ಮೈದಾ ಹಿಟ್ಟಿನ ಬಗ್ಗೆ ನಿಮಗೆಶ್ಟು ಗೊತ್ತು?
ಇಂದಿನ ಯುವಪೀಳಿಗೆಗೆ ಮನೆಯೊಳಗಿನ ಆಹಾರಕ್ಕಿಂತ ಹೊರಗಿನ ಪಿಜ್ಜಾ, ಬರ್‍ಗರ್, ನೂಡಲ್ಸ್ ರೀತಿಯ ಕಾದ್ಯಗಳೇ ಹೆಚ್ಚು ಇಶ್ಟ. ವಾರಕ್ಕೆ ಒಂದೆರಡು ಬಾರಿಯಾದರೂ ಇವುಗಳನ್ನು ತಿನ್ನುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಈ ಜಂಕ್ ಪುಡ್ ಗಳ ತಯಾರಿಕೆಯಲ್ಲಿ ಬಳಸಲಾಗುವ ಮೂಲ ಪದಾರ‍್ತ ಮೈದಾ.
‘ಮೈದಾ ಹಿಟ್ಟು’ ಇದೊಂದು ಗೋದಿಯ ಸಂಸ್ಕರಿಸಿದ ಉತ್ಪನ್ನ. ಇದನ್ನು ಎಲ್ಲಾ ಉದ್ದೇಶದ ಹಿಟ್ಟು (all purpose flour) ಎನ್ನಲಾಗುತ್ತದೆ. ಇದರ ಮೂಲ ಗೋದಿಯಾದರೂ ಈ ನುಣುಪಾದ ಹಿಟ್ಟನ್ನು ಮಾರುಕಟ್ಟೆಗೆ ಬಿಡುವ ಮುನ್ನ ಚೆನ್ನಾಗಿ ಸಂಸ್ಕರಿಸಲಾಗುತ್ತದೆ. ಮೈದಾವನ್ನು ಗೋದಿಯೊಳಗಿನ ಬಿಳಿಯ ಬಾಗ (Endosperm) ದಿಂದ ತಯಾರಿಸಲಾಗುತ್ತದೆ. ಗೋದಿಯ ಕಾಳಿನ ಹೊರ ಕವಚವನ್ನು ಬೇರ‍್ಪಡಿಸಿದಾಗ ಒಳಗಿನ ಎಂಡೋಸ್ಪರ‍್ಮ್ ಅತವಾ ಬಿಳಿಬಾಗ ಅಶ್ಟೊಂದು ಬಿಳಿಯೇನೂ ಇರುವುದಿಲ್ಲ. ಈ ಹಿಟ್ಟನ್ನು ಬ್ಲೀಚ್ ಮಾಡುವ ಮೂಲಕ ಬಿಳಿಯ ಬಣ್ಣಕ್ಕೆ ತರಲಾಗುತ್ತದೆ.
ಗೋದಿಯ ಸಂಸ್ಕರಿಸಿದ ರೂಪವಾದ ಮೈದಾ, ಸಂಸ್ಕರಿಸಿದಾಗ ಅದರಲ್ಲಿನ ನಾರಿನಂಶ ಸಂಪೂರ‍್ಣವಾಗಿ ನಾಶವಾಗುತ್ತವೆ. ಒಂದು ರೀತಿಯಲ್ಲಿ ಅದು ಪೌಶ್ಟಿಕಾಂಶಗಳೇ ಇಲ್ಲದ ವ್ಯರ‍್ತ ಹಿಟ್ಟು ಎಂದಾಗುತ್ತದೆ. ಈ ಮೈದಾದಲ್ಲೇ ಗರಿಗರಿಯಾದ ಮೆದುವಾದ ಪೂರಿ, ಕೇಕ್, ಬ್ರೆಡ್, ಬಿಸ್ಕತ್ತು, ಪಾಸ್ತಾ, ಪರೋಟಾ ಇತ್ಯಾದಿ ಕಾದ್ಯಗಳನ್ನು ತಯಾರಿಸಲಾಗುತ್ತದೆ. ಪೋಶಕಾಂಶವೇ ಇಲ್ಲದ ಮೈದಾ ಉತ್ಪನ್ನಗಳನ್ನು ಹೆಚ್ಚು ತಿನ್ನುವುದರಿಂದ ಬೊಜ್ಜು, ಚಯಾಪಚಯ ಕ್ರಿಯೆಗೆ ತೊಂದರೆ, ರಕ್ತದ ಒತ್ತಡ (Blood Pressure), ಸಕ್ಕರೆ ಕಾಯಿಲೆ ಹೀಗೆ ಹಲಾವರು ದೇಹ ಸಂಬಂದೀ ಕಾಯಿಲೆಗಳು ಉಂಟಾಗಬಹುದು.
ಇದರ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ (Calcium) ಕೊರತೆ ಉಂಟಾಗುತ್ತದೆ. ಅಂದರೆ ಇದರ ನೇರ ಪರಿಣಾಮ ಮೂಳೆಗಳ ಮೇಲೆ ಬೀಳುವುದು. ಮೈದಾ ಹಿಟ್ಟು ಪ್ರತಿದಿನ ಸೇವಿಸುವುದು ಈಲಿಯ ಕೊಬ್ಬು (fatty liver), ಕೆಟ್ಟ ಕೊಲೆಸ್ಟ್ರಾಲ್ ಹೀಗೆ ಹಲವು ರೋಗಗಳಿಗೆ ಕಾರಣವಾಗಬಹುದು. ಮೈದಾ ಇಶ್ಟೊಂದು ಅಪಾಯಕಾರಿ ಎಂದ ಮೇಲೆ ಇದನ್ನು ತ್ಯಜಿಸುವುದೇ ಒಳಿತು ಎನ್ನುತ್ತಾರೆ ತಜ್ನರು. ಪರ‍್ಯಾಯವಾಗಿ ಹೆಚ್ಚು ನಾರು (fibre) ಇರುವ, ಪೋಶಕಾಂಶಗಳ ಕಣಜ ಎನಿಸಿದ ಗೋದಿಹಿಟ್ಟನ್ನೇ ಬಳಸುವುದು ತುಂಬಾ ಸೂಕ್ತವಾಗಿದೆ.
(ಚಿತ್ರ ಸೆಲೆ: amazon.in )
ಇತ್ತೀಚಿನ ಅನಿಸಿಕೆಗಳು