ಮುಗಿಲೆತ್ತರದ ಐಪೆಲ್ ಗೋಪುರ

– ಮಾರಿಸನ್ ಮನೋಹರ್.

ಐಪೆಲ್ ಗೋಪುರ, ಬಾನೆತ್ತರದ ಐಪೆಲ್ ಗೋಪುರ

ಪ್ಯಾರಿಸ್ ನ ಐಪೆಲ್ ಗೋಪುರ! ಇದರ ಹೆಸರು ಕೇಳಿದವರ ಕಣ್ಣ ಮುಂದೆ ತಕ್ಶಣ ಉದ್ದದ ನಾಲ್ಕು ಕಾಲಿನ ಗೋಪುರ ನೆನಪಿಗೆ ಬರುತ್ತದೆ. ಇದರ ಹೆಸರು ಕೇಳದವರು ಇಲ್ಲ. ಇದನ್ನು ಎಲ್ಲಿಯಾದರೂ ಒಮ್ಮೆಯಾದರೂ ಟವಿ ಪ್ರೋಗ್ರಾಮ್, ಸಿನಿಮಾ, ಹಾಡು, ತಿಟ್ಟಗಳಲ್ಲಿ, ಸುದ್ದಿಹಾಳೆಗಳಲ್ಲಿ, ಹೊತ್ತಗೆಗಳಲ್ಲಿ ನೋಡೇ ನೋಡಿರುತ್ತಾರೆ. ಐಪೆಲ್ ಗೋಪುರ ಜಗತ್ತಿನಲ್ಲಿ ತುಂಬಾ ಹೆಸರುವಾಸಿ ಆಗಿರುವ ಕಟ್ಟಡಗಳಲ್ಲಿ ಒಂದು. ಯುರೋಪಿಗೆ ತಿರುಗಾಟಕ್ಕೆ ಹೋದವರು ಕಂಡಿತವಾಗಿ ಐಪೆಲ್ ಗೋಪುರ ನೋಡಲು ಹೋಗೇ ಹೋಗುತ್ತಾರೆ‌. ಐಪೆಲ್ ಗೋಪುರ ಪ್ಯಾರಿಸಿನ ಪ್ರಾನ್ಸಿನ ಅಶ್ಟೇ ಅಲ್ಲದೇ ಯುರೋಪಿನ ಕುರುಹಾಗಿದೆ. ಐಪೆಲ್ ಗೋಪುರ ಇಲ್ಲದೆ ಪ್ಯಾರಿಸನ್ನು ಊಹಿಸಲೂ ಆಗದು. ಇದನ್ನು ಕಟ್ಟಿದವನು ಗುಸ್ತೇವ್ ಐಪೆಲ್ ಎನ್ನುವ ಒಬ್ಬ ಇಂಜಿನಿಯರ್, ಅವನು ಕಟ್ಟಡದರಿಗನೂ (architect) ಆಗಿದ್ದ. ಅವನು ಆಗಿನ ಕಟ್ಟಡದರಿಗರೂ ಇಂಜಿನಿಯರಗಳೂ ತಬ್ಬಿಬ್ಬಾಗುವ ಹಾಗೆ ಇದನ್ನು ಕಟ್ಟಿ ಜಗತ್ತಿಗೆ ತೋರಿಸಿದ. ಐಪೆಲ್ ಗೋಪುರ ಕಟ್ಟಿದಾಗ ಅದು ಜಗತ್ತಿ‌ನ ತುಂಬಾ ಉದ್ದದ ಗೋಪುರವಾಗಿತ್ತು. ಪ್ಯಾರಿಸಿನ ‘ಚಾಂಪ್ ಡೆ ಮಾರ‍್ಸ್’ ಏರಿಯಾದಲ್ಲಿ ಐಪೆಲ್ ಗೋಪುರ ಇದೆ‌. ಹಾಗೆ ನೋಡಿದರೆ ಪ್ಯಾರಿಸಿನಲ್ಲಿ ಯಾರೂ “ಐಪೆಲ್ ಗೋಪುರ ಎಲ್ಲಿದೆ?” ಎಂದು ಕೇಳುವದಿಲ್ಲ. ಯಾಕೆಂದರೆ ಅದು ಎಲ್ಲ ಕಡೆಗಳಿಂದ ಕಾಣುತ್ತದೆ.

ಐಪೆಲ್ ಗೋಪುರದ ಮೈಮಾಟ ಅಂತಿಂತಹುದಲ್ಲ

ಐಪೆಲ್ ಗೋಪುರವನ್ನು ಕಟ್ಟಲು ಮೊದಲು ಮಾಡಿದ್ದು 28 ಜನವರಿ 1887 ರಂದು, ಕಟ್ಟುವದು ಮುಗಿಸಿದ್ದು 15 ಮಾರ‍್ಚ್ 1889 ರಂದು ಮತ್ತು ಇದನ್ನು ಮಂದಿಗಾಗಿ ತೆರೆದದ್ದು 31 ಮಾರ‍್ಚ್ 1889 ರಂದು. ತೆರೆದ ದಿನ ಅದು ‘ಜಗತ್ತಿನ ಜಾತ್ರೆ’ (world fair) ಆಗಿತ್ತು. ಐಪೆಲ್ ಗೋಪುರದ ಎತ್ತರ 324 ಮೀಟರ್ (1,063 ಅಡಿ). ಐಪೆಲ್ ಗೋಪುರ ದ ಒಟ್ಟು ತೂಕ 10,100 ಟನ್ನುಗಳು! ಯಾವ ತಕ್ಕಡಿಯಲ್ಲಿ ಐಪೆಲ್ ಗೋಪುರವನ್ನಿಟ್ಟು ತೂಕ ಮಾಡಿದರು ಎಂದು ಬೆಚ್ಚಿ ಬೀಳಬೇಡಿ. ಗೋಪುರಕ್ಕೆ ಬಳಸಿದ ಕಬ್ಬಿಣ ಉಕ್ಕಿನ ತೂಕದ ದಾಕಲೆಗಳಿಂದ ಇದು ಗೊತ್ತಾಯಿತು. ಐಪೆಲ್ ಗೋಪುರಕ್ಕೆ ಒಟ್ಟು 3 ಅಂತಸ್ತುಗಳಿವೆ 8 ಎತ್ತುಕಗಳು (lift/elevator) ಇವೆ. ಮೊದಲ ಅಂತಸ್ತಿನಿಂದ ಎರಡನೇ ಅಂತಸ್ತಿಗೆ ಮತ್ತು ಎರಡನೇ ಅಂತಸ್ತಿನಿಂದ ಮೂರನೇ ಅಂತಸ್ತಿಗೆ ಹೀಗೆ ಎತ್ತುಕಗಳು ಇವೆ.

ಗೋಪುರದ ಮೊದಲ ಅಂತಸ್ತಿನ ಮಂಚಿಕೆ ಮೈಮೇಲೆ 72 ಪ್ರೆಂಚ್ ಅರಕೆಗಾರರು, ಎಂಜಿನಿಯರುಗಳು ಹೆಸರುಗಳನ್ನು ನಾಲ್ಕೂ ಕಡೆ ಹಾಕಿದ್ದಾರೆ. ಗೋಪುರಕ್ಕೆ ಅಳವಡಿಸಿರುವ ಎತ್ತುಕಗಳು ಕೆಳಗಿನಿಂದ ಮೇಲಕ್ಕೆ ಹೋಗಿ ಬರಲು ಅಂದಾಜು 8 ಮಿನಿಟುಗಳನ್ನು ತೆಗೆದುಕೊಳ್ಳುತ್ತವೆ. ಕಬ್ಬಿಣ ಉಕ್ಕು ಕಡು ಬಿಸಿಲಲ್ಲಿ ಹಿಗ್ಗುತ್ತದೆ ಎಂದು ನಮಗೆಲ್ಲ ಗೊತ್ತಿದೆ. ಐಪೆಲ್ ಗೋಪುರಕ್ಕೆ ಬಳಸಿದ ಕಬ್ಬಿಣವೂ ಬಿಸಿಲಿನ ಜಳಕ್ಕೆ 11 ಇಂಚುಗಳಶ್ಟು ವಾಲುತ್ತದೆ. ಗೋಪುರದ ಬೆಟ್ಟದ ಗಾತ್ರಕ್ಕೆ ಇದು ಏನೂ ಅಲ್ಲ. ಐಪೆಲ್ ಗೋಪುರದ ತುತ್ತ ತುದಿಯಲ್ಲಿ ಒಂದು ಶಾಂಪೇನ್ ಬಾರ್ ಕೂಡ ಇದೆ! 2011 ರಲ್ಲಿ ಟಿವಿ ನಾಶನಲ್ ಜಿಯೋಗ್ರಾಪಿಕ್ ಚಾನೆಲ್ ಹೇಳಿರುವಂತೆ ಮತ್ತೊಂದು ಐಪೆಲ್ ಗೋಪುರವನ್ನು ಕಟ್ಟಲು ಅಂದಾಜು 480 ಮಿಲಿಯನ್ ಡಾಲರ್ ಬೇಕು! ಐಪೆಲ್ ಗೋಪುರದ ತುತ್ತತುದಿಯನ್ನು ಡಿಜಿಟಲ್ ಟಿವಿ, ಎಪ್ಎಮ್ ರೇಡಿಯೋ ಸಿಗ್ನಲ್ ಗಳನ್ನು ಟ್ರಾನ್ಸಮಿಟ್ ಮಾಡಲು ಬಳಸುತ್ತಿದ್ದಾರೆ.

ಐಪೆಲ್ ಗೋಪುರದ ಹಿಂದಿನ ಸ್ಪೂರ‍್ತಿ

ಐಪೆಲ್ ಗೋಪುರದ ಕನಸು ಮೂಡಿದ್ದು ನ್ಯೂಯಾರ‍್ಕಿನ ಲ್ಯಾಟಿಂಗ್ ನೋಟದಮನೆಯಿಂದ (observatory). ಈ ಲ್ಯಾಟಿಂಗ್ ನೋಟದಮನೆ ಎಂಟು ಕಾಲುಗಳು ಉಳ್ಳದ್ದಾಗಿತ್ತು. ಇದನ್ನು 1853 ರಲ್ಲಿ ಕಟ್ಟಿದ್ದಾರೆ. ನೀವು ಲ್ಯಾಟಿಂಗ್ ನೋಟದಮನೆ ಹಳೆಯ ತಿಟ್ಟಗಳನ್ನು ನೋಡಿದರೆ ಅದು ತೇಟ್ ಐಪೆಲ್ ಗೋಪುರದ ಅಜ್ಜನ ಹಾಗೆ ಕಾಣಿಸುತ್ತದೆ ಅವೆರಡರಲ್ಲೂ ತುಂಬಾ ಹೋಲಿಕೆ ಇದೆ. ಗುಸ್ಟೆವ್ ಐಪೆಲ್ ಕೂಡ ತನ್ನ ಗೋಪುರ ಮಾಟದ ಸ್ಪೂರ‍್ತಿ ಲ್ಯಾಟಿಂಗ್ ನೋಟದಮನೆ ಎಂದು ಒಪ್ಪಿಕೊಂಡಿದ್ದ. ಲ್ಯಾಟಿಂಗ್ ನೋಟದಮನೆಯನ್ನು ಕಟ್ಟಿಗೆಯಿಂದ ಮಾಡಿದ್ದರು. ಐಪೆಲ್ ಗೋಪುರವನ್ನು 15 ಮಾರ‍್ಚ್ 1889 ರ ತೇದಿಯಂದೇ ಮಂದಿಗಾಗಿ ತೆರೆದದ್ದರ ಹಿಂದೆ ಒಂದು ನೆಪವಿದೆ. 1889 ಕ್ಕೆ ಪ್ರೆಂಚ್ ಕ್ರಾಂತಿ ಆಗಿ ನೂರು ಏಡುಗಳಾಗಿದ್ದವು(years). ಪ್ರೆಂಚ್ ಕ್ರಾಂತಿಯ ನೂರೇಡಿನ ಸಡಗರಕ್ಕಾಗಿ ಮತ್ತು ಅದೇ ದಿನ ‘ಜಗತ್ತಿನ ಜಾತ್ರೆ’ (world’s Fair) ಶುರುವಾಗಿತ್ತು. ಈ ಎರಡೂ ಸಡಗರದ ಕುರುಹಾಗಿ ಅದೇ ದಿನ ಐಪೆಲ್ ಗೋಪುರವನ್ನು ತೆರೆಯಲಾಯ್ತು. ಈ ‘ಜಗತ್ತಿನ ಜಾತ್ರೆ’ಗೆ 35 ದೇಶಗಳು ಬಂದಿದ್ದವು 61,722 ಹರದುಗಳು (businesses) ಪಾಲ್ಗೊಂಡಿದ್ದವು. ಅಂತೂ ಇದು ಅಂದಿನ ಜಗತ್ತಿನ ಹಬ್ಬವಾಗಿತ್ತು.

ಮೊದಮೊದಲು ಮೇಲೇರಲು ಮೆಟ್ಟಿಲುಗಳನ್ನೇ ಬಳಸಬೇಕಾಗಿತ್ತು

ಐಪೆಲ್ ಗೋಪುರ ಕಟ್ಟುವುದು ಮುಗಿದಾಗ ಗುಸ್ತೇವ್ ತನ್ನ ಇಂಜಿನಿಯರುಗಳನ್ನು ಸರಕಾರಿ ಪ್ರತಿನಿದಿಗಳನ್ನು ರಿಪೋರ‍್ಟರುಗಳನ್ನು ಅದರ ಮೇಲೆ ಕರೆದೊಯ್ದ. ಆದರೆ ಆಗ ಎತ್ತುಕಗಳು ಇನ್ನೂ ಗೋಪುರಕ್ಕೆ ಕೂಡಿಸಿರಲಿಲ್ಲ. ಎಲ್ಲರೂ ಮೆಟ್ಟಿಲುಗಳನ್ನು ತುಳಿಯುತ್ತಾ ಮೇಲೆ ಏರಿದರು. ಬರೀ ಮೂವರು ಮಾತ್ರ ಎರಡನೇ ಮತ್ತು ಮೂರನೇ ಅಂತಸ್ತಿನ ವರೆಗೆ ಗುಸ್ತೇವ್ ನ ಸಂಗಡ ಹೋದರು. ಉಳಿದವರೆಲ್ಲಾ ಮೊದಲ ಅಂತಸ್ತಿಗೇ ದಣಿದು ನಿಂತು ಬಿಟ್ಟರು. ಗುಸ್ತೇವ್ ಐಪೆಲ್ ಮೊದಲ ಅಂತಸ್ತಿನಲ್ಲಿ ನಿಂತು ಅಲ್ಲಿಂದ ಪ್ರಾನ್ಸಿನ ನೀಲಿ ಬಿಳಿ ಕೆಂಪು ಬಣ್ಣದ ಬಾವುಟವನ್ನು ಇಳಿಬಿಟ್ಟು ಉದ್ಗಾಟನೆ ಮಾಡಿದ. ಎತ್ತುಕಗಳು ಇಲ್ಲದೆಯೇ ಐಪೆಲ್ ಗೋಪುರವನ್ನು ಮಂದಿ ನೋಟಕ್ಕೆ ತೆರೆದರು. ಒಂದು ವಾರದುದ್ದಕ್ಕೂ 30,000 ಮಂದಿ ಗೋಪುರವನ್ನು ಏರಿ ತುದಿ ಮುಟ್ಟಿ ಬಂದರು. ‘ಜಗತ್ತಿನ ಜಾತ್ರೆ’ ಎಕ್ಸಿಬಿಶನ್ನಿಗೆ ಬಂದಿದ್ದ ಮಂದಿ ಈ ಎಂಜಿನಿಯರಿಂಗ್ ಪವಾಡವನ್ನು ನೋಡಿ ಬೆರಗಾದರು.

ಐಪೆಲ್ ಗೋಪುರವನ್ನು ಮೊದಲಬಾರಿ ತೆರೆದಾಗ ಹಬ್ಬದ ಸಂಬ್ರಮ!

ಐಪೆಲ್ ಗೋಪುರ ಎಕ್ಸಿಬಿಶನ್ನಿಗೆ ಬಂದಿದ್ದ ಮಂದಿಯನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡಿತು. ಅಂದಿನ ದಿನ ಐಪೆಲ್ ಗೋಪುರದ ಮೊದಲ ಅಂತಸ್ತಿಗೆ ಹೋಗಲು 2 ಪ್ರಾಂಕ್ ಟಿಕೇಟು ಎರಡನೆಯದಕ್ಕೆ 3 ಪ್ರಾಂಕ್ ಟಿಕೇಟು ಮತ್ತು ಮೂರನೆಯದಕ್ಕೆ 5 ಪ್ರಾಂಕ್ ಟಿಕೇಟು ಎಂದು ನಿಗದಿ ಮಾಡಲಾಗಿತ್ತು. ಕತ್ತಲಾದ ಬಳಿಕ ಗೋಪುರಕ್ಕೆ ನೂರಾರು ಗಾಳಿ ದೀಪಗಳಿಂದ (gas lights) ಬೆಳಗು ಮಾಡಿದ್ದರು. ಗೋಪುರದಿಂದ ಕೆಂಪು-ಬಿಳಿ-ನೀಲಿ ಕೋಲ್ಬೆಳಕನ್ನು (beacon) ಹೊಮ್ಮಿಸಿದ್ದದರು. ಎರಡು ಬಿಳಿ ಹುಡುಕು ದೀಪಗಳನ್ನೂ (search lights) ಅಳವಡಿಸಲಾಗಿತ್ತು. ಮೊದಲತೆರೆ (inauguration) ಸಮಾರಂಬಕ್ಕೆ ತಾಮಸ್ ಎಡಿಸನ್ ಕೂಡ ಹೋಗಿದ್ದನು ಮತ್ತು ಗೋಪುರಕ್ಕೆ ಬೇಟಿ ಕೊಟ್ಟನು. ತುದಿಯಲ್ಲಿ ಗುಸ್ಟೆವ್ ಐಪೆಲ್ ತನಗಾಗಿ ಒಂದು ಅಪಾರ‍್ಟ್ಮೆಂಟ್ ಕೂಡ ಮಾಡಿಸಿಕೊಂಡಿದ್ದನು. ಅಲ್ಲಿಗೆ ಎಡಿಸನನ್ನು ಕರೆದೊಯ್ದ. ಆಗ ಎಡಿಸನ್ ತನ್ನ ಹೊಸ ಇನ್ನೋವೇಶನ್ ‘ಪೋನೊಗ್ರಾಮ್’ ಅನ್ನು ಎಲ್ಲರಿಗೂ ತೋರಿಸಿದ್ದನು. ಈ ಪೋನೊಗ್ರಾಮ್ ಜಗತ್ತಿನ ಜಾತ್ರೆ ಎಕ್ಸಿಬಿಶನ್ನಿನ ಮತ್ತೊಂದು ದೊಡ್ಡ ಸೆಳೆತವಾಗಿತ್ತು.

ನಾಜಿಗಳ ಕೈಸೇರಿದ ಐಪೆಲ್ ಟವರ್

1945 ರ 2ನೇ ದೊಡ್ಡ ಕಾದಾಟದಲ್ಲಿ ನಾಜಿ ಜರ‍್ಮನಿ ಪ್ರಾನ್ಸನ್ನು ಸೋಲಿಸಿ ಕೈವಶ ಮಾಡಿಕೊಂಡಿತು. ಆಗ ನಾಜಿಗಳು ಐಪೆಲ್ ಗೋಪುರದ ಮೇಲೆ ತಮ್ಮ ಬಾವುಟವನ್ನು ಇಳಿಬಿಟ್ಟರು. ಇದು ಪ್ರಾನ್ಸಿನ ಪ್ಯಾರಿಸ್ ನ ಮಂದಿಗೆ ತುಂಬಾ ನೋವಿನ ಸಂಗತಿಯಾಗಿತ್ತು.

ಐಪೆಲ್ ಟವರ್ ಇದು ಬರೀ ಎತ್ತರದ ಕಟ್ಟಡವಲ್ಲ

ಮೊಟ್ಟ ಮೊದಲು ಐಪೆಲ್ ಗೋಪುರ ತೆರೆದಾಗ ಅದರ ಮೊದಲನೇ ಅಂತಸ್ತಿನಲ್ಲಿ ಮೂರು ರೆಸ್ಟೋರೆಂಟ್ ಗಳು ಇದ್ದವು – ಒಂದು ಪ್ರೆಂಚ್, ಒಂದು ರಶ್ಯಿಯನ್, ಒಂದು ಪ್ಲೆಮಿಶ್ ಮತ್ತು ಒಂದು ಆಂಗ್ಲೋ-ಅಮೆರಿಕನ್ ಬಾರ್ ಕೂಡ ಇತ್ತು. ಎರಡನೇ ಅಂತಸ್ತಿನಲ್ಲಿ ‘ಲೇ ಪೆರಾಗೋ’ ಸುದ್ದಿಹಾಳೆಯ ಕಚೇರಿ ಮತ್ತು ಪ್ರಿಂಟಿಂಗ್ ಪ್ರೆಸ್ ಕೂಡ ಇತ್ತು. ಮೂರನೇ ಅಂತಸ್ತಿನಲ್ಲಿ ಒಂದು ಪೋಸ್ಟ್ ಆಪೀಸ್ ಇತ್ತು.

ಪ್ರತಿ ಏಳು ಏಡುಗಳಿಗೆ ಒಮ್ಮೆ ಇದಕ್ಕೆ ಬಣ್ಣ ಬಳಿಯಲಾಗುತ್ತದೆ‌. ಐಪೆಲ್ ಗೋಪುರಕ್ಕೆ ಒಟ್ಟು 60 ಟನ್ನು ಬಣ್ಣ ಬೇಕಾಗುತ್ತದೆ. ಮೊದ ಮೊದಲು ಐಪೆಲ್ ಗೋಪುರಕ್ಕೆ ಕೆಂಪು-ಕಂದು ಬಣ್ಣ ಬಳಿಯಲಾಗುತ್ತಿತ್ತು. 1968 ರಿಂದ ಈಚೆಗೆ ಕಂದು ಬಣ್ಣಕ್ಕೆ ಬದಲಾಯಿಸಿದ್ದಾರೆ. ಇದಕ್ಕೆ ಇಲ್ಲಿಯವರೆಗೆ 250 ಮಿಲಿಯನ್ ಮಂದಿ ಬೇಟಿಕೊಟ್ಟಿದ್ದಾರೆ. 2015 ರಲ್ಲಿ 6. 91 ಮಿಲಿಯನ್ ಮಂದಿ ಬೇಟಿಕೊಟ್ಟರು. ಪ್ರತಿದಿನ 25000 ಮಂದಿ ಗೋಪುರವನ್ನು ಎತ್ತುಕಗಳಲ್ಲಿ ಹತ್ತಿಳಿಯುತ್ತಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: en.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *