ವಿಶ್ವದ ಅತ್ಯಂತ ಪುಟ್ಟ ನಗರ – ‘ಹಮ್’

– ಕೆ.ವಿ.ಶಶಿದರ.

Church of the Assumption of Mary, ಹಮ್ ನಗರ, ಚರ‍್ಚ್, ಪುಟ್ಟ ನಗರ, smallest town

ಅದರ ಒಟ್ಟು ವಿಸ್ತೀರ‍್ಣ 3000 ಚದರ ಮೀಟರ್ ಮಾತ್ರ. 100 ಮೀಟರ್ ಉದ್ದ 30 ಮೀಟರ್ ಅಗಲ. ಏನಿದು? ಯಾವ ಶ್ರೀಮಂತ ರಾಜಕಾರಣಿಯ ಮನೆ ಅಳತೆ ಎನ್ನಬೇಡಿ. ಇದು ವಿಶ್ವದ ಅತ್ಯಂತ ಪುಟ್ಟ ನಗರ ಹಮ್‍ನ ವಿಸ್ತೀರ‍್ಣ. 2011ರ ಜನಗಣತಿಯಂತೆ  ಇಲ್ಲಿಯ ಜನಸಂಕ್ಯೆ ಕೇವಲ 21. ಒಂದು ಪ್ರದೇಶವನ್ನು ‘ನಗರ’ ಎಂದು ಕರೆಯಲು ಅಂತಾರಾಶ್ಟ್ರೀಯ ಮಟ್ಟದಲ್ಲಿ ಯಾವುದೇ ಮಾನದಂಡ ನಿಗದಿಯಾಗಿಲ್ಲ. ಹಲವು ದೇಶಗಳು ತಮ್ಮದೇ ಆದ ಮಾನದಂಡಗಳನ್ನು ಬಳಸುತ್ತವೆ.

ಹಮ್ ವಿಶ್ವದ ಪುಟ್ಟ ನಗರ ಎಂಬುದನ್ನು ಹಲವು ಮಂದಿ ಅಲ್ಲಗೆಳೆಯಬಹುದು. ವ್ಯಾಟಿಕನ್ ಸಿಟಿ ಅತ್ಯಂತ ಚಿಕ್ಕ ನಗರ ಎಂದು ವಾದಿಸಬಹುದು. ಆದರೆ ವ್ಯಾಟಿಕನ್ ಒಂದು ಪುಟ್ಟ ಸಾಮ್ರಾಜ್ಯ, ನಗರವಲ್ಲ ಎಂಬುದು ಬಹಳಶ್ಟು ಜನರ ವ್ಯಾಕ್ಯಾನ. ಅತೀ ಪುಟ್ಟ ನಗರವೆಂದು ಗಿನ್ನೆಸ್ ಪುಸ್ತಕದಲ್ಲಿ ಹೆಸರು ಮಾಡಿರುವ ಹೆಸರು ಹಮ್‌ನದ್ದೇ!

ಹಮ್ ನಗರ ಹುಟ್ಟಿದ ಕತೆ

ಕ್ರೊಯೇಶಿಯಾದ ಇಸ್ಟ್ರಿಯಾ ಪ್ರದೇಶದ ಕೇಂದ್ರ ಬಾಗದಲ್ಲಿರುವ ಹಮ್, ಬುಜೆಟ್ ಪುರಸಬೆ ಅಡಿಯಲ್ಲಿ ಬರುತ್ತದೆ. ಮೂರು ಸಾವಿರ ಚದರ ಮೀಟರ್ ಇರುವ ಈ ಪುಟ್ಟ ನಗರದ ಕತೆ ತುಂಬಾ ಹಳೆಯದು. ಹಮ್ ನಗರ ಹುಟ್ಟಿದ್ದು ಆಕಸ್ಮಿಕವಾಗಿ. ಪುರಾಣ ಕತೆಯೊಂದರಂತೆ, ಮನುಕುಲದ ಹುಟ್ಟಿನ ಮೊದಲೇ ದೈತ್ಯರು ಮಿರ‍್ನಾ ನದಿಯ ಕಣಿವೆಯಲ್ಲಿ ಅದ್ಬುತವಾದ ಮೊಟೊವುನ್, ರೊಕ್ ಮತ್ತು ಬಾಲೆ ಎಂಬ ನಗರಗಳನ್ನು ನಿರ‍್ಮಿಸಿದರು. ಹಮ್ ನಗರವನ್ನು ಕಟ್ಟುವಾಗ ಲಬ್ಯವಿರುವ ಕಲ್ಲುಗಳನ್ನು ಅಂದಾಜಿಸಲಿಲ್ಲ. ಹಾಗಾಗಿ ಕಲ್ಲುಗಳ ಕೊರತೆ ಕಂಡು ಬಂತು. ಲಬ್ಯವಿದ್ದಶ್ಟು ಕಲ್ಲುಗಳನ್ನು ಉಪಯೋಗಿಸಿಕೊಂಡು ಈ ಪುಟಾಣಿ ನಗರವನ್ನು ನಿರ‍್ಮಿಸಿದರು.

ಹಮ್ ನಗರವು ಕಲ್ಲಿನ ಕೋಟೆಯೊಳಗಿದೆ. ಕೋಟೆಯ ಗೋಡೆಯೊಳಗಡೆ ಮಾತ್ರ ಮನೆಗಳನ್ನು ನಿರ‍್ಮಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಇಂದಿನವರೆಗೂ ಕೋಟೆಯ ಹೊರ ಬಾಗದಲ್ಲಿ ಯಾವುದೇ ನಿರ‍್ಮಾಣವೂ ನಡೆದಿಲ್ಲ ಎಂಬುದು. ಇದರಿಂದ ಹಮ್ ನಗರದ ಅಬಿವ್ರುದ್ದಿ ಕೋಟೆಯ ಒಳಗಡೆಯ ವಿಸ್ತೀರ‍್ಣಕ್ಕೆ ಮಾತ್ರ ಸೀಮಿತವಾಗಿರುವುದು. ಆದ ಕಾರಣ ಪ್ರಪಂಚದಲ್ಲಿ ಅತಿ ಅಪರೂಪದ ಸಂಸ್ಕ್ರುತಿಗೆ ಈ ನಗರ ಉದಾಹರಣೆಯಾಗಿದೆ.

ಕ್ರೊಯೇಶಿನ್ ಗ್ಲಾಗೊಲಿಟಿಕ್ ಸಾಹಿತ್ಯ ಸಂಸ್ಕ್ರುತಿಯ ಬೀಡು ‘ಹಮ್’

ವಾಚ್ ಟವರ‍್

ನಗರದ ರಕ್ಶಣೆಗಾಗಿ 16ನೇ ಶತಮಾನದಲ್ಲಿ ‘ವಾಚ್ ಟವರ‍್’, ಬೆಲ್ ಹಾಗೂ ಕೋಟೆಯ ಗೋಡೆಯನ್ನು ಬಳಸಿಕೊಂಡು ನಿರ‍್ಮಿಸಿದ ಗ್ಯಾಲರಿಗಳಿವೆ. ಹಿಂದಿನ ಚರ‍್ಚ್ ಇದ್ದ ಸ್ತಳದಲ್ಲೇ ಪೂಜ್ಯ ವರ‍್ಜಿನ್ ಮೇರಿಯ ಪಾರಿಶ್ ಚರ‍್ಚ್ ಅನ್ನು 1802ರಲ್ಲಿ ಪುನರ್ ನಿರ‍್ಮಿಸಲಾಗಿದೆ. ಇದರೊಂದಿಗೆ 12ನೇ ಶತಮಾನದಲ್ಲಿ ನಿರ‍್ಮಿಸಲಾದ ಸೆಂಟ್ ಜೆರೊಮೆ ಚರ‍್ಚ್ ಸಹ ಈ ನಗರದಲ್ಲಿದ್ದು, ಅದರ ಗೋಡೆಯ ಮೇಲೆ ಅತ್ಯುನ್ನತ ಗುಣಮಟ್ಟದ ವರ‍್ಣ ಚಿತ್ರಗಳಿವೆ. ನಗರದ ವಸ್ತುಸಂಗ್ರಹಾಲಯದಲ್ಲಿ ಕ್ರೊಯೇಶಿನ್ ಗ್ಲಾಗೊಲಿಟಿಕ್ ಸಾಹಿತ್ಯ ಸಂಸ್ಕ್ರುತಿಯ ಬರಹಗಳು ಹಾಗೂ ಐತಿಹಾಸಿಕ ತುಣುಕುಗಳನ್ನು ಕಾಣಬಹುದು.

7 ಕಿ.ಮೀ. ಉದ್ದದ ಅಕರ‍್ಶಕವಾದ ದಾರಿ ಹಮ್ ನಗರವನ್ನು ರೊಕ್ ಹಳ್ಳಿಯೊಂದಿಗೆ ಸಂಪರ‍್ಕಿಸುತ್ತದೆ. ಗಲ್ಲಿಯ ಇಕ್ಕೆಲಗಳನ್ನು ದೊಡ್ಡ ದೊಡ್ಡ ಕಲ್ಲಿನ ಶಿಲ್ಪಗಳಿಂದ ಅಲಂಕರಿಸಲಾಗಿದ್ದು, ಪ್ರತಿಯೊಂದು ಕಲ್ಲಿನ ಸ್ಮಾರಕಗಳು ಕ್ರೋಯೇಶಿನ್ ಗ್ಲಾಗೊಲಿಟಿಕ್ ವರ‍್ಣಮಾಲೆಯ ಅಕ್ಶರಗಳನ್ನು ಪ್ರತಿನಿದಿಸುತ್ತವೆ. ಈ ರಸ್ತೆ ಹಮ್ ನಗರದ ಮುಕ್ಯದ್ವಾರ ‘ಡಬಲ್ ಡೋರ‍್’ಗೆ ಕರೆದೊಯ್ಯುತ್ತದೆ.

ಹಮ್ ನಗರಕ್ಕೆ ‘ಬಿಸ್ಕಾ’ ಪಟ್ಟಣವೆಂಬ ಅನ್ವರ‍್ತನಾಮ ಸಹ ಇದೆ. ‘ಬಿಸ್ಕಾ’ ಎಂಬುದು ಸಾಂಪ್ರದಾಯಿಕ ಇಸ್ಟ್ರಿಯನ್ ಬ್ರಾಂದಿ. 2000 ವರ‍್ಶಗಳ ಹಳೆಯ ಪಾಕಸೂತ್ರದಿಂದ ಇದನ್ನು ತಯಾರಿಸಲಾಗುತ್ತದೆ. ಮನೆಯಲ್ಲೇ ತಯಾರಾದ ಈ ಬ್ರಾಂದಿ ವಿಶ್ವದ ಅತ್ಯಂತ ಪುಟ್ಟ ನಗರದ ಸ್ಮರಣಿಕೆಯಾಗಿದೆ.

ಹಮ್ ನಗರದ ಮೇಯರ್ ಆಯ್ಕೆಯ ವಿಶೇಶತೆ

ಈ ಪುಟ್ಟ ನಗರದಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ. ಈ ನಗರದ ಮೇಯರ್‌ಅನ್ನು ಪ್ರತಿವರ‍್ಶ ‘ಹಮ್’ ದಿನವಾದ ಜೂನ್ 2ನೇ ಬಾನುವಾರದಂದೇ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ವಿದಾನವೂ ಸಹ ಅತ್ಯಂತ ನವೀನ. ಪಾದ್ರಿಯ ಅದಿಕಾರ ಪ್ರದೇಶದಲ್ಲಿರುವ ಎಲ್ಲಾ ಪುರುಶರು ಹಮ್‍ನ ಸಿಟಿ ಲಾಡ್ಜ್ ಬಳಿ ಸೇರಿ ಮರದ ಕಡ್ಡಿಯ ಮೇಲೆ ಕೆತ್ತನೆಯ ಮೂಲಕ ತಮ್ಮ ಆಯ್ಕೆಯನ್ನು ಸೂಚಿಸುತ್ತಾರೆ.

ವಿಶ್ವದ ಅತ್ಯಂತ ಪುಟ್ಟ ನಗರ ಹಮ್ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳು ಇತಿಹಾಸ ಪರಿಶೋದಕರಿಗೆ ಮತ್ತು ಪ್ರಕ್ರುತಿ ಪ್ರಿಯರಿಗೆ ಅತ್ಯಂತ ಸೂಕ್ತ ಸ್ತಳ. ಹಮ್‍ನ ಸುಂದರ ಕೋಟೆ, ಕಲ್ಲಿನ ಬೀದಿಗಳು, ಚೌಕಗಳು, ಚರ‍್ಚ್ ಮತ್ತು ಅದರ ಸುತ್ತಲಿನ ಪ್ರದೇಶಗಳು ಇಸ್ಟ್ರಿಯನ್ ಸಾಂಸ್ಕ್ರುತಿಕ ಪರಂಪರೆಯನ್ನು ಅನ್ವೇಶಿಸಲು ಪ್ರಶಸ್ತ ಸ್ತಳಗಳಾಗಿವೆ.

(ಮಾಹಿತಿ & ಚಿತ್ರ ಸೆಲೆ: coloursofistria.com essenceofcroatia.com, wikipedia.org, croatiaundiscovered.info)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *