ಕಲಿಕೆಯ ಬಗ್ಗೆ ಕಾಂಗ್ರೆಸ್ ಮಾತು ಉಳಿಸಿಕೊಳ್ಳಲಿ!

ಪ್ರಿಯಾಂಕ್ ಕತ್ತಲಗಿರಿ.

goverment-school-students-managlore

“ಏಳನೇ ತರಗತಿಯವರೆಗೆ ಕನ್ನಡ ಮಾದ್ಯಮ ಕಡ್ಡಾಯ” ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು ಕಾಂಗ್ರೆಸ್ ಪಕ್ಶ. ಚುನಾವಣೆ ಮುಗಿದು ಇನ್ನೇನು ರಾಜ್ಯದ ಆಡಳಿತ ಹಿಡಿಯಲಿರುವ ಕಾಂಗ್ರೆಸ್ ಪಕ್ಶವು ಈ ನಿಟ್ಟಿನಲ್ಲಿ ಕೆಲಸ ಕಯ್ಗೊಳ್ಳುವ ಮೂಲಕ ತನ್ನ ಮಾತನ್ನು ಉಳಿಸಿಕೊಳ್ಳಬೇಕಾಗಿದೆ.

ಮೊದಲ ಹಂತದ ಕಲಿಕೆಯನ್ನು ಪರಿಸರದ ನುಡಿಯಲ್ಲಿ ನಡೆಸುವುದೇ ಒಳಿತು ಎಂಬುದನ್ನು ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರಿವೆ. ಹಾಗಿದ್ದರೂ, ವಿಗ್ನಾನಕ್ಕೆ ಬೆನ್ನು ತಿರುಗಿಸಿ ನಮ್ಮ ಹಿಂದಿನ ಸರ‍್ಕಾರವು ಹಲವೆಡೆ ಅಯ್ದನೇ ತರಗತಿಯಿಂದ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುವುದಕ್ಕೆ ಮುಂದಾಗಿತ್ತು. ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ ಅಡಿಯಿರುವ ಶಾಲೆಯೊಂದನ್ನು ಕಾಸಗಿ ಆಡಳಿತಕ್ಕೆ ವಹಿಸಿಕೊಟ್ಟು ಅಲ್ಲಿಯೂ ಕನ್ನಡ ಮಾದ್ಯಮ ತೆಗೆದುಹಾಕಿ ಇಂಗ್ಲೀಶ್ ಮಾದ್ಯಮ ಶಾಲೆ ತೆರೆಯಲಾಗಿತ್ತು. ಇದನ್ನು ಪ್ರಶ್ನಿಸಿದ್ದವರಿಗೆ “ಜನರ ಬೇಡಿಕೆ ಈ ರೀತಿಯಿದೆ, ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ಜನರ ಒತ್ತಾಯಕ್ಕೆ ಮಣಿದು ತೆರೆಯುತ್ತಿದ್ದೇವೆ” ಎಂಬ ಉತ್ತರ ನೀಡಿದ್ದರು. ಈ ಕೆಲಸದ ಮೂಲಕ ಹೆಚ್ಚಿನ ಜನಬೆಂಬಲವನ್ನೂ ಹಿಂದಿನ ಸರ‍್ಕಾರವು ಎದುರುನೋಡುತ್ತಿದ್ದಂತಿತ್ತು.

ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುತ್ತೇವೆಂದು ಹೇಳಿಕೊಳ್ಳುತ್ತಾ ಜನರ ಬೆಂಬಲ ಗಳಿಸುವ ಪ್ರಯತ್ನವನ್ನು ಜೆಡಿ(ಎಸ್) ಪಕ್ಶ ಕೂಡಾ ಮಾಡಿತ್ತು. ಚುನಾವಣೆಗೆ ಮುನ್ನ ಹೊರಬಂದಿದ್ದ ಪ್ರಣಾಳಿಕೆಯಲ್ಲಿ, ತಾನು ಆರಿಸಿಬಂದರೆ ವಾರ‍್ಡಿಗೊಂದರಂತೆ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುವುದಾಗಿ ಜೆಡಿ(ಎಸ್) ಪಕ್ಶ ಹೇಳಿಕೊಂಡಿತ್ತು.

ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯಹೊರಟಿದ್ದ (ಮತ್ತು ಕೆಲವೆಡೆ ತೆರೆದಿದ್ದ) ಬಿಜೆಪಿಯನ್ನು ಮತದಾರ ಕಯ್ ಹಿಡಿದಿಲ್ಲ. ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುತ್ತೇವೆಂದು ಹೇಳಿಕೊಂಡಿದ್ದ ಜೆಡಿ(ಎಸ್) ಪಕ್ಶವನ್ನೂ ಮತದಾರ ಕಯ್ ಹಿಡಿದಿಲ್ಲ. “ಏಳನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾದ್ಯಮದಲ್ಲಿ ಕಲಿಕೆ” ಎಂದು ಹೇಳಿದ್ದ ಕಾಂಗ್ರೆಸ್ ಪಕ್ಶವನ್ನು ಮತದಾರ ಕಯ್ ಹಿಡಿದಿದ್ದಾನೆ.

“ಕನ್ನಡ ಮಾದ್ಯಮವೇ ಬೇಕು” ಎಂದುಕೊಂಡು ಮತದಾರ ಕಾಂಗ್ರೆಸ್ಸಿಗೆ ಬೆಂಬಲ ತೋರಿಸಿದ್ದಾನೆ ಎಂಬುದು ದಿಟವಲ್ಲ. “ಕಲಿಕೆ ಮಾದ್ಯಮ ಯಾವುದಿರಬೇಕು” ಎಂಬುದು ಚುನಾವಣೆಯ ದಿಕ್ಕನ್ನೇ ಬದಲಿಸುವಂತಹ ವಿಶಯವೇನಲ್ಲ ಎಂಬುದು ಈ ಚುನಾವಣೆಯಿಂದ ಕಂಡುಬರುತ್ತಿರುವ ದಿಟ. “ಇಂಗ್ಲೀಶ್ ಮಾದ್ಯಮ ಶಾಲೆ” ಎಂಬಂತಹ ಗಾಳಕ್ಕೆ ಮತದಾರ ಬೀಳುವುದಿಲ್ಲ ಎಂಬುದು ನೇರ. ಹೀಗಿರುವಾಗ, ರಾಜಕೀಯ ಪಕ್ಶಗಳು ವಿಗ್ನಾನ ಸಾರುತ್ತಿರುವ “ಪರಿಸರದ ನುಡಿಯಲ್ಲಿ ಕಲಿಕೆ” ಎಂಬ ವಿಶಯಕ್ಕೆ ಮಣೆ ಹಾಕಿದರೆ ನಾಡಿನ ಜನರಿಗೆ ಒಳಿತು.

ಪ್ರಿಯಾಂಕ್ ಕತ್ತಲಗಿರಿ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: