ಇದ್ದಿಲ ಒಲೆಯಿಂದ ಮಿಂಚಿನ ಕಸುವು

ಪ್ರಶಾಂತ ಸೊರಟೂರ.

Picture2

ಗುಡ್ಡಗಾಡು ಇಲ್ಲವೇ ಕಾಡಿನೊಳಗೆ ನೆಲೆಗೊಂಡಿರುವ ಜಗತ್ತಿನ ಸಾವಿರಾರು ಹಳ್ಳಿಗಳು ಇಂದೂ ಕೂಡಾ ಮಿಂಚುರಿಯಿಂದ (electricity) ದೂರ ಉಳಿದಿವೆ. ಹಲವಾರು ದೇಶಗಳಲ್ಲಿ ಹಣದ ಇಲ್ಲವೇ ಚಳಕದ (technology) ಕೊರತೆಯಿಂದಾಗಿ ಮಿಂಚುರಿಯನ್ನು ಎಲ್ಲರಿಗೆ, ಎಲ್ಲ ಕಡೆ ತಲುಪಿಸಲು ಆಗುತ್ತಿಲ್ಲ. ಇಂತ ಹಲವಾರು ಕಡೆ ಮೊಬಾಯ್ಲಗಳು ಎಟಕುವಂತಾಗಿದ್ದರೂ ಅವು ಕಳೆಕುಂದಿದಾಗ ಹುರುಪು ತುಂಬಲು ಕರೆಂಟ್ ಇಲ್ಲದಂತಾಗಿದೆ. ಮಿಂಚುರಿ ಸರಳವಾಗಿ ಎಟುಕದ ನೆಲೆಗಳಲ್ಲಿ ಮಂದಿಗೆ ನೆರವಾಗುವಂತೆ ಹೊಸ ಸಲಕರಣೆಯೊಂದನ್ನು ’ಪಾಯಿಂಟ್ ಸೋರ‍್ಸ ಪಾವರ್‍’ ಎಂಬ ಕೂಟ ಹೊರತಂದಿದೆ.

ಉರಿಯುತ್ತಿರುವ ಇದ್ದಿಲ ಒಲೆಯಲ್ಲಿ ಚಿಕ್ಕ ಕೋಲಿನಂತೆ ಕಾಣುವ ಉರು ಬಟ್ಟಲು (fuel cell) ಇಟ್ಟಾಗ ತುಸು ಹೊತ್ತಿನಲ್ಲಿಯೇ ಉರು ಬಟ್ಟಲಿನ ಇನ್ನೊಂದು ತುದಿಯಲ್ಲಿ ಕರೆಂಟ್ ಹರಿಯ ತೊಡಗುತ್ತದೆ. ಈ ಕರೆಂಟನ್ನು ಅಲೆಯುಲಿಗೆ (ಮೊಬಾಯ್ಲ್) ಹುರುಪು ತುಂಬಲು, ಚಿಕ್ಕ ದೀಪ ಬೆಳಗಿಸಲು ಇಲ್ಲವೇ ಇನ್ನಾವುದೋ ಚಿಕ್ಕ ಸಲಕರಣೆ ನಡೆಸಲು ಬಳಸಬಹುದು. ಸಾಮಾನ್ಯವಾಗಿ ಬಳಕೆಯಲ್ಲಿರುವ ಒಲೆಯಿಂದಲೇ ಹೀಗೆ ಕರೆಂಟ್ ಪಡೆಯುವಂತಾದರೇ ಹಲವಾರು ದೂರದ ಹಳ್ಳಿಗಾಡುಗಳಿಗೆ ತುಂಬಾ ನೆರವಾಗುತ್ತದೆ.

ಇತ್ತೀಚಿನ ವರುಶಗಳಲ್ಲಿ ಹಲವಾರು ಕಡೆ ಬಳಕೆಯಾಗುತ್ತಿರುವ ಉರು ಬಟ್ಟಲು (fuel cell) ಹಿಂದಿರುವ ಚಳಕವೆಂದರೆ ಹಯಡ್ರ‍ೋಜನಂತಹ ಉರುವಲು ಗಾಳಿ ಮತ್ತು ಉಸಿರುಗಾಳಿಯನ್ನು (ಆಕ್ಸಿಜನ್) ಎಡೆಬಿಡದ ರಾಸಾಯನಿಕ ಒಡನಾಟಕ್ಕೆ ಒಳಪಡಿಸಿ ಮಿಂಚುರಿಯನ್ನು (electricity) ಪಡೆಯುವುದು. (ಕೆಳಗಿನ ಚಿತ್ರ ನೋಡಿ)

ಉರು ಬಟ್ಟಲಿನಲ್ಲಿ (fuel cell) ಹೆಚ್ಚಾಗಿ ಹಯಡ್ರೋಜನ್ ಗಾಳಿಯನ್ನು ಉರುವಲಾಗಿ ಬಳಸಿದರೂ ಈ ಬರಹದಲ್ಲಿ ತಿಳಿಸಲಾದ ’ಒಲೆಯಿಂದ ಮಿಂಚುರಿ’ ಪಡೆಯುವ ಸಲಕರಣೆಯಲ್ಲಿ ಇದ್ದಿಲಿನಲ್ಲಿರುವ ಕರಿಗೆಯನ್ನು (ಕಾರ‍್ಬನನ್ನು) ಉರುವಲಾಗಿ ಬಳಸಲಾಗುತ್ತದೆ. ಕತ್ತಲೆ ತೊಡೆದುಹಾಕಿ ಬಾಳು ಹಸನಾಗಿಸುವಂತ ಇಂತ ಹೊಸ ಹೊಸ ಸಲಕರಣೆಗಳು ಅರಿಮೆಯ ಬೆಳಕಿಗೆ ಹಲವಾರು ಕಡೆ ಹೀಗೆ ಮುನ್ನುಡಿ ಬರೆಯುತ್ತಿವೆ.

ಮಾಹಿತಿಸೆಲೆ: http://www.popsci.com/technology/article/2013-04/device-turns-charcoal-stove-cell-phone-charger

ಪ್ರಶಾಂತ ಸೊರಟೂರ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.