ಆಟವನ್ನೇ ಪಾಟವಾಗಿಸಿಕೊಂಡ ಮಂಡೇಲಾ
– ರಗುನಂದನ್.
ಆಪ್ರಿಕಾ ಎಂಬುದು ಜಗತ್ತಿನ ದೊಡ್ಡ ಕಂಡಗಳಲ್ಲಿ ಒಂದು. ಈ ಕಂಡದ ಕೆಳಗಿನ ತುತ್ತತುದಿಯಲ್ಲಿರುವ ನಾಡು ತೆಂಕಣ ಆಪ್ರಿಕಾ. ಈ ತೆಂಕಣ ಆಪ್ರಿಕಾ ನೆಲ ತನ್ನ ಪಲವತ್ತಾದ ಹೊಲಗದ್ದೆಗಳು ಮತ್ತು ಅದಿರಿನ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಗಣಿಗಳು ವಜ್ರ ಮತ್ತು ಚಿನ್ನದಂತಹ ಬೆಲೆಬಾಳುವ ವಸ್ತುಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ.
ಇಂತಹ ಹೇರಳವಾದ ನೆಲವನ್ನು ಹೊಂದಿದ ತೆಂಕಣ ಆಪ್ರಿಕಾಗೆ ಯುರೋಪಿಯನ್ನರು (ಇಂಗ್ಲಿಶರು ಮತ್ತು ಡಚ್ಚರು) ಲಗ್ಗೆಯಿಟ್ಟರು. ಡಚ್ಚರು ಎರಡು ಪ್ರಾಂತ್ಯಗಳಾದ ಆರೆಂಜ್ ಪ್ರೀ ಸ್ಟೇಟ್ ಮತ್ತು ಟ್ರಾನ್ಸ್‌ವಾಲ್ ಅನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದವು. ಹದಿನೆಂಟನೇ ಶತಮಾನದ ಕೊನೆಯಲ್ಲಿ ತೆಂಕಣ ಆಪ್ರಿಕಾ ನೆಲದಲ್ಲಿ ವಜ್ರಗಳು ದೊರಕುತ್ತವೆ ಎಂಬುದು ತಿಳಿಯಿತು.
ಈ ಕಾರಣಕ್ಕಾಗಿ ಇಂಗ್ಲಿಶರ ಮತ್ತು ಡಚ್ಚರ ನಡುವೆ ತಿಕ್ಕಾಟ ಏರ‍್ಪಟ್ಟಿತು. ಈ ಕದನವನ್ನು ಬೂಅರ್ ಕಾಳಗ (Boer War) ಎಂದು ಕರೆಯುತ್ತಾರೆ. ಈ ತಿಕ್ಕಾಟದಲ್ಲಿ ಇಂಗ್ಲಿಶರು ಕೆಲವು ಬಾಗಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಬ್ರಿಟಿಶರ ಮತ್ತು ಡಚ್ಚರ ನಡುವಿನ ತಿಕ್ಕಾಟ ಸರಿಸುಮಾರು 1940ರ ವರೆಗೂ ನಡೆಯಿತು. ಆದರೆ ಮುಂದೆ ಆಳ್ವಿಕೆಯ ಸಲುವಾಗಿ ಎರಡೂ ಗುಂಪುಗಳು ಒಂದಾಗುತ್ತವೆ ಎಂಬುದನ್ನು ಕಾಣಬಹುದು.
1948ರ ಚುನಾವಣೆ
ಆಪ್ರಿಕಾನೇರ್ ನ್ಯಾಶನಲ್ ಪಾರ‍್ಟಿ(ANP) ಎಂಬ ಪಂಗಡವೊಂದು ತಳಿ-ತೆಗಳುವಿಕೆ(racial discrimination) ಯನ್ನೇ ಅಸ್ತ್ರವಾಗಿ ಬಳಸಿಕೊಂಡು 1948ರಲ್ಲಿ ನಡೆದ ಆಯ್ಕಳಿಯಲ್ಲಿ (election) ಗೆಲುವು ಸಾದಿಸಿತು. ಈ ಆಪ್ರಿಕಾನೇರ್ ಪಂಗಡವು ಹೆಚ್ಚಾಗಿ ಬಿಳಿಯರನ್ನೇ ಪ್ರತಿನಿದಿಸುತ್ತಿದ್ದ ಪಂಗಡವಾಗಿತ್ತು. ಮತ್ತೊಂದು ಆಪ್ರಿಕಾನೇರ್ ಪಂಗಡದ ಜೊತೆಗೂಡಿ 1948ರಲ್ಲಿ ಒಂದು ಆಳ್ವಿಕೆ(ಸರ‍್ಕಾರ)ಯನ್ನು ಉಂಟುಮಾಡಲಾಯಿತು.
ಈ ಬಿಳಿಯರ ಸರ‍್ಕಾರ ಕರಿಯರನ್ನು ಎಲ್ಲಾ ರಂಗಗಳಲ್ಲಿ ಬೇರೆ ಮಾಡಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲು ಮೊದಲುಮಾಡಿತು. ಇದಕ್ಕೆ ಅಪಾರ‍್ತೇಡ್(Apartheid) ಎಂದು ಹೆಸರಿಸಲಾಯಿತು. ಬಿಳಿಯರ ಆಳ್ವಿಕೆಯು ಅಪಾರ‍್ತೇಡ್ ಅನ್ನೇ ಒಂದು ರಾಶ್ಟ್ರೀಯ ನೀತಿಯಾಗಿ(national policy/ನಾಡಿನ-ಹಮ್ಮುಗೆ) ಮೇಲೇರಿಸಿತು. ಇದರ ಪರಿಣಾಮವಾಗಿ ಕರಿಯರು ಬಿಳಿಯರೊಡನೆ ಮದುವೆ ಆಗುವ ಹಾಗಿರಲಿಲ್ಲ ಮತ್ತು ಎಶ್ಟೊಂದು ಕೆಲಸಗಳು ಬರಿ ಬಿಳಿಯರಿಗೆ ಮಾತ್ರ ಮೀಸಲು ಇಡಲಾಯಿತು.
ಈ ಸರ‍್ಕಾರ ಮುಂದೆ 1950ರಲ್ಲಿ ಮಂದಿಯೆಣಿಕೆ ನೋಂದಣಿ ನಿಯಮವನ್ನು(Population Registration Act) ಜಾರಿಗೆ ತಂದಿತು. ಇದರ ಪ್ರಕಾರ ತೆಂಕಣ ಆಪ್ರಿಕಾದ ಮಂದಿಯನ್ನು ಮೂರು ಜನಾಂಗಗಳನ್ನಾಗಿ ವಿಂಗಡಿಸಲಾಯಿತು – ಬಿಳಿಯರು, ಕರಿಯರು ಮತ್ತು ಬಣ್ಣದವರು. ಬಿಳಿಯರ ಪಯ್ಕಿ ಡಚ್ಚರು ಮತ್ತು ಇಂಗ್ಲಿಶರು ಇದ್ದರು. ಕರಿಯರ ಪಯ್ಕಿ ಮೂಲನಿವಾಸಿಗಳಾದ ಬುಡಕಟ್ಟು ಆಪ್ರಿಕಾ ಮಂದಿ ಇದ್ದರು. ಬಣ್ಣದವರ ಪಯ್ಕಿ ಕೆಲಸಕ್ಕಾಗಿ ಬ್ರಿಟಿಶರು ಕರೆದೊಯ್ದ ಏಶಿಯಾದವರು ಇದ್ದರು.
ಏ.ಎನ್.ಪಿ ಆಳ್ವಿಕೆಯು ಮಾಡಿದ ಕಟ್ಟಲೆಗಳ ಪ್ರಕಾರ ಕರಿಯರು ಎಲ್ಲೇ ಹೋದರು ತಮ್ಮ ತಿಟ್ಟವನ್ನು ಹೊಂದಿರುವ ಗುರುತಿನ ಚೀಟಿಯನ್ನು ಒಯ್ಯಬೇಕಿತ್ತು. ಎಲ್ಲೆಡೆ ತಿರುಗಾಡಲು ಕರಿಯರಿಗೆ ಅವಕಾಶವಿರಲಿಲ್ಲ. ಇದನ್ನು ಮೀರಿದರೆ ಕರಿಯರಿಗೆ ಕಟುವಾದ ಶಿಕ್ಶೆ ಕೊಡಲಾಗುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಕರಿಯರಿಗೆ ಮತದಾನ ಮಾಡುವ ಹಕ್ಕನ್ನು ಕಿತ್ತಿಕೊಳ್ಳಲಾಗಿತ್ತು.
ಕರಿಯರ ಆಶಾಕಿರಣ ನೆಲ್ಸನ್ ಮಂಡೇಲಾ
ಯಾವಾಗ ಬಿಳಿಯರ ಅಟ್ಟಹಾಸ ಮಿತಿ ಮೀರುತ್ತಾ ಬಂದಿತೋ ಆಗ ಕರಿಯರು ಸರ‍್ಕಾರ ಮಾಡಿದ ಮಂದಿಯಾಳ್ವಿಕೆಗೆ ಎದುರಾದ ಕಟ್ಟಲೆಗಳ ವಿರುದ್ದ ಹೋರಾಟ ಮಾಡಲು ಮೊದಲುಮಾಡಿದರು. ಈ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪಂಗಡವೆಂದರೆ ಆಪ್ರಿಕನ್ ನಾಶನಲಿಸ್ಟ್ ಕಾಂಗ್ರೆಸ್ (ANC). ಇದರ ಮುಂದಾಳ್ತನವನ್ನು ಹೊತ್ತಿದ್ದವರು ನೆಲ್ಸನ್ ಮಂಡೇಲಾ. ಮಂಡೇಲಾರವರು ANC ಮೂಲಕ ಅಪಾರ‍್ತೇಡ್ ನೀತಿಯನ್ನು ಎಲ್ಲಾ ಬಗೆಗಳಲ್ಲೂ ವಿರೋದಿಸುತ್ತಾ ಬಂದರು.
ANP ಆಳ್ವಿಕೆಯಲ್ಲಿ ನೆಲ್ಸನ್ ಮಂಡೇಲಾರನ್ನು ಮೂರ‍್ನಾಲ್ಕು ಸಲಿ ಸೆರೆಹಿಡಿದು ಬಂದಿಸಲಾಯಿತು. ಕೊನೆಗೊಮ್ಮೆ ಸಿಡಿಮದ್ದನ್ನು ಎಸೆದ ಆರೋಪದ ಮೇಲೆ ಅವರನ್ನು ಬಂದಿಸಲಾಯಿತು. ಅವರು ಸೆರೆಮನೆಯಲ್ಲಿ 27 ವರುಶಗಳ ಕಾಲ ಬಂದಿಯಾಗಿದ್ದರು. 1990 ರಲ್ಲಿ ಅವರು ಬಿಡುಗಡೆಯಾಗುತ್ತಾರೆ. ಬಿಡುಗಡೆಯಾದ ಕೂಡಲೆ ANC ಪಂಗಡದ ಮುಂದಾಳುತನವನ್ನು ವಹಿಸಿಕೊಳ್ಳುತ್ತಾರೆ.
ಇದರ ಮೂಲಕ ಪ್ರದಾನಿಗೆ ಅಪಾರ‍್ತೇಡ್ ನೀತಿಯನ್ನು ನಿಲ್ಲಿಸುವಂತೆ ಮತ್ತೆ ಆಗ್ರಹ ಮಾಡುತ್ತಾರೆ. ಇಶ್ಟೊತ್ತಿಗಾಗಲೇ ಸಾಕಶ್ಟು ಹೆಸರುವಾಸಿಯಾಗಿದ್ದ ನೆಲ್ಸನ್ ಮಂಡೇಲಾ ANC ಆಳ್ಮೆಬದಿಯನ್ನು 1994ರ ಹಲ-ತಳಿ(multi-racial) ಆಯ್ಕಳಿಯಲ್ಲಿ ಗೆಲುವು ಸಾದಿಸುವ ಹಾಗೆ ಮಾಡುತ್ತಾರೆ. ಇದರ ಪಲವಾಗಿ ತೆಂಕಣ ಆಪ್ರಿಕಾದ ಪ್ರದಾನಿ ಕೂಡ ಆಗುತ್ತಾರೆ.
ಆಟೋಟಗಳ ಮೂಲಕ ಮಂದಿಯನ್ನು ಬೆಸೆದ ನೆಲ್ಸನ್
1994ರಲ್ಲಿ ಪ್ರದಾನಿಯಾಗಿ ಆಯ್ಕೆಯಾದ ಮಂಡೇಲಾರಿಗೆ ಮುಂದಿನ ಹಾದಿಯ ಕಲ್ಲು-ಮುಳ್ಳುಗಳ ಬಗ್ಗೆ ತಿಳಿದೇ ಇತ್ತು. ಮೂರು ಬೇರೆ ಬೇರೆ ಜನಾಂಗದವರನ್ನು ಒಳಗೊಂಡ ತೆಂಕಣ ಆಪ್ರಿಕಾ ಏಳಿಗೆಯ ದಾರಿ ಹಿಡಿಯಬೇಕಾದರೆ ಅವರನ್ನು ಬೆಸೆಯುವಂತಹ ಕೆಲಸವನ್ನು ಅವರು ಕೂಡಲೇ ಮಾಡಬೇಕಿತ್ತು. ಮಾನವನ ಹಿನ್ನಡವಳಿಯಲ್ಲಿ ಸಾಮಾನ್ಯವಾಗಿ ಮಂದಿಯನ್ನು ