ನಾಡಿನಲ್ಲಿ ರಾಜಕೀಯದ ಹೊಸ ಗಾಳಿ
ಕರ್‍ನಾಟಕದ ಮಟ್ಟಿಗೆ ಹೊಸದೊಂದು ರಾಜಕೀಯ ಗಾಳಿ ಬೀಸುವ ಮುನ್ಸೂಚನೆ ಕಾಣಿಸುತ್ತಿದೆ! ಎಲ್ಲೂ ಪ್ರಚಾರಕ್ಕೆ ಸಿಗದೆ ಈ ಬೆಳವಣಿಗೆ ಒಳಗೊಳಗೆ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ. ಇದೇನು ಹೊಸ ಹೊಳಹು ಅಲ್ಲದಿದ್ದರೂ, ಈ ಸಾರಿ ಹಿಂದಿಗಿಂತ ಹೆಚ್ಚಿನ ಗೆಲುವು ಹಾಗೂ ಒಲವು ಪಡೆಯುವ ಲಕ್ಶಣಗಳು ಕಾಣಿಸುತ್ತಿವೆ. ವಿಶಯ ಏನು ಅಂದ್ರಾ? ಸುದ್ದಿಹಾಳೆಗಳು ಹಾಗೂ ಮಾದ್ಯಮದಲ್ಲಿ ಈಗಾಗಲೇ ಮೆಲ್ಲಗೆ ಸದ್ದು ಮಾಡುತ್ತಿರುವ, ಕರ್‍ನಾಟಕದಲ್ಲಿ ನೆಲೆಗಾಣಲು ಹೊರಟಿರುವ ಮೂರನೇ ವೇದಿಕೆ! ಹವ್ದು, ಕರ್‍ನಾಟಕದ ಪ್ರಾದೇಶಿಕ ಪಕ್ಶಗಳಾಗಿರುವ ಜೆ.ಡಿ.ಎಸ್, ಕೆ.ಜೆ.ಪಿ ಹಾಗೂ ಬಿ.ಎಸ್.ಆರ್ ಪಕ್ಶಗಳು ಒಟ್ಟಿಗೆ ಸೇರಿ ಮುಂದೆ ಬರಲಿರುವ ಲೋಕಸಬೆ ಚುನಾವಣೆಗೆ ಒಟ್ಟಿಗೆ ಸ್ಪರ್‍ದಿಸುವ ಮಾತುಕತೆ ನಡೆಯುತ್ತಿದೆ.
ಇವರಿಂದ ಕರ್‍ನಾಟಕಕ್ಕೆ ಏನುಪಯೋಗ?
ಮೊದಲನೆಯದಾಗಿ ಈ ತರಹ ಒಂದು ಪ್ರಯೋಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಕುಶಿಯ ವಿಚಾರವೇ ಹವ್ದು. ಏಕೀಕರಣವಾದಾಗಿನಿಂದ ಕರ‍್ನಾಟಕವನ್ನು ಹೆಚ್ಚಾಗಿ ಆಳುತ್ತಾ ಬಂದಿರುವ ಕಾಂಗ್ರೆಸ್ ಪಕ್ಶವಾಗಲಿ, ಅತವಾ ಹೋದ ಸಾರಿ ಸರ್‍ಕಾರ ಮಾಡಿದ್ದ ಬಿಜೆಪಿ ಪಕ್ಶವಾಗಲಿ ತಮ್ಮ ನಿಶ್ಟೆ ಯಾವತ್ತಿಗಿದ್ದರೂ ಹಯ್ಕಮಾಂಡಿಗೆನೇ ಅನ್ನೋದನ್ನು ಪದೇ ಪದೇ ಸಾಬೀತು ಮಾಡುತ್ತಲೇ ಬಂದಿವೆ. ದೆಹಲಿ ಹೆಡ್ಡಾಪೀಸಿನಿಂದ ಬರುವ ಆದೇಶವನ್ನು ತಲೆ ಮೇಲೆ ಹೊತ್ತು ಮಾಡುವ ಕೆಲಸದಾಳುಗಳಂತೆಯೇ ಕರ‍್ನಾಟಕದ ವಿಶಯದಲ್ಲಿ ಈ ಪಕ್ಶಗಳು ನಡೆದುಕೊಳ್ಳುತ್ತಾ ಬಂದಿವೆ.
ನದಿ ನೀರು ಹಂಚಿಕೆ, ಗಡಿ ವಿವಾದ, ಕಲಿಕೆ, ಹಣಕಾಸು, ರಯ್ಲು, ಹೆದ್ದಾರಿ, ಮಿಂಚು (ವಿದ್ಯುತ್), ಕೇಂದ್ರದ ಯೋಜನೆಗಳು, ಬರಪರಿಹಾರ ಹೀಗೆ ಹಲವಾರು ವಿಶಯಗಳಲ್ಲಿ ಸ್ಪಶ್ಟವಾದ ನಿಲುವಿಲ್ಲದೇ, ನಾಡಿನ ಪರವಾಗಿ ನಿಲ್ಲದೇ, ಹಯ್ಕಮಾಂಡ್ ಹೇಳಿದಂತೆ ಕೇಳಿಕೊಂಡು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹವ್ದೋ ಅಲ್ಲವೋ ಅನ್ನುವ ಹಾಗೆ ಕೆಲಸಗಳನ್ನ ಮಾಡುತ್ತಾ ಬಂದಿವೆ. ಮುಂದೆಯೂ ಕೂಡ ಇವುಗಳಿಂದ ನಾಡಿಗೆ ಒಳಿತಾಗುವುದನ್ನು ಬಯಸುವುದು ಹುಚ್ಚುತನವಾದೀತು ಅಂತ ಅನ್ನಿಸುತ್ತದೆ. ಹುಸಿ ರಾಶ್ಟ್ರೀಯತೆಯಿಂದ ಬಳಲುತ್ತಿರುವ ಈ ಪಕ್ಶಗಳ ಸಿದ್ದಾಂತದಲ್ಲೇ ಕೊರತೆಗಳು ಎದ್ದು ಕಾಣುತ್ತವೆ! ಈ ಎರಡು ಪಕ್ಶಗಳನ್ನು ನೋಡಿ ಸೋತಿರುವ ಕನ್ನಡಿಗರಿಗೆ ಪ್ರಾದೇಶಿಕ ಚಿಂತನೆಯುಳ್ಳ ಪಕ್ಶ ಒಂದು ಪರಿಹಾರ ಆಗಬಲ್ಲದು.
ಬಲಗೊಳ್ಳುತ್ತಿರುವ ಪ್ರಾದೇಶಿಕತೆ!
ಇಲ್ಲಿಯವರೆಗೂ ಕರ್‍ನಾಟಕದಲ್ಲಿ ಪ್ರಾದೇಶಿಕ ಪಕ್ಶಗಳಿಗೆ ಬೆಲೆಯಿಲ್ಲ ಎಂದು ಹೇಳುತ್ತಲೇ ಬಂದಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳಿಗೆ ಕರ್‍ನಾಟಕದ ಮತದಾರರು ಈ ಬಾರಿ ಸಣ್ಣದೊಂದು ಶಾಕ್ ನೀಡಿರುವುದು ಸ್ಪಶ್ಟವಾಗಿದೆ. ಹೋದ ಸಾರಿ ಸರ್‍ಕಾರ ನಡೆಸುತ್ತಿದ್ದ ಬಿಜೆಪಿ ಪಕ್ಶ ಮೂರನೇ ಜಾಗಕ್ಕೆ ತಳ್ಳಲ್ಪಟ್ಟರೆ ಕಾವೇರಿ ವಿಶಯವನ್ನು ಪ್ರಮುಕವಾಗಿ ಇಟ್ಟುಕೊಂಡಿದ್ದ ಜೆಡಿಎಸ್ ಎರಡನೇ ಸ್ತಾನಕ್ಕೆ ಬಂದಿದೆ. ಇದರ ಜೊತೆಗೆ ಕೇವಲ ನಾಲ್ಕಾರು ತಿಂಗಳ ಹಿಂದೆ ಹುಟ್ಟುಹಾಕಲಾಗಿದ್ದ ಕೆಜೆಪಿ ಶೇ 10 ರಶ್ಟು ಮತಗಳನ್ನು ಪಡೆದಿದ್ದರೆ, ಬಿ.ಎಸ್.ಆರ್ ಸುಮಾರು ಶೇ 3 ರಶ್ಟು ಮತಗಳನ್ನು ಪಡೆದಿದೆ.
ಈ ಸಾರಿಯ ಕೆಜೆಪಿ ಹಾಗೂ ಬಿ.ಎಸ್.ಆರ್ ಪಕ್ಶಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ರಾಜ್ಯಕ್ಕೆ ಸೀಮಿತವಾಗಿರುವ ಸಮಸ್ಯೆಗಳ ಬಗ್ಗೆಯೇ ಮಾತನಾಡಲಾಗಿತ್ತು. ಜೆ.ಡಿ.ಎಸ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಕುತೂಹಲಕರ ಅಂಶವೆಂದರೆ ರಾಜ್ಯದ ಪ್ರಾದೇಶಿಕ ಪಕ್ಶಗಳ ಒಟ್ಟು ಶೇಕಡಾ ಮತಗಳು ಈಗ ಸರ್‍ಕಾರ ನಡೆಸುತಿರುವ ಕಾಂಗ್ರೆಸ್ ಪಕ್ಶಕ್ಕೆ ಹತ್ತಿರವಾಗಿದೆ! ಇದರರ್‍ತ ಜನರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಪಕ್ಶಗಳು ಬೇಕಾಗಿದೆ. ಇಲ್ಲಿಯವರೆಗೂ ನಿನ್ನ ಬಿಟ್ರೆ ನಾನು, ನನ್ನ ಬಿಟ್ರೆ ನೀನು ಅಂತ ಬೀಗುತ್ತಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳಿಗೆ ಸರಿಯಾದ ಚಾಟಿಯೇಟು ಬಿದ್ದಿದೆ.
ಮೂರನೇ ವೇದಿಕೆ ಸಹಾಯ ಮಾಡಬಲ್ಲುದೇ?
ಕಂಡಿತವಾಗಿಯೂ ಈ ಮೂರನೇ ವೇದಿಕೆ ಹಲವು ಹಂತಗಳಲ್ಲಿ ರಾಜ್ಯಕ್ಕೆ ಒಳಿತನ್ನು ಮಾಡುವ ಶಕ್ತಿಯನ್ನು ಹೊಂದಿದೆ. ಹೇಗೆಂದರೆ, ಮೊದಲನೆಯದಾಗಿ ಪ್ರಾದೇಶಿಕ ಪಕ್ಶಗಳು ಆರಿಸಿಕೊಳ್ಳುವ ಸ್ತಳೀಯ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಓಟು ತಂದುಕೊಡಬಹುದು! ಈ ಪ್ರಾದೇಶಿಕ ಪಕ್ಶಗಳಿಗೆ ಓಟು ಹೋಗದಿರಲು ರಾಶ್ಟ್ರೀಯ ಪಕ್ಶಗಳು ಬೇಕೋ ಬೇಡವೋ ತಮ್ಮ ಪ್ರಣಾಳಿಕೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಬೇಕಾಗುತ್ತದೆ ಹಾಗೂ ಗೆದ್ದರೆ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಪ್ರಾದೇಶಿಕ ಪಕ್ಶಗಳು ಹೆಚ್ಚಿನ ಸೀಟುಗಳನ್ನು ಗೆದ್ದಲ್ಲಿ, ದೆಹಲಿಯಲ್ಲಿ ಪ್ರಮುಕ ಪಾತ್ರ ವಹಿಸುತ್ತವೆ. ಒಂದು ವೇಳೆ ಸೀಟುಗಳನ್ನು ಗೆಲ್ಲದೆ, ಹೆಚ್ಚಿನ ಮಟ್ಟದಲ್ಲಿ ಓಟುಗಳನ್ನು ಪಡೆದುಕೊಂಡರೆ, ಒಂದು ಕಡೆ ರಾಶ್ಟ್ರೀಯ ಪಕ್ಶಗಳಿಗೆ ಎಚ್ಚರಿಕೆಯ ಗಂಟೆಯಾದರೆ, ಇನ್ನೊಂದೆಡೆ ಪ್ರಾದೇಶಿಕ ಪಕ್ಶಗಳಿಗೆ ಸ್ತಳೀಯವಾಗಿ ಕೆಲಸ ಮಾಡಲು ಹೆಚ್ಚಿನ ಹುರುಪು ಕೊಡುತ್ತದೆ! ಒಂದು ಆರೋಗ್ಯಕರ ಪಯ್ಪೋಟಿಯನ್ನು ಈ ಏರ‍್ಪಾಡು ಹುಟ್ಟುಹಾಕಬಲ್ಲದು.
ಈಗಾಗಲೇ ನೆರೆಯ ತಮಿಳುನಾಡು, ಓಡಿಶಾ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಶಗಳು ದೆಹಲಿಯಲ್ಲಿ ಪ್ರಬಾವ ಬೀರಿ ತಮ್ಮ ರಾಜ್ಯಕ್ಕೆ ಬೇಕಾಗಿರುವ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾ ಬಂದಿವೆ. ಪ್ರಾದೇಶಿಕವಾದ ಚಿಂತನೆ ಇಟ್ಟುಕೊಂಡಿರುವ ಈ ಪಕ್ಶಗಳು ಆಯಾ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಮಣ್ಣುಮುಕ್ಕಿಸುತ್ತಿವೆ. ಇಂತಹದೊಂದು ಪಕ್ಶ ನಮ್ಮ ನಾಡಿನಲ್ಲೂ ಬೇಕಾಗಿದೆ.
ಆಗಲೇ ಬೇಕಾಗಿರುವ ಕೆಲಸವಿದು
ನಿಜಕ್ಕೂ ಈ ಚಿಂತನೆ ಕರ್‍ನಾಟಕಕ್ಕೆ ಒಳಿತನ್ನು ಮಾಡಬಲ್ಲದು. ಇವತ್ತಿನ ಮಟ್ಟಿಗೆ ಮೇಲೆ ಹೇಳಿದ ಹಾಗೆ ಕರ್‍ನಾಟಕದಲ್ಲಿ ಒಂದೇ ಪಕ್ಶ ಗಟ್ಟಿಯಾಗಿ ನಾಡಿನಾದ್ಯಂತ ತನ್ನ ಮತದಾರರನ್ನು ಹೊಂದಿಲ್ಲ. ಆದರೆ ಹಳೆ ಮಯ್ಸೂರು ಬಾಗದಲ್ಲಿ ಜೆಡಿಎಸ್, ಉತ್ತರ ಕರ್‍ನಾಟಕದಲ್ಲಿ ಕೆ.ಜೆ.ಪಿ ಹಾಗೂ ಹಯ್ದರಾಬಾದ್ ಕರ್‍ನಾಟಕದಲ್ಲಿ ಬಿ.ಎಸ್.ಆರ್ ತನ್ನದೇ ಆದ ಪ್ರಬಾವವನ್ನು ಹೊಂದಿದೆ. ಈ ಮೂರು ಪಕ್ಶಗಳು ಸೇರಿದರೆ ಹೆಚ್ಚಿನ ಸೀಟುಗಳನ್ನು ಗೆಲ್ಲಬಹುದು. ಇವತ್ತು ಬಿಡಿ ಬಿಡಿಯಾಗಿ ಈ ಪಕ್ಶಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಎದುರಿಸುವುದು ಕಶ್ಟದ ಕೆಲಸ, ಹಾಗಾಗಿ ಇವರುಗಳ ಕೂಡಿಕೆ ಒಂದು ಒಳ್ಳೆಯ ಹೆಜ್ಜೆಯೇ ಆಗಿದೆ!
ಈಗಾಗಲೇ ರಾಶ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಪಕ್ಶಗಳ ಹಿಡಿತ, ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಪಕ್ಶಗಳಿಗೆ ಚುರುಕನ್ನು ಮುಟ್ಟಿಸುತ್ತಿವೆ. ಇಂತಹ ಸಮಯದಲ್ಲಿ ಕರ್‍ನಾಟಕದಿಂದ ಈ ಪಕ್ಶಗಳ ಕಯ್ ಜೋಡಿಸುವಿಕೆಯಿಂದ ಹೆಚ್ಚಿನ ಸೀಟುಗಳು ಗೆದ್ದುಬರಬೇಕು, ಸಮರ್‍ತವಾಗಿ ನಮ್ಮ ರಾಜ್ಯವನ್ನು ದೆಹಲಿಯಲ್ಲಿ ಪ್ರತಿನಿದಿಸುವಂತೆ ಆಗಬೇಕು. ಒಕ್ಕೂಟ ವ್ಯವಸ್ತೆಯ ಈ ದೇಶದಲ್ಲಿ ಪ್ರತಿ ರಾಜ್ಯಕ್ಕೂ ತನಗೆ ಸಿಗಬೇಕಾಗಿರುವ ಸ್ವಾಬಾವಿಕ ಹಕ್ಕುಗಳು ದೊರೆಯುವಂತಾಗಬೇಕು.
ಚಿತ್ರ: www.thehindu.com
1 Response
[…] ಹೋದ ಬರಹದಲ್ಲಿ ನಮ್ಮ ರಾಜ್ಯದ ರಾಜಕೀಯದಲ್ಲಿ ಬೀಸುತ್ತಿರುವ ಹೊಸ ಗಾಳಿ ಹಾಗೂ ಅದು ತರಬಹುದಾದ ಲಾಬದ ಬಗ್ಗೆ ಮಾತನಾಡಿದ್ದೆ. ಈಗ ಬಂದಿರುವ ಮತ್ತೊಂದು ಸುದ್ದಿಯೆಂದರೆ ಬಾರತ ವಿವಿದ ರಾಜ್ಯದ ರಾಜಕೀಯ ಪಕ್ಶಗಳು ಸೇರಿ ರಾಶ್ಟ್ರಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶವನ್ನು ಹೊರಗಿಟ್ಟು ಮೂರನೇ ವೇದಿಕೆ ಕಟ್ಟಲು ಹೊರಟಿರುವುದು. ಪಶ್ಚಿಮ ಬಂಗಾಳದ ಮುಂದಾಳಾಗಿರುವ ಶ್ರೀ ಮಮತಾ ಬ್ಯಾನರ್‍ಜೀ ಅವರ ಮುಂದಾಳ್ತನದಲ್ಲಿ ಹುಟ್ಟುಹಾಕಲು ಹೊರಟಿರುವ ಮೂರನೇ ವೇದಿಕೆಗೆ ತಕ್ಕ ಹೆಸರನ್ನೇ ಇಡಲಾಗಿದೆ. ಈ ವೇದಿಕೆಯ ಹೆಸರು “ಒಕ್ಕೂಟ ವೇದಿಕೆ” (Federal Front)! […]