ಮುಪ್ಪಿಗೆ ’ಮದ್ದು’: ಪಾರ‍್ಕಿನ್
ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ ಆಗದ ಮಾತು ಆದರೆ ಮುಪ್ಪಿನೆಡೆಗೆ ಹೊಗುವುದನ್ನು ನಿದಾನಿಸಬಹುದು ಎಂದು ಹೇಳುತ್ತದೆ ಇಲ್ಲೊಂದು ಅರಿಗರ ಗುಂಪು.
ಪಾರ‍್ಕಿನ್ ಎಂಬುದು ಮನುಶ್ಯರಲ್ಲಿ ಕಂಡುಬರುವ ಮುನ್ನು (ಪ್ರೋಟಿನ್). ಇದರ ಕುರಿತು ಎಲ್ಲ ವಿಶಯಗಳು ಅರಿಗರಿಗೆ ಇನ್ನೂ ತಿಳಿದಿಲ್ಲವಾದರೂ ಪಾರ‍್ಕಿನ್ ಮುನ್ನು ಸರಿಯಾಗಿದ್ದರೆ ಮುದಿತನವನ್ನು ದೂರ ಸರಿಸಬಹುದು ಅನ್ನುವಂತ ವಿಶಯ ಇತ್ತೀಚಿಗೆ ನಡೆದ ಅರಕೆಯಿಂದ ತಿಳಿದುಬಂದಿದೆ. ಪಾರ‍್ಕಿನ್ ಮತ್ತು ಮುದಿತನದ ಈ ಹೊಸ ಅರಕೆಯ ಕುರಿತು ತಿಳಿಯುವುದರ ಜೊತೆಗೆ ಇದಕ್ಕೆ ಹೊಂದಿಕೊಂಡ ಮನುಶ್ಯರ ಸೂಲುಗೂಡಿನ (cell) ಬಾಗಗಳು ಮತ್ತು ಅವುಗಳ ಕೆಲಸದ ಬಗ್ಗೆ ತಿಳಿದುಕೊಳ್ಳೋಣ.
ಮುಪ್ಪು ಮತ್ತು ಮುನ್ನು (protein) ಮಡಚುವಿಕೆಯ ನಂಟು :
ಸೂಲುಗೂಡಿನಲ್ಲಿ ಯಾವುದೇ ಮುನ್ನನ್ನು (protein) ತಯಾರಿಸಲು ಅದಕ್ಕೆ ಸಂಬಂದಿಸಿದ ಪೀಳಿಗಳು (genes/DNA) ಮುನ್ನು ಮಾಡುವ ಅಪ್ಪಣೆಯನ್ನು ಕೊಡಬೇಕು. ಪೀಳಿಗಳ ಓಲೆಗಾರನಂತೆ ಕೆಲಸ ಮಾಡುವ mRNA, ಈ ಸೂಚನೆಯನ್ನು ನಡುವಿಟ್ಟಳದಿಂದ (nucleus) ಸೂಲುಗೂಡಿನಕಟ್ಟಿನಲ್ಲಿರುವ (cytoplasm) ಮುನ್ನುಮಾಡುಗಕ್ಕೆ (ribosome) ಸಾಗಿಸುತ್ತದೆ. mRNA ಜೊತೆಗೂಡಿದ ಮುನ್ನು ಮಾಡುಗ ಒರಟು ಪೊರೆ-ನೆಲುವಿನ ಮೇಲೆ ನೆಲಸಿ, ಮುನ್ನು ತಯಾರಿಸುವ ಕೆಲಸದಲ್ಲಿ ತೊಡಗುತ್ತದೆ.
ಚಿತ್ರ-1: ಸೂಲುಗೂಡಿನ (cell) ಬಾಗಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಉಸಿರುಗದ (organism) ಸೂಲುಗೂಡಿನ ಸೀಳು ನೋಟವನ್ನು (cross section) ತೋರಿಸಲಾಗಿದೆ.
mRNA ಯಲ್ಲಿರುವ ಪೀಳಿಯ ಸೂಚನೆಯ ಆದಾರದ ಮೇಲೆ, ಮುನ್ನುಮಾಡುಗ ಮುನ್ನನ್ನು ತಯಾರಿಸುತ್ತಿದ್ದರೆ, ತಯಾರಿಸಿದ ಮುನ್ನು, ಒರಟು ಪೊರೆ-ನೆಲುವನ್ನು ಹೊಕ್ಕುತ್ತದೆ. ಒರಟು ಪೊರೆ-ನೆಲುವಿನಲ್ಲಿ, ಮುನ್ನು ಸರಿಯಾಗಿ ಕೆಲಸ ಮಾಡಲು ಬೇಕಾದ ಮುನ್ನು ಮಡಚುವಿಕೆ (protein folding) ಮಾರ‍್ಪಾಡುಗಳು ನಡೆಯುತ್ತವೆ. ಮುನ್ನು ತಯಾರಿಸುವ ಈ ಎಲ್ಲ ಹಂತಗಳು ಸರಿಯಾಗಿ ನಡೆದರೆ, ಚಿತ್ರ-2 ರಲ್ಲಿ ತೋರಿಸಿರುವಂತೆ ಮುನ್ನು ಒರಟು ಪೊರೆ-ನೆಲುವಿನಿಂದ ಹೊರಬಂದು, ಸೂಲುಗೂಡಿನಕಟ್ಟಿನಲ್ಲಿ ತಾನಿರಬೇಕಾದ ನೆಲೆಯನ್ನು ತಲುಪುತ್ತದೆ ಹಾಗು ತನ್ನ ಕೆಲಸವನ್ನು ಮಾಡುತ್ತದೆ.
ಚಿತ್ರ-2: ಮುನ್ನು (protein) ತಯಾರಿಸುವ ವೇಳೆ ಒರಟು ಪೊರೆ-ನೆಲುವಿನ (rough endoplasmic reticulum) ಮೇಲೆ ಜರುಗುವ ಹಮ್ಮುಗೆಯ (process) ವಿವರಣೆ.
ಪೀಳಿಗಳ ಅಪ್ಪಣೆ ಇಂದ ಹಿಡಿದು ಒರಟು ಪೊರೆ-ನೆಲುವಿನಲ್ಲಿ ಮುನ್ನು ಮಡಚುವಿಕೆಯವರೆಗೂ ಯಾವುದೆ ಹಂತದಲ್ಲಿ ತೊಂದರೆಯಾದರೂ, ಹೊಸದಾಗಿ ಮಾಡಲ್ಪಡುವ ಮುನ್ನು, ಮಡಚುವಿಕೆ ಹಿಡಿತ ತಪ್ಪುತ್ತದೆ. ಒರಟು ಪೊರೆ-ನೆಲುವಿನ ಮೇಲೆ ಹಾಗು ಒಳಗೆ ನೆಲೆಸಿರುವ ಚಾಪಿರಾನ್ ಮಾರ‍್ಪಾಡು (Chaperone system), ತಪ್ಪಾಗಿ ಮಡಚಿದ ಮುನ್ನುಗಳನ್ನು ಮರುಮಡಚಲು ಪ್ರಯತ್ನಿಸುತ್ತದೆ. ಮುನ್ನುಗಳನ್ನು ಸರಿಯಾಗಿ ಮಡಚುವಲ್ಲಿ ಚಾಪಿರಾನ್ ಮಾರ‍್ಪಾಟು ಸೋತಲ್ಲಿ, ತಪ್ಪಾಗಿ ಮಡಚಿದ ಮುನ್ನುಗಳು ಒರಟು ಪೊರೆ-ನೆಲುವಿನಲ್ಲಿ ಶೇಕರಣೆಯಾಗುತ್ತವೆ. ಶೇಕರಣೆಯಾದ ಮುನ್ನುಗಳು, ಸೂಲುಗೂಡಿಗೆ ನಂಜನ್ನು ಉಂಟುಮಾಡುತ್ತವೆ.ಈ ಅನಾಹುತವನ್ನು ತಪ್ಪಿಸಲು ಯುಬಿಕ್ವಿಟಿನ್-ಪ್ರೋಟಿಯೋಸೋಮ್ ಏರ‍್ಪಾಟಿನಲ್ಲಿರುವ (ubiquitin-proteasome system) ಪಾರ‍್ಕಿನ್ ಪ್ರೋಟಿನ್ ನೆರವಾಗುತ್ತದೆ.
ಚಿತ್ರ-3: ಪಾರ‍್ಕಿನ್ ಕೊರತೆ ಇಂದ ಉಂಟಾಗುವ ಮುಪ್ಪು ಮತ್ತು ನರಸೊರೆತ (neurodegenerative disease)
ಪಾರ‍್ಕಿನ್ ಮುನ್ನಿನ ಮುಕ್ಯ ಕೆಲಸಗಳು:
- ತಪ್ಪಾಗಿ ಮಡಚಿದ ಮುನ್ನುಗಳು ಸೂಲುಗೂಡಿಗೆ (cell) ನಂಜುಂಟು ಮಾಡುವ ಮೊದಲು ಅವುಗಳನ್ನು ತೆಗೆದುಹಾಕುವುದು.
- ಕೆಟ್ಟಿರುವ ಪೊರೆ-ಕಿರುಬಿಡಿಗಳನ್ನು (mitochondria) ತೆಗೆದುಹಾಕುವುದು. ಯಾವುದೆ ಒಂದು ಉಸಿರುಗಕ್ಕೆ (organism) ವಯಸ್ಸಾದಂತೆ, ಪಾರ‍್ಕಿನ್ ಮುನ್ನುಗಳ ಹುರುಪು ಹಾಗು ಮೊತ್ತ ಕಡಿಮೆಯಾಗುತ್ತದೆ.ಇದರಿಂದ ಶೇಕರಣೆಗೊಂಡ ಓಜೆತಪ್ಪಿದ (abnormal) ಮುನ್ನುಗಳು ಸೂಲುಗೂಡಿಗೆ ಹಂತ-ಹಂತವಾಗಿ ಕೆಡುಕನ್ನು ಉಂಟು ಮಾಡುತ್ತವೆ. ವಯಸ್ಸಾಗುತ್ತಿದ್ದಂತೆ ಪೊರೆ-ಕಿರುಬಿಡಿಗಳ ಕೆಲಸ ಮಾಡುವ ವೇಗ ಕೂಡ ಇಳಿಮುಕವಾಗುತ್ತದೆ. ತಗ್ಗಿದ ಪೊರೆ-ಕಿರುಬಿಡಿಗಳ ಗೆಯ್ಮೆ ಅಲ್ಜಿಮರ‍್ಸ್ , ಪಾರ‍್ಕಿನ್ಸನ್ಸ್ ಮುಂತಾದ ನರ ಸೊರೆತದ (neurodegenerative) ಬೇನೆಗಳಿಗೆ ಹಾಗು ಮುಪ್ಪಿಗೆ ಕಾರಣವಾಗುತ್ತದೆ.
ಆರಯ್ಕೆಯ ಬಗೆ (Experimental method):
ವಾಲ್ಕರ್ ಮತ್ತು ಅವರ ತಂಡ ಪಾರ‍್ಕಿನ್ ಪ್ರೋಟಿನಿಂದ ಮುದಿತನವನ್ನು ನಿದಾನಿಸಬಹುದೆಂದು ತಿಳಿಸಲು ಡ್ರಾಸೋಪಿಲ ಎಂಬ ಹಣ್ಣಿನ ನೊಣದಲ್ಲಿ (fruit fly) ಪಾರ‍್ಕಿನ್ ಆಯುಸ್ಸನ್ನು ಹೇಗೆ ಹತೋಟಿಯಲ್ಲಿಡುತ್ತದೆ ಎಂಬುವುದನ್ನು ತಮ್ಮ ಆರಯ್ಕೆಯಲ್ಲಿ (experiment) ತೋರಿಸಿಕೊಟ್ಟಿದ್ದಾರೆ. ಚಿತ್ರ-4 ರಲ್ಲಿ ಮುಪ್ಪಾದ ಹಣ್ಣಿನ ಹುಳುವಿನ ಮಿದುಳಿನ ಸೀರುತೊರ‍್ಪಿನ (microscopic) ನೋಟವನ್ನು ತೋರಿಸಲಾಗಿದೆ.
ಚಿತ್ರ-4: ಮುಪ್ಪಾದ ಹಣ್ಣು ಹುಳುವಿನ (fruit fly/drosophila) ಮಿದುಳು ಸೀರುತೋರ‍್ಪಿನ (microscopic) ನೋಟ
ಪಾರ‍್ಕಿನ್ ಮೊತ್ತ ಹೆಚ್ಚಿರುವ ಮಿದುಳಿಗೆ ಹೋಲಿಸಿದರೆ, ಸಾಮಾನ್ಯ ಮಿದುಳಿನಲ್ಲಿ ಓಜೆತಪ್ಪಿದ ಮುನ್ನುಗಳು (ಹಸಿರ ಬಣ್ಣ) ಹೆಚ್ಚಾಗಿ ಶೇಕರಣೆಯಾಗಿರುವುದನ್ನು ಕಾಣಬಹುದು.ಸಾಮಾನ್ಯವಾಗಿ, ಡ್ರಾಸೋಪಿಲ ನೊಣಗಳು 50-60 ದಿನಗಳು ಬದುಕುತ್ತವೆ. ಹಣ್ಣಿನ ನೊಣದ ಸೂಲುಗೂಡಿನಲ್ಲಿ ಪಾರ‍್ಕಿನ್ ಮುನ್ನಿನ ಮೊತ್ತವನ್ನು ಹೆಚ್ಚಿಸಿದಾಗ, ಅವುಗಳ ಆಯುಸ್ಸು 25% ಹೆಚ್ಚಾಗುವುದು ಅರಕೆಯಲ್ಲಿ ಕಂಡುಬಂದಿತು. ಹೆಚ್ಚಿದ ಆಯುಶ್ಯದ ಅವದಿಯಲ್ಲಿ ಕೂಡ, ಈ ನೊಣಗಳು ಆರೋಗ್ಯವಾಗಿರುವುದರ ಜೊತೆಗೆ, ಉತ್ತಮವಾದ ಹೆರುವ ಮಟ್ಟ ಹಾಗು ಲವಲವಿಕೆಯನ್ನು ಕಾಯ್ದುಕೊಂಡವು.
ಪಾರ‍್ಕಿನ್ ಮುನ್ನು ಹೀಗೆ ಮುದಿತನ ತಡೆಗಟ್ಟುವಂತಾದರೆ ಅದರ ಕೊರತೆಯಿಂದಾಗಿ ಪಾರ‍್ಕಿನ್ಸನ್ಸ್ (parkinson’s) ನಂತಹ ನರಸೊರೆತದ (neurodegenerative) ಬೇನೆಗಳಿಗೆ ಎಡೆಮಾಡಿಕೊಡುತ್ತದೆ. ಪಾರ‍್ಕಿನ್ ಮುನ್ನಿನ ಮಟ್ಟವನ್ನು ಹೆಚ್ಚಿಸುವುದರಿಂದ, ಆಯುಸ್ಸಿನ ಜೊತೆಗೆ ನರಸೊರೆತದಂತಹ ಬೇನೆಗಳನ್ನು ದೂರವಿಡಬಹುದೆಂದು ಈ ಅರಿಗರ ತಂಡ ತಿಳಿಸಿದೆ.
ಸುದ್ದಿ ಸೆಲೆ:
- http://www.sciencedaily.com/releases/2013/05/130506181619.htm
- http://www.nature.com/scitable/content/protein-folding-14463077
- http://www.amorfix.com/technologies.php
??