ಅಪರ‍್ಣ ಅವರಿಗೆ ನಮನ

– ಶ್ಯಾಮಲಶ್ರೀ.ಕೆ.ಎಸ್.

ಕನ್ನಡವೆಂದರೆ ಅಪರ‍್ಣ, ಅಪರ‍್ಣ ಎಂದರೆ ಕನ್ನಡ ಎನಿಸುವಶ್ಟು ಕನ್ನಡಿಗರ ಮನೆಮಾತಾಗಿದ್ದ ನಿರೂಪಕಿ, ನಟಿ, ಅಂಕಣಕಾರ‍್ತಿ, ದಿವಂಗತ ಶ್ರೀಮತಿ ಅಪರ‍್ಣಾ ವಸ್ತಾರೆಯವರು ನಾಡು ಕಂಡ ಅತ್ಯುತ್ತಮ ಕನ್ನಡತಿ. 90 ರ ದಶಕದಲ್ಲಿ ಓದುತ್ತಿದ್ದ ಎಲ್ಲಾ ವಿದ್ಯಾರ‍್ತಿಗಳಿಗೆ ಇವರ ಪರಿಚಯ ಇದ್ದೇ ಇರುತ್ತದೆ. ಆಗಿನ ಡಿಡಿ9 ರಲ್ಲಿ ವಾರ‍್ತಾವಾಚಕರಾಗಿದ್ದ ಅಪರ‍್ಣ ಅವರು ತಮ್ಮ ನಿರರ‍್ಗಳವಾದ ದ್ವನಿಸಿರಿಯಿಂದ ಎಲ್ಲರ ಮೆಚ್ಚುಗೆ ಪಡೆದಿದ್ದವರು. ಅಂದಿನಿಂದ ಇಂದಿನವರೆಗೂ ಕರ‍್ನಾಟಕ ಸರ‍್ಕಾರದ ವತಿಯಿಂದ ನಡೆಯುತ್ತಿದ್ದ ಬಹುತೇಕ ಕಾರ‍್ಯಕ್ರಮಗಳಿಗೆ ನಿರೂಪಣೆಯ ಹೊಣೆ ಹೊತ್ತು, ಸೇವೆ ಸಲ್ಲಿಸಿದ ಶ್ರೀಮತಿ ಅಪರ‍್ಣಾ ಅವರ ಸಾದನೆ ಶ್ಲಾಗನೀಯ. ಇಂತಹ ಅಪರೂಪದ ಕನ್ನಡತಿ ಇನ್ನಿಲ್ಲವೆಂದರೆ ನಿಜಕ್ಕೂ ವಿಶಾದನೀಯ. ಇತ್ತೀಚೆಗಶ್ಟೇ 2024 ಜುಲೈ ತಿಂಗಳ 11ರಂದು ತಮ್ಮ 58ನೇ ವಯಸ್ಸಿಗೆ ಅಗಲಿದ ಅಪ್ರತಿಮ ಪ್ರತಿಬೆ, ಕನ್ನಡದ ಮನೆಮಗಳು ದಿವಂಗತ ಅಪರ‍್ಣಾ ಅವರ ಆತ್ಮಕ್ಕೆ ಚಿರಶಾಂತಿಯು ದೊರಕಲಿ.

ಅಪರ‍್ಣಾ ಅವರು ಹುಟ್ಟಿದ್ದು 1966 ನೇ ಇಸವಿ ಅಕ್ಟೋಬರ್ ತಿಂಗಳಲ್ಲಿ. ಕನ್ನಡಪ್ರಬ ಪತ್ರಿಕೆಯ ಸಿನಿ ವರದಿಗಾರರಾದ ದಿವಂಗತ ಕೆ. ಎಸ್. ನಾರಾಯಣಸ್ವಾಮಿ ಹಾಗೂ ದಿವಂಗತ ಪದ್ಮಾ ನಾರಾಯಣಸ್ವಾಮಿ ದಂಪತಿಗಳ ಮಗಳಾದ ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ. ಬೆಳೆದದ್ದು, ನಟಿ, ನಿರೂಪಕಿಯಾಗಿ ನೆಲೆಕಂಡಿದ್ದು ಎಲ್ಲವೂ ರಾಜದಾನಿ ಬೆಂಗಳೂರಿನಲ್ಲಿಯೇ. ಇವರು ತಮ್ಮ ಪ್ರಾತಮಿಕ ಶಿಕ್ಶಣವನ್ನು ಬೆಂಗಳೂರಿನ ಕುಮಾರ ಪಾರ‍್ಕ್ ಶಾಲೆಯಲ್ಲಿ ಪಡೆದು ಮುಂದೆ ಪದವಿ ಪೂರೈಸಿದ್ದು ಎಮ್ ಇ ಎಸ್ ಕಾಲೇಜಿನಲ್ಲಿ. ಶಾಲಾ ದಿನಗಳಲ್ಲೇ ಆಕಾಶವಾಣಿಯ ಹಲವು ನಾಟಕಗಳಲ್ಲಿ ಅಬಿನಯಿಸಿ ಸೈ ಎನಿಸಿಕೊಂಡಿದ್ದ ಅಪರ್‍ಣ ಅವರು, 1984ರಲ್ಲಿ ನಿರ‍್ದೇಶಕ ದಿಗ್ಗಜರಲ್ಲೊಬ್ಬರಾದ ದಿವಂಗತ ಪುಟ್ಟಣ್ಣ ಕಣಗಾಲರ ‘ಮಸಣದ ಹೂ‘ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ‍್ಪಣೆ ಮಾಡಿ, ಆನಂತರ ಸುಮಾರು 10 ಕನ್ನಡ ಚಿತ್ರಗಳಲ್ಲಿ ಅಬಿನಯಿಸಿದ್ದರು.

1989 ರಲ್ಲಿ ನಿರೂಪಕಿಯಾಗಿ ಪಾದಾರ‍್ಪಣೆ ಮಾಡಿ, ಕನ್ನಡದ ಸವಿಯೂಟವನ್ನು ಬಡಿಸುವಲ್ಲಿ ಯಶಸ್ವಿಯಾದರು. ನಿರೂಪಣೆ, ವಾರ‍್ತಾವಾಚನ, ಸಂದರ‍್ಶನ, ನೇರಪ್ರಸಾರ ಕಾರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಬಾಗವಹಿಸಿದ್ದ ಅಪರ್‍ಣ ಅವರು, ಆಲ್ ಇಂಡಿಯಾ ರೇಡಿಯೋದಲ್ಲಿಯೂ ತಮ್ಮ ಚಾಪನ್ನು ಮೂಡಿಸಿ‌ದ್ದಲ್ಲದೆ, ರೇಡಿಯೋ ಎಪ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿಯೂ ಶ್ರೋತ್ರುಗಳನ್ನು ರಂಜಿಸಿದ್ದರು. ವ್ರುತ್ತ ಪತ್ರಿಕೆಗಳಲ್ಲಿ ಅಂಕಣಕಾರ‍್ತಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು 1990 ರಿಂದ 2000 ನೇ ಇಸವಿಯವರೆಗೂ ಸುಮಾರು 10 ವರ‍್ಶಗಳ ಕಾಲ ದೂರದರ‍್ಶನದಲ್ಲಿ ನಿರೂಪಕಿಯಾಗಿ ಸೇವೆ ಸಲ್ಲಿಸಿದರು. 1998 ನೇ ಇಸವಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜರುಗಿದ ಕಾರ‍್ಯಕ್ರಮವೊಂದರಲ್ಲಿ ಸತತವಾಗಿ 8 ಗಂಟೆಗಳ ಮೂಲಕ ನಿರೂಪಣೆ ಮಾಡುವ ಮೂಲಕ ದಾಕಲೆ ನಿರ‍್ಮಿಸಿದ್ದರು.

2003 ರಲ್ಲಿ ಸಾಹಿತಿ ಮತ್ತು ವಾಸ್ತುತಜ್ನರಾದ ನಾಗರಾಜ್ ವಸ್ತಾರೆಯವರನ್ನು ಮದುವೆಯಾಗಿ ಸುಕೀ ಜೀವನವನ್ನು ನಡೆಸಿದ್ದಾರೆ. ಕಿರುತೆರೆಯ ಅನೇಕ ದಾರಾವಾಹಿ, ರಿಯಾಲಿಟಿ ಶೋಗಳಲ್ಲಿಯೂ ಬಾಗವಹಿಸಿ ಜನಮನಗಳಲ್ಲಿ ಇವರು ಗೌರವಯುತವಾದ ಸ್ತಾನವನ್ನು ಪಡೆದಿದ್ದಾರೆ. ಬೆಂಗಳೂರು ಮೆಟ್ರೋ ರೈಲಿನಲ್ಲಿ ಕೇಳಿಬರುವ ದನಿ ಇವರದ್ದೇ. ಈಟಿವಿ ವಾಹಿನಿಯಲ್ಲೂ ಇವರು ಕೆಲಕಾಲ ನಿರೂಪಕಿಯಾಗಿ ಕಾರ‍್ಯನಿರ‍್ವಹಿಸಿದ್ದರು. ಹೀಗೆ ಸುಮಾರು 7,000 ಕಾರ‍್ಯಕ್ರಮಗಳಲ್ಲಿ ತಮ್ಮ ಸುಂದರವಾದ ದ್ವನಿಯಿಂದ ಜನಮನಸೂರೆಗೊಂಡ ಅಪ್ಪಟ ಕನ್ನಡತಿ ಅಪರ‍್ಣ ಅವರು, ಸುಮಾರು ಎರಡು ವರ‍್ಶಗಳ ಹಿಂದೆ ಕ್ಯಾನ್ಸರ್ ‍ರೋಗಕ್ಕೆ ತುತ್ತಾಗಿದ್ದ ಅಪರ್‍ಣ ಅವರು, ದಿಡೀರನೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿ ತೆರಳಿದ್ದಾರೆ. ಇಂತಹ ಸರಳ ಸಜ್ಜನಿಕೆಯ ಕನ್ನಡದ ಪ್ರತಿಬೆ ಇನ್ನಿಲ್ಲವಾದರೂ, ತಮ್ಮ ಅಪ್ರತಿಮ ದ್ವನಿಯ ಮುಕೇನ ಕನ್ನಡಿಗರ ಮನದಲ್ಲಿ ಚಿರಸ್ತಾಯಿಯಾಗಿ ಉಳಿದಿದ್ದಾರೆ.

(ಚಿತ್ರಸೆಲೆ: instagram.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: