ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 13

ಸಿ. ಪಿ. ನಾಗರಾಜ.

*** ಕೀಚಕನ ಪ್ರಸಂಗ: ನೋಟ – 13 ***

ಸೂರ್ಯನು ಉದಯ ಪರ್ವತವ ಅಡರಿದನು. ಊರೊಳಗೆ ಗುಜುಗುಜಿಸಿ ವಾರ್ತಾಭಾರ ಮಸಗಿತು. ನೆರೆದ ನೆರವಿಯೊಳು  ಆರಬಾಯ್ಗಳೊಳಾದೊಡೆಯು ಜನಜನಿತ ಜಪವಾಯ್ತು.  ಭೂರಿ ಚಿಂತಾತುರ ವಿರಾಟನು…

ವಿರಾಟರಾಯ: ಮಾರಿಯೋ ಸೈರಂಧ್ರಿಯೋ ಈ ನಾರಿ ಇರಬೇಡ.

(ಎಂದು ತನ್ನಯ ಸತಿಗೆ ನೇಮಿಸಿದ. ಅಳಲು ಕೈಮಿಗಲು,  ಆ ವಿರಾಟನ ಲಲನೆ ಸೈರಂಧ್ರಿಯನು ಕರೆಸಿದಳು.)

ಸುದೇಷ್ಣೆ: ಎಲೆ ಮಹಾತುಮೆ ತಾಯೆ, ನಿಮಗೆ ಅಂಜುವೆವು ಶರಣು. ನೀವು ಹೊಳಲೊಳು ಇದ್ದರೆ ಭೀತಿ ಘನ. ನೀವು ಒಲಿದ ಠಾವಿಗೆ ಬಿಜಯ ಮಾಡುವುದು. ನಮ್ಮನು ಉಳುಹ ಬೇಹುದು

(ಎನಲು…ಇಂದುಮುಖಿ ಇಂತು ಎಂದಳು.)

ಸೈರಂಧ್ರಿ: ಎಮ್ಮದು ಏನು ಅಪರಾಧ ದೇವಿಯೆ… ನಿಮ್ಮ ತಮ್ಮನು ತಪ್ಪಿ ನಡೆದೊಡೆ ಎಮ್ಮ ರಮಣರು ದುರ್ಜನರ ಸೈರಿಸದೆ ಸೀಳಿದರು. ನಿಮ್ಮ ನಾವು ಓಲೈಸಿ, ಮರಳಿದು ನಿಮ್ಮ ಕೆಡಿಸುವರಲ್ಲ . ಧೂರ್ತರು ನೀತಿ ಬಾಹಿರರು ತಮ್ಮ ಮತದಲಿ ತಾವೆ ಕೆಟ್ಟರು .

ಸುದೇಷ್ಣೆ: ತಾವು ತಮ್ಮಿಂದ ಅಳಿದರೆ ಅದು ಸಾಕು. ಆವು ನಿಮಗೆ  ಅಂಜುವೆವು . ನಿಮ್ಮಲಿ ಯಾವುದೂ ತಪ್ಪಿಲ್ಲ. ನೀವು ಇಲ್ಲಿರಲು ಬೇಡ.

(ಎನಲು)

ಸೈರಂಧ್ರಿ: ದೇವಿ ಚಿತ್ತೈಸು, ನಾವು ಮುನ್ನ ಇಹರಲ್ಲ. ನಿಮ್ಮಯ ಸೇವೆಯಲಿ ಹದಿಮೂರು ದಿವಸವು ನೀವು ನೂಕಿದೊಡಿರದೆ ಮಾಣೆವು . ಅಳುಕದಿರಿ ಹದಿಮೂರು ದಿವಸವ ಕಳೆದ ಬಳಿಕ   ಎಮಗೆಲ್ಲ ಲೇಸಹುದು. ದುಷ್ಟರಾದವರು ಅಳಿದು ಹೋದರು. ಇನ್ನು ಭಯ ಬೇಡ . ಆವು ಕಲಹದವರಲ್ಲ.

(ಎನುತ ದುರುಪದಿ ನಿಜನಿಳಯವನು ಸಾರಿದಳು. ಕೀಚಕನ  ವೃತ್ತಾಂತ ಗಳಿಗೆ ಗಳಿಗೆಗೆ ಪಸರಿಸಿತು.)

ಪದ ವಿಂಗಡಣೆ ಮತ್ತು ತಿರುಳು

ಉದಯ ಪರ್ವತ=ಮೂಡಲ ದಿಕ್ಕಿನಲ್ಲಿರುವ ಪರ್‍ವತ; ಅಡರು=ಏರು/ಮೇಲಕ್ಕೆ ಹತ್ತು;

ಸೂರ್ಯನು ಉದಯ ಪರ್ವತವ ಅಡರಿದನು=ಸೂರ್‍ಯನು ಮೂಡಲ ದಿಕ್ಕಿನಲ್ಲಿರುವ ಪರ್‍ವತಪ್ರಾಂತ್ಯದಲ್ಲಿ ಕಾಣಿಸಿಕೊಂಡನು. ಸೂರ್‍ಯಕಿರಣಗಳ ಕಾಂತಿಯಿಂದ ಇರುಳು ಕಳೆದು ಹಗಲಾಯಿತು;

ಗುಜುಗುಜಿಸು=ಜನರು ತಮ್ಮತಮ್ಮಲ್ಲಿಯೇ ಆಡಿಕೊಳ್ಳುವ ಪಿಸುಮಾತು; ವಾರ್ತಾಭಾರ=ದೊಡ್ಡ ಸುದ್ದಿ; ಮಸಗು=ಹರಡು;

ಊರೊಳಗೆ ಗುಜುಗುಜಿಸಿ ವಾರ್ತಾಭಾರ ಮಸಗಿತು=ಕೀಚಕ ಮತ್ತು ಅವನ 105 ಮಂದಿ ತಮ್ಮಂದಿರು ಗಂದರ್‍ವರಿಂದ ಕೊಲೆಯಾದ ದುರಂತದ  ಸುದ್ದಿಯನ್ನು ವಿರಾಟನಗರಿಯ ಜನರು ತಮ್ಮತಮ್ಮಲ್ಲಿಯೇ ಪಿಸುದನಿಯಲ್ಲಿ ಮಾತನಾಡತೊಡಗಿದರು. ಸಾವಿನ ಸಂಗತಿಯು ಎಲ್ಲೆಡೆ ಹರಡಿತು;

ನೆರೆ=ಸೇರು/ಕೂಡು; ನೆರವಿ+ಒಳು; ನೆರವಿ=ಗುಂಪು; ಒಳು=ಅಲ್ಲಿ; ಆರ+ಬಾಯ್ಗಳ್+ಒಳ್+ಆದೊಡೆಯು; ಆರ=ಯಾರ; ಆದೊಡೆ=ಆದರೆ; ಆರಬಾಯ್ಗಳೊಳಾದೊಡೆಯು=ಯಾರೊಬ್ಬರ ಬಾಯಲ್ಲಿಯೂ/ಎಲ್ಲರ ಮಾತುಕತೆಗಳಲ್ಲಿಯೂ; ಜನಜನಿತ=ಜನರೆಲ್ಲರಿಗೂ ತಿಳಿದಿರುವ ಸುದ್ದಿ; ಜಪ=ಒಂದೇ ಬಗೆಯ ಹೆಸರನ್ನು ಇಲ್ಲವೇ ಸಂಗತಿಯನ್ನು ಮತ್ತೆ ಮತ್ತೆ ಹೇಳುತ್ತಿರುವುದು;

ನೆರೆದ ನೆರವಿಯೊಳು ಆರಬಾಯ್ಗಳೊಳಾದೊಡೆಯು ಜನಜನಿತ ಜಪವಾಯ್ತು=ವಿರಾಟನಗರದಲ್ಲಿ ಎಲ್ಲೆಲ್ಲಿ ಜನರು ಗುಂಪುಗೂಡುತ್ತಾರೆಯೋ ಅಲ್ಲೆಲ್ಲ ಜನರ ಬಾಯಲ್ಲಿ ಕೀಚಕಾದಿಗಳ ಕೊಲೆಯ ಸಂಗತಿಯೇ ಪ್ರಸ್ತಾಪವಾಗತೊಡಗಿತು;

ಭೂರಿ=ಹೆಚ್ಚು; ಚಿಂತಾ+ಆತುರ; ಚಿಂತೆ=ಕಳವಳ/ಯೋಚನೆ; ಆತುರ=ಯಾತನೆಯಿಂದ ಪೀಡಿತನಾದವನು;

ಭೂರಿ ಚಿಂತಾತುರ ವಿರಾಟನು=ಸೇನಾನಿಯಾಗಿದ್ದ ಕೀಚಕ ಮತ್ತು ಅವನ ತಮ್ಮಂದಿರೆಲ್ಲರ ಅಕಾಲಮರಣದಿಂದಾಗಿ ಅತಿಹೆಚ್ಚಿನ ಚಿಂತೆಯಿಂದ ಕಂಗಾಲಾಗಿರುವ ವಿರಾಟರಾಯನು;

ಮಾರಿ=ಒಬ್ಬ ದೇವತೆಯ ಹೆಸರು. ಒಲಿದವರಿಗೆ ಒಳಿತನ್ನು ಮಾಡುವ, ಮುನಿದವರಿಗೆ ಕೇಡನ್ನು ಬಗೆಯುವ ದೇವತೆಯೆಂದು ಹೆಸರಾಗಿದ್ದಾಳೆ; ನಾರಿ=ಹೆಂಗಸು; ನೇಮ=ಅಪ್ಪಣೆ/ಆಜ್ನೆ; ಸತಿ=ಹೆಂಡತಿ;

ಮಾರಿಯೋ ಸೈರಂಧ್ರಿಯೋ ಈ ನಾರಿ ಇರಬೇಡ ಎಂದು ತನ್ನಯ ಸತಿಗೆ ನೇಮಿಸಿದ =ಕೀಚಕಾದಿಗಳ ಅಕಾಲಮರಣಕ್ಕೆ ಕಾರಣಳಾದ ಹೆಂಗಸು ಮಾರಿಯೋ ಇಲ್ಲವೇ ಸೈರಂದ್ರಿಯೋ. ಅಂತಹ ಹೆಂಗಸನ್ನು ನಿನ್ನ ರಾಣಿವಾಸದಲ್ಲಿ ಇಟ್ಟುಕೊಳ್ಳಬೇಡ. ಈ ಕೂಡಲೇ ಅವಳನ್ನು ಹೊರಹಾಕು ಎಂದು ವಿರಾಟರಾಯನು ರಾಣಿ ಸುದೇಶ್ಣೆಗೆ ಆಜ್ನಾಪಿಸಿದ;

ಅಳಲು=ಸಂಕಟ/ಶೋಕ; ಕೈಮಿಗಲು=ತುಂಬಾ ಹೆಚ್ಚಾಗಲು; ಲಲನೆ=ಹೆಂಡತಿ;

ಅಳಲು ಕೈಮಿಗಲು ಆ ವಿರಾಟನ ಲಲನೆ ಸೈರಂಧ್ರಿಯನು ಕರೆಸಿದಳು=ತಮ್ಮನಾದ ಕೀಚಕನ ಸಾವಿನಿಂದ ಅತಿಸಂಕಟಕ್ಕೆ ಒಳಗಾಗಿರುವ ವಿರಾಟರಾಯನ ಹೆಂಡತಿ ರಾಣಿ ಸುದೇಶ್ಣೆಯು ಸೈರಂದ್ರಿಯನ್ನು ಕರೆಸಿದಳು;

ಮಹಾತುಮೆ=ದೊಡ್ಡವಳು/ಹೆಚ್ಚಿನ ಮಹಿಮೆಯುಳ್ಳವಳು; ಅಂಜು=ಹೆದರು; ಶರಣು=ನಮಸ್ಕಾರ;

ಎಲೆ ಮಹಾತುಮೆ ತಾಯೆ, ನಿಮಗೆ ಅಂಜುವೆವು ಶರಣು= ಸೈರಂದ್ರಿಗೆ ಮಹಾಬಲರಾದ ಗಂದರ್ವರು ಗಂಡಂದಿರಾಗಿರುವುದರಿಂದಲೇ ಕೀಚಕಾದಿಗಳು ಸಾವನ್ನಪ್ಪಿದ್ದಾರೆ ಎಂಬುದು ರಾಣಿ ಸುದೇಶ್ಣೆಗೆ ಮನದಟ್ಟಾಗಿದೆ. ಆದ್ದರಿಂದಲೇ ತನ್ನ ದಾಸಿಯಾಗಿದ್ದ ಸೈರಂದ್ರಿಯನ್ನು ‘ಮಹಾತುಮೆ ತಾಯೆ’ ಎಂದು ಉದ್ದೇಶಿಸಿ ಮಾತನಾಡತೊಡಗಿದ್ದಾಳೆ. ನಿಮಗೆ ನಾವು ಹೆದರುತ್ತೇವೆ. ನಿಮಗೆ ನಮಸ್ಕಾರ;

ಹೊಳಲ್+ಒಳು; ಹೊಳಲ್=ಪಟ್ಟಣ/ನಗರ; ಭೀತಿ=ಹೆದರಿಕೆ/ಅಂಜಿಕೆ; ಘನ=ದೊಡ್ಡದಾದ/ಹೆಚ್ಚಿನ;

ನೀವು ಹೊಳಲೊಳು ಇದ್ದರೆ ಭೀತಿ ಘನ=ನೀವು ನಮ್ಮ ಬಳಿ ದಾಸಿಯಾಗಿ ವಿರಾಟನಗರಿಯಲ್ಲಿಯೇ ಉಳಿದುಕೊಂಡರೆ ಇನ್ನು ಏನೇನು ದುರಂತ ಉಂಟಾಗುವುದೋ ಎಂಬ ಹೆದರಿಕೆಯು ನಮ್ಮನ್ನು ಹೆಚ್ಚಾಗಿ ಕಾಡುತ್ತಿದೆ;

ಒಲಿ=ಬಯಸು/ಮೆಚ್ಚು; ಠಾವು=ಎಡೆ/ತಾಣ; ಬಿಜಯ=ತೆರಳುವಿಕೆ/ಹೋಗುವುದು;

ನೀವು ಒಲಿದ ಠಾವಿಗೆ ಬಿಜಯ ಮಾಡುವುದು=ನೀವು ಈ ಕೂಡಲೇ ಇಲ್ಲಿಂದ ನಿಮಗೆ ಮೆಚ್ಚುಗೆಯಾದ ಕಡೆಗೆ ಹೋಗುವುದು; ಉಳುಹ ಬೇಹುದು=ಬದುಕಲು ಬಿಡುವುದು;

ನಮ್ಮನು ಉಳುಹ ಬೇಹುದು ಎನಲು=ನಾವು ಜೀವಂತವಾಗಿರಲು ಅವಕಾಶವನ್ನು ನೀಡುವುದು ಎಂದು ಸಂಕಟ ಮತ್ತು ಆತಂಕದಿಂದ ನುಡಿಯಲು;

ಇಂದು=ಚಂದ್ರ; ಇಂದುಮುಖಿ=ಚಂದ್ರನ ಮೊಗದವಳು/ಸುಂದರಿ;

ಇಂದುಮುಖಿ ಇಂತು ಎಂದಳು=ಸೈರಂದ್ರಿಯು ಈ ರೀತಿ ಹೇಳಿದಳು;

ದೇವಿ=ಪಟ್ಟದ ರಾಣಿ; ಎಮ್ಮದು=ನಮ್ಮದು; ಅಪರಾಧ=ತಪ್ಪು;

ದೇವಿಯೆ, ಎಮ್ಮದು ಏನು ಅಪರಾಧ=ರಾಣಿಯವರೇ, ನಮ್ಮ ಕಡೆಯಿಂದ ಯಾವ ತಪ್ಪಾಗಿದೆ;

ರಮಣ=ಗಂಡ; ದುರ್ಜನ=ಕೆಟ್ಟ ವ್ಯಕ್ತಿಗಳು/ಕೇಡಿಗಳು; ಸೈರಿಸು=ತಾಳು/ಸಹಿಸು; ಸೀಳು=ತುಂಡುಮಾಡು;

ನಿಮ್ಮ ತಮ್ಮನು ತಪ್ಪಿ ನಡೆದೊಡೆ ಎಮ್ಮ ರಮಣರು ದುರ್ಜನರ ಸೈರಿಸದೆ ಸೀಳಿದರು=ನಿಮ್ಮ ತಮ್ಮನು ಪರರ ಹೆಂಡತಿಯಾದ ನನ್ನ ಮಾನಪ್ರಾಣವನ್ನು ತೆಗೆಯುವ ತಪ್ಪನ್ನು ಮಾಡಲು ಹೊರಟಿದ್ದರಿಂದ, ನನ್ನ ಗಂಡಂದಿರು ಅದನ್ನು ನೋಡಿ ಸಹಿಸಿಕೊಳ್ಳದೆ ನೀಚರಾದ ನಿಮ್ಮ ತಮ್ಮಂದಿರೆಲ್ಲರನ್ನೂ ಕೊಂದರು;

ಓಲೈಸು=ಊಳಿಗ ಮಾಡು/ಕೆಲಸ ಮಾಡು; ಮರಳಿದು=ಅದಕ್ಕೆ ಪ್ರತಿಯಾಗಿ/ಬದಲಾಗಿ; ಕೆಡಿಸು=ಕೆಟ್ಟದ್ದನ್ನು ಮಾಡು;

ನಿಮ್ಮ ನಾವು ಓಲೈಸಿ, ಮರಳಿದು ನಿಮ್ಮ ಕೆಡಿಸುವರಲ್ಲ =ನಿಮ್ಮ ಆಶ್ರಯವನ್ನು ಪಡೆದು ನಿಮ್ಮಲ್ಲಿ ಊಳಿಗವನ್ನು ಮಾಡುತ್ತಿರುವ ನಾವು, ಉಪಕಾರ ಮಾಡಿರುವ ನಿಮಗೆ ಕೇಡನ್ನು ಬಗೆಯುವವರಲ್ಲ;

ಧೂರ್ತ=ನೀಚ/ಕೇಡಿ; ನೀತಿ=ಒಳ್ಳೆಯ ನಡೆನುಡಿ; ಬಾಹಿರ=ಹೊರತಾದುದು; ನೀತಿಬಾಹಿರರು=ನೀತಿಗೆಟ್ಟ ನಡೆನುಡಿಯುಳ್ಳವರು; ಮತ=ಆಲೋಚನೆ/ವಿಚಾರ;

ಧೂರ್ತರು  ನೀತಿ ಬಾಹಿರರು ತಮ್ಮ ಮತದಲಿ ತಾವೆ ಕೆಟ್ಟರು =ನೀತಿಗೆಟ್ಟ ನಡೆನುಡಿಯುಳ್ಳ ಕೇಡಿಗಳಾದ ನಿಮ್ಮ ತಮ್ಮಂದಿರು ತಾವು ಮಾಡಿದ ಕೆಟ್ಟ ಆಲೋಚನೆ ಮತ್ತು ಕೆಟ್ಟ ಕೆಲಸಗಳಿಂದ ತಮಗೆ ತಾವೇ ಸಾವನ್ನು ತಂದುಕೊಂಡರು;

ತಾವು ತಮ್ಮಿಂದ ಅಳಿದರೆ ಅದು ಸಾಕು=ತನ್ನ ತಮ್ಮಂದಿರಿಂದ ಸೈರಂದ್ರಿಗೆ ಆದ ಕೇಡಿನ ಕೆಲಸವನ್ನು ಮತ್ತೆ ಮತ್ತೆ ಕೇಳಿ ಮನನೊಂದ ಸುದೇಶ್ಣೆಯು “ಅವರೆಲ್ಲರೂ ತಾವು ಮಾಡಿದ ತಪ್ಪಿನಿಂದಲೇ ಸಾವನ್ನಪ್ಪಿದ್ದಾರೆ. ಇನ್ನು ಆ ವಿಚಾರ ಸಾಕು.”;

ಆವು ನಿಮಗೆ ಅಂಜುವೆವು =ನಿನ್ನಿಂದ ಮತ್ತು ನಿನ್ನ ಗಂದರ್‍ವಪತಿಗಳಿಂದ ಮುಂದಿನ ದಿನಗಳಲ್ಲಿ ನಮಗೆ ಯಾವ ಬಗೆಯ ಆಪತ್ತು ಬರುವುದೋ ಎಂದು ನಾವು ಹೆದರುವೆವು;

ನಿಮ್ಮಲಿ ಯಾವುದೂ ತಪ್ಪಿಲ್ಲ. ನೀವು ಇಲ್ಲಿರಲು ಬೇಡ ಎನಲು=ನಿಮ್ಮ ನಡೆನುಡಿಯಲ್ಲಿ ಯಾವೊಂದು ತಪ್ಪು ಇಲ್ಲ. ಆದರೆ ನೀನು ಇನ್ನು ಮುಂದೆ ನನ್ನ ರಾಣಿವಾಸದಲ್ಲಿ ದಾಸಿಯಾಗಿರಲಾಗದು. ಬೇರೆಡೆಗೆ ಹೋಗುವುದು ಎಂದು ಹೇಳಲು;  ಚಿತ್ತೈಸು=ಅನುಗ್ರಹಿಸು/ದಯೆಯನ್ನು ತೋರು;

 ದೇವಿ ಚಿತ್ತೈಸು=ದೇವಿಯೇ ದಯೆಯನ್ನು ತೋರು;

ಮುನ್ನ=ಮೊದಲು; ಇಹರು+ಅಲ್ಲ; ಇಹ=ಇರುವ; ಇಹರು=ಇರುವವರು;

ನಾವು ಮುನ್ನ ಇಹರಲ್ಲ=ನಾನು ಮೊದಲಿನಂತೆ ಬಹುಕಾಲ ನಿಮ್ಮ ದಾಸಿಯಾಗಿರುವುದಿಲ್ಲ;

ನೂಕಿದಡೆ+ಇರದೆ; ನೂಕಿದಡೆ=ಹೊರತಳ್ಳಿದರೂ ; ಮಾಣೆವು=ಬಿಡೆವು; ಇರದೆ ಮಾಣೆವು=ಇಲ್ಲಿಂದ ಹೋಗುವುದಿಲ್ಲ;

ನಿಮ್ಮಯ ಸೇವೆಯಲಿ ಹದಿಮೂರು ದಿವಸವು ನೀವು ನೂಕಿದೊಡಿರದೆ ಮಾಣೆವು =ನಿಮ್ಮ ಸೇವೆಯಲ್ಲಿ ಇನ್ನು ಹದಿಮೂರು ದಿನಗಳ ಕಾಲ ನೀವು ತಳ್ಳಿದರೂ ನಾನು ಇಲ್ಲಿಂದ ಹೋಗುವುದಿಲ್ಲ;

ಅಳುಕು=ಹೆದರು/ಅಂಜು; ಎಮಗೆ+ಎಲ್ಲ; ಎಮಗೆ=ನಮಗೆ; ಲೇಸು+ಅಹುದು; ಲೇಸು=ಒಳ್ಳೆಯದು; ಅಹುದು=ಆಗುತ್ತದೆ;

ಅಳುಕದಿರಿ ಹದಿಮೂರು ದಿವಸವ ಕಳೆದ ಬಳಿಕ ಎಮಗೆಲ್ಲ ಲೇಸಹುದು=ನಮ್ಮಿಂದ ನಿಮಗೆ ಏನು ಆಪತ್ತು ಬರುವುದೋ ಎಂದು ಹೆದರಬೇಡಿ. ಹದಿಮೂರು ದಿನಗಳ ನಂತರ ನನ್ನ ಪಾಲಿಗೆ ಒಳ್ಳೆಯ ದಿನಗಳು ಬರುತ್ತವೆ;

ದುಷ್ಟರಾದವರು ಅಳಿದು ಹೋದರು=ಕೆಟ್ಟ ನಡೆನುಡಿಯಿಂದ ಜೀವಿಸುತ್ತಿದ್ದ ಕೇಡಿಗಳು ಸಾವನ್ನಪ್ಪಿ ಇಲ್ಲವಾದರು;

ಇನ್ನು ಭಯ ಬೇಡ =ನಿಮಗೆ ಕೆಟ್ಟ ಹೆಸರನ್ನು ತರುತ್ತಿದ್ದ ಕೇಡಿಗಳು ಈಗ ಇಲ್ಲವಾದ್ದರಿಂದ ನಿಮಗೆ ಯಾವ ಆಪತ್ತು ಬರುವುದಿಲ್ಲ. ನೀವು ಹೆದರಬೇಡಿ;

ಆವು=ನಾವು; ಕಲಹ+ಅವರು+ಅಲ್ಲ; ಕಲಹ=ಜಗಳ/ಹೊಡೆದಾಟ; ನಿಜ=ತನ್ನ; ನಿಳಯ=ಮನೆ; ಸಾರು=ತೆರಳು;

ಆವು ಕಲಹದವರಲ್ಲ ಎನುತ ದುರುಪದಿ ನಿಜನಿಳಯವನು ಸಾರಿದಳು=ನಾವಾಗಿಯೇ ಯಾರ ಮೇಲು ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವವರಲ್ಲ. ನಮಗೆ ಆಪತ್ತು ಬಂದಾಗ ಮಾತ್ರ ಈ ರೀತಿ ಕೇಡಿಗಳನ್ನು ಸದೆಬಡಿಯುತ್ತೇವೆ ಎಂದು ಸೈರಂದ್ರಿಯು ರಾಣಿ ಸುದೇಶ್ಣೆಯ ಮನದ ಆತಂಕವನ್ನು ನಿವಾರಿಸುವ ನುಡಿಗಳನ್ನಾಡುತ್ತ ರಾಣಿವಾಸದಲ್ಲಿದ್ದ ತನ್ನ ಕೊಟಡಿಯತ್ತ ನಡೆದಳು;

ವೃತ್ತಾಂತ=ಸುದ್ದಿ/ಸಮಾಚಾರ; ಪಸರು=ಹಬ್ಬು/ಹರಡು;

ಕೀಚಕನ ವೃತ್ತಾಂತ ಗಳಿಗೆ ಗಳಿಗೆಗೆ ಪಸರಿಸಿತು =ಮತ್ಸ್ಯ ದೇಶದ ಮಹಾ ಸೇನಾನಿಯಾಗಿದ್ದ ಮಹಾಬಲಶಾಲಿ ಕೀಚಕನು ಅಕಾಲಮರಣಕ್ಕೆ ತುತ್ತಾಗಿ ಬಲಿಯಾದ ಸುದ್ದಿಯು ಗಳಿಗೆ ಗಳಿಗೆಗೂ ಎಲ್ಲೆಡೆ ಹಬ್ಬತೊಡಗಿತು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: