಿನಾರನೇ (1510) ಶತಮಾನದಲ್ಲಿ ನಿರ‍್ಮಿಸಿದ್ದು, ಇದು ಗೋತಿಕ್ ಶೈಲಿಯಲ್ಲಿದೆ. ಈ ಮಂದಿರ ನಿರ‍್ಮಾಣದ ಉಸ್ತುವಾರಿಯನ್ನು ವಹಿಸಿದ್ದವರು ಮೂರು ಮಂದಿ ಪಾದ್ರಿಗಳು. ಇಲ್ಲಿ ಮಾನವನ ಮೂಳೆ ಮತ್ತು ತಲೆ ಬುರುಡೆಯನ್ನು ಬಳಸುವುದಕ್ಕೆ ಅವರುಗಳು ನೀಡಿರುವ ಕಾರಣ, ನಮ್ಮ ಸಹೋದರ ಸಹೋದರಿಯರಲ್ಲಿ ಜೀವನ ಎಶ್ಟು ಕ್ಶಣಿಕ, ಎಶ್ಟು ನಶ್ವರ ಮತ್ತು ಎಶ್ಟು ಅಸ್ತಿರತೆ ಎಂಬ ಚಿಂತನೆಯನ್ನು ಮೂಡಿಸುವುದು. ಅವರುಗಳಲ್ಲಿನ ಒಮ್ಮತ ಈ ಚರ‍್ಚ್ ಅನ್ನು ಮೂಳೆ ಮತ್ತು ತಲೆ ಬುರುಡೆಗಳಿಂದ ಕಟ್ಟಲು ಮೊದಲ ಕಾರಣವಾಯಿತು.

ಈ ಚರ‍್ಚ್ ಅನ್ನು ಕಟ್ಟುವ ಸಮಯದಲ್ಲಿ ಎವೊರಾ ನಗರದ ಎರಡು ಪ್ರಾನ್ಸಿಸ್ಕನ್ ಸ್ಮಶಾನಗಳು ತುಂಬಿ ಹೋಗಿದ್ದು, ಹೊಸ ಕಳೇಬರವನ್ನು ಹೂಳಲು ಜಾಗದ ಕೊರತೆ ಕಂಡು ಬಂದಿತು, ಆಗ ಮಣ್ಣಿನಲ್ಲಿದ್ದ ಮೂಳೆ ಮತ್ತು ತಲೆ ಬುರುಡೆಗಳ ಅವಶೇಶಗಳನ್ನು ಹೊರ ತೆಗೆಯುವ ಅನಿವಾರ‍್ಯತೆ ಎದುರಾಯಿತು. ಈ ಮಂದಿರದ ನಿರ‍್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದ ಮೂವರು ಪಾದ್ರಿಗಳು, ಈ ಅನಿವಾರ‍್ಯತೆಯ ಸದುಪಯೋಗ ಪಡೆಯಲು ನಿರ‍್ದರಿಸಿ, ಚರ‍್ಚ್ ನ ಗೋಡೆಗಳಿಗೆ, ಕಂಬಗಳಿಗೆ ಮತ್ತು ಗುಮ್ಮಟಗಳ ಅಲಂಕಾರಕ್ಕಾಗಿ ಮೂಳೆ ಮತ್ತು ತಲೆ ಬುರುಡೆಗಳನ್ನು ಬಳಸಿ ಕಟ್ಟಲಾಯಿತು. ಈ ಚರ‍್ಚ್ ಅನ್ನು ಕಟ್ಟುವಾಗ  ಮೂಳೆಗಳ ತುಣುಕುಗಳನ್ನು ಗಾರೆಯ ಜೊತೆಯಲ್ಲಿ ಕಲಸಿ ಬಳಸಲು ತೀರ‍್ಮಾನಿಸಿದರು. ಸುಮಾರು 5,000 ಶವಗಳ ಮೂಳೆ ಮತ್ತು ತಲೆಬುರುಡೆಯನ್ನು ಈ ಚರ‍್ಚ್ ನ ಕಟ್ಟುವಿಕೆಯಲ್ಲಿ ಬಳಸಲ್ಪಟ್ಟಿದೆ ಎಂದು ಅಂದಾಜಿಸಲಾಗಿದೆ.

ಮತ್ತೊಂದು ದಂತ ಕತೆಯಂತೆ ಈ ಚರ‍್ಚ್ ನ ಹತ್ತಿರದ ಪಟ್ಟಣದ ಮೇಲೆ ಗುಡುಗು ಸಹಿತ ದಾರಾಕಾರ ಮಳೆಯ ಸಮಯದಲ್ಲಿ ಮಿಂಚೊಂದು ಕೋಟೆಯೊಳಗಿನ ಶಸ್ರ‍್ತಾಗಾರಕ್ಕೆ ಬಡಿದಾಗ, ಅದರಲ್ಲಿನ ಸಿಡಿಮದ್ದುಗಳು ಸಿಡಿದು ದೊಡ್ಡ ವಿಪತ್ತು ಸಂಬವಿಸಿತು. ಪಟ್ಟಣದಲ್ಲಿದ್ದ ಅಂದಾಜು 1,100 ಮನೆಗಳ ಪೈಕಿ 800ಕ್ಕೂ ಹೆಚ್ಚು ಮನೆಗಳು ಈ ದುರಂತದಲ್ಲಿ ನಾಶವಾದವು. ಇದರಿಂದ ಸತ್ತ ಸಾವಿರಾರು ಜನರನ್ನು ಸಾಮೂಹಿಕ ಸಮಾದಿಯಲ್ಲಿ ಹೂಳಲಾಯಿತು. 30 ವರ‍್ಶಗಳ ನಂತರ, ದುರಂತದಲ್ಲಿ ಸತ್ತವರ ಗೌರವಾರ‍್ತ ಈ ಪ್ರಾರ‍್ತನಾ ಮಂದಿರವನ್ನು ಕಟ್ಟಲಾಯಿತು ಎನ್ನಲಾಗಿದೆ.

ಮೂಳೆ ಮತ್ತು ತಲೆ ಬುರುಡೆಗಳಿಂದ ಕಟ್ಟಲಾದ ಈ ಚರ‍್ಚ್ ನ ಪ್ರವೇಶ ದ್ವಾರದ ಹೊಸ್ತಿಲಿನ ಮೇಲೆ ಸಂದೇಶವೊಂದಿದೆ. “ನೋಸ್ ಒಸ್ಸೋಸ್ ಕ್ಯೂ ಅಕ್ವಿ ಎಸ್ಟಾಮೋಸ್ ಪೆಲೋಸ್ ವೋಸ್ಸೊಸ್ ಎಸ್ಪರಾಮೊಸ್” ಎಂದು ಸ್ತಳೀಯ ಬಾಶೆಯಲ್ಲಿ ಕೆತ್ತಲಾಗಿದೆ. ಇದನ್ನು ಕನ್ನಡ ಬಾಶೆಗೆ ಅನುವಾದಿಸಿದರೆ “ನಾವು ಮೂಳೆಗಳು, ಇಲ್ಲಿದ್ದೇವೆ. ನಿಮಗಾಗಿ ಕಾಯುತ್ತಿದ್ದೇವೆ” ಎಂದಾಗುತ್ತದೆ. ಇದು ನಿಸ್ಸಂದೇಹವಾಗಿ ಮಾನವನ ಅಸ್ತಿತ್ವದ ಬಗ್ಗೆ ಪ್ರಾನ್ಸಿಸ್ಕನ್ ಪರಿಕಲ್ಪನೆಯಾಗಿದೆ.

ಮೂಳೆಗಳಿಂದ ಕಟ್ಟಲಾದ ಈ ಚರ‍್ಚ್ 18.7 ಮೀಟರ್ ಉದ್ದ, 11 ಮೀಟರ್ ಅಗಲವಾಗಿದೆ. ಇಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಮೂಳೆ ಮತ್ತು ತಲೆಬುರುಡೆಗಳನ್ನು ಅತ್ಯಂತ ಕುಶಲತೆಯಿಂದ ಜೋಡಿಸಿದ್ದಾರೆ. ಇವುಗಳೇ ಇದಕ್ಕೆ ಅಲಂಕಾರ. ಮೇಲ್ಚಾವಣಿಯ ನಿರ‍್ಮಾಣದಲ್ಲಿ ಬಿಳಿ ಇಟ್ಟಿಗೆಯನ್ನು ಬಳಸಲಾಗಿದೆ. ಸಾವಿಗೆ ಸಂಬಂದಿಸಿದ ವಿವಿದ ಲಕ್ಶಣಗಳನ್ನು ಇಲ್ಲಿ ಕಾಣಬಹುದು. ಚರ‍್ಚ್ ನ ಕಿಟಕಿಗಳ ಕಮಾನುಗಳನ್ನು ತಲೆಬುರುಡೆಯಿಂದ ರೂಪಿಸಲಾಗಿದೆ. ನೆರಳು ಮತ್ತು ಬೆಳಕಿನ ಆಟ ಈ ಚರ‍್ಚ್ ಗೆ ದೆವ್ವ ಬೂತದ ನೋಟವನ್ನು ಒದಗಿಸುತ್ತದೆ.

ಈ ಚರ‍್ಚ್ ನಲ್ಲಿ ಸಾವಿರಾರು ಮಾನವ ಮೂಳೆಗಳ ಜೊತೆಗೆ ಎರಡು ಮಾನವ ಅಸ್ತಿಪಂಜರಗಳು ಗೋಡೆಯಿಂದ ನೇತಾಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಒಂದು ವಯಸ್ಕರ ಅಸ್ತಿಪಂಜರದಂತೆ ಕಂಡರೆ ಮತ್ತೊಂದು ಚಿಕ್ಕ ಮಗುವಿನ ಅಸ್ತಿಪಂಜರದಂತೆ ಕಂಡು ಬರುತ್ತದೆ. ಇವೆರೆಡೂ ಒಂದೇ ಗೋಡೆಯಲ್ಲಿ ನೇತಾಡುತ್ತಿರುವುದನ್ನು ನೋಡಬಹುದು. ಒಂದು ದಂತ ಕತೆಯ ಪ್ರಕಾರ ಅವು ತಂದೆ ಮತ್ತು ಮಗನ ಅಸ್ತಿಪಂಜರಗಳಂತೆ. ಮಗ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡ ಕಾರಣ ಆಕೆ ಸಾಯುವಾಗ ಶಪಿಸಿದ ಕಾರಣ ಅವರ ಅಸ್ತಿಪಂಜರ ಇಲ್ಲಿ ನೇತಾಡುತ್ತಿದೆ. ಇದೇ ರೀತಿಯಲ್ಲಿ ಇನ್ನೂ ಅನೇಕ ದಂತ ಕತೆಗಳು ಹುಟ್ಟಿಕೊಂಡಿವೆಯಾದರೂ ಅವಾವುದಕ್ಕೂ ಅಶ್ಟೊಂದು ಮಾನ್ಯತೆಯಿಲ್ಲ. ಒಟ್ಟಿನಲ್ಲಿ ಈ ಅನನ್ಯ ಚರ‍್ಚ್ ತನ್ನ ವಿಲಕ್ಶಣತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿರುವುದಂತೂ ನಿಜ.

(ಮಾಹಿತಿ ಮತ್ತು ಚಿತ್ರ ಸೆಲೆ: en.wikipedia.org, ancient-origins.net, atlasobscura.com, visitevora.net, myportugalholiday.com, livescience.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: