ಕರುನಾಡಿನ ನೆಲ

ಕಿರಣ್ ಮಲೆನಾಡು.

ಹಲವಾರು ರೀತಿಯಲ್ಲಿ ನಾವು ಕರ‍್ನಾಟಕವನ್ನು ನೋಡಿದ್ದೇವೆ. ನಮ್ಮ ಕರ‍್ನಾಟಕದ ನೆಲವನ್ನು ನಾವೀಗ ನೆಲದರಿಮೆಯ (geography) ಕಣ್ಣಿನಿಂದ ನೋಡೋಣ! ಕಡಲು, ನದಿ, ಹೊಳೆ, ಬೆಟ್ಟ, ಗುಡ್ಡ, ಬಯಲು, ಕಾಡು, ಪ್ರಾಣಿ, ಹಕ್ಕಿ ಇವುಗಳಿಂದ ಈ ಕನ್ನಡದ ನೆಲವು ತನ್ನದೇ ಆದ ಸೊಬಗು ಮತ್ತು ಸೊಗಡನ್ನು ಹೊಂದಿದೆ.

ಕರ‍್ನಾಟಕದ ಹರವು:

ಕರ‍್ನಾಟಕವು 191,976  km2  ನಶ್ಟು ಹರವಿಕೊಂಡಿದೆ ಮತ್ತು ಏಳು ರಾಜ್ಯಗಳಿಂದ ಸುತ್ತುವರೆದಿದೆ. ಬಡಗು-ಪಡುವಣ ದಿಕ್ಕಿಗೆ ಗೋವಾ, ಬಡಗಣ ದಿಕ್ಕಿಗೆ ಮಹಾರಾಸ್ಟ್ರ, ಬಡಗು-ಮೂಡಣ ದಿಕ್ಕೆಗೆ ತೆಲಂಗಾಣ, ಮೂಡಣ ದಿಕ್ಕೆಗೆ ಅಂದ್ರ ಪ್ರದೇಶ, ತೆಂಕು-ಮೂಡಣ ದಿಕ್ಕೆಗೆ ತಮಿಳು ನಾಡು, ತೆಂಕು-ಪಡುವಣ ದಿಕ್ಕೆಗೆ ಕೇರಳ ರಾಜ್ಯಗಳು ಸುತ್ತುವರೆದಿವೆ. ಕರ‍್ನಾಟಕ ರಾಜ್ಯವು ತನ್ನ ಪಡುವಣ ದಿಕ್ಕೆಗೆ ಅರೇಬಿಯನ್ ಕಡಲಿನೊಂದಿಗೆ (Arabian Sea) ತನ್ನ ಎಲ್ಲೆಯನ್ನು ಹಂಚಿಕೊಂಡಿದೆ. ರಾಜ್ಯದ ಹೆಚ್ಚು ಉದ್ದ (ನೇರ) 750km ಮತ್ತು ಹೆಚ್ಚು ಅಗಲ (ನೇರ) 400km. ಕಡಲ ಮಟ್ಟದಿಂಡ ಕರ‍್ನಾಟಕ ರಾಜ್ಯದ ಸರಾಸರಿ ಎತ್ತರ 1500 ಅಡಿಗಳು. ಕರ‍್ನಾಟಕದ ಸುಮಾರು 38,324  km2  (~20%) ನಶ್ಟು  ನೆಲವು ಕಾಡಿನಿಂದ ಕೂಡಿದೆ.

ಕರ‍್ನಾಟಕದ ನೆಲದರಿಮೆ ಮತ್ತು ಮಣ್ಣರಿಮೆ:

Satellite map of Karnataka, physical outside.

ನೆಲದರಿಮೆಯಂತೆ (Geography) ಕರ‍್ನಾಟಕ ರಾಜ್ಯದ ನೆಲವನ್ನು ಮೂರು ರೀತಿಯಾಗಿ ಹಾಗು ಮಣ್ಣರಿಮೆಯಂತೆ (Geology) ನಾಲ್ಕು ರೀತಿಯಾಗಿ ಬೇರ‍್ಪಡಿಸಬಹುದು.

ಕರ‍್ನಾಟಕದ ಮೂರು ರೀತಿಯ ನೆಲದ ಬಾಗಗಳು (Geographical Zones)

1. ಕರಾವಳಿ ಕರ‍್ನಾಟಕ:

ಪಡುವಣ ಗಟ್ಟಗಳು ಮತ್ತು ಅರೇಬಿಯನ್ ಕಡಲಿನ ನಡುವೆ ಇರುವ ತಗ್ಗಿನ ನೆಲವೇ ಕರಾವಳಿ ಕರ‍್ನಾಟಕ. ಕರ‍್ನಾಟಕದ ಕಡಲತೀರವು (coastline) 320km ನಶ್ಟು ಉದ್ದವಾಗಿದೆ. ಕರಾವಳಿ ಕರ‍್ನಾಟಕವು ಮೂರು ಜಿಲ್ಲೆಗಳನ್ನು ಹೊಂದಿದೆ, ಅವುಗಳೆಂದರೆ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಶಿಣ ಕನ್ನಡ ಜಿಲ್ಲೆಗಳು. ಕರಾವಳಿತೀರವು ಕೊಂಕಣ ತೀರದ ಮುಂದುವರೆದ ಬಾಗವಾಗಿದೆ ಮತ್ತು ಇದರ ಮುಂದುವರೆದ ಬಾಗ ಕೇರಳದ ಮಲಬಾರ್ ತೀರ. ಕರಾವಳಿ ನೆಲವು (coastal plain) ಕಡಲಿಂದ ಪಡುವಣ ಗಟ್ಟದ (Western Ghats)  ಬುಡದವರೆಗೆ 25km ರಿಂದ 100km ನಶ್ಟು ಅಗಲವಾಗಿದೆ. ಕರಾವಳಿಯ ಹಲವು ಬಾಗ ಕಾಡು ಮತ್ತು ನದಿಗಳಿಂದ ಕೂಡಿದೆ.

2. ಮಲೆನಾಡು:

ಬೆಟ್ಟ, ಗುಡ್ಡ ಮತ್ತು ಕಾಡುಗಳಿಂದ ಕೂಡಿದ ಪಡುವಣ ಗಟ್ಟದ ಕರ‍್ನಾಟಕದ ಬಾಗವೇ ಈ ಮಲೆನಾಡು. ಮಲೆನಾಡು ಕಡಲ ಮಟ್ಟದಿಂದ ಸರಾಸರಿ 900m ನಶ್ಟು ಎತ್ತರವಾಗಿದೆ. ಮಲೆನಾಡು 450km ನಶ್ಟು ಉದ್ದ ಮತ್ತು 100km ನಶ್ಟು ಅಗಲವಾಗಿ ಹರವಿಕೊಂಡಿದೆ. ಬೆಟ್ಟ, ಗುಡ್ಡಗಳಿಂದ ಕೂಡಿದ ಈ ಮಲೆನಾಡು ತೆಂಕಣ ಕುರುಂಬಿನ ಅಂಚಾಗಿದೆ (Edge of the Deccan Plateau). ಮಲೆನಾಡು ಹಲವಾರು ಎತ್ತರದ ಬೆಟ್ಟಗಳಿಂದ ಕೂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವು ಕರ‍್ನಾಟಕದಲ್ಲೇ  ಹೆಚ್ಚು ಎತ್ತರವಾದ (1,929 m) ಬೆಟ್ಟವಾಗಿದೆ. ಹಲವಾರು ನದಿಗಳು ಮಲೆನಾಡಿನ ಬೆಟ್ಟಗಳಲ್ಲಿ ಹುಟ್ಟುತ್ತವೆ.

3. ಬಯಲುಸೀಮೆ:

ಬಯಲುಸೀಮೆಯು ತೆಂಕಣ ಕುರುಂಬಿನ ಬಯಲಾದ ನೆಲ. ರಾಜ್ಯದ ಹೆಚ್ಚಿನ ಒಳನಾಡು ಬಯಲುಸೀಮೆಯ ಒಣ ನೆಲವನ್ನು ಒಳಗೊಂಡಿದೆ. ರಾಜಸ್ತಾನದ ನಂತರ ಹೆಚ್ಚು ಬಯಲಿನ ಒಣನೆಲವನ್ನು ಕರ‍್ನಾಟಕವು ಹೊಂದಿದೆ! ಬಯಲು ಸೀಮೆಯು ಬಯಲಾದರು ಕೂಡ ಹಲವು ಕಲ್ಲು ಬೆಟ್ಟಗಳು ನದಿ ಮತ್ತು ಕೆರೆಗಳನ್ನೂ ಒಳಗೊಂಡಿದೆ. ಕರ‍್ನಾಟಕದ ಇತರ ಬಾಗಗಳಿಗೆ ಹೋಲಿಸಿದರೆ ಬಯಲುಸೀಮೆಯಲ್ಲಿ ಕಡಿಮೆ ಮಳೆ ಬೀಳುತ್ತದೆ. ಬಯಲು ಸೀಮೆಯು ತನ್ನದೇ ಆದ ನೆಲದ ಸೊಬಗನ್ನು ಹೊಂದಿದೆ.

ಕರ‍್ನಾಟಕದ ನಾಲ್ಕು ರೀತಿಯ ಮಣ್ಣಿನ ಮಾರ‍್ಪಾಟುಗಳು (Geological Formations)

1. ದಾರವಾಡದ ಪಾಂಗುಮಾರ‍್ಪುಗಲ್ಲು ಮತ್ತು ಪೆಡಸುಕಲ್ಲಿನ ಹುಟ್ಟಿನಿಂದಾದ ಪಳೆಯುಳಿಕೆಯ ರಾಶಿ (The Archean complex made up of Dharwad schists and granitic gneisses): ಕರ‍್ನಾಟಕದ 60% ಬಾಗ ಈ ರೀತಿಯ ಮಾರ‍್ಪಾಟುಗಳನ್ನು ಹೊಂದಿದೆ. ಈ ಬಾಗದಲ್ಲಿ ಹಲವಾರು ಅದಿರುಗಳು ಕಂಡುಬರುತ್ತವೆ. ಅವುಗಳೆಂದರೆ ಡೊಲೋಮಯ್ಟ್ (Dolomite), ಸುಣ್ಣದ ಕಲ್ಲು (Limestone), ಗಾಬ್ರೋ (Gabbro), ಬೆಣಚುಕಲ್ಲು (Quartzite), ಪಯ್ರೋಕ್ಸೆನಾಯ್ಟ್ (Pyroxenite), ಮಬ್ಬೆಳ್ಲಿ (Manganese), ಕಬ್ಬಿಣದ ಅದಿರು (Iron ore) ಮತ್ತು ಮೆಟಾಬಸಾಲ್ಟ್ (Metabasalt).

2. ಕಲಡ್ಗಿ ಮತ್ತು ಬೀಮಾ ನದಿ ಸರಣಿಯ ಪ್ರೊಟೆರೋಜೋಯಿಕ್  ಪಳೆಯುಳಿಕೆಯಿಲ್ಲದ ಗೋಡುಮಣ್ಣಿನ ಪದರ (The Proterozoic non-fossiliferous sedimentary formations of the Kaladgi and Bhima series): ಕಲಡ್ಗಿ ಸರಣಿಯು ಚಪ್ಪಟೆ ಕಲ್ಲುಗಳಿಂದ (Horizontal Rocks) ಕೂಡಿದೆ. ಇದು 160km ವರಗೆ ಬೆಳಗಾವಿ, ರಾಯಚೂರು, ದಾರವಾಡ (ಕೆಲವು ಬಾಗಗಳು)  ಮತ್ತು ವಿಜಯಪುರ ಜಿಲ್ಲೆಗಳನ್ನು ಆವರಿಸಿದೆ. ಬೀಮಾ ಸರಣಿಯು ಮರಳುಗಲ್ಲು, ಸುಣ್ಣದ ಕಲ್ಲು ಮತ್ತು ಹಾಳೆಕಲ್ಲು(Shale stone) ಗಳಿಂದ ಕೂಡಿದೆ. ಇದು  ವಿಜಯಪುರ ಮತ್ತು ಕಲ್ಬುರ‍್ಗಿ ಜಿಲ್ಲೆಗಳ ಬೀಮಾ ನದಿಯ ತೀರದ ಬಾಗಗಳಲ್ಲಿ ಕಂಡುಬರುತ್ತದೆ.

3. ತೆಂಕಣ ಕುರುಂಬಿನ ಉರಿಗಲ್ಲು ಮತ್ತು ಒಳ ಉರಿಗಲ್ಲಿನ ರಾಶಿ (The Deccan Plateau trappean and intertrappean deposits): ಇದು ತೆಂಕಣ ಕುರುಂಬಿನ ಸಿಡಿ ಬಾಗವಾಗಿದೆ (Deccan Plateau Traps) ಇದು ಬೂದು ಮತ್ತು ಕಪ್ಪು ಹರಳುಗಲ್ಲಿನ (Grayish to Black Augite-Basalt) ಕರಗಿದಡದಕದ ನೆರಕೆಯಿಂದ (accumulation) ಉಂಟಾಗಿದೆ.

4. ನೆಲದೇರ‍್ಪಾಟಿನ ಮೂರನೆಯ ಹಂತ ಮತ್ತು ಇತ್ತೀಚಿನ ಅದಿರು ಮಣ್ಣು ಹಾಗು ಮೆಕ್ಕಲು ಮಣ್ಣಿನ ರಾಶಿ (The tertiary and recent laterites and alluvial deposits): ನೆಲದೇರ‍್ಪಾಟಿನ ಮೂರನೆಯ ಹಂತದಲ್ಲಿ ನಡೆದ ಉರಿಬೆಟ್ಟಗಳ ಚಟುವಟಿಕೆಯ (Volcano activity) ನಂತರದಲ್ಲಿ ಅದಿರುಮಣ್ಣಿನ (laterites soil) ಹೊದಿಕೆ ಏರ‍್ಪಟ್ಟಿತು ಇದು ಬಯಲು ಸೀಮೆಯ ಹಲವು ಜಿಲ್ಲೆಗಳು ಮತ್ತು ಕರಾವಳಿ ಬಾಗಗಳಲ್ಲಿ ಕಂಡು ಬರುತ್ತದೆ.

ಮೇಲಿನ ನಾಲ್ಕು ಬಗೆಯ ಮಾರ‍್ಪಾಡುಗಳು ಈ ಕೆಳಕಂಡ ಹನ್ನೊಂದು ಮಣ್ಣಿನ ಬಗೆಯನ್ನು ಹೊಂದಿದೆ, ಅವುಗಳೆಂದರೆ ಎಂಟಿಸೊಲ್ಸ್, ಇನ್ಸೆಪ್ಟಿಸೊಲ್ಸ್, ಮೊಲ್ಲಿಸೊಲ್ಸ್, ಸ್ಪೊಡೊಸೊಲ್ಸ್, ಅಲ್ಪಿಸೊಲ್ಸ್, ಅಲ್ಟಿಸೊಲ್ಸ್, ಆಕ್ಸಿಸೊಲ್ಸ್, ಅರಿಡಿಸೊಲ್ಸ್, ವರ‍್ಟಿಸೊಲ್ಸ್, ಆಂಡಿಸೊಲ್ಸ್ ಮತ್ತು ಹಿಸ್ಟೊಸೊಲ್ಸ್.

ಬೆಳೆ ಬೆಳೆಯುವ ಆದಾರದ ಮೇಲೆ ಕೂಡ ಮಣ್ಣಿನ ಬಗೆಯನ್ನು ಹೆಸರಿಸಬಹುದು, ಅವುಗಳೆಂದರೆ ಕೆಂಪು ಮಣ್ಣು, ಜೇಡಿ ಮಣ್ಣು, ಕಪ್ಪು ಮಣ್ಣು, ಮೆಕ್ಕಲು ಮಣ್ಣು, ಕಾಡು ಮಣ್ಣು (Forest Soil) ಮತ್ತು ಕರಾವಳಿ ಮಣ್ಣು.

ಕರ‍್ನಾಟಕದ ನದಿ ಮತ್ತು ನದಿ-ಬೋಗುಣಿಗಳು:

????????????????????????????????????

ಕರ‍್ನಾಟಕದ ಹೆಚ್ಚಿನ ನದಿಗಳು ಪಡುವಣ ಗಟ್ಟದಲ್ಲಿ (Western Ghats) ಹುಟ್ಟುತ್ತವೆ. ಕೆಲವು ನದಿಗಳು ಪಡುವಣ ದಿಕ್ಕಿಗೆ ಹರಿದರೆ ಮತ್ತೆ ಕೆಲವು ನದಿಗಳು ಮೂಡಣ ದಿಕ್ಕಿಗೆ ಹರಿಯುತ್ತವೆ. ಕರ‍್ನಾಟಕವು ಏಳು ನದಿ ಬೋಗುಣಿಗಳನ್ನು ಒಳಗೊಂಡಿದೆ (River Basins).

  1. ಕ್ರಿಶ್ಣಾ ನದಿ ಬೋಗುಣಿ: ರಾಜ್ಯದ ಬಡಗಣ ಬಾಗದಲ್ಲಿರುವ ಈ ಬೋಗುಣಿಯಲ್ಲಿ ಹಲವು ಒಳನದಿಗಳು ಹರಿಯುತ್ತವೆ, ಅವುಗಳೆಂದರೆ ತುಂಗಾಬದ್ರ, ಮಲಪ್ರಬಾ, ಗಟಪ್ರಬಾ, ಬೀಮಾ.
  2. ಕಾವೇರಿ ನದಿ ಬೋಗುಣಿ: ತೆಂಕಣ ಕಾವೇರಿ ನದಿ ಬೋಗುಣಿಯಲ್ಲಿ ಹಲವು ಒಳನದಿಗಳು ಹರಿಯುತ್ತವೆ ಅವುಗಳೆಂದರೆ ಹಾರಂಗಿ, ಹೇಮಾವತಿ, ಕಬಿನಿ, ಸುವರ‍್ಣಾವತಿ, ಲಕ್ಶ್ಮಣತೀರ‍್ತ, ಶಿಂಶಾ, ಅರ‍್ಕಾವತಿ ನದಿಗಳು.
  3. ಗೋದಾವರಿ ನದಿ ಬೋಗುಣಿ: ಗೋದಾವರಿ ನದಿ ಬೋಗುಣಿಯಲ್ಲಿ  ಮಂಜೀರಾ ನದಿ ಹರಿಯುತ್ತದೆ.
  4. ಪಡುವಣ ದಿಕ್ಕಿಗೆ ಹರಿಯುವ ನದಿಗಳ ಬೋಗುಣಿ: ಈ ನದಿ ಬೋಗುಣಿಯಲ್ಲಿ  ಮಾಂಡವಿ, ಕಾಳಿ, ಗಂಗವಲ್ಲಿ, ಅಗನಾಶಿನಿ, ಶರಾವತಿ, ಚಕ್ರಾ, ವಾರಾಹಿ, ನೇತ್ರಾವತಿ, ಬಾರಾಪೋಲ್ ನದಿಗಳು ಹರಿಯುತ್ತವೆ.
  5. ಬಡಗಣ ಪಿನಾಕಿನಿ ನದಿ ಬೋಗುಣಿ.
  6. ತೆಂಕಣ ಪಿನಾಕಿನಿ ನದಿ ಬೋಗುಣಿ.
  7. ಪಾಲಾರ್ ನದಿ ಬೋಗುಣಿ.

ನದಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಬರಹವನ್ನು ಓದಿ

ಕರ‍್ನಾಟಕದ ಕೆರೆಗಳು:

ಕರ‍್ನಾಟಕವು ಹಲವಾರು ಕೆರೆಗಳನ್ನು ಒಳಗೊಂಡಿದೆ ಹಾಗು ಕೆಲವು ಕೆರೆಗಳು ಅವುಗಳೇ ಮಾರ‍್ಪಾಟು ಹೊಂದಿದ್ದರೆ ಮತ್ತೆ ಕೆಲವು ಕೆರೆಗಳನ್ನು ಕಟ್ಟಿಸಲಾಗಿದೆ. ದಾವಣಗೆರೆ ಜಿಲ್ಲೆಯ ಸೂಳೆಕೆರೆ (ಶಾಂತಿಸಾಗರ)ಯು ಏಶ್ಯಾದಲ್ಲೇ ಎರಡನೇ ದೊಡ್ಡದಾದ ನೀರಾವರಿ ಕೆರೆಯಾಗಿದೆ ಹಾಗು ಕೆರೆಯ ಒಟ್ಟು ಹರವು 329.75  km2 ಕರ‍್ನಾಟಕದ ಇತರ ಕೆರೆಗಳೆಂದರೆ ಉಣಕಲ್ ಕೆರೆ, ಹೆಬ್ಬಾಳ ಕೆರೆ, ಬೆಳ್ಳಂದೂರಿನ ಕೆರೆ, ಹೊನ್ನಮ್ಮನ ಕೆರೆ, ಬೀಶ್ಮ ಕೆರೆ, ಹುಳಿಮಾವು ಕೆರೆ, ಹೇಸರಗಟ್ಟ ಕೆರೆ ಹಾಗು ಇತರೆ.

ಕೆರೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿಗೆ ಹೋಗಿ

ಕರ‍್ನಾಟಕದ ಅಬ್ಬಿಗಳು (Waterfalls):

Image3-ಜೋಗದ ಅಬ್ಬಿ

ಕರ‍್ನಾಟಕವು ಹಲವಾರು ನೀರಿನ ಅಬ್ಬಿಗಳನ್ನು (Waterfalls) ಹೊಂದಿದೆ. ಇವುಗಳಲ್ಲಿ ಹೆಚ್ಚಿನವು ಪಡುವಣ ಗಟ್ಟದಲ್ಲಿವೆ  ಹಾಗು ಉಳಿದವುಗಳು ಕಾವೇರಿ ನದಿ (Kaveri River Basin) ಬೋಗುಣಿಯಲ್ಲಿವೆ. ಶಿವಮೊಗ್ಗ ಜಿಲ್ಲೆಯ ಜೋಗದ ಅಬ್ಬಿಯು ಬಾರತದ ದೊಡ್ಡದಾದ ನೂಕು-ಅಬ್ಬಿಯಾಗಿದೆ (Plunge Type Waterfall) ಹಾಗು ಇದರ ಎತ್ತರ 829 ಅಡಿಗಳು. ಕಾವೇರಿ ಬೋಗುಣಿಯಲ್ಲಿನ ಶಿವನಸಮುದ್ರ ಅಬ್ಬಿಯು 322 ಅಡಿಗಳಶ್ಟು ಎತ್ತರವಾಗಿದೆ ಮತ್ತು ಇದು ಹೋಳಿನ ರೀತಿಯ ಅಬ್ಬಿಯಾಗಿದೆ (Segmented Type Waterfall). ಉತ್ತರ ಕನ್ನಡ ಜಿಲ್ಲೆಯನ್ನು ಅಬ್ಬಿಗಳ ಜಿಲ್ಲೆ ಇಲ್ಲವೇ ಜಲಪಾತಗಳ ಜಿಲ್ಲೆ ಎಂದೇ ಕರೆಯುವರು!, ಇಲ್ಲಿನ ಹೆಸರುವಾಸಿ ಅಬ್ಬಿಗಳೆಂದರೆ ಸಾತೊಡ್ಡಿ, ಮಾಗೋಡು ಮತ್ತು ಉಂಚಳ್ಳಿ ಅಬ್ಬಿಗಳು. ಕರ‍್ನಾಟಕದ ಇತರ ಹೆಸರುವಾಸಿಯಾದ ಅಬ್ಬಿಗಳೆಂದರೆ ಬರ‍್ಕಣ, ಇರುಪ್ಪು, ಅಬ್ಬೆ, ಹೆಬ್ಬೆ, ಕಲ್ಲತ್ತಿ, ಗೋಕಾಕ್  ಅಬ್ಬಿ.

ಕರ‍್ನಾಟಕದ ಬೆಟ್ಟ ಗುಡ್ಡಗಳು:

ನಮ್ಮ ಕರ‍್ನಾಟಕವು ಕಣ್ಸೆಳೆಯುವ ಚೆಲುವಾದ ಬೆಟ್ಟಗುಡ್ಡಗಳನ್ನು ಹೊಂದಿದೆ. ಹೆಚ್ಚಿನ ಬೆಟ್ಟಗಳು ಪಡುವಣ ಗಟ್ಟದಲ್ಲಿವೆ (Western Ghats) ಮತ್ತೆ ಕೆಲವು ಬೆಟ್ಟಗಳು ಮೂಡಣ ಗಟ್ಟದಲ್ಲಿ (Eastern Ghats) ಹಂಚಿಹೋಗಿವೆ. ಈ ಎಲ್ಲ ಬೆಟ್ಟಗುಡ್ಡಗಳು ತೆಂಕಣ ಕುರುಂಬಿನ (Deccan Plateus) ಮಾರ‍್ಪಾಟಿನೊಂದಿಗೆ  ನಂಟು ಹೊಂದಿವೆ. ತೆಂಕಣ ಕುರುಂಬಿನ ಅಂಚು ಮಾರ‍್ಪಾಡಿನ ತಪ್ಪೇರ‍್ಪಾಡು ಮತ್ತು ಸವಕಳಿಯಿಂದ (faulted and eroded edge of the Deccan Plateau) ಈ ಬೆಟ್ಟಗಳು ಉಂಟಾಗಿವೆ. ಮೇಲೆ ಹೇಳಿದಂತೆ ಮುಳ್ಳಯ್ಯನಗಿರಿ ಬೆಟ್ಟವು ಕರ‍್ನಾಟಕದ ಹೆಚ್ಚು ಎತ್ತರದ ಬೆಟ್ಟವಾಗಿದೆ. ಕರ‍್ನಾಟಕದ ಇತರ ಬೆಟ್ಟಗಳೆಂದರೆ ಕೊಡಚಾದ್ರಿ, ಕುಂದಾದ್ರಿ, ಕುಮಾರ ಪರ‍್ವತ, ಮಲೆ ಮಹದೇಶ್ವರ ಬೆಟ್ಟ (ಮೂಡಣ ಗಟ್ಟ), ಹಿಮದ ಗೋಪಾಲಸ್ವಾಮಿ ಬೆಟ್ಟ. ಬಿಳಿಗಿರಿ ರಂಗನ ಬೆಟ್ಟ (ಮೂಡಣ-ಪಡುವಣ ಗಟ್ಟ ಕೂಡುವೆಡೆ).

ಗಾಳಿಯರಿಮೆ ಮತ್ತು ಮಳೆ:

ಗಾಳಿಯರಿಮೆಯಂತೆ (Meteorology) ಕರ‍್ನಾಟಕವನ್ನು ಮೂರು ಬಾಗಗಳನ್ನಗಿ ಬೇರ‍್ಪಡಿಸಬಹುದು, ಅವುಗಳೆಂದರೆ ಕರಾವಳಿ, ಬಡಗಣ ಒಳನಾಡು ಹಾಗು ತೆಂಕಣ ಒಳನಾಡು. ಇವುಗಳಲ್ಲಿ ಕರಾವಳಿ ಮತ್ತು ಮಲೆನಾಡು ಬಾಗಗಳು ಹೆಚ್ಚು ಮಳೆಯನ್ನು ಪಡೆಯುತ್ತವೆ. ವರುಶದಲ್ಲಿ ಕರಾವಳಿ ಬಾಗದಲ್ಲಿ 3638 ಮಿಲಿಮೀಟರ್ ನಶ್ಟು ಸರಾಸರಿ ಮಳೆ ಹೊಯ್ಯುತ್ತದೆ. ಬಡಗಣ ಒಳನಾಡು ವರುಶದಲ್ಲಿ 731 ನಶ್ಟು ಮಿಲಿಮೀಟರ್ ಮಳೆ ಪಡೆಯುತ್ತದೆ. ತೆಂಕಣ ಒಳನಾಡು ವರುಶದಲ್ಲಿ 1126 ನಶ್ಟು ಮಿಲಿಮೀಟರ್ ಮಳೆ ಪಡೆಯುತ್ತದೆ. ವರುಶದಲ್ಲಿ ಕರ‍್ನಾಟಕವು ಸರಾಸರಿಯಾಗಿ 1139 ಮಿಲಿಮೀಟರ್ ನಶ್ಟು ಮಳೆಯನ್ನು ಪಡೆಯುತ್ತದೆ. ಕರ‍್ನಾಟಕದ ಆಗುಂಬೆ (ಸರಾಸರಿ 7,620mm) ಮತ್ತು ಹುಲಿಕಲ್(ಸರಾಸರಿ 7,724mm) ತೆಂಕಣ ಬಾರತದಲ್ಲೇ ಹೆಚ್ಚು ಮಳೆಹೊಯ್ಯುವ ಜಾಗಗಳಾಗಿವೆ.

ಕರ‍್ನಾಟಕವು ನಾಲ್ಕು ರೀತಿಯ ಅಮಗಗಳನ್ನು (Seasons) ಹೊಂದಿದೆ ಮತ್ತು ಅದರಂತೆ ಮಳೆ ಬೀಳುವಿಕೆಯು ಹಂಚಿಹೋಗಿದೆ, ಅವುಗಳೆಂದರೆ ಜನವರಿಯಿಂದ ಪೆಬ್ರುವರಿಯವರೆಗೆ ಚಳಿಗಾಲ(1% ರಶ್ಟು ಮಳೆ ಬೀಳುತ್ತದೆ), ಮಾರ‍್ಚ್ ನಿಂದ ಮತ್ತು ಮೇವರೆಗೆ ಬೇಸಿಗೆ ಕಾಲ (7% ರಶ್ಟು ಮಳೆ ಬೀಳುತ್ತದೆ), ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲ (80% ರಶ್ಟು ಮಳೆ ಬೀಳುತ್ತದೆ) ಹಾಗು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮಳೆಯ ನಂತರದ ಹೊತ್ತು (post-monsoon season)(12% ರಶ್ಟು ಮಳೆ ಬೀಳುತ್ತದೆ).  ಬೇಸಿಗೆ ಕಾಲದಲ್ಲಿ ಕರ‍್ನಾಟಕದ ಹಗಲಿನ ಸರಾಸರಿ ಬಿಸುಹಳತೆ(Temperature) 34°C ಮತ್ತು 75% ತೇವದಳತೆ(Humidity)ಯನ್ನು ಹೊಂದಿದೆ ಮತ್ತು ಚಳಿಗಾಲದ ಹಗಲಿನ ಸರಾಸರಿ ಬಿಸುಹಳತೆ 32°C. ಈ ವರೆಗೆ ಗೊತ್ತಾಗಿರುವ ಹೆಚ್ಚಿನ ಬಿಸುಹಳತೆ 45.6°C (ರಾಯಚೂರು), ಈ ವರೆಗೆ ಗೊತ್ತಾಗಿರುವ ಕಡಿಮೆ ಬಿಸುಹಳತೆ 2.8°C (ಬೀದರ‍್).

ಮುಂದಿನ ಬರಹದಲ್ಲಿ ಕರ‍್ನಾಟಕದ ನೆಲದರಿಮೆಯ ಅಂಕಿಅಂಶಗಳನ್ನು ತಿಳಿದುಕೊಳ್ಳೋಣ…

(ಸೆಲೆಗಳು: wgbis.ces.iisc.ernet.inweb.archive.orgwww.kar.nic.inparisaramahiti.kar.nic.inwww.indianholiday.com)

(ತಿಟ್ಟ ಸೆಲೆಗಳು: maps.maphill.com, upload.wikimedia.org, wikipedia/commons, tourmet.com/wp-conten)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Nitin Gowda says:

    ಚೆನ್ನಾಗಿ ಬರೆದಿದ್ದೀರ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *