ಆಸ್ಟ್ರೋಪಿಸಿಕ್ಸ್ ಅಂದರೆ ಏನು ?

astro

ಪರಿಚಯ: ವಿಗ್ನಾನ ನಮ್ಮ ಪ್ರತಿದಿನದ ಚಟುವಟಿಕೆಗಳ ಒಂದು ದೊಡ್ಡ ಬಾಗವಾಗಿದೆ. ಹಿಂದಿನ ಕಾಲದಿಂದಲೂ, ಪುರಾಣಗಳಲ್ಲಿ, ಇತಿಹಾಸದಲ್ಲಿ, ಸೂರ‍್ಯ, ಚಂದ್ರ, ಗ್ರಹ ಮುಂತಾದ ಆಕಾಶಕಾಯಗಳಿಗೆ ವಿಶೇಶ ಹೆಚ್ಚುಗಾರಿಕೆ ಕೊಟ್ಟಿದ್ದಾರೆ. ಮನುಶ್ಯನ ಜೀವನದಲ್ಲಿ ಆಗು-ಹೋಗುವ ಗಟನೆಗಳಿಗೂ ಮತ್ತು ಈ ಆಕಾಶಕಾಯಗಳ ಒಡಾಟಕ್ಕೂ ಸಂಬಂದ ಇದೆ ಎಂದು ನಮ್ಮ ಹಿಂದಿನವರು ನಂಬಿದ್ದರು. ಈ ರೀತಿ ಕುತೂಹಲದಿಂದ ಮೊದಲ್ಗೊಂಡ ಅದ್ಯಯನ, ವಯ್ಗ್ನಾನಿಕ ಸಲಕರಣೆಗಳ ಕೊರತೆಯಿಂದಾಗಿ ಕೆಲವು ಮೂಡನಂಬಿಕೆಗಳಿಗೂ ಕಾರಣವಾಯ್ತು. ಕಾಲ ಕಳೆದಂತೆ, ಬವ್ತಶಾಸ್ತ್ರದ (physics) ಸಮಕಾಲೀನ ಬೆಳವಣಿಗೆಗಳ ಜೊತೆಗೆ ಬುದ್ದಿವಂತ, ಕುತೂಹಲ ತುಂಬಿದ ವಿಗ್ನಾನಿಗಳ ಸಂಶೋದನೆಗಳಿಂದ ಈ ಆಕಾಶಕಾಯಗಳ ಬಗೆಗಿನ ಅರಿಮೆ ಹೆಚ್ಚುತ್ತಾ ಹೊಯಿತು. ನಿಜವೇನೆಂದರೆ, ಈ ಆಕಾಶ ಮತ್ತು ಅಲ್ಲಿರುವ ಎಣಿಸಲಾರದಶ್ಟು ಸಂಕ್ಯೆಯ ಕಾಯಗಳು ನಮಗೆ ತುಂಬಾ ತುಂಬಾ ಅರಿಮೆ ನೀಡಬಲ್ಲ, ಸಂಶೋದನೆಗಳಿಗೆ ಅವಕಾಶ ನೀಡಬಲ್ಲ ಪ್ರಯೋಗಶಾಲೆಗಳಾಗಿವೆ. ಬೂಮಿ ಮೇಲಣ ಮನುಶ್ಯ-ಕಟ್ಟಿದ ಪ್ರಯೋಗಶಾಲೆಗಳಲ್ಲಿ ನಡೆದ ಸಂಶೋದನೆಗಳಿಂದ ತಿಳಿದುಬಂದ ಅದೆಶ್ಟೋ ಬವ್ತಿಕ ವಿದ್ಯಮಾನಗಳು (physical phenomena), ಆಕಾಶಕಾಯಗಳ ಪ್ರಯೋಗಶಾಲೆಗಳಲ್ಲಿ ಬೇರೆಯೇ ರೀತಿ ಇರುತ್ತವೆ. ಇದಕ್ಕೆ ಕಾರಣ, ಅಲ್ಲಿನ ಬವ್ತ-ಪರಿಸ್ತಿತಿಗಳು (physical conditions) ನಮ್ಮ ಬೂಮಿಯ ಪ್ರಯೋಗಶಾಲೆಗಳಿಗಿಂತ ತೀರಾ ಬೇರೆಯದಾಗಿರುತ್ತವೆ. ಈ ರೀತಿ ತುಂಬಾ ದೊಡ್ಡದಾದ ಪ್ರಯೋಗಶಾಲೆಗಳನ್ನು ಹೊತ್ತ ನಮ್ಮ ಬ್ರಹ್ಮಾಂಡದ ವಿವಿದ ಕಾಯಗಳ ಬವ್ತಶಾಸ್ತ್ರೀಯ ಅದ್ಯಯನವನ್ನೇ ಆಸ್ಟ್ರೋಪಿಸಿಕ್ಸ್ ಎನ್ನುತ್ತಾರೆ.

