ಹಳೆಯ ಚಳಕದಿಂದ $45ಮಿ ಕಳ್ಳತನ
ಕಳ್ಳರ ತಂಡವೊಂದು ಸುಮಾರು $45,000,000 (225 ಕೋಟಿ ರೂಪಾಯಿಗಳು!) ಹಣವನ್ನು ಹಣಗೂಡುಗಳಿಂದ (ATM) ಕದಿಯಲು ಬಳಸಿದ ಕಳ್ಳರ ಕಯ್ಚಳಕವನ್ನು ಅಮೇರಿಕಾದ ಬ್ರೂಕ್ಲೀನ್ ಊರಿನ ತುಬ್ಬುಗಾರರು (investigators) ಇತ್ತೀಚೆಗೆ ತೆರೆದಿಟ್ಟಿದ್ದಾರೆ.
ಹಣಗೂಡುಗಳಲ್ಲಿ ಇಲ್ಲಿಯವರೆಗೆ ನಡೆದ ಅತೀ ದೊಡ್ಡ ಕಳ್ಳತನ ಇದಾಗಿದ್ದು, ಮೇಲ್ನೊಟಕ್ಕೆ ಮಿಂ-ಕನ್ನಹಾಕುವಿಕೆಯ (hacking) ಹೊಸ ಬಗೆಯಂತೆ ಕಾಪುಗರಿಗೆ (police) ಕಂಡಿತು. ಆದರೆ ಕಳ್ಳತನದ ಆಳಕ್ಕೆ ಇಳಿದ ತುಬ್ಬುಗಾರರಿಗೆ ಇದರಲ್ಲಿ ಕಂಡಿದ್ದು ಹಳೆಯ ಚಳಕವೇ! ಅಮೇರಿಕಾದ ಹಣಗೂಡುಗಳಲ್ಲಿ ಅಳವಡಿಸಲಾಗಿದ್ದ ಗಟ್ಟಿಯಲ್ಲದ ಕಾವಲು ಮುರಿಯಲು ಕಳ್ಳರಿಗೆ ಹಳೆಯ ಚಳಕವೇ ಸಾಕಾಗಿತ್ತು.
ಕಳ್ಳತನ ಹೇಗೆ ಮಾಡಿದರು?
ಅಮೇರಿಕಾದಲ್ಲಿದ್ದ ಸಾಲಪಟ್ಟಿಗಳ (debit card) ಎಣಿಕವೊಂದಕ್ಕೆ ಮಿಂಗಳ್ಳರು (hackers) ಹೊಕ್ಕು, ಅದರಲ್ಲಿದ್ದ ಹಲವು ತಿಳಿಹಗಳನ್ನು (data) ಮಾರ್ಪಡಿಸಿದರು. ಮುಕ್ಯವಾಗಿ ಸಾಲಪಟ್ಟಿಯ ಹಣ ಹಿಂಪಡೆಯುವ ಮಟ್ಟವನ್ನು ಮಿಂಗಳ್ಳರು ಹೆಚ್ಚಿಸಿದರು. ತಿಳಿಹಗಳನ್ನು ಮಾರ್ಪಡಿಸಿದ ಮೇಲೆ ದುಡ್ಡನ್ನು ಕದಿಯಲು ಕಳ್ಳರು ಬಳಸಿದ್ದು ಹಳೆಯದಾದ ಸೆಳೆತಪಟ್ಟಿ ಚಳಕ (magnetic strip technology). ಕಳ್ಳರು ಇದಕ್ಕಾಗಿ ಸೆಳೆತಪಟ್ಟಿ ಓದು/ಬರೆಯುಕವನ್ನು (reader/writer) ಬಳಸಿ ಸಾಲಪಟ್ಟಿಯಲ್ಲಿದ್ದ (debit card) ತಿಳಿಹವೆಲ್ಲವನ್ನೂ ಹಲವು ಪಟ್ಟಿಗಳಿಗೆ ಅಚ್ಚುಹಾಕಿಕೊಂಡರು. ಇಂತಹ ಸಾವಿರಾರು ಸಾಲಪಟ್ಟಿಗಳನ್ನು ಜಗತ್ತಿನ ಹಲವೆಡೆ ಸಾಗಿಸಿ, ಅಲ್ಲಿಯ ಹಣಗೂಡುಗಳಲ್ಲಿದ್ದ ಹಣವನ್ನು ಕಳ್ಳತನ ಮಾಡಿದರು.
ಇದು ಸಾದ್ಯಾನಾ?
ಸೆಳೆತಪಟ್ಟಿ ಚಳಕವನ್ನು 1960 ರಲ್ಲಿ ಹೆಸರಾಂತ ಕೂಟ ಅಯ್.ಬಿ.ಎಂ. ಕಂಡುಹಿಡಿಯಿತು. 1970ರ ದಶಕದಲ್ಲಿ ಎಲ್ಲರ ಬಳಕೆಗಾಗಿ ಇದನ್ನು ಆಯ್.ಬಿ.ಎಂ. ಹೊರಬಿಟ್ಟಿತು. ಸೆಳೆತಪಟ್ಟಿ ಕೆಲಸ ಮಾಡುವುದು ಸಣ್ಣ ಕಬ್ಬಿಣದ ತುಣುಕಗಳ ಮಾರ್ಪಡಿಕೆಯಿಂದ. ಇದನ್ನು ಯಾವುದೇ ಕಾರ್ಡ್ ಓದುಕ/ಬರೆಯುಕ ಅಳಿಸಬಹುದು ಇಲ್ಲವೇ ಮರುಹೂಡಬಹುದು(reset). ಇವುಗಳಲ್ಲಿ ಗುಟ್ಟು ಎಣಿಗಳು (pin number) ಅಳವಡಿಸಲಾಗಿದ್ದರೂ, ಇವುಗಳಿಗೆ ಹೆಚ್ಚಿನ ಕಾವಲು ಇರುವುದಿಲ್ಲ. ಕಾರ್ಡ್ ಮಾಡುವವರು ಸರಳವಾಗಿ ಈ ಕಾವಲನ್ನು ಮುರಿಯಬಲ್ಲರು.
ಹಾಗಾಗಿಯೇ ಹಲವು ದೇಶಗಳು ಈ ಸೆಳೆತಪಟ್ಟಿ ಚಳಕವನ್ನು ನಿಲ್ಲಿಸಿದ್ದಾರೆ. ಇದಕ್ಕೆ ಬದಲಾಗಿ ಇಂಗ್ಲೆಂಡ್ ಹಾಗೂ ಯುರೋಪಿನ ಹಲವು ದೇಶಗಳಲ್ಲಿ “ಚಿಪ್ ಮತ್ತು ಪಿನ್” ಕಾರ್ಡುಗಳನ್ನು ಬಳಕೆ ಮಾಡುತ್ತಾರೆ. ಇವು ಸೆಳೆತಪಟ್ಟಿಗಳಿಗಿಂತ ಚೆನ್ನಾಗಿರುವ ಕಾವಲು ಹೊಂದಿವೆ. ಆದರೆ ಅಮೇರಿಕಾದ ಹಣಗೂಡುಗಳಲ್ಲಿ (ATM) ಇನ್ನೂ ಅದೇ ಹಳೆಯದಾದ ಸೆಳೆತಪಟ್ಟಿ ಚಳಕವು ಬಳಕೆಯಾಗುತ್ತಿದ್ದುದರಿಂದ ಕಳ್ಳರಿಗೆ ಕಳ್ಳತನಕ್ಕೆ ಕೆಂಪುಹಾಸು ಹಾಸಿದಂತಾಯಿತು. ಸೆಳೆತಪಟ್ಟಿಯ ಸುಳುವಾದ ಕಾವಲನ್ನು ಸೀಳಿ ಕಳ್ಳರು ಕಳ್ಳತನ ಮಾಡಿದರು.
ಅಮೇರಿಕಾದಲ್ಲಿ ಯಾಕೆ ಇನ್ನೂ ಹಳೆಯ ಚಳಕ?
ಇದಕ್ಕೆ ಅಮೇರಿಕಾದ ಹಣಮನೆ ಏರ್ಪಾಟು (infrastructure) ಮುಕ್ಯ ಕಾರಣ. ಅಮೇರಿಕಾದಂತ ದೊಡ್ಡ ನಾಡಿನಲ್ಲಿ ಲಕ್ಶಗಟ್ಟಲೇ ಹಳೆಯ ಹಣಗೂಡುಗಳಿದ್ದು, ಅವುಗಳಲ್ಲೆವನ್ನೂ ಹೊಸದಾಗಿಸಲು ತುಂಬಾ ದುಡ್ಡು ಬೇಕಾಗುತ್ತದೆ ಹೀಗಾಗಿ ಅಮೇರಿಕಾದ ಹಣಮನೆಗಳು (banks) ಅದೇ ಹಳೆಯ ಹಣಗೂಡುಗಳನ್ನು ನಡೆಸಿಕೊಂಡು ಹೊರಟಿವೆ. ಅಮೇರಿಕಾಕ್ಕೆ ಹೋಲಿಸಿದಲ್ಲಿ ಸಣ್ಣ ನಾಡುಗಳಾದ ಇಂಗ್ಲೆಂಡ್ ಹಾಗೂ ಜಪಾನಿನಲ್ಲಿ ಹಣಗೂಡು ಮತ್ತು ಹಣಮನೆಯ ಇತರ ಕೊಡುಕೊಳ್ಳುವಿಕೆಯಲ್ಲಿ ಹೊಸದಾದ, ಗಟ್ಟಿ ಕಾವಲನ್ನು ಹೊಂದಿದ ಚಳಕಗಳನ್ನು ತುಂಬಾ ಬಿರುಸಿನಿಂದ ಅಳವಡಿಸಲಾಗುತ್ತಿದೆ.
ಎತ್ತುಗೆಗೆ, ಜಪಾನಿನಲ್ಲಿ ಡೊಕೊಮೋ ಅವರು ಹೊರತಂದಿರುವ ’ಪೆಲಿಕಾ’ ಎಂಬ ಅಲೆಯುಲಿ ಬಳಕವನ್ನು (mobile app) ಬಳಸಿ ಹಣಗೂಡುಗಳಿಂದ ಹಣವನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಬಳಕದ ನೆರವಿನಿಂದ ಹಣ ಸಂದಾಯ ಮಾಡುವಾಗ/ಪಡೆಯುವಾಗ ಅಲೆಯುಲಿಯಿಂದ ಗುಟ್ಟು ಅಂಕಿ ನೀಡಲಾಗುತ್ತದೆ. ಇದರಿಂದಾಗಿ ಹಣದ ಕಾವಲು ತುಂಬಾ ಗಟ್ಟಿಯಾಗಿದೆ. ಅಮೇರಿಕಾದಲ್ಲಿ ಇಂತ ಚಳಕವು ಇನ್ನೂ ಬೆಳಕಿಗೆ, ಬಳಕೆಗೆ ಬರಬೇಕಾಗಿದೆ. ಜಗತ್ತಿನ ದೊಡ್ಡಣ್ಣ ಹಲವು ವಿಶಯಗಳನ್ನು ಜಪಾನಿನಂತಹ ಪುಟಾಣಿ, ಚುರುಕು ದೇಶಗಳಿಂದ ಕಲಿಯಬೇಕಾಗಿದೆ.
ಮಾಹಿತಿ ಸೆಲೆ: http://www.popsci.com/technology/article/2013-05/thieves-stole-45-million-because-us-uses-absurd-40-year-old-technology
(ಚಿತ್ರ: nehandaradio.com)
ಇತ್ತೀಚಿನ ಅನಿಸಿಕೆಗಳು