GPS ಜುಟ್ಟು ಅಮೇರಿಕದ ಕಯ್ಯಲ್ಲಿ
ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ ಬೆಳೆದಂತೆ ಅಳತೆಯ ಹೊಸ ಹೊಸ ಸಲಕರಣೆಗಳು ಹೊಮ್ಮಿದವು ಅವುಗಳಲ್ಲಿ ಇತ್ತೀಚಿಗೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ನೆಲದೆಡೆ ತೋರುವ ಏರ‍್ಪಾಟು (global positioning system-GPS).
ಜಿ.ಪಿ.ಎಸ್. – ಅಮೇರಿಕಾದ ಕಾವಲು ಪಡೆಯ ಅಂಕೆಯಲ್ಲಿರುವ, ನೆಲದಲ್ಲಿ ಎಲ್ಲೇ ಇದ್ದರೂ ಇರುವೆಡೆ (position), ತಲುಪುದಾರಿ (navigation) ಮತ್ತು ಹೊತ್ತು (time) ಕಂಡುಕೊಳ್ಳಬಹುದಾದ ಏರ‍್ಪಾಟು. ಇದನ್ನು ಮೊದ-ಮೊದಲು ಬರೀ ಅಮೇರಿಕಾದ ಕಾವಲು ಪಡೆಯ ಬಳಕೆಗಾಗಿ ಮೀಸಲಿರಿಸಲಾಗಿತ್ತು ಆದರೆ ಇತ್ತೀಚಿನ ವರುಶಗಳಲ್ಲಿ ಇದನ್ನು ಸಾಮಾನ್ಯ ಬಳಕೆಗಾಗಿಯೂ ತೆರೆಯಲಾಗಿದೆ. ಗಾಡಿಯಲ್ಲಿ ಓಡಾಡುವಾಗ ಮುಂದೆ ಸಾಗಬೇಕಾದ ದಾರಿಯನ್ನು ತಿಳಿದುಕೊಳ್ಳುವಂತ ಸಾಮಾನ್ಯ ಕೆಲಸದಿಂದ ಹಿಡಿದು ಬಾನರಿಮೆಯ (astronomy) ಕೆಲಸಕ್ಕಾಗಿಯೂ ಇಂದು ಜಿ.ಪಿ.ಎಸ್. ಬಳಕೆಯಾಗುತ್ತಿದೆ.
ಜಿ.ಪಿ.ಎಸ್. ಮುಕ್ಯವಾಗಿ ಮೂರು ಹಂತಗಳನ್ನು ಒಳಗೊಂಡಿರುತ್ತದೆ. 1) ಬಾನಿನಲ್ಲಿ ಸುತ್ತುಗಗಳ ಹಂತ 2) ನೆಲದಲ್ಲಿರುವ ಹಿಡಿತ ಹಂತ 3) ಬಳಕೆದಾರರ ಹಂತ. ಇದರಲ್ಲಿ ಮೊದಲೆರಡು ಹಂತಗಳನ್ನು ಅಮೇರಿಕಾದ ಕಾವಲು ಪಡೆ (defense force) ತನ್ನ ಅಂಕೆಯಲ್ಲಿಯೇ ಇಟ್ಟುಕೊಂಡರೆ ಮೂರನೇ ಹಂತವು ಸಾಮಾನ್ಯ ಬಳಕೆದಾರರನ್ನು ಮತ್ತು ಅವರು ಬಳಸುವ ಸಲಕರಣೆಗಳನ್ನು ಒಳಗೊಂಡಿದೆ.
ಮೊದಲ ಹಂತದ ಬಾಗವಾಗಿ ಇರುವೆಡೆಯನ್ನು ತಿಳಿದುಕೊಳ್ಳಲು 24 ಸುತ್ತುಗಗಳನ್ನು (satellite) ಬಳಸಲಾಗುತ್ತಿದ್ದು, ಅವುಗಳು ಬಾನಿನಲ್ಲಿ ನೆಲದ ಸುತ್ತ ದಿನಕ್ಕೆ ಎರಡು ಸುತ್ತು ಸುತ್ತುತ್ತವೆ. ನೆಲದಲ್ಲಿ ಎಲ್ಲೇ ನಿಂತರೂ ಕಡಿಮೆ ಎಂದರೂ 3 ಸುತ್ತುಗಗಳು ತೋರುವಂತೆ ಸುತ್ತುಗಗಳ ದುಂಡುಕೂಟವನ್ನು (satellite constellation) ಈ ಏರ‍್ಪಾಟು ಒಳಗೊಂಡಿದೆ. (ಕೆಳಗಿನ ಚಿತ್ರ ನೋಡಿ)
ನೆಲದ ಸುತ್ತ ತಿರುಗುವ ಸುತ್ತುಗಗಳು ಕಳಿಸುವ ರೆಡಿಯೋ ಸಂದೇಶಗಳನ್ನು ಒರೆಗೆಹಚ್ಚಿ ಇರುವಿಕೆಯ ಜಾಗವನ್ನು ತಿಳಿದುಕೊಳ್ಳಲಾಗುತ್ತದೆ. ಸುತ್ತುಗಳ ಸಂದೇಶಗಳಿಂದ ಇರುವೆಡೆಯನ್ನು ಎಣಿಕೆಹಾಕುವ ಈ ಕೆಲಸಕ್ಕಾಗಿ ಮೂರ‍್ಬದಿ (trilateration) ಎಂಬ ಪದ್ದತಿಯನ್ನು ಬಳಸಲಾಗುತ್ತದೆ. ಈ ಪದ್ದತಿಯ ಬಗ್ಗೆ ಈಗ ಒಂಚೂರು ತಿಳಿದುಕೊಳ್ಳೋಣ.
ಮೂರ‍್ಬದಿ ಪದ್ದತಿಯಲ್ಲಿ, ಗೊತ್ತಿರುವ ಮೂರು ದೂರಗಳಿಂದ ಗೊತ್ತಿರದ ಎಡೆಯನ್ನು ತಿಳಿದುಕೊಳ್ಳಲಾಗುತ್ತದೆ. ಕೆಳಗೆ ಚಿತ್ರ 1 ರಲ್ಲಿ ತೋರಿಸಿರುವಂತೆ, ಗೊತ್ತಿರದ ಎಡೆ ಮಂಗಳೂರಿನಿಂದ ಇಂತಿಶ್ಟು ದೂರದಲ್ಲಿದೆ ಅಂತಾ ಇಟ್ಟುಕೊಳ್ಳೋಣ ಆಗ ಆ ಎಡೆ ಮಂಗಳೂರಿನ ನಡುವಿನಿಂದ ಅದರ ಸುತ್ತ ಎಲ್ಲಿ ಬೇಕಾದರೂ ಇರಬಹುದು. ಈಗ ಚಿತ್ರ 2 ನೋಡಿ, ಗೊತ್ತಿರದ ಅದೇ ಎಡೆ ಬೀದರನಿಂದ ಇಂತಿಶ್ಟು ಗೊತ್ತಿರುವ ದೂರದಲ್ಲಿದೆ ಎಂದು ತಿಳಿದುಕೊಂಡರೆ, ಮಂಗಳೂರು ಮತ್ತು ಬೀದರ ದೂರದಿಂದ ಉಂಟಾಗುವ ಸುತ್ತುಗಳು ಸೇರುವಲ್ಲಿ ಆ ಎಡೆ ಇದೆಯೆಂದು ತಿಳಿಯಬಹುದು. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಆ ಎಡೆಯು ಸುತ್ತುಗಳು ಸೇರುವ ಎರಡ ಎಡೆಗಳಲ್ಲಿ ಯಾವುದಾದರೂ ಆಗಿರಬಹುದು. ಈಗ ಬೆಂಗಳೂರಿನಿಂದಲೂ ಎಡೆಯ ದೂರವನ್ನು ಅರಿತುಕೊಂಡರೆ ಮಂಗಳೂರು, ಬೀದರ ಮತ್ತು ಬೆಂಗಳೂರು ಸುತ್ತುಗಳು ಸೇರುವಲ್ಲಿಯೇ ಆ ಗೊತ್ತಿರದ ಎಡೆ ಇದೆಯೆಂದು ಕರಾರುವಕ್ಕಾಗಿ ಅರಿತುಕೊಳ್ಳಬಹುದು.
ಇದನ್ನೇ ಜಿ.ಪಿ.ಎಸ್. ಬಳಸುವುದು. ಬಾನಿನಲ್ಲಿ ತಿರುಗುವ ಸುತ್ತುಗಗಳಲ್ಲಿ ಕಡಿಮೆ ಎಂದರೂ ಮೂರು ಸುತ್ತುಗಗಳಿಂದ ದೂರಗಳನ್ನು ಅರಿತುಕೊಂಡರೆ ನೆಲದಲ್ಲಿನ ಗೊತ್ತಿರದ ಜಾಗವನ್ನು ತಿಳಿಯಬಹುದು. ಸುತ್ತುಗವು ಕಳಿಸುವ ರೆಡಿಯೋ ಸಂದೇಶದಿಂದ ದೂರವನ್ನು ಕಂಡುಹಿಡಿಯುವ ಚಳಕವೂ ತುಂಬಾ ಸೊಗಸಾಗಿದೆ. ಸುತ್ತುಗವು ಸಂದೇಶವೊಂದನ್ನು ಕಳಿಸುವಾಗ ಆಗ ಹೊತ್ತು ಎಶ್ಟಾಗಿತ್ತು ಅನ್ನುವುದನ್ನೂ ಕಳಿಸುತ್ತದೆ. ಈ ಸಂದೇಶವನ್ನು ನೆಲದಲ್ಲಿ ಬಳಕೆದಾರರ ಕಯಲ್ಲಿರುವ ಜಿ.ಪಿ.ಎಸ್. ಸಲಕರಣೆ ಪಡೆದಾಗ ಎಶ್ಟು ಹೊತ್ತಾಗಿದೆ ಎಂದು ತಿಳಿದುಕೊಂಡು ದೂರವನ್ನು ಕೆಳಗಿನಂತೆ ಎಣಿಕೆಹಾಕಲಾಗುತ್ತದೆ,
ದೂರ = ಸುತ್ತುಗದಿಂದ ಸಲಕರಣೆ ತಲುಪಲು ಬೇಕಾದ ಹೊತ್ತು x ಬೆಳಕಿನ ವೇಗ
(distance = time x velocity of light)
ರೆಡಿಯೋ ಸಂದೇಶಗಳು ಬೇಳಕಿನ ವೇಗ ಅಂದರೆ ಪ್ರತಿ ಸೆಕೆಂಡಿಗೆ ಸುಮಾರು 3 ಲಕ್ಶ ಕಿ.ಮೀ. ಸಾಗುವುದರಿಂದ ದೂರ ಎಣಿಕೆಹಾಕಲು ಬೆಳಕಿನ ವೇಗವನ್ನೇ ಬಳಸಲಾಗುತ್ತದೆ.
ಅಮೇರಿಕಾದ ಕಾವಲು ಪಡೆಯ ಅಂಕೆಯಲ್ಲಿರುವ ಜಿ.ಪಿ.ಎಸ್. ಏರ‍್ಪಾಟಿಗೆ ಸಾಟಿಯಾಗಿ ಹಲವು ದೇಶಗಳು ತಮ್ಮದೇ ಆದ ಏರ‍್ಪಾಟಗಳನ್ನೂ ಇತ್ತೀಚಿಗೆ ಅಣಿಗೊಳಿಸುತ್ತಿವೆ. ರಶ್ಯಾ ಗ್ಲೋನಸ್ (GLONASS) ಮತ್ತು ಯುರೋಪ ಗೆಲಿಲಿಯೋ ಹೆಸರಿನ ಏರ‍್ಪಾಟಗಳನ್ನು ಮಾಡಿಕೊಳ್ಳುತ್ತಿದ್ದರೆ, ಬಾರತವೂ ಇದರಲ್ಲಿ ಹಿಂದೆ ಬೀಳದೇ IRNSS (Indian Regional Navigational Satellite System) ಎಂಬ ಏರ‍್ಪಾಟು ಕಟ್ಟುತ್ತಿದೆ.
ತಿಳುವಳಿಕೆ ಸೆಲೆ: http://en.wikipedia.org, http://www.howstuffworks.com/
ಬರಹ ತುಂಬಾ ಚೆನ್ನಾಗಿದೆ. ಈ ತುಂಬಾ ಸಿಕ್ಕಲು ವಿಶಯವನ್ನು ನನ್ನಂತವರಿಗೂ ತಿಳಿಯುವ ಬಗೆಯಲ್ಲಿ ಬರೆದಿರುವುದಕ್ಕೆ ನನ್ನಿ.
ವಿವೇಕ್, ನನ್ನಿ.
ತುಂಬಾ ಒಳ್ಳೆಯ ಬರಹ ಪ್ರಶಾಂತ್, ನಿಮ್ಮ ಇತರ ಬರಹಗಳೂ ಸಹ ತುಂಬಾ ಚೆನ್ನಾಗಿವೆ.
ಗಿರೀಶ್, ನಿಮ್ಮ ಮಾತುಗಳಿಗೆ ನನ್ನಿ.
Loved it..good