ಕವಿತೆ: ಸರಿದ ಕರಿಮೋಡ

ಶ್ರೀಕಾಂತ ಬಣಕಾರ.

farmer, suicide, ರೈತ, ಆತ್ಮಹತ್ಯೆ, ತನ್ಕೊಲೆ

ರೈತನೋರ‍್ವ ಹಗ್ಗ ಹಿಡಿದು ನಿಂತಿದ್ದ ಮರದ ಕೆಳಗೆ
ನೇಗಿಲ ಹಿಡಿದ ಕೈ ನಡುಗುತ್ತಿತ್ತು ಸಾಲಬಾದೆಗೆ
ಮನದಲ್ಲೇ ವಂದಿಸಿದ ಬೂಮಿತಾಯಿಗೆ, ಜನ್ಮದಾತೆಗೆ
ಕತ್ತೆತ್ತಿ ಕ್ರುತಜ್ನತೆ ಸಲ್ಲಿಸಿದ ಮಳೆ ಸುರಿಸಿದ ಮುಗಿಲಿಗೆ

ನದಿಯಂತೆ ಬೆವರ ಹರಿಸಿತ್ತು ಅವನ ನೊಸಲು
ಅದಕೆ ಬೂತಾಯಿ ನೀಡಲಿಲ್ಲ ನಿರೀಕ್ಶೆಯ ಪಸಲು
ಬಂದಿದ್ದೆಲ್ಲವೂ ದಲ್ಲಾಳಿಗಳಿಗೆ ಮೀಸಲು
ಇನ್ನು ಹೇಳುವೆ ಕಾರಣ ಅವನು ಸಾಯಲು

ಬೇತಾಳದಂತೆ ಬೆನ್ನಿಗಂಟಿದ್ದರು ಸಾಲ ಕೊಟ್ಟವರು
ಮಾತೆತ್ತಿದರೆ ಹೇಳುತ್ತಿದ್ದರು ಬಡ್ಡಿಯ ಹೆಸರು
ಮನೆ ಬಾಗಿಲಿಗೆ ಬಂದಿದ್ದರು ಬ್ಯಾಂಕಿನವರು
ಅವನೆಂದೂ ಬಿಡಲಿಲ್ಲ ನೆಮ್ಮದಿಯ ಉಸಿರು

ಕಣ್ಣೆದುರಿಗೆ ಬಂದಿತು ಅವನ ಮಕ್ಕಳ ತುಂಟಾಟ
ಕೊಡಬಾರದು ಎಂದುಕೊಂಡ ಮಡದಿಗೆ ವಿದವೆಯ ಪಟ್ಟ
ಯೋಚನೆ ಬದಲಿಸುವ ಬುದ್ದಿಯನು ಆ ದೇವರು ಕೊಟ್ಟ
ಹಗ್ಗವನು ಕೈಬಿಟ್ಟ, ಮನೆ ಹಾದಿಯನ್ನು ಹಿಡಿದು ಬಿಟ್ಟ

(ಚಿತ್ರ ಸೆಲೆ: dnaindia.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *