ನಾಟಕರತ್ನ ಡಾ. ಗುಬ್ಬಿ ವೀರಣ್ಣ – ಕಂತು 1

– ಶ್ಯಾಮಲಶ್ರೀ.ಕೆ.ಎಸ್.

ಕನ್ನಡ ನಾಡಿನ ಸುಪ್ರಸಿದ್ದ ನಾಟಕ ರಂಗಬೂಮಿ ಕಲಾವಿದರು ಎಂದ ಕೂಡಲೇ ಮೊದಲು ನೆನಪಾಗುವುದು ನಾಟಕರತ್ನ, ಪದ್ಮಶ್ರೀ ಪುರಸ್ಕ್ರುತರು ರಂಗಕರ‍್ಮಿ ಶ್ರೀಯುತ ಡಾ. ಗುಬ್ಬಿ ವೀರಣ್ಣನವರು.

ಸಿನಿಮಾ ಗಳು ನಮ್ಮನ್ನು ರಂಜಿಸುವ ಮುನ್ನ ಜನರ ಮನಸ್ಸನ್ನು ಆಳವಾಗಿ ಪ್ರಬಾವಿಸಿದ್ದು ರಂಗಬೂಮಿ ನಾಟಕಗಳು. ಅನೇಕಾನೇಕ ರಂಗಬೂಮಿ ಕಲಾ ಸಂಗಗಳು ಕರುನಾಡಿನಲ್ಲಿ ಇಂದಿಗೂ ನೆಲೆಯೂರಿವೆ. ಈಗಲೂ ಸಾಮಾಜಿಕ, ಪೌರಾಣಿಕ ರಂಗ ಪ್ರದರ‍್ಶನಗಳು ಆಗಾಗ್ಗೆ ನಡೆಯುತ್ತಿರುತ್ತವೆ. ತಂತ್ರಜ್ನಾನ ಬಹಳ ಹಿಂದಿದ್ದ ಕಾಲದಲ್ಲಿಯೇ ನಾಟಕ ರಂಗಬೂಮಿಯನ್ನು ಬಾನೆತ್ತರಕ್ಕೆ ಅರಳಿಸಿದ ಕೀರುತಿ ದಿವಂಗತ ಡಾ. ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ. ನಾಡು ಕಂಡ ಶ್ರೇಶ್ಟ ರಂಗಕಲಾವಿದರಾದ ದಿವಂಗತ ಡಾ. ಶ್ರೀ ಗುಬ್ಬಿ ವೀರಣ್ಣ ನವರು ತುಮಕೂರು ಜಿಲ್ಲೆಯವರೆಂದು ತಿಳಿಸಲು ಬಹಳ ಸಂತಸವಾಗುತ್ತದೆ.

ನಾಟಕ ರತ್ನ, ಪದ್ಮಶ್ರೀ ಪುರಸ್ಕ್ರುತರು, ಡಾ. ಗುಬ್ಬಿ ವೀರಣ್ಣ ನವರು 1891ರ ಜನವರಿ 24ರಂದು ತುಮಕೂರು ಜಿಲ್ಲೆಯ ಆಗಿನ ಗುಬ್ಬಿ ಗ್ರಾಮ (ಈಗಿನ ತಾಲ್ಲೂಕು ಕೇಂದ್ರ) ಗುಬ್ಬಿಯಲ್ಲಿ ಹುಟ್ಟಿದರು. ವೀರಣ್ಣನವರು ಗುಬ್ಬಿಯ ಹಂಪಣ್ಣ ಮತ್ತು ರುದ್ರಮ್ಮ ದಂಪತಿಗಳ ಮೂರನೇ ಮಗ. ಅನಾರೋಗ್ಯ ನಿಮಿತ್ತ ವೀರಣ್ಣನವರ ತಾಯಿ ಅಕಾಲ ಮ್ರುತ್ಯುವಿಗೆ ಈಡಾದ ನಂತರ, ಬಾಲಕ ವೀರಣ್ಣ ತಮ್ಮ ಆರನೇ ವಯಸ್ಸಿನಲ್ಲಿ ಗುಬ್ಬಿ ಚನ್ನಬಸವೇಶ್ವರ ಕ್ರುಪಾಪೋಶಿತ ನಾಟಕ ಮಂಡಳಿಯಲ್ಲಿ ಅವರ ಚಿಕ್ಕಪ್ಪ ನ ಸಹಾಯದಿಂದ ಕೆಲಸಕ್ಕೆ ಸೇರಿದರು. ಬಾಲಕಲಾವಿದನಾಗಿ ಸೇರಿದ ನಂತರದ ದಿನಗಳಲ್ಲಿ ಅಬಿನಯ, ಹಾಡುಗಾರಿಕೆ, ವಾದ್ಯ ನುಡಿಸುವುದು ಈ ಎಲ್ಲಾ ಕಲೆಗಳಲ್ಲಿ ಪಾರಂಗತರಾದರು.

ಸತತ ಪರಿಶ್ರಮದಿಂದ ಮುಂದೆ 1917ರಲ್ಲಿ ಅವರು ಸ್ವತಹ ಗುಬ್ಬಿ ಕಂಪನಿಯ ಮಾಲೀಕರಾದರು. ಅವರು ಹ್ರುದಯವಂತಿಕೆಯಿಂದ ಕಂಪನಿಯನ್ನು ನಡೆಸಿ ಕರ‍್ನಾಟಕವಶ್ಟೇ ಅಲ್ಲ ಉತ್ತರ ಬಾರತದಲ್ಲೂ ಹೆಸರು ಗಳಿಸಿದರು. ಆಗಿನ ಕಾಲದಲ್ಲಿಯೇ ಗುಬ್ಬಿ ಕಂಪನಿಯಲ್ಲಿ ಸುಮಾರು 2,000 ಕ್ಕೂ ಹೆಚ್ಚು ಕಲಾವಿದರಿದ್ದರು ಎನ್ನುವುದು ಅದೆಶ್ಟು ದೊಡ್ಡ ಸಂಸ್ತೆ ಎಂದು ಅಂದಾಜಿಸಬಹುದು.

ಗುಬ್ಬಿ ವೀರಣ್ಣನವರ ಗರಡಿಯಿಂದ ದೊಡ್ಡ ದೊಡ್ಡ ಕಲಾವಿದರು ರೂಪುಗೊಂಡು ಅಪಾರ ಕೀರ‍್ತಿ ಗಳಿಸಿದರು. ನಮ್ಮೆಲ್ಲರ ನೆಚ್ಚಿನ ನಟ ಕರ‍್ನಾಟಕ ರತ್ನ ಡಾ. ರಾಜ್‌ಕುಮಾರ್ ಅಲ್ಲದೇ ಬಿ.ಆರ್ ಪಂತುಲು, ಬಿ.ಜಯಮ್ಮ, ಜಿ.ವಿ.ಅಯ್ಯರ್, ಟಿ.ಎನ್. ಬಾಲಕ್ರಿಶ್ಣ, ನರಸಿಂಹರಾಜು, ಬೆಳ್ಳಾವೆ ನರಹರಿ ಶಾಸ್ತ್ರಿ, ಜಿ.ಸುನಂದಮ್ಮ, ಸ್ವರ‍್ಣಮ್ಮ, ಮಾಲತಮ್ಮ, ಹೀಗೆ ಮುಂತಾದ ಅಪ್ರತಿಮ ಕಲಾವಿದರು ಅವರ ಕಂಪನಿಯ ಬೆಳಕಿನಲ್ಲೇ ಮೂಡಿಬಂದವರು. ಡಾ. ರಾಜ್‌ಕುಮಾರ್ ರವರ ಬಾವಪೂರ‍್ಣ ಅಬಿನಯ, ಸಂಬಾಶಣೆ ಮಾಂತ್ರಿಕತೆ, ಜೀವತುಂಬಿ ಹಾಡುವ ಸಂಗೀತ ಪರಿಣತಿ ಇವೆಲ್ಲಕ್ಕೂ ಗುಬ್ಬಿ ಕಂಪನಿಯೇ ತಾಯಿಸಂಸ್ತೆ. ವರನಟ ಡಾ. ರಾಜ್‌ಕುಮಾರ್ ರವರ ತಂದೆ ಪುಟ್ಟ ಸ್ವಾಮಯ್ಯನವರು ಮತ್ತು ಸಹೋದರ ವರದಪ್ಪನವರೂ, ಹಾಸ್ಯ ಕಲಾವಿದರಾದಂತ ಮಾಸ್ಟರ್ ಹಿರಣ್ಣಯ್ಯನವರೂ ಈ ಕಂಪನಿಯಲ್ಲಿ ಕಲಿತವರೇ. ಅಣ್ಣಾವ್ರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ಸಿನಿಮಾದ ನಿರ‍್ಮಾಪಕರು ಬೇರ‍್ಯಾರೂ ಅಲ್ಲ, ಅದು ಗುಬ್ಬಿ ವೀರಣ್ಣನವರೇ. ಈ ಸಿನೆಮಾ ನಿರ್‍ಮಾಣಕ್ಕೆ ಎ. ಆರ್. ಬಸವರಾಜು ಎಂಬುವರು ಕೈಜೋಡಿಸಿದ್ದರು.

ವೀರಣ್ಣನವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಕಲಾವಿದರಿಗೂ ಮತ್ತು ತೆರೆಯ ಹಿಂದಿನ ಕೆಲಸಗಾರರಿಗೂ ಯಾವುದೇ ತಾರತಮ್ಯವಿಲ್ಲದೆ ಅವರವರ ಪ್ರತಿಬೆಗೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ಉತ್ತೇಜನ ಕೊಡುತ್ತಾ ಬಂದಿದ್ದರು. ಅವರನ್ನು ಬಿಚ್ಚುಮನಸ್ಸಿನಿಂದ ಹೊಗಳುವುದಶ್ಟೇ ಅಲ್ಲ, ತಪ್ಪುಗಳನ್ನೂ ಸಹ ತಿದ್ದುತ್ತಿದ್ದರು. ಕಂಪನಿ ಬಿಟ್ಟು ಹೋದವರನ್ನು ಆಶೀರ‍್ವದಿಸುತ್ತ, ಅವರು ಸೋತು ಹಿಂತಿರುಗಿದರೆ ಮತ್ತೆ ಸ್ವಾಗತಿಸುತ್ತಿದ್ದ ಕರುಣಾಶಾಲಿಗಳು ಗುಬ್ಬಿ ವೀರಣ್ಣನವರು.

1925ನೇ ಇಸವಿಯಲ್ಲಿ ‘ಬಾಲಕ ವಿವರ‍್ದಿನಿ’ ಎಂಬ ಕಲಾಸಂಗವನ್ನು ಸ್ತಾಪಿಸುವ ಮೂಲಕ ಮಕ್ಕಳಿಗೆ ನಾಟಕ ಕಲೆಯನ್ನು ಕಲಿಸುತ್ತಿದ್ದರು. ಕನ್ನಡ ರಂಗಬೂಮಿಯಲ್ಲಿ 1926ರಲ್ಲಿ ಮೊದಲ ಬಾರಿಗೆ ರಂಗದ ಮೇಲೆ ವಿದ್ಯುತ್ ದೀಪ ಬಳಕೆ ಮಾಡಿದ ಕೀರ‍್ತಿ ವೀರಣ್ಣನವರಿಗೆ ಸಲ್ಲುತ್ತದೆ. 1934ರಲ್ಲಿ ಬೆಂಗಳೂರಿನಲ್ಲಿ ಕುರುಕ್ಶೇತ್ರ ನಾಟಕ ಆಡಿಸುವಾಗ ರಂಗಮಂಚದ ಮೇಲೆ ಆನೆ ಕುದುರೆಗಳನ್ನೇ ತಂದುಬಿಟ್ಟಿದ್ದರು. ಮೊದಲೆಲ್ಲಾ ನಾಟಕಗಳಲ್ಲಿ ಗಂಡುಮಕ್ಕಳೇ ಹೆಣ್ಣಿನ ಪಾತ್ರಗಳನ್ನು ನಿಬಾಯಿಸುವ ಕಾಲವಿತ್ತು. ಆ ಕಾಲದಲ್ಲಿ ಹೆಣ್ಣಿನ ಪಾತ್ರಗಳಿಗಾಗಿ ಹೆಣ್ಣುಮಕ್ಕಳಿಗೆ ಅವಕಾಶ ನೀಡಿದವರಲ್ಲಿ ವೀರಣ್ಣನವರೇ ಮೊದಲಿಗರು.

(ಗುಬ್ಬಿ ಕಂಪನಿಯ ಹೆಸರಾಂತ ನಾಟಕಗಳು, ವೀರಣ್ಣನವರಿಗೆ ಸಂದ ಬಿರುದುಗಳು, ರಂಗಬೂಮಿ ಕ್ಶೇತ್ರಕ್ಕೆ ಅವರ ಕುಟುಂಬದ ಕೊಡುಗೆ ಹೀಗೆ ಇನ್ನಶ್ಟು ವಿಶಯಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.)

(ಚಿತ್ರ ಸೆಲೆ: karnataka.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: