ವಿಶ್ವದ ಅತಿ ದೊಡ್ಡ ಹಂದಿ ಶಿಲ್ಪ – ವೋಯಿನಿಕ್

ಕೆಲವೊಂದು ಪ್ರಾಣಿಗಳನ್ನು ನಿಕ್ರುಶ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಅದರಲ್ಲೂ ಹಂದಿಯನ್ನು ನಿಕ್ರುಶ್ಟವಾಗಿ ನೋಡುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇದೇ ಹಂದಿಯ ಅತಿ ದೊಡ್ಡ ಶಿಲ್ಪವಿದೆ. ಅದಿರುವುದು ಉತ್ತರ ಪ್ರಾನ್ಸಿನ A34 ಹೆದ್ದಾರಿಯಿಂದ ರೀಮ್ಸ್ ಮತ್ತು ಬೆಲ್ಜಿಯಮ್ ಗಡಿ ಬಾಗದ ಸಾಲ್ಸೆಸ್-ಮಾಂಕ್ವಿನ್ ಆರ‍್ಡೆನ್ನೆಸ್ ನಲ್ಲಿ. ಇದರ ಸುತ್ತಮುತ್ತ ಹಸಿರು ತುಂಬಿದ ಹೊಲಗಳಿವೆ. ಇಲ್ಲಿರುವ ವಿಶ್ವದ ಅತಿ ದೊಡ್ಡ ಹಂದಿಯ ಕಲಾಕ್ರುತಿಯನ್ನು ವೋಯಿನಿಕ್ ಎನ್ನುತ್ತಾರೆ. ಈ ಶಬ್ದ ಯಾವ ಬಾಶೆಯಿಂದ ಬಂದಿದೆ? ಇದರ ಅರ‍್ತವೇನು? ಎಂಬುದರ ಬಗ್ಗೆ ವಿವರಣೆ ದೊರಕಿಲ್ಲ. ಸಿಕ್ಕ ಮಾಹಿತಿಯಂತೆ ಈ ದೈತ್ಯ ಹಂದಿಯ ಹೆಸರನ್ನು ಇದರ ಶಿಲ್ಪಿ ಎರಿಕ್ ಸ್ಲೇಜಿಯಾಕ್ ಅವರ ಪೋಶಕರ ಹೆಸರುಗಳ ಸಂಯೋಜನೆಯಿಂದ ಹುಟ್ಟಿದೆ ಎನ್ನಲಾಗಿದೆ.

ವೋಯಿನಿಕ್ ವಿಶ್ವದ ಅತಿ ದೊಡ್ಡ ಕಾಡು ಹಂದಿಯ ಶಿಲ್ಪವಾಗಲು ಅದರ ದೈತ್ಯತೆಯೇ ಮೂಲ ಕಾರಣ. ಇದರ ಪರಿಕಲ್ಪನೆ ಮತ್ತು ನಿರ‍್ಮಾಣದ ಹೊಣೆ ಹೊತ್ತವರು ಶಿಲ್ಪಿ ಎರಿಕ್ ಸ್ಲೇಜಿಯಾಕ್. ಆತ ಈ ದೈತ್ಯ ಕಾಡು ಹಂದಿಯ ಶಿಲ್ಪವನ್ನು 2008ರಲ್ಲಿ ಲೋಕಾರ‍್ಪಣೆ ಮಾಡಿದ. ವೋಯಿನಿಕ್ ಕಾಡು ಹಂದಿಯ ಶಿಲ್ಪವನ್ನು ಟೊಳ್ಳಾದ ಉಕ್ಕಿನ ಚೌಕಟ್ಟಿನ ಮೇಲೆ ಬೆಸುಗೆ ಮಾಡಿ, ಉಕ್ಕಿನ ಹಾಳೆಗಳನ್ನು ಚರ‍್ಮದಂತೆ ಹೊದಿಸಲಾಗಿದೆ. ಚೌಕಟ್ಟು ಮತ್ತು ಅದರ ಮೇಲೆ ಹರಡಿರುವ ಉಕ್ಕಿನ ಹಾಳೆಗಳ ಒಟ್ಟು ತೂಕ 50 ಟನ್ ಗಳಿಗೂ ಹೆಚ್ಚು. ವೋಯಿನಿಕ್ ಕಾಡುಹಂದಿಯ ಹೊಟ್ಟೆಯ ತಳ ಬಾಗದಲ್ಲಿ ಸುಲಬವಾಗಿ ತೆರೆಯಬಹುದಾದ ಬಾಗಿಲನ್ನು ನೀಡಲಾಗಿದ್ದು, ಹಲವಾರು ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಬಹುದು. ಈ ಶಿಲ್ಪವು 10 ಮೀಟ‍ರ್ ಎತ್ತರ, 14 ಮೀಟ‍ರ್ ಉದ್ದ ಮತ್ತು 5 ಮೀಟ‍ರ್ ಅಗಲವಿದೆ. ಇದರ ನಿರ‍್ಮಾಣದ ಹೊಣೆ ಹೊತ್ತ ಶಿಲ್ಪಿ ಎರಿಕ್ ಸ್ಲೇಜಿಯಾಕ್ ಗೆ ಇದನ್ನು ಪೂರ‍್ಣಗೊಳಿಸಲು ಒಂದು ದಶಕದಶ್ಟು ಕಾಲಾವಕಾಶ ಬೇಕಾಯಿತು ಎಂದಲ್ಲಿಇದರ ಗಾತ್ರದ ಬಗ್ಗೆ ಊಹಿಸಬಹುದು.

ಜನವರಿ 1, 1983ರಂದು ಪ್ರಾರಂಬವಾದ ಈ ಬ್ರುಹತ್ ಸ್ಮಾರಕದ ನಿರ‍್ಮಾಣ ಕಾರ‍್ಯ, ಹನ್ನೊಂದು ವರ‍್ಶಗಳ ನಂತರ, 11ನೇ ಡಿಸೆಂಬ‍ರ್ 1993ರಲ್ಲಿ ಮುಕ್ತಾಯವಾಯಿತು. ಎರಿಕ್ ಸ್ಲೇಜಿಯಾಕ್ ಅವರ ಕಾರ‍್ಯಾಗಾರದಲ್ಲಿ ತಯಾರಿಸಲಾದ ಈ ದೈತ್ಯ ಲೋಹದ ಹಂದಿಯನ್ನು 2008ರಲ್ಲಿ ಅಲ್ಲಿಂದ ಸಾಗಾಣಿಕೆ ಮಾಡಿ ಇಂದಿನ ಸ್ತಳ, ಸಾಲ್ಸೆಸ್-ಮಾಂಕ್ವಿನ್ ಆರ‍್ಡೆನ್ನೆಸ್ ನ ಪ್ರವೇಶ ದ್ವಾರದಲ್ಲಿ ಸ್ತಾಪಿಸಲಾಯಿತು. ಈ ದೈತ್ಯ ಹಂದಿಯ ಸಾಗಾಣಿಕೆ, ದರ‍್ಮಸ್ತಳದ ಗೋಮಟೇಶ್ವರನ ವಿಗ್ರಹವನ್ನು ಕೆತ್ತನೆಯ ಸ್ತಳದಿಂದ ಈಗಿರುವ ಸ್ತಳಕ್ಕೆ ಸ್ತಳಾಂತರಿಸಿದ ಬ್ರುಹತ್ ಯೋಜನೆಯನ್ನು ನೆನಪಿಗೆ ತರುತ್ತದಲ್ಲವೆ?.  ಬೆಟ್ಟದ ಮೇಲಿರುವ ಈ ಜಾಗಕ್ಕೆ ಸಾಗಿಸುವಾಗ ಆರ‍್ಡೆನ್ಸ್ ಪ್ರದೇಶದ ಸುತ್ತಮುತ್ತಲಿನ ಜನರು ಬೆರಗುಗಣ್ಣಿಂದ ನೋಡುತ್ತಿದ್ದರಂತೆ. ಒಂದು ರೀತಿಯಲ್ಲಿ ಮೆರವಣಿಗೆಯೆಂದು ಸಂಬ್ರಮಿಸಿದ್ದರಂತೆ. ಈ ದೈತ್ಯ ಕಾಡು ಹಂದಿಯ ಸ್ಮಾರಕ ನಿಂತಿರುವುದು ತಿರುಗುವ ವೇದಿಕೆಯ ಮೇಲೆ. ವೋಯಿನಿಕ್ ಹಂದಿ ಬಲವಾದ ಮೌಲ್ಯಗಳನ್ನು ಸಂಕೇತಿಸುತ್ತದೆಂದು ಬಾವಿಸಲಾಗಿದೆ. ಲೋಹದಶ್ಟು ಶಕ್ತಿ, ಕಟಿಣ ಪರಿಶ್ರಮ, ದೈರ‍್ಯ ಮತ್ತು ಸ್ನೇಹಶೀಲತೆ, ಇದರ ಗುಣಗಳು. ಇದನ್ನು ಈ ದೈತ್ಯ ಶಿಲ್ಪ ಕಲೆ ಪ್ರತಿನಿದಿಸುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: ardennes.com, france-voyage.com, bigthings.vroomvroomvroom.com, fr.wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: