ಸಮರ ನೌಕೆಯಂತಹ ದ್ವೀಪ – ಹಶಿಮಾ
– ಕೆ.ವಿ.ಶಶಿದರ.
ಹಶಿಮಾ ಇರುವುದು ಜಪಾನಿನ ನಾಗಸಾಕಿ ಬಂದರಿನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ. ಈ ದ್ವೀಪ ಕೇವಲ 480 ಮೀಟರ್ ಉದ್ದ ಮತ್ತು 150 ಮೀಟರ್ ಅಗಲವಿದೆ. ಈ ಪುಟ್ಟ ಪ್ರದೇಶದಲ್ಲಿ 5000ಕ್ಕೂ ಹೆಚ್ಚು ನಿವಾಸಿಗಳು ಆಶ್ರಯ ಪಡೆದಿದ್ದರು ಎಂದರೆ ಜನಸಂದಣಿಯ ಸಾಂದ್ರತೆ ಅರಿವಾಗುತ್ತದೆ. ಹಶಿಮಾ ವಿಶ್ವದಲ್ಲೇ ಅತಿ ಹೆಚ್ಚು ಜನಸಾಂದ್ರತೆಯ ದ್ವೀಪ ಎಂದು ಒಂದು ಕಾಲದಲ್ಲಿ ಹೆಸರಾಗಿತ್ತು.
ಹಶಿಮಾ ದ್ವೀಪವನ್ನು ಹಿಂದೆ ಗುಂಕಂಜಿಮಾ ಎಂದು ಗುರುತಿಸಲಾಗುತ್ತಿತ್ತು. ಇಶ್ಟು ಸಣ್ಣ ಪ್ರದೇಶದಲ್ಲಿ ಇಶ್ಟೊಂದು ಜನಸಾಂದ್ರತೆಯಿರಲು ಕಾರಣವೇನು? ಏನಿದರ ವಿಶೇಶತೆ? ಜಪಾನೀ ಬಾಶೆಯಲ್ಲಿ ಗುಂಕಂಜಿಮಾ ಎಂದರೆ ಸಮರ ನೌಕೆ ಎಂದರ‍್ತ. ಆಕಾಶದಿಂದ ನೋಡಿದರೆ ಇದು ಸಮರ ನೌಕೆಯನ್ನು ಹೋಲುವಂತೆ ಕಂಡು ಬರುವ ಕಾರಣ ಹೀಗೆ ಕರೆಯಲಾಗುತ್ತಿತ್ತು. ಹಾಗಾಗಿ ಈ ದ್ವೀಪಕ್ಕೆ ಗುಂಕಂಜಿಮಾ ಎಂಬ ಅಡ್ಡ ಹೆಸರು ಬಂದಿತ್ತು. ಈ ದ್ವೀಪದ ನಿಜವಾದ ಹೆಸರು ಹಶಿಮಾ. ಅತ್ಯಂತ ಸಣ್ಣ ಪ್ರದೇಶವಾದ ಹಿನ್ನೆಲೆಯಲ್ಲಿ ಜನರ ವಸತಿಗಾಗಿ ಪ್ರತಿ ಇಂಚು ನೆಲದ ಪೂರ‍್ಣ ಉಪಯೋಗ ಮಾಡಲಾಗಿತ್ತು.
ಈ ದ್ವೀಪದಲ್ಲಿ ಇಶ್ಟೊಂದು ಜನ ಸೇರಲು ಮೂಲ ಕಾರಣ, ಇಲ್ಲಿನ ಕಲ್ಲಿದ್ದಲಿನ ನಿಕ್ಶೇಪ. 1810 ರಲ್ಲಿ ಗುಂಕಂಜಿಮಾದಲ್ಲಿ ಅತ್ಯದಿಕ ಪ್ರಮಾಣದಲ್ಲಿ ಕಲ್ಲಿದ್ದಲಿನ ನಿಕ್ಶೇಪ ಇದೆ ಎಂದು ಕಂಡು ಹಿಡಿಯಲಾಯಿತು. ನಂತರದ ದಿನಗಳಲ್ಲಿ ಇಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮೊದಲಾಯಿತು. ಕಲ್ಲಿದ್ದಲು ಗಣಿಗಾರಿಕೆ ಪ್ರಾರಂಬವಾದ ಕೆಲ ದಿನಗಳಲ್ಲೇ ಮಿಟ್ಸುಬಿಶಿ ಕಾರ‍್ಪೋರೇಶನ್ ಈ ದ್ವೀಪವನ್ನು ಕರೀದಿಸಿ, ಉತ್ಪಾದನೆಯನ್ನು ವಿಸ್ತರಿಸಿತು. ಪ್ರತಿ ವರ‍್ಶ ಅಂದಾಜು 4,00,000 ಟನ್ ಕಲ್ಲಿದ್ದಲನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಉತ್ಪಾದನೆ ಹೆಚ್ಚಾದಂತೆ, ದ್ವೀಪದಲ್ಲಿ ದೊಡ್ಡ ವಸತಿ ಮತ್ತು ಕೈಗಾರಿಕಾ ಕಟ್ಟಡಗಳು ಮೇಲೆದ್ದವು. ಅವುಗಳನ್ನು ಸಮುದ್ರದ ಅಲೆಗಳಿಂದ ರಕ್ಶಿಸಲು ತಡೆ ಗೋಡೆಯನ್ನು ನಿರ‍್ಮಿಸಲಾಯಿತು. ದ್ವೀಪದ ಅರ‍್ದ ಬಾಗದಲ್ಲಿ ಗಣಿಗಾರಿಕೆ ಮತ್ತು ಉಳಿದರ‍್ದ ಬಾಗವನ್ನು ವಸತಿ ಸಮುಚ್ಚಯಗಳು, ಶಾಲೆಗಳು, ಅಂಗಡಿ ಮುಗ್ಗಟ್ಟುಗಳು, ಆಸ್ಪತ್ರೆಗಳು ಹಾಗೂ ಹೊಟೇಲುಗಳಿಗೆ ಮೀಸಲಿಡಲಾಗಿತ್ತು.
ಕಲ್ಲಿದ್ದಲಿನ ನಿಕ್ಶೇಪ ಕಡಿಮೆಯಾಗ ತೊಡಗಿದಾಗ, ಅನಿವಾರ‍್ಯವಾಗಿ ಗಣಿಗಾರಿಕೆಯನ್ನು ನಿಲ್ಲಿಸಬೇಕಾಯಿತು. ಏಪ್ರಿಲ್ 1974 ರಲ್ಲಿ, ಅಂದರೆ ಸರಿ ಸುಮಾರು ನೂರಾ ಐವತ್ತು ವರ‍್ಶಗಳ ನಂತರ ಗಣಿಗಾರಿಕೆಯನ್ನು ಮುಚ್ಚಲಾಯಿತು. ಇಲ್ಲಿನ ನಿವಾಸಿಗಳಿಗೆ ಕೆಲಸಕ್ಕಾಗಿ ಬೇರಾವುದೇ ಕೈಗಾರಿಕೆ ಇಲ್ಲದ ಕಾರಣ, ಈ ದ್ವೀಪವನ್ನು ತೊರೆಯಬೇಕಾಗಿಯಿತು. ನಂತರದ ದಿನಗಳಲ್ಲಿ ಇಲ್ಲಿನ ವಸತಿ ಗ್ರುಹಗಳು ಬಿರುಗಾಳಿ ಹಾಗೂ ಚಂಡಮಾರುತದಿಂದಾಗಿ ಶಿತಿಲಗೊಂಡವು. ಒಂದು ಕಾಲದಲ್ಲಿ ಜನರಿಂದ ಗಿಜಿಗುಡುತ್ತಿದ್ದ ಈ ಪ್ರದೇಶ, ವಿಲಕ್ಶಣ ಹಾಗೂ ಕಾಡುವ ಪರಿಸರವಾಗಿ ಮಾರ‍್ಪಟ್ಟಿತು. ಕಟ್ಟಡಗಳು ನಿರ‍್ವಹಣೆಯ ಕೊರತೆಯಿಂದ ಕುಸಿಯುವ ಅಪಾಯಕ್ಕೆ ಒಳಗಾದವು. ಇದನ್ನು ಮನಗಂಡ ಸರಕಾರ ಗುಂಕಂಜಿಮಾ ದ್ವೀಪಕ್ಕೆ ಸಾರ‍್ವಜನಿಕ ಪ್ರವೇಶವನ್ನು ಮುಚ್ಚಿತು. ಇದಾದ ಅನೇಕ ವರ‍್ಶಗಳ ಕಾಲ ಈ ದ್ವೀಪವನ್ನು ವಿಹಾರ ನೌಕೆಯಲ್ಲಿ ಹೋಗುವವರು ದೂರದಿಂದ ನೋಡಲು ಮಾತ್ರ ಸೀಮಿತಗೊಳಿಸಲಾಗಿತ್ತು.
2009ರಲ್ಲಿ ಹೊಸದಾಗಿ ನಿರ‍್ಮಾಣವಾದ ದೋಣಿಯ ನಿಲುಗಡೆ ಸ್ತಳ ಗುಂಕಂಜಿಮಾದ ಒಳ ಪ್ರದೇಶದ ದ್ರುಶ್ಯ ವೀಕ್ಶಣೆಯನ್ನು ಸಾದ್ಯವಾಗಿಸಿತು. ದೋಣಿಯ ಮೂಲಕ ಬಂದ ಪ್ರವಾಸಿಗರನ್ನು ದ್ವೀಪದ ದಕ್ಶಿಣ ತುದಿಯಲ್ಲಿನ ಮೂರು ವೀಕ್ಶಣಾ ಕಟ್ಟೆಗಳಿಗೆ ಕರೆದೊಯ್ಯಲಾಗುತ್ತದೆ. ನಾಗಸಾಕಿಯಿಂದ ದೋಣಿಗಳಲ್ಲಿ ಇಲ್ಲಿಗೆ ತಲುಪಲು 50 ನಿಮಿಶಗಳ ಸಮಯ ತಗಲುತ್ತದೆ. ಕ್ರಮಿಸುವ ಸಮುದ್ರದ ಹಾದಿಯಲ್ಲಿ, ಮಿಟ್ಸುಬಿಶಿ ಹಡಗು ನಿರ‍್ಮಾಣದ ಕಾರ‍್ಕಾನೆ ಹಾಗೂ ಇತರೆ ಸಣ್ಣ ಸಣ್ಣ ದ್ವೀಪಗಳನ್ನು ಕಾಣಬಹುದು. ದೋಣಿ ವಿಹಾರಕ್ಕೆ ಹೊರಟವರು, ಸ್ವಲ್ಪ ದೂರ ಕ್ರಮಿಸಿದ ನಂತರ ನಾಗಸಾಕಿ ನಗರ ಮತ್ತು ಅದರ ಬಂದರಿನ ವಿಹಂಗಮ ನೋಟವನ್ನು ಆಸ್ವಾದಿಸಬಹುದು.
ಗುಂಕಂಜಿಮಾದ ದೋಣಿ ನಿಲುಗಡೆಯಲ್ಲಿ ಟೂರಿಸ್ಟ್ ಗೈಡ್ ಗಳು ದೂರದಿಂದ ದ್ವೀಪದಲ್ಲಿನ ಕಟ್ಟಡಗಳ ಪ್ರಾಮುಕ್ಯತೆಯನ್ನು ಪ್ರವಾಸಿಗರಿಗೆ ತಿಳಿಸಿಕೊಡುತ್ತಾರೆ. ಇಲ್ಲಿರುವ ವಸತಿ ಸಮುಚ್ಚಯಗಳು ಯಾವ ಸಮಯದಲ್ಲಾದರೂ ಕುಸಿಯುವ ಬೀತಿಯಿರುವ ಕಾರಣ ಅವುಗಳ ಬಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುವುದಿಲ್ಲ. ಹೀಗೆ ನೋಡಲು ಬಂದ ಪ್ರವಾಸಿಗರಿಗೆ ಟೂರಿಸ್ಟ್ ಗೈಡ್ ಗಳು ಅಂದಾಜು 45 ನಿಮಿಶಗಳ ಕಾಲ ದ್ವೀಪದ ಪ್ರಮುಕ ಆಕರ‍್ಶಣೆಗಳ ವಿವರಣೆಯನ್ನು ನೀಡುತ್ತಾರೆ.
ಈ ದ್ವೀಪಕ್ಕೆ ಹೋಗಲಾಗದವರ ಅನುಕೂಲಕ್ಕಾಗಿ ನಾಗಸಾಕಿ ಔರಾ ಚರ‍್ಚ್ ಬಳಿ, ಗುಂಕಂಜಿಮಾ ಡಿಜಿಟಲ್ ಮ್ಯೂಸಿಯಂ ತೆರೆಯಲಾಗಿದೆ. ಈ ಮ್ಯೂಸಿಯಂನಲ್ಲಿ, ದ್ವಿಪದ ಬಗ್ಗೆ ಸಾಕಶ್ಟು ಮಾಹಿತಿಯನ್ನು ಆದುನಿಕ ತಂತ್ರಜ್ನಾನದ ಮೂಲಕ ತಿಳಿಸಿಕೊಡಲಾಗುತ್ತದೆ. ಅನೇಕ ಕಂಪನಿಗಳು ದೋಣಿ ವಿಹಾರವನ್ನು ತೆರೆದು, ಪ್ರವಾಸಿಗರ ಅನುಕೂಲಕ್ಕಾಗಿ ಕಾರ‍್ಯ ನಿರ‍್ವಹಿಸುತ್ತಿವೆ. ಪ್ರತಿಯೊಂದು ದೋಣಿಯು ಈ ಪ್ರವಾಸಕ್ಕಾಗಿ ಅಂದಾಜು ಮೂರು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. (ಒಂದು ಗಂಟೆ ಹೋಗಲು, ಒಂದು ಗಂಟೆ ಹಿಂದಿರುಗಲು ಹಾಗೂ ಮತ್ತೊಂದು ಗಂಟೆ ಆ ದ್ವೀಪದಲ್ಲಿ ಕಳೆಯಲು) ದೋಣಿಯ ಕಂಪನಿಗಳು ಪ್ರತಿ ವ್ಯಕ್ತಿಗೆ 3,910 ರಿಂದ 5,810 ಯೆನ್ ಗಳನ್ನು ದೋಣಿಯಲ್ಲಿರುವ ಅನುಕೂಲತೆಗಳ ಆದಾರದ ಮೇಲೆ ವಿದಿಸುತ್ತವೆ. ಒಂದು ಕಾಲದಲ್ಲಿ ಅತ್ಯಂತ ಜನನಿಬಿಡ ಪ್ರದೇಶವೆಂದು ಹೆಸರಾಗಿದ್ದ ಗುಂಕಂಜಿಮಾ ದ್ವೀಪ ಇಂದು ಪ್ರವಾಸಿ ತಾಣವಾಗಿ ಮಾರ‍್ಪಟ್ಟಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: japan-guide.com, japandeluxetours.com, thelittlehouseofhorrors.com, independent.co.uk, pixabay.com )
ಇತ್ತೀಚಿನ ಅನಿಸಿಕೆಗಳು