ಕನ್ನಡಿಗ ಮತ್ತು ಹಳಮೆ

– ಹರ‍್ಶಿತ್ ಮಂಜುನಾತ್.

Mahadeva_temple_at_Itagi_in_Koppal_district

ಕರ‍್ನಾಟಕದ ಹಳಮೆಯ ಅರಕೆಗಾರರಲ್ಲಿ ಒಬ್ಬರಾದ ಹೆಸರಾಂತ ಹಳಮೆಗಾರ, ಅರಕೆಗಾರ, ಕಲ್ಬರಹ ತಜ್ನ, ಕನ್ನಡಿಗ ಡಾ|| ಪಿ. ಬಿ. ದೇಸಾಯಿಯವರ ಇಡೀ ಹೆಸರು ಡಾ. ಪಾಂಡುರಂಗ ರಾವ್ ಬೀಮ್ ರಾವ್ ದೇಸಾಯಿ ಎಂದು. 24 ಡಿಸಂಬರ್ 1910 ರಂದು ಗುಲಬರ‍್ಗಾ ಜಿಲ್ಲೆಯ ಗುರ‍್ಮಿಟ್ಕಲ್ ಎಂಬ ಹಳ್ಳಿಯಲ್ಲಿ ಬೀಮರಾವ್ ಮತ್ತು ಬಾಗೀರತಿ ದಂಪತಿಗೆ ಹುಟ್ಟಿದ ಇವರು ಆರು ಜನ ಅಣ್ಣ-ತಮ್ಮಂದಿರಲ್ಲಿ ಕಿರಿಯವರು. ಚಿಕ್ಕವಯಸ್ಸಿನಲ್ಲಿಯೇ ಕನ್ನಡದ ಪುರಾತನ ಕಲ್ಬರಹಗಳನ್ನು ಒಟ್ಟುಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

ಕೊಪ್ಪಳ ಜಿಲ್ಲೆಯ ಕುಕನೂರು ಹಳ್ಳಿಯಲ್ಲಿ ದೇಗುಲಗಳ ದೊಡ್ಡ ರಾಶಿಯೇ ಇದೆ. ಅಲ್ಲಿರುವ ಕಲ್ಬರಹಗಳ ಸಂಕ್ಯೆ ಬಹಳ. ಮೊದ ಮೊದಲು ಕುತೂಹಲದಿಂದ ನೋಡುತ್ತಿದ್ದ ದೇಸಾಯಿಯವರು ನಂತರ ಓದುವುದನ್ನು ರೂಡಿಸಿಕೊಂಡರು. ಕ್ರಮೇಣ ಅವುಗಳನ್ನು ಓದಿದರೆ ತಿಳಿದುಕೊಳ್ಳುವ ಹಂತ ತಲುಪಿದರು. ಇದರಿಂದ ಕಲ್ಬರಹ ಕಲಿಕೆಯ ಪ್ರಾಯೋಗಿಕ ಪಾಟ ಎಳೆವಯಸ್ಸಿನಲ್ಲಿಯೇ ಆಯಿತು ಮತ್ತು ಅವರ ಹಳಮೆಯ ಆಸಕ್ತಿ ಇನ್ನೂ ಹೆಚ್ಚಾಯಿತು.

ಪ್ರಾಯಶಹ ಇಂತಹ ಒಂದು ಹವ್ಯಾಸವೇ ಅವರಿಗೆ ಮುಂದೆ ಹಳಮೆಯ ಕುರಿತು ಅರಕೆಗೆ ಪೂರಕವಾಯಿತು. ಹೀಗೆ ಮುಂದೆ ಚಾಲುಕ್ಯರು ಮತ್ತು ರಾಶ್ಟ್ರಕೂಟರ ಹಳಮೆ ಕುರಿತು ಹೆಚ್ಚಿನ ಮಾಹಿತಿ ಒದಗಿಸಿ, ಹಳಮೆಯ ಹೆಚ್ಚುಗಾರಿಕೆಯ ನೆಲೆ ಎಂದೇ ಕರೆಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಕೂಕನೂರು ಎಂಬಲ್ಲಿ 200ಕ್ಕೂ ಅದಿಕ ಕಲ್ಬರಹಗಳನ್ನು ಕಲೆಹಾಕಿರುವುದು ಡಾ|| ಪಿ. ಬಿ. ದೇಸಾಯಿಯವರ ಹಿರಿಮೆಗೆ ಸಾಕ್ಶಿ.

ಮೂಲತಹ ಕಡು ಬಡತನದ ಕುಟುಂಬದವರಾದ ಇವರು ಎಳವೆಯಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ಹಣಕಾಸಿನ ತೊಂದರೆಯ ನಡುವೆಯು ಕಶ್ಟದಲ್ಲಿಯೇ ತಮ್ಮ ಮೊದಲ ಹಂತದ ಕಲಿಕೆಯನ್ನು ಸೇಡಂನಲ್ಲಿ ಮೊದಲಾಗಿಸಿದರು. ಮುಂದಿನ ಹಂತದ ಕಲಿಕೆಯನ್ನು ಗುಲಬರ‍್ಗಾದಲ್ಲಿ ಮುಂದುವರೆಸಿದ್ದರು. ಆದರೆ ಕರ‍್ನಾಟಕದ ಕೆಲಬಾಗ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದರಿಂದ, ಆ ಬಾಗದಲ್ಲಿ ಕನ್ನಡ ಮಕ್ಕಳು ಮರಾಟಿ ಮಾದ್ಯಮದಲ್ಲೇ ಕಲಿಯಬೇಕಿತ್ತು. ಇದರಿಂದ ತಾಯ್ನುಡಿಯ ಜೊತೆ ಉರ‍್ದು ಮತ್ತು ಮರಾಟಿಯನ್ನೂ ಬಲ್ಲವರಾಗಿದ್ದರು.

1935 ರಲ್ಲಿ ದಾರವಾಡದ ಕರ‍್ನಾಟಕ ಕಾಲೇಜಿನಲ್ಲಿ ಬಿ. ಎ ಪದವಿ ಪಡೆದು, 1937 ರಲ್ಲಿ ಕನ್ನಡ ಮತ್ತು ಸಂಸ್ಕ್ರುತದಲ್ಲಿ ಎಮ್. ಎ ಪದವಿ ಪಡೆದಿದ್ದರು. ತಮ್ಮ ಮುಂದಿನ ಹಂತದ ಕಲಿಕೆಗೆ ಕರ‍್ನಾಟಕದಿಂದ ಮುಂಬಯಿಗೆ ತೆರಳಿದ್ದರು. ಆದರೆ ಅನಾರೋಗ್ಯದಿಂದ ಆರು ವರುಶ ಕಲಿಕೆಗೆ ದಕ್ಕೆ ಉಂಟಾಯಿತು. ಬಳಿಕ ಬಹಳಶ್ಟು ಶ್ರಮದಿಂದಲೇ ತಮ್ಮ ಕಲಿಕೆಯನ್ನು ಮುಂದುವರೆಸಿ ಹಳಮೆಯಲ್ಲಿ ಹೆಚ್ಚಿನ ಕಲಿಕೆ ಮುಂದುವರೆಸಿ 1961 ರಲ್ಲಿ ಕರ‍್ನಾಟಕ ವಿಶ್ವ ವಿದ್ಯಾನಿಲಯದಿಂದ ಡಿ. ಲಿಬ್. ಪದವಿಯನ್ನು ಪಡೆದುಕೊಂಡಿದ್ದಾರೆ.

21996

ಪಿ. ಬಿ. ದೇಸಾಯಿಯವರು 1939 ರಲ್ಲಿ ಬಾರತ ಸರಕಾರದ ಪುರಾತತ್ವ ಇಲಾಕೆಯಲ್ಲಿ ಕಲ್ಬರಹ ಕಲಿಕೆಯ ವಿಬಾಗದಲ್ಲಿ ಕಲ್ಬರಹ ಸಹಾಯಕ ಅರಕೆಗಾರರಾಗಿ ಸೇವೆ ಪ್ರಾರಂಬಿಸಿದರು. ಮುಂದೆ 1957 ರಲ್ಲಿ ಕರ‍್ನಾಟಕ ವಿಶ್ವವಿದ್ಯಾನಿಲಯದ ಪ್ರಾಚೀನ ಬಾರತದ ಹಳಮೆ ಸಂಸ್ಕ್ರುತಿ ಇಲಾಕೆಯಲ್ಲಿ ರೀಡರ್ ಆಗಿ ಆಯ್ಕೆಯಾಗಿದ್ದರು. 1962ರಲ್ಲಿ ಕನ್ನಡ ಅರಕೆ ಸಂಸ್ತೆಯ ನಿರ‍್ದೇಶಕರಾಗಿ, ಪ್ರಾಚೀನ ಬಾರತದ ಹಳಮೆ ಹಾಗು ಸಂಸ್ಕ್ರುತಿ ವಿಬಾಗದ ಮುಕ್ಯಸ್ತರಾಗಿ ಆಯ್ಕೆಯಾದ ಬಳಿಕ, ಕಲ್ಬರಹ ಕಲಿಕೆಯನ್ನು ವಯ್‍ಜ್ನಾನಿಕವಾಗಿ ಕಲಿಸಲು ಕಲ್ಬರಹ ಕಲಿಕೆಯ ಡಿಪ್ಲೋಮ ತರಗತಿಗಳನ್ನು ಪ್ರಾರಂಬಿಸಿದರು.

ಪ್ರೊಪೆಸರ್ ಆದ ಮೇಲೆ ಸ್ನಾತಕೋತ್ತರ ಮಟ್ಟದಲ್ಲಿ ಕಲ್ಬರಹ ಕಲಿಕೆಯನ್ನು ಒಂದು ವಿಶಯವಾಗಿ ಪುರಾತನ ಹಳಮೆಯ ಪಟ್ಯಕ್ರಮಕ್ಕೆ ಸೇರಿಸಿದರು. ಅದರಿಂದ ಅನೇಕ ಕಿರಿಯ ಕಲ್ಬರಹ ತಜ್ನರು ಹೊರಹೊಮ್ಮಿ ಆ ಕ್ಶೇತ್ರದಲ್ಲಿ ಹೆಸರು ಮಾಡಲು ಅವಕಾಶವಾಯಿತು. ಅವರು ಪ್ರಾಚೀನ ಬಾರತದ ಇತಿಹಾಸ ಎಂಬ ಪುಸ್ತಕವನ್ನು, ಡಾ|| ಶ್ರೀನಿವಾಸ ರಿತ್ತಿ ಮತ್ತು ಡಾ|| ಬ. ರಾ. ಗೋಪಾಲ್‌ ಅವರ ಒಡಗೂಡಿ ರಚಿಸಿದರು. ಅದರಿಂದ ದಶಕಗಳವರೆಗಿನ ಅದಿಕ್ರುತ ಕನ್ನಡ ಪಟ್ಯ ಪುಸ್ತಕಗಳ ಕೊರತೆ ನೀಗಿತು.

ದೇಸಾಯಿಯವರು ಕನ್ನಡ ಅರಕೆ ಸಂಸ್ತೆಯ ನಿರ‍್ದೇಶಕರಾಗಿದ್ದಾಗ ಪುರಾತತ್ತ್ವ ವಸ್ತುಸಂಗ್ರಹಾಲಯ ರೂಪಿಸಿದರು. ಬಳ್ಳಾರಿ ಜಿಲ್ಲೆಯ ಸಂಗನ ಕಲ್ಲು ಮತ್ತು ಹಾವೇರಿಯ ಹಳ್ಳೂರುಗಳಲ್ಲಿ ನೆಲಬಗೆದು ತೆಗೆಯುವ ಕೆಲಸ ಮಾಡಿ ಪ್ರಾಗ್ಯೇತಿಹಾಸ ವಸ್ತುಗಳ ಪತ್ತೆ ಮಾಡಿ. ಆಂದ್ರಪ್ರದೇಶ ಸರಕಾರದ ಮನವಿಯ ಮೇರೆಗೆ ” ಕನ್ನಡ ಇನ್‌ಸ್ಕ್ರಿಪ್ಶನ್ಸ್‌ ಆಪ್ ಆಂದ್ರ ಪ್ರದೇಶ’ ಮತ್ತು “ಸೆಲೆಕ್ಟ್ ಇನ್‌ಸ್ಕ್ರಿಪ್ಶನ್ಸ್ ಅಪ್ ಆಂದ್ರ ಪ್ರದೇಶ” ಎಂಬ ಹೊತ್ತಗೆಗಳನ್ನು ಸಂಪಾದಿಸಿ ಕೊಟ್ಟು ಎಲ್ಲರ ಮೆಚ್ಚುಗೆಗಳಿಸಿದರು. 1971 ರಲ್ಲಿ ನಿವ್ರುತ್ತಿ ಹೊಂದಿದ ಬಳಿಕ ದನದಾನ ಆಯೋಗದ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1973 ರಲ್ಲಿ ನಡೆದ ಅಕಿಲ ಬಾರತ ಇತಿಹಾಸ ಸಮ್ಮೇಳನದ ಕಲ್ಬರಹ ಕಲಿಕೆ ವಿಬಾಗದ ಅದ್ಯಕ್ಶತೆ ವಹಿಸಿದ್ದರು.

ಮುಂಬಯಿ ಕರ‍್ನಾಟಕ, ಮಹಾರಾಶ್ಟ್ರ, ಆಂದ್ರ ಮತ್ತು ತಮಿಳುನಾಡುಗಳಲ್ಲಿ ಓಡಾಡಿ ಸಾವಿರಾರು ಕಲ್ಬರಹಗಳನ್ನು , ತಾಮ್ರಪಟಗಳನ್ನು ಬೆಳಕಿಗೆ ತಂದು ಒರೆಹಚ್ಚಿ ನೋಡಿದರು. ಹಳಮೆ, ಶಾಸನಶಾಸ್ತ್ರ, ಕನ್ನಡ ಸಾಹಿತ್ಯ ಹಾಗು ಬಾಶೆಗೆ ಸಂಬಂದಿಸಿದಂತೆ ಅನೇಕ ಪ್ರಬಂದಗಳನ್ನು ಬರೆದು ಅಚ್ಚುಹಾಕಿಸಿದರು.

ವಿಜಯನಗರದ 6ನೇ ಶತಮಾನೋತ್ಸವ ಹೊತ್ತಿನಲ್ಲಿ ಇವರು ರಚಿಸಿದ ‘ವಿಜಯನಗರ ಸಾಮ್ರಾಜ್ಯ’ ಎಂಬ ಹೊತ್ತಗೆಯು ಬಾರಿ ಮನ್ನಣೆಗಳಿಸಿತು. ದಕ್ಶಿಣ ಬಾರತದ ಕಲ್ಬರಹದ ಸಂಪುಟಗಳ ಪೈಕಿ 11 ನೆಯ ಸಂಪುಟದ ಮೊದಲನೆಯ ಬಾಗ ಮತ್ತು 15 ನೆಯ ಸಂಪುಟವನ್ನು ಸಂಪಾದಿಸಿದರು. ಇವರ ಅರಕೆಗಳಲ್ಲಿ ಪ್ರಮುಕವಾದವುಗಳೆಂದರೆ, ಮಿಂಚಿದ ಮಹಿಳೆಯರು, ಕಂತಲೇಶ್ವರ, ಮದಗಜ ಮಲ್ಲ, ಕರ‍್ನಾಟಕದ ಕಲಚುರಿಗಳು ಮತ್ತು ಕನ್ನಡ ನಾಡಿನ ಶಾಸನಗಳು ಹೀಗೆ ಕನ್ನಡದಲ್ಲಿ 130 ಲೇಕನಗಳನ್ನು ರಚಿಸಿದ್ದಾರೆ. ಕಲ್ಬರಹಗಳಿಗೆ ಸಂಬಂದಿಸಿದಂತೆ ರಚಿಸಿದ ಹೊತ್ತಗೆ ‘ಶಾಸನ ಪರಿಚಯ’, ಇದಕ್ಕೆ ಮೈಸೂರು ಸರಕಾರದ ಪುರಸ್ಕಾರವೂ ದೊರೆಯಿತು.

ದೇಸಾಯಿಯವರ ಕಲ್ಬರಹಗಳ ಸಂಪಾದನೆಯ ಕೆಲಸದ ಜೊತೆಗೆ ಅವರ ಮಹತ್ವದ ಕಾಣಿಕೆ ಎಂದರೆ ಕರ‍್ನಾಟಕದಲ್ಲಿನ ಬವ್ದ ಕೇಂದ್ರಗಳ ಹುಡುಕಾಟ. ಶಾಕ್ತ ಪಂತದ ಮೇಲಿನ ಕ್ರುತಿಗಳು, ಪಂಡರಾಪುರದ ಪಾಂಡುರಂಗನ ಮೇಲಿನ ಮತ್ತು ಸ್ತಳ ನಾಮಗಳ ಕುರಿತಾದ ಕ್ರುತಿಗಳು ಪ್ರಮುಕವಾಗಿವೆ. ತಮ್ಮ ಅವಿರತ ಬರವಣಿಗೆಯಿಂದ ಕನ್ನಡ ನಾಡಿನ ಕಂಪನ್ನು ಹರಡುವಲ್ಲಿ ಅವರು ಯಶಸ್ವಿಯಾದರು. ಇವರ ಅರಕೆಯ ವ್ಯಾಪ್ತಿ ಬಹಳ ದೊಡ್ಡದು. ಹಳಮೆ, ಕಲ್ಬರಹ ಮೂಲ ಸೆಲೆಯಾದರೂ, ಸಾಹಿತ್ಯ, ದರ‍್ಮ, ಸಮಾಜ, ಬಾಶಾಶಾಸ್ತ್ರ ಚಂದಸ್ಸುಗಳನ್ನು ಅವರ ಅರಕೆಗಳು ಒಳಗೊಂಡಿತ್ತು. ಅವರ ಅರ‍್ದ ಶತಮಾನದ ಪರಿಶ್ರಮದಿಂದ ಕರ‍್ನಾಟಕ ಅರಕೆಗಳು ಮತ್ತು ಸಾಹಿತ್ಯ ಕ್ಶೇತ್ರ ಸೊಂಪಾಗಿ ಬೆಳೆಯಿತು.

ಹೀಗೆ ಅರಕೆಗಾರರು, ಶಾಸ್ತ್ರಗ್ನರು, ಸಂಸ್ಕ್ರುತಿಯ ಆಳವಾದ ಅರಿವುಳ್ಳವರಾಗಿದ್ದ ದೇಸಾಯಿಯವರು 1974ರ ಮಾರ್ಚ್ 5ರಂದು ನಮ್ಮನ್ನಗಲಿದ್ದು ಕನ್ನಡಿಗರಿಗೆ ಮತ್ತು ಹಳಮೆಯ ಹೆಚ್ಚುಗಾರಿಕೆಗೆ ತುಂಬಲಾರದ ನಶ್ಟವಾಗಿದೆ. ಇವರ ಅರಕೆಗಳು ಕನ್ನಡ ಹಾಗು ಕರ‍್ನಾಟಕದ ಹಳಮೆ ತಿಳಿಯುವಲ್ಲಿ ಹೆಚ್ಚಿನ ಕೊಡುಗೆ ನೀಡಿದೆ.

(ಮಾಹಿತಿ ಸೆಲೆ: wikipedia)
(ಚಿತ್ರ ಸೆಲೆ: wikipedia ಮತ್ತು Kamat.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *