ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 4
{ಕಳೆದ ಬರಹದಲ್ಲಿ: ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 3: ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ್ಪಣ ಗೊಂದಲದ ಗೂಡಾಗಿದೆ…}
ಹಳೆಗನ್ನಡದಲ್ಲಿ ಹೆಸರುಪದಗಳ ಬಳಿಕ ಎಣಿಕೆ (ವಚನ) ಮತ್ತು ಪತ್ತುಗೆ(ವಿಬಕ್ತಿ)ಗಳನ್ನು ತಿಳಿಸಲು ಎರಡು ಬೇರೆ ಬೇರೆ ಒಟ್ಟುಗಳನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಅಂಬುಗಳಿಂದೆ ಎಂಬ ಪದರೂಪದಲ್ಲಿ ಅಂಬು ಎಂಬ ಹೆಸರುಪದದ ಬಳಿಕ ಎಣಿಕೆಯನ್ನು ತಿಳಿಸಲು ಗಳ್ ಎಂಬ ಒಟ್ಟನ್ನು ಬಳಸಲಾಗಿದೆ, ಮತ್ತು ಪತ್ತುಗೆಯನ್ನು ತಿಳಿಸಲು ಇಂದೆ ಎಂಬ ಇನ್ನೊಂದು ಬೇರೆಯೇ ಒಟ್ಟನ್ನು ಬಳಸಲಾಗಿದೆ.
ಇವುಗಳಲ್ಲಿ ಎಣಿಕೆ ಒಟ್ಟು ಹೆಸರುಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಎಣಿಕೆಯನ್ನು ತಿಳಿಸುತ್ತದೆ (ಅಂಬು ಎಂದರೆ ಒಂದು ಬಾಣ, ಮತ್ತು ಅಂಬುಗಳ್ ಎಂದರೆ ಒಂದಕ್ಕಿಂತ ಹೆಚ್ಚು ಬಾಣಗಳು), ಮತ್ತು ಪತ್ತುಗೆ ಒಟ್ಟು ಆ ಹೆಸರುಪದಕ್ಕೂ ಎಸಕ(ಕ್ರಿಯಾ)ಪದಕ್ಕೂ ನಡುವಿರುವ ಸಂಬಂದವನ್ನು ತಿಳಿಸುತ್ತದೆ (ಅಂಬುಗಳಿಂದೆ ಮರುೞ್ಚಿದಂ ಎಂಬ ಸೊಲ್ಲಿನಲ್ಲಿ ಇಂದೆ ಎಂಬ ಪತ್ತುಗೆ ಒಟ್ಟು ಅಂಬು ಎಂಬ ಹೆಸರುಪದಕ್ಕೂ ಮರುೞ್ಚು ಎಂಬ ಎಸಕಪದಕ್ಕೂ ನಡುವಿರುವ ಪತ್ತುಗೆಯನ್ನು ‘ಮರುಳುಗೊಳಿಸುವ ಎಸಕಕ್ಕೆ ಅಂಬು ಒಂದು ಮುಟ್ಟು(ಕರಣ)ವಾಗಿದೆ’ ಎಂಬುದಾಗಿ ತಿಳಿಸುತ್ತದೆ).
ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸುವಲ್ಲಿ ಸಂಸ್ಕ್ರುತ ಹಳೆಗನ್ನಡಕ್ಕಿಂತ ಒಂದು ಮುಕ್ಯ ವಿಶಯದಲ್ಲಿ ಬೇರಾಗಿದೆ: ಅದರ ಹೆಸರುಪದಗಳ ಬಳಿಕ ಅವುಗಳ ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸಲು ಒಂದೇ ಒಟ್ಟನ್ನು ಬಳಸಲಾಗುತ್ತದೆ; ನದೀಭಿಃ ಎಂಬ ಪದರೂಪದಲ್ಲಿ ನದೀ ಎಂಬುದು ಹೆಸರುಪದ; ಅದರ ಬಳಿಕ ಭಿಃ ಎಂಬ ಒಂದು ಒಟ್ಟು ಮಾತ್ರ ಬಂದಿದ್ದು, ಅದು ಪತ್ತುಗೆ (ತ್ರುತೀಯಾ) ಮತ್ತು ಎಣಿಕೆ(ಬಹುವಚನ)ಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ; ನದೀಷು ಎಂಬ ಇನ್ನೊಂದು ಪದರೂಪದಲ್ಲಿ ಷು ಎಂಬ ಬೇರೊಂದು ಒಟ್ಟನ್ನು ಬಳಸಲಾಗಿದ್ದು, ಅದು ಸಪ್ತಮೀ ವಿಬಕ್ತಿ ಮತ್ತು ಬಹುವಚನಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ. ಹಳೆಗನ್ನಡದ ಹಾಗೆ ಇಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಬೇರ್ಪಡಿಸಿ ಎರಡು ಒಟ್ಟುಗಳಾಗಿ ತೋರಿಸಲು ಬರುವುದಿಲ್ಲ.
ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸದಿಂದಾಗಿ ಅವುಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳು ಮೂಡಿಬಂದಿವೆ:
(ಕ) ಹಳೆಗನ್ನಡದಲ್ಲಿ ಹೆಸರುಪದಗಳಿಗೂ ಎಸಕಪದಕ್ಕೂ ನಡುವಿರುವ ಸಂಬಂದ ಎಂತಹದು ಎಂಬುದು ಗೊತ್ತಾಗದಿರುವಲ್ಲಿ ಮಾತ್ರ ಪತ್ತುಗೆ ಒಟ್ಟನ್ನು ಬಳಸಿದರೆ ಸಾಕು; ಉಳಿದೆಡೆಗಳಲ್ಲಿ ಅದನ್ನು ಬಳಸದಿರಲು ಬರುತ್ತದೆ.
ಎತ್ತುಗೆಗಾಗಿ, ಎಸಕದ ಮಾಡುಗನನ್ನು ತಿಳಿಸುವ ಹೆಸರುಪದದೊಂದಿಗೆ ಯಾವ ಪತ್ತುಗೆ ಒಟ್ಟನ್ನೂ ಬಳಸಬೇಕಾಗಿಲ್ಲ; ಯಾಕೆಂದರೆ, ಎಸಕದ ಈಡು, ಜಾಗ, ಗುರಿ ಮೊದಲಾದ ಉಳಿದ ಪಾಂಗುಗಳನ್ನು ತಿಳಿಸಲು ಅಂ, ಒಳ್, ಗೆ ಮೊದಲಾದ ಪತ್ತುಗೆ ಒಟ್ಟುಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದೂ ಬಾರದಿರುವಲ್ಲಿ ಮಾಡುಗನನ್ನೇ ತಿಳಿಸಲಾಗಿದೆ ಎಂಬುದು ಗೊತ್ತಾಗುತ್ತದೆ.
(ಚ) ಹಳೆಗನ್ನಡದಲ್ಲಿ ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ತಿಳಿಸಬೇಕಾಗಿರುವಲ್ಲಿ ಮಾತ್ರ ಹಲವೆಣಿಕೆಯ ಗಳು ಇಲ್ಲವೇ ರು ಒಟ್ಟನ್ನು ಬಳಸಿದರೆ ಸಾಕು; ‘ಒಂದು’ ಎಂಬ ಹುರುಳು ಬರುವಲ್ಲಿ, ಇಲ್ಲವೇ ಎಣಿಕೆಯನ್ನು ಕಚಿತವಾಗಿ ತಿಳಿಸಬೇಕೆಂದಿಲ್ಲದಲ್ಲಿ ಎಣಿಕೆಯ ಒಟ್ಟನ್ನು ಬಳಸಬೇಕಾಗಿಲ್ಲ.
ಸಂಸ್ಕ್ರುತದಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಒಂದೇ ಒಟ್ಟು ತಿಳಿಸುವ ಕಾರಣ, ಪತ್ತುಗೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಎಣಿಕೆಯನ್ನು ತಿಳಿಸುವುದಕ್ಕಾಗಿ, ಮತ್ತು ಎಣಿಕೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಪತ್ತುಗೆಯನ್ನು ತಿಳಿಸುವುದಕ್ಕಾಗಿ ಎಣಿಕೆ-ಪತ್ತುಗೆ ಒಟ್ಟನ್ನು ಬಳಸಬೇಕಾಗುತ್ತದೆ. ಹಾಗಾಗಿ, ಹೆಸರುಪದಗಳ ಎಲ್ಲಾ ಬಳಕೆಗಳಲ್ಲೂ ಅವುಗಳೊಂದಿಗೆ 21 ಎಣಿಕೆ-ಪತ್ತುಗೆ ಒಟ್ಟುಗಳಲ್ಲಿ ಒಂದನ್ನು ಬಳಸಲೇಬೇಕಾಗುತ್ತದೆ.
ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಬಹುದು ಇಲ್ಲವೇ ಇರಬೇಕು ಎಂಬ ಅನಿಸಿಕೆಯ ಮೇಲೆ ಅದು ಹಳೆಗನ್ನಡದ ಮೇಲೆ ಕಟ್ಟಲೆಗಳನ್ನು ಹೇರುತ್ತದೆ. ಎತ್ತುಗೆಗಾಗಿ, ಹೆಸರುಪದಗಳ ಬಳಿಕ ಬರುವ ಎಣಿಕೆ ಒಟ್ಟು ಮತ್ತು ಪತ್ತುಗೆ ಒಟ್ಟು ಎಂಬ ಎರಡು ಒಟ್ಟುಗಳಲ್ಲಿ ಪತ್ತುಗೆ ಒಟ್ಟನ್ನು ಮಾತ್ರ ಪ್ರತ್ಯಯವೆಂದು ಕರೆದು, ಎಣಿಕೆ ಒಟ್ಟನ್ನು ಅದರ ಮೊದಲು ಬರುವ ‘ಆಗಮ’ವೆಂದು ಕರೆಯಲಾಗಿದೆ.
ಸಂಸ್ಕ್ರುತದಲ್ಲಿರುವ ಹಾಗೆ, ಹಳೆಗನ್ನಡದಲ್ಲೂ ಅದು ಮೊದಲನೆಯ (ಪ್ರತಮಾ) ವಿಬಕ್ತಿಯನ್ನು ಕಾಣಲು ಪ್ರಯತ್ನಿಸುತ್ತದೆ; ಎತ್ತುಗೆಗಾಗಿ, ಅರಸಂ ಎಂಬುದರ ಕೊನೆಯಲ್ಲಿ ಬರುವ o ಇಲ್ಲವೇ ಮ್ ಎಂಬುದನ್ನು ಮೊದಲನೆಯ ವಿಬಕ್ತಿಯ ಒಟ್ಟು ಎಂಬುದಾಗಿ ಹೇಳಲಾಗಿದೆ; ಆದರೆ, ಈ o ಎಂಬುದು ಅರಸಂಗೆ ಎಂಬ ಬೇರೊಂದು (ಚತುರ್ತೀ) ವಿಬಕ್ತಿಯ ರೂಪದಲ್ಲೂ ಬರುವುದು, ಪುಲ್, ಬಳ್ಳಿ, ಎರಲೆ ಮೊದಲಾದ ಅಕಾರವನ್ನು ಹೊರತುಪಡಿಸಿ ಬೇರೆ ತೆರೆಯುಲಿ(ಸ್ವರ)ಗಳಲ್ಲಿ ಕೊನೆಗೊಳ್ಳುವ ಪದಗಳ ಕೊನೆಯಲ್ಲಿ ಬಾರದಿರುವುದು, ಅರಸನಿಂ, ಅರಸನೊಳ್ ಎಂಬಂತಹ ಪದರೂಪಗಳಲ್ಲಿ ನಕಾರವಾಗಿ ಬರುವುದು ಮೊದಲಾದ ಹಲವಾರು ಬಿಡಿಸಲಾರದ ಸಮಸ್ಯೆಗಳಿಗೆ ಇದು ದಾರಿಮಾಡಿದೆ.
ಎಸಕದ ಈಡನ್ನು ತಿಳಿಸುವ ಅಂ ಒಟ್ಟನ್ನೂ ಮನುಶ್ಯರನ್ನು ಗುರುತಿಸುವ ಹೆಸರುಪದಗಳನ್ನು ಹೊರತುಪಡಿಸಿ ಬೇರೆ ಹೆಸರುಪದಗಳ ಬಳಿಕ ಹಳೆಗನ್ನಡದಲ್ಲಿ ಬಳಸಲೇಬೇಕೆಂದಿಲ್ಲ (ಪಾಲಂ ಕುಡಿದಂ, ಪಾಲ್ಕುಡಿದಂ; ಬಳೆಯಂ ತೊಟ್ಟಂ, ಬಳೆದೊಟ್ಟಂ); ಇಂತಹ ಸೊಲ್ಲುಗಳಲ್ಲಿ ಕುಡಿದುದು ಹಾಲನ್ನು, ಮತ್ತು ತೊಟ್ಟುದು ಬಳೆಯನ್ನು ಎಂಬ ಹುರುಳು ಅಂ ಒಟ್ಟನ್ನು ಬಳಸದಿದ್ದರೂ ಗೊತ್ತಾಗುತ್ತದೆ ಎಂಬುದೇ ಆ ರೀತಿ ಅದನ್ನು ಬಳಸದಿರುವುದಕ್ಕೆ ಕಾರಣ. ಇದನ್ನು ಗಮನಿಸದ ಶಬ್ದಮಣಿದರ್ಪಣ ಇಂತಹ ಕಡೆಗಳಲ್ಲಿ ಕ್ರಿಯಾಸಮಾಸ ಎಂಬ ಬೇರೊಂದು ಬಗೆಯ ಸಮಾಸವಾಗಿದೆ ಎಂಬ ವಿಚಿತ್ರವಾದ ಹೇಳಿಕೆಯನ್ನು ಕೊಡುತ್ತದೆ. ಈ ಹೇಳಿಕೆ ಅದಕ್ಕಿಂತ ಮೊದಲು ಕೊಟ್ಟಿರುವ ಸಮಾಸದ ವರ್ಣನೆಗೂ (ನಾಮಪದಂಗಳ್ ಅರ್ತದೊಳ್ ಅನುಗತಮಾಗೆ ಸಮಾಸಂ ಗಟಿಸುಗುಂ ಎಂಬುದಕ್ಕೂ) ಹೊರಪಡಿಕೆಯಾಗುತ್ತದೆ; ಯಾಕೆಂದರೆ, ಬಳೆದೊಟ್ಟಂ ಎಂಬುದರಲ್ಲಿ ಬಂದಿರುವ ಎರಡನೆಯ ಪದ (ತೊಟ್ಟಂ ಎಂಬುದು) ನಾಮಪದವಲ್ಲ.
ಇಂತಹ ಬೇರೆಯೂ ಹಲವು ಸಮಸ್ಯೆಗಳು ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದುದರಿಂದಾಗಿ ಶಬ್ದಮಣಿದರ್ಪಣದಲ್ಲಿ ತುಂಬಿಕೊಂಡಿವೆ.
(ಮುಂದಿನ ವಾರ ಮುಂದುವರೆಯಲಿದೆ…)
1 Response
[…] […]