ಗುರಿ: ಡಾ ॥ ಅಬ್ದುಲ್ ಕಲಾಂ ಹೇಳಿದಂತೆ “ವಿಗ್ನಾನದ ಬೆಳವಣಿಗೆ ನಾಡಿನ ಬೆಳವಣಿಗೆ”. ಆಸ್ಟ್ರೋಪಿಸಿಕ್ಸಿನಲ್ಲಿ ಸಂಶೋದನೆ ಮಾಡುವುದೇ ನನ್ನ ಕೆಲಸ ಎಂದಾಗಲೆಲ್ಲ ನನ್ನ ಗೆಳೆಯ-ಗೆಳತಿಯರು, “ನೀನು ಮಾಡುವುದು ಏನಕ್ಕೆ ಉಪಯೋಗ?” ಎಂದು ಕೇಳುತ್ತಾರೆ. ಅವರೆಲ್ಲರಿಗೆ ನಾನು ಮೊದಲು ಕೊಡುವ ಉತ್ತರ ನಮ್ಮ ಹಿಂದಿನ ರಾಶ್ಟ್ರಪತಿ ಡಾ ॥ ಅಬ್ದುಲ್ ಕಲಾಂ ಅವರ ಉತ್ತರ: “ವಿಗ್ನಾನದ ಬೆಳವಣಿಗೆ ನಾಡಿನ ಬೆಳವಣಿಗೆ”. ಇಶ್ಟಕ್ಕೆ ತ್ರುಪ್ತಿ ಸಿಗದವರಿಗೆ ನಾನು ಕೆಲವು ಉದಾಹರಣೆಗಳೊಂದಿಗೆ ವಿವರಿಸಬೆಕಾಗುತ್ತದೆ. ಇಲ್ಲಿ ನಾನು ಒಂದು ಪ್ರಮುಕ ಉದಾಹರಣೆ ಕೊಡುತ್ತೇನೆ.

ಬೂಮಿಯ ಮೇಲಿನ ಪ್ರತಿಯೊಂದು ಜೀವಜಂತುವಿನ ಬದುಕು ಇಲ್ಲಿನ ಹವಾಮಾನ, ವಾತಾವರಣದ ಪರಿಸ್ತಿತಿಗಳ ಮೇಲೆ ನಿಂತಿರುತ್ತದೆ. ಸಾಮಾನ್ಯವಾಗಿ ಎಲ್ಲರೂ ಈ ಹವಾಮಾನ ಮತ್ತು ವಾತಾವರಣದ ಬದಲಾವಣೆಗಳಿಗೆ ನಮ್ಮ ಬೂಮಿಯಲ್ಲಿ ನಡೆಯುವ ಪ್ರಕ್ರುತಿ ಏರು-ಪೇರುಗಳಶ್ಟೇ ಕಾರಣ ಎಂದು ತಿಳಿದಿರುತ್ತಾರೆ. ಆದರೆ ಈ ಎಲ್ಲ ಆಗುಹೋಗುಗಳಿಗೆ ಪ್ರಮುಕವಾಗಿ ಸೂರ‍್ಯನ ವಾತಾವರಣದಲ್ಲಿ ಆಗುವ ಬದಲಾವಣೆಗಳು ಕಾರಣ ಎಂಬುದು ಎಶ್ಟೋ ಮಂದಿಗೆ ಗೊತ್ತಿಲ್ಲದ ವಿಚಾರ. ನಿಜವಾಗಿ, ಬೂಮಿಯ ಮೇಲೆ ಜೀವ ಇರುವುದಕ್ಕೆ ಕಾರಣವೇ, ನಮಗೆ ದಿನವೂ ಬೆಳಕು, ಬಿಸುಪು ನೀಡುವ ನಮ್ಮ ಹತ್ತಿರದ ನಕ್ಶತ್ರ — ಅದುವೇ ಸೂರ‍್ಯ. ವಯ್ಗ್ನಾನಿಕವಾಗಿ ಹೇಳುವುದಾದರೆ ಸೂರ‍್ಯನ ಕಾಂತಕ್ಶೇತ್ರಗಳ ಚಲನಶಾಸ್ತ್ರ (dynamics of magnetic fields on the Sun) ಬೂಮಿಯ ವಾತಾವರಣದ ಬದಲಾವಣಿಗಳಿಗೆ ತುಂಬಾ ಅವಶ್ಯಕ. ಆದರೆ ಈ ಕಾಂತಕ್ಶೇತ್ರಗಳ ಬಗೆಗಿನ ಅರಿವು ಇನ್ನೂ ಮೂಲರೂಪದಲ್ಲಿದ್ದು, ಅದರ ವಿವರಗಳು ಇನ್ನೂ ಇಡಿಯಾಗಿ ತಿಳಿದಿಲ್ಲ. ವಿಗ್ನಾನಿಗಳು ಹಲವು ವರ‍್ಶಗಳಿಂದ ಹಗಲೂ ರಾತ್ರಿ ಈ ನಿಗೂಡ ಗುಟ್ಟನ್ನು ಬಿಡಿಸಲು ಸಂಶೋದನೆ ನಡೆಸುತ್ತಲೇ ಬಂದಿದ್ದಾರೆ. ನಾಸಾ, ಈಸ (NASA, ESA) ಮುಂತಾದ ಸಂಸ್ತೆಗಳು ಉಪಗ್ರಹಗಳನ್ನು ಕಳಿಸಿ ಸೂರ‍್ಯನ ಮೇಲ್ಮಯ್ ನೋಡಿ ಮಾಹಿತಿ ಪಡೆಯುತ್ತಿದ್ದಾರೆ. ಈ ಮಾಹಿತಿಗಳು ಬೂಮಿಯ ಮೇಲಿನ ಹವಾಮಾನ ಮುನ್ಸೂಚನೆಗಳಿಗೂ ಉಪಯೋಗಕ್ಕೆ ಬರುತ್ತವೆ. ಈ ರೀತಿ ಸೂರ‍್ಯನ ಬವ್ತಶಾಸ್ತ್ರದ ಮೇಲಿನ ಗ್ನಾನ ಮತ್ತು ಸಂಶೋದನೆ ಮೇಲ್ನೋಟಕ್ಕೆ ಸಾಮಾನ್ಯ ಜನರ ಜೀವನಕ್ಕೆ ಉಪಯೋಗವಿಲ್ಲ ಎನಿಸಿದರೂ ಈ ಸಂಶೋದನೆಗಳಿಂದ ಒದಗುವ ಅರಿವು ಸಾಮಾನ್ಯ ಜನತೆಯ ಪ್ರತಿದಿನದ ಬದುಕಿಗೆ ಮಹತ್ವವುಳ್ಳದ್ದಾಗಿದೆ.

ಕೊನೆಯದಾಗಿ: ಇದಲ್ಲದೆ, ತಾತ್ವಿಕವಾಗಿ (philosophically) ಹೇಳುವುದಾದರೆ ಸಾಮಾನ್ಯವಾಗಿ ‘ನಾನು ಯಾರು, ನನ್ನ ಮೂಲ ಏನು’ ಎಂಬ ಕೇಳ್ವಿಗಳು ಎಲ್ಲರ ಮನಸ್ಸಿನಲ್ಲಿಯೂ ಒಂದಲ್ಲಾ ಒಂದು ಸಾರಿ ಮೂಡಿರುತ್ತದೆ. ಅದೇ ರೀತಿ ‘ನಾವು ಅತವಾ ನಾವೆಲ್ಲ ಯಾರು, ಬೂಮಂಡಲ, ಬ್ರಹ್ಮಾಂಡದ ಹುಟ್ಟು ಹೇಗಾಯಿತು, ಹೇಗೆ ನಾವು ಈಗಿರುವ ಸ್ತಿತಿ ತಲುಪಿದ್ದೇವೆ, ಬೂಮಿ ಬಿಟ್ಟು ಬೇರೆ ಎಲ್ಲಾದರೂ ನಮ್ಮಂತೆ ಜೀವ ಅತವಾ ಜೀವಜಂತುಗಳು ಇವೆಯೇ, ಇದ್ದರೆ ಹೇಗೆ ಗುರುತಿಸುವುದು, ಇಲ್ಲದಿದ್ದರೆ ಯಾಕೆ ‘ ಮುಂತಾದ ಸಾವಿರಾರು ಕೇಳ್ವಿಗಳು ವಿಗ್ನಾನಿಗಳನ್ನು ಕಾಡುತ್ತಲೇ ಇರುತ್ತವೆ. ಕೋಟ್ಯಾನುಕೋಟಿ ಆಕಾಶಕಾಯಗಳ ಸಂಶೋದನೆಗಳಿಂದ ಈ ಎಲ್ಲ ಕೇಳ್ವಿಗಳಿಗೆ ತಕ್ಕ ಉತ್ತರ ಹುಡುಕುವುದೇ ಆಸ್ಟ್ರೋಪಿಸಿಕ್ಸ್ ಅದ್ಯಯನದ ಮೂಲ ಉದ್ದೇಶ.

– ಎಲ್.ಎಸ್. ಅನೂಶ

(ಚಿತ್ರ: http://astro.berkeley.edu/tac/)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಉಪಗ್ರಹಗಳ ಮೂಲಕ ಇಂದು ನಾವು ಪಡೆಯುವ ನಾನಾ ಸೇವೆಗಳ ಹಿಂದೆ ಆಸ್ಟ್ರೋ ಫಿಸಿಕ್ಸ್ ಅಧ್ಯಯನದ ಶ್ರಮ ತುಂಬಾ ಇದೆ.

ಅನಿಸಿಕೆ ಬರೆಯಿರಿ: