ರಾಶ್ಟ್ರೀಯ ಅಪ್ಪುಗೆಯ ದಿನ

– .

ಅಮ್ಮನನ್ನು ಕಂಡಾಕ್ಶಣ ಓಡಿ ಬರುವ ಪುಟ್ಟ ಕಂದ ಮೊದಲು ಮಾಡುವ ಕೆಲಸವೆಂದರೆ ಅಮ್ಮನ ಕುತ್ತಿಗೆಯನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಗಟ್ಟಿಯಾಗಿ ಅಪ್ಪುವುದು. ಅಮ್ಮ ಸಹ ತನ್ನ ಕಂದಮ್ಮನನ್ನು ಎರಡೂ ಕೈಗಳಿಂದ ಬಾಚಿ ತಬ್ಬುವುದು ಮುತ್ತಿನ ಸುರಿಮಳೆಗೈಯುವುದು ಸಹಜ ಕ್ರಿಯೆ. ಜೀವವಿರುವ ಎಲ್ಲಾ ಪ್ರಾಣಿ ಪಕ್ಶಿಗಳಲ್ಲೂ ಅಪ್ಪಿ ಪ್ರೀತಿಯನ್ನು ತೋರುವುದನ್ನು ಕಾಣಬಹುದು. ಈ ಅಪ್ಪುಗೆಯಲ್ಲಿ ಸಿಗುವ ಆನಂದವೇ ಬೇರೆ. ಅದು ಅಕ್ಶರಗಳಿಗೆ ಎಟುಕದ ಬಾವನೆ. ಇಲ್ಲಿ ಆ ಸಂತಸವನ್ನು ಅಮ್ಮ ಮತ್ತು ಆಕೆಯ ಕಂದ ಇಬ್ಬರೂ ಅನುಬವಿಸುತ್ತಾರೆ. ಅನುಬವಿಸುವ ಬಾವನೆಗಳು ಬೇರೆ ಬೇರೆ ಇರಬಹುದಾದರೂ ಅದರಿಂದ ದೊರಕುವ ಮಾನಸಿಕ ತ್ರುಪ್ತಿ ಹಾಗೂ ನೆಮ್ಮದಿಯನ್ನು ಬಣ್ಣಿಸಲಾಗದು.

ಅಪ್ಪುಗೆ ತಮ್ಮಿಶ್ಟದವರಿಗೆ ಪ್ರೀತಿಯನ್ನು ತೋರಿಸುವ ಸರಳ ಮಾರ‍್ಗ. ಇಂದಿನ ದಿನದಲ್ಲಿ ಅಪ್ಪುಗೆಯೂ ಸಹ ವಿರಳವಾಗುತ್ತಿದೆ. ಇದಕ್ಕೆ ನಾನಾ ಕಾರಣಗಳಿವೆ. ಕೆಲಸದ ಒತ್ತಡ, ಸಮಯದ ಅಬಾವ, ಸಾಮಾಜಿಕ ಹೊಣೆ ಇನ್ನೂ ಅನೇಕಾನೇಕ. ಇವುಗಳಿಂದ ದೂರವಾಗಿ ಅಪ್ಪುಗೆಯ ಸವಿ ಅನುಬವನ್ನು ಆಸ್ವಾದಿಸುವುದಕ್ಕಾಗಿಯೇ ಹುಟ್ಟಿದ್ದು ರಾಶ್ಟ್ರೀಯ ಅಪ್ಪುಗೆಯ ದಿನ. ಅದರ ಆಚರಣೆ ಹಲವಾರು ದೇಶಗಳಲ್ಲಿ ಜನವರಿ 21ರಂದು. ಕೆಲವು ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುವುದುಂಟು. ಅಪ್ಪುಗೆಯಿಂದಾಗುವ ಲಾಬಗಳನ್ನು ಪರಿಗಣಿಸಿ, ಕೆಲವು ರಾಶ್ಟ್ರಗಳಲ್ಲಿ ರಾಶ್ಟ್ರೀಯ ಅಪ್ಪುಗೆಯ ದಿನವನ್ನು ರಜಾ ದಿನವಾಗಿ ಗೋಶಿಸಲಾಗಿದೆ.

ರಾಶ್ಟ್ರೀಯ ಅಪ್ಪುಗೆಯ ದಿನದ ಇತಿಹಾಸವನ್ನು ಗಮನಿಸಿದರೆ, ಪ್ರತಿ ವರ‍್ಶ ಜನವರಿ 21ನೇ ದಿನಾಂಕವನ್ನು ವಾರ‍್ಶಿಕ ಅಪ್ಪುಗೆಯ ದಿನವಾಗಿ ಆಚರಿಸಲು ಗುರುತಿಸಲಾಗಿದೆ. ಮೊದಲ ಬಾರಿಗೆ ಇದನ್ನು ಜನವರಿ 21, 1986ರಲ್ಲಿ ಅಮೇರಿಕಾದ ಮಿಶಿಗನ್ (michigan) ನಲ್ಲಿ ಆಚರಣೆಗೆ ತರಲಾಯಿತು. ರಾಶ್ಟ್ರೀಯ ಅಪ್ಪುಗೆಯ ದಿನವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ ವ್ಯಕ್ತಿ ಕೆವಿನ್ ಜಾಬ್ರೋರ‍್ನಿ. ಪ್ರತಿ ವರ‍್ಶ ಈ ದಿನದಂದು ಬಹುತೇಕರು ತಮ್ಮ ತಮ್ಮ ಪ್ರೀತಿಪಾತ್ರರನ್ನು ಅಪ್ಪುಗೆಯಲ್ಲಿ ಬಂದಿಸಲು ಸಮಯವನ್ನು ಮೀಸಲಿಡುತ್ತಾರೆ. ನ್ಯಾಶನಲ್ ಹಗ್ಗಿಂಗ್ ಡೇಯ ಅದಿಕ್ರುತ ವೆಬ್ಸೈಟ್ ನಲ್ಲಿ ಅತ್ಯುತ್ತಮ ಅಪ್ಪುಗೆಯ ಸ್ಪರ‍್ದೆಗಳನ್ನು ನಡೆಸಲಾಗುತ್ತದೆ. ವಿಶ್ವಾದ್ಯಂತ ಅನೇಕ ಸ್ಪರ‍್ದಿಗಳು ಅಪ್ಪುಗೆಯ ಈ ಸ್ಪರ‍್ದೆಯಲ್ಲಿ ಬಾಗವಹಿಸುತ್ತಾರೆ.

ಅಪ್ಪುಗೆಯಿಂದ ಅನೇಕ ಪ್ರಯೋಜನಗಳಿವೆ. ಅಪ್ಪುಗೆ, ಅಪ್ಪುಗೆಯಲ್ಲಿ ನಿರತರಾದವರ ಪರಸ್ಪರ ಬೆಂಬಲವನ್ನು ಸೂಚಿಸುತ್ತದೆ. ತನ್ಮೂಲಕ ಇಬ್ಬರಲ್ಲಿಯೂ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಹ್ರುದಯದ ಆರೋಗ್ಯವನ್ನು ಸುದಾರಿಸುತ್ತದೆ. ಆಕ್ಸಿಟೋಸಿನ್ ಎಂಬ ರಾಸಾಯನಿಕದ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಈ ರಾಸಾಯನಿಕವು ಮೆದುಳಿನಲ್ಲಿ ಸಂತೋಶ ಹೆಚ್ಚಾಗಲು ಸಹಾಯಕ. ಒಂದು ಸಂಶೋದನೆಯ ಪ್ರಕಾರ ಎರಡು ದೇಹಗಳು ಅಪ್ಪುಗೆಯ ಮೂಲಕ ಸಂಪರ‍್ಕಕ್ಕೆ ಬಂದಾಗ, ದೇಹದಲ್ಲಿ ಒತ್ತಡವನ್ನು ಪ್ರಚೋದಿಸುವಂತಹ ಹಾರ‍್ಮೋನ್ ಗಳ ಉತ್ಪಾದನೆ ಕುಂಟಿತಗೊಳ್ಳುತ್ತದೆ. ಇದು ಮನಸ್ಸು ಶಾಂತಗೊಳ್ಳಲು ಸಹಾಯಕ. ಒತ್ತಡವನ್ನು ನಿಯಂತ್ರಿಸುವ ಈ ಹಾರ‍್ಮೋನ್ ಹೆಚ್ಚಿನ ಮಟ್ಟದಲ್ಲಿ ಇದ್ದಲ್ಲಿ ನಿದ್ರಾಬಂಗ, ಚರ‍್ಮದ ಅಸ್ವಸ್ತತೆ, ತೂಕ ಹೆಚ್ಚಾಗುವಿಕೆ, ದುರ‍್ಬಲಗೊಳ್ಳುವುದು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಎಲ್ಲಾ ಕಾರಣಗಳನ್ನೂ ಮುಂದಿಟ್ಟುಕೊಂಡು, ದೈಹಿಕ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಾಗೂ ಉಲ್ಲಾಸಬರಿತ ಜೀವನಕ್ಕಾಗಿ ಅಪ್ಪುಗೆಯ ದಿನ ಆಚರಿಸುವ ಪರಿಪಾಟ ಮೊದಲಾಯಿತು.

“ಹಗ್” ಹಳೆಯ ನಾರ‍್ಸ್ ಬಾಶೆಯ ಪದ. ಇದರ ಅರ‍್ತ ‘ಆರಾಮಗೊಳಿಸು” ಎಂದಾಗುತ್ತದೆ. ಇದರ ಉತ್ಪತ್ತಿ ಅದೇ ಬಾಶೆಯ ‘ಹುಗ್ಗಾ’ ಎಂಬ ಪದದಿಂದಾಗಿದೆ ಎಂದು ಕಂಡುಬಂದಿದೆ. ಈ ಪದವು ಸುಮಾರು 450 ವರ‍್ಶಗಳ ಹಿಂದೆ ಮೊದಲು ಕಾಣಿಸಿಕೊಂಡಿತು ಎನ್ನಲಾಗಿದೆ. ಅಪ್ಪುವಿಕೆ ಬಹುಶಹ ಮಾನವ ಸಾಂಗತ್ಯವನ್ನು ಬಯಸಿದ ದಿನದಿಂದು ಪ್ರಾರಂಬವಾಗಿರಬೇಕು. ಇದಕ್ಕೆ ಯಾವುದೇ ನಿರ‍್ದಿಶ್ಟವಾದ ಕಾಲಮಾನವನ್ನು ಗುರುತಿಸುವುದು ಕಶ್ಟಸಾದ್ಯ. ಮಾನವನೇ ಅಲ್ಲದೆ, ಜೀವವಿರುವ ಎಲ್ಲಾ ಪ್ರಾಣಿ ಪಕ್ಶಿಗಳಲ್ಲೂ ಅದರದೇ ರೀತಿಯ ಅಪ್ಪುಗೆಯನ್ನು ಕಾಣಬಹುದು. ಬೀಳ್ಕೊಡುಗೆ, ಸ್ವಾಗತ, ಕ್ರೀಡೆಗಳಲ್ಲಿ ಹುರಿದುಂಬಿಸಲು, ಸೋತಾಗ ಸಾಂತ್ವನಗೊಳಿಸಲು ಅಪ್ಪುಗೆ ಸಾಮಾನ್ಯವಾಗಿದೆ. ಹೀಗೆ ಮಾನವನ ದಿನನಿತ್ಯದಲ್ಲಿ ಆಗಬಹುದಾದ ಈ ಒಂದು ಕ್ರಿಯೆಗೆ ಒಂದು ದಿನವನ್ನೇ ನಿಗದಿಪಡಿಸಿರುವುದು ನಿಜಕ್ಕೂ ಸೋಜಿಗವೆ…

(ಮಾಹಿತಿ ಮತ್ತು ಚಿತ್ರ ಸೆಲೆ: eventofday.com, awarenessdays.com, tipsnepal.com, nationaltoday.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks