ಕಟ್ಟುಜಾಣ್ಮೆಯ ಕ್ರಾಂತಿ: ಓಪನ್ ಎ.ಐ – ಚಾಟ್ ಜಿ.ಪಿ.ಟಿ ಮತ್ತು ಸೋರಾ-2

– ನಿತಿನ್ ಗೌಡ

ಕಂತು-1

ಹಿಂದಿನ ಕಂತಿನಲ್ಲಿ ಓಪ್ನ್ ಎಐ ನ ಚಾಟ್ ಜಿ.ಪಿ.ಟಿ ಮತ್ತು ಸೋರಾ ಬಗೆಗೆ ಪಕ್ಶಿನೋಟ ಬೀರಿದ್ದೆವು. ಈಗ ಇದರ ಮುಂದುವರಿದ ಬಾಗವಾಗಿ ಸೋರಾದ ಸಾದ್ಯತೆಗಳ ಬಗೆಗೆ ನೋಡೋಣ.

ಸೋರಾ ಸಾದ್ಯತೆಗಳು

ಮುಂದೆ ಇದು ಕೈಗೆಟುಕುವ ದರಕ್ಕೆ ಮಾರುಕಟ್ಟೆಯಲ್ಲಿ ಒದಗಿದೊಡನೆ; ಸ್ರುಜನಾತ್ಮಕವಾಗಿ ಯೋಚಿಸಿ ತಮ್ಮ ಕಲೆಯನ್ನು ಜಗತ್ತಿಗೆ ಪರಿಚಿಯಿಸಲು ಕಾಯುತ್ತಿರುವವರಿಗೆ ಎಲ್ಲೆಯಿಲ್ಲದಶ್ಟು ಅವಕಾಶ ಕಾದಿದೆ. ಈಗ ಒಂದು ಚಿತ್ರತಂಡ ತನ್ನ ಚಿತ್ರಕತೆ( Script) ನೀಡಿದಲ್ಲಿ ಅದು ಮುಂದೆ ವೀಡಿಯೂ ಆಗಿ ನಮ್ಮ ಮುಂದೆ ಬರುತ್ತದೆ ಅಂದರೆ ಇದರ ಸಾದ್ಯತೆಗಳ ಅಂದಾಜು ಲೆಕ್ಕ ಹಾಕಿಕೊಳ್ಳಿರಿ. ನಮ್ಮ ಕನ್ನಡ ಚಿತ್ರರಂಗದವರೂ ಇವೆಲ್ಲವನ್ನೂ ಬಳಸಿ, ಚಿತ್ರ ತೆಗೆದು ನಮ್ಮ ದಿಗ್ಗಜರಾದ ಡಾ|| ರಾಜ್ ಕುಮಾರ್, ಶಂಕರಣ್ಣ ,ವಿಶ್ಣುವರ್‍ದನ್ ಸೇರಿದಂತೆ ಹಲವು ಕಲಾವಿದರನ್ನು ಮತ್ತೆ ತೆರೆಗೆ ತರಬಹುದು. ಹಾಗೆಯೇ, ಚಿತ್ರ ತಯಾರುಗೊಳ್ಳುವ,ಅದಕ್ಕೆ ತಗಲುವ ವೆಚ್ಚದಲ್ಲೂ ಇಳಿಕೆ ಕಾಣಬಹುದು. ಇದು ಹೊಸ ಕಲಾವಿದರಿಗೆ, ಕಂಟೆಂಟ್ ಕ್ರಿಯೇಟರ್‍ಸ್ ಗೆ ತಮ್ಮ ಕಲೆಯನ್ನು ತೋರಿಸಲು ಒಂದು ಡೆಮೋಕ್ರಾಟಿಕ್ ವೇದಿಕೆಯಾಗಬಲ್ಲದು. ಕಲಿಕೆ, ಅರೋಗ್ಯ, ಮಾದ್ಯಮ ಮತ್ತು ಮನೋರಂಜನೆ ಸೇರಿದಂತೆ ಇಂತಹ ಹಲವು ಹರವುಗಳಲ್ಲಿ ಮಹತ್ತರ ಬದಲಾವಣೆ ತರಲು ಇದು ಸಹಕಾರಿಯಾಗಲಿದೆ.

ಮೈಮರೆಸುವ ಚಳಕಗಳು( Immersive technologies) , ಮೆಟಾವರ್‍ಸ್ (Metaverse) ,ರೊಬಾಟಿಕ್ಸ್ , ವೇರೆಬಲ್ಸ್( Wearables) ಹೀಗೆ ಹಲವು ಚಳಕಗಳು ಒಟ್ಟಿಗೆ ಬಂದೆಡೆ ಇವುಗಳ ಸಾದ್ಯತೆಗಳು ನೂರ್‍ಮಡಿಗೊಳ್ಳುತ್ತದೆ. ಎತ್ತುಗೆಗೆ; ಈಗ ಸೋರಾ ಮೂಲಕ ತಯಾರಾದ ಒಂದು ಸಿನಿಮಾದಲ್ಲಿ; ನಾವೇ ಒಂದು ಪಾತ್ರವಾದಲ್ಲಿ!! ಇಲ್ಲವೇ ಇದು ಮೆಟಾವರ್‍ಸ್ ಜೊತೆ ಕೈ ಜೋಡಿಸಿದಲ್ಲಿ ನಮ್ಮ ಅನುಬವವನ್ನು, ನೈಜತೆಗೆ ಇನ್ನೂ ಹತ್ತಿರವಾಗಿಸಬಹುದು. ನಾವು ಮನೋರಂಜನೆಯನ್ನು ಪಡೆಯುವ ಬಗೆಯ ಸಾದ್ಯತೆಗಳು ಹೆಚ್ಚಾಗಬಹುದು. ಅಂದರೆ ನಾವು ಮೂರನೆಯವರಾಗಿ ನೋಡುವ ಬದಲು; ಸಿನಿಮಾ ಒಳಗಿನ ನೇರ ಸಾಕ್ಶ್ಯಿಯಾಗಬಹುದು.

ಎನ್.ಎಪ್.ಟಿ (NFT)

ಎನ್.ಎಪ್.ಟಿ (NFT) ಡಿಜಿಟಲ್ ಜಗತ್ತಿನಲ್ಲಿ, ಬ್ಲಾಕ್ಚೈನ್ ತಳಹದಿಯಲ್ಲಿ ಯಾವುದೇ ಒಂದು ಕಂಟೆಂಟ್, ಸ್ರುಜನಾತ್ಮಕ ಕಲೆ ಇಲ್ಲವೇ ಡಿಜಿಟಲ್ ಆಸ್ತಿಗೆ ತನ್ನದೇ ಆದ ಒಂದು ಡಿಜಿಟಲ್ ಐಡೆಂಟಿಪಯರ‍್(Token) ಮೂಲಕ, ಯೂನಿಕ್ ಗುರುತು ನೀಡುತ್ತದೆ. ಇದನ್ನು ಮಾರ್‍ಪಡಿಸಲಾಗಲಿ, ನಕಲಿಸಲಾಗಲಿ ಆಗುವುದಿಲ್ಲ. ಅದೇ ಕಾರಣಕ್ಕೆ ಇದನ್ನು ನಾನ್ ಪಂಜಿಬಲ್ ಅನ್ನುತ್ತಾರೆ. ಆದರೆ ಇದರ ಮಾಲಿಕತ್ವವನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್‍ಗಾಯಿಸಬಹುದು ಮತ್ತು ಇದನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಹುದು. ಕಂಟೆಂಟ್ ಕ್ರಿಯೇಟರ್‍ಸ್ ತಮ್ಮ ಕಂಟೇಟ್ ಅನ್ನು ಸೋರಾ ಮೂಲಕ ತಯಾರಿಸಿ ಎನ್.ಎಪ್.ಟಿ(NFT)ಗಳನ್ನಾಗಿ ಮಾಡಿ ಮಾರಬಹುದು. ಇವಿಶ್ಟೂ ನನ್ನ ಊಹೆಗಳಶ್ಟೇ. ಇಂದಿನ ಕನಸುಗಳು, ನಾಳೆಯ ವಾಸ್ತವಗಳಾಗಿ ದಿನ ನಿತ್ಯದ ಸಾಮಾನ್ಯ ವಿಶಯಗಳಾಗಿ ಹೋಗುತ್ತವೆ.

ಹಲವು ವಿಶಯಗಳಲ್ಲಿ ಸೋರಾ ಏಳ್ಗೆ ಹೊಂದಬೇಕು ಮತ್ತು ಗಮನ ಕೊಡಬೇಕು. ಎತ್ತುಗೆಗೆ ತಯಾರಾಗುವ ವೀಡಿಯೋದಲ್ಲಿರುವ ಇರುವರಿಮೆ(Physics) ಬಗೆಗೆ ಇನ್ನೂ ಹೆಚ್ಚಿನ ಗಮನ ಕೊಡಬೇಕು. ಈಗ ಒಬ್ಬ ಒಂದು ಸೀನ್ ಅಲ್ಲಿ, ಒಂದು ಚಿಕನ್ ಲೆಗ್ ಪೀಸ್ ತಿಂದಲ್ಲಿ, ಆ ತಿಂದ ಗುರುತು ಕಾಣದೇ ಹೋಗಬಹುದು.ಇಂತಹ ವಿಶಯಗಳನ್ನು ಸೋರಾ ಅರಿತು ಸರಿಪಡಿಸಿಕೊಳ್ಳುವ ಜಾಣ್ಮೆ ಕಟ್ಟಿಕೊಳ್ಳಬೇಕು.

ಒಂದು ಚಳಕ ತನ್ನ ಜೊತೆ ತರುವ ಉಪಯೋಗಗಳ ಜೊತೆಗೆ, ಅದನ್ನು ತಪ್ಪುಹಾದಿಯಲ್ಲಿ ಬಳಸುವ ಸಾದ್ಯತೆಗಳನ್ನೂ ಹೊರಜಗತ್ತಿಗೆ ತೆರೆದಿಡುತ್ತದೆ. ನೈತಿಕ ಸಮಸ್ಯೆಗಳು ಎದುರಾಗಬಹುದು. ಇದೊಂದು ಕಂಟೆಂಟ್ ತಯಾರಿಕೆ ಆದ್ದರಿಂದ ಹಲವು ಕಟ್ಟಳೆಗಳ ಮೂಲಕ ಕಟೆಂಟ್ ಅನ್ನು ನಿರ್‍ವಹಣೆ ಮಾಡಬೇಕು.ಎತ್ತುಗೆಗೆ ಹಿಂಸೆ, ಅಶ್ಲೀಲತೆ ಇತ್ಯಾದಿ ಎಡೆ ಗಮನಹರಿಸಬೇಕು. ಓಪನ್ ಎ.ಐ ಇದನ್ನು ಚೆನ್ನಾಗಿ ಅರಿತಿದ್ದು, ಇದರತ್ತ ಈಗಾಗಲೇ ಹೆಜ್ಜೆ ಇಟ್ಟಿದೆ. ಒಟ್ಟಿನಲ್ಲಿ ದಿಟ ಜಗತ್ತನ್ನು ಅರಿತುಕೊಂಡು ಅಣಕಿಸುವ ಹಿರಿಹಂಬಲವನ್ನು ಹೊಂದಿರುವ ಸೋರಾ; ಜನರೇಟೀವ್ ಕಟ್ಟು ಜಾಣ್ಮೆ (Artificial General Intelligence-AGI) ಹರವಿಗೆ ಒಂದು ಉತ್ತಮ ತಳಹದಿ ನೀಡುವ ಮಾದರಿಗಳನ್ನು ನೀಡುವ ಮೈಲಿಗಲ್ಲನ್ನು ಹೊಂದಿದೆ.

ಕಂತು-1

( ಮಾಹಿತಿಸೆಲೆ ಮತ್ತು ಚಿತ್ರಸೆಲೆ openai.com , bing.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: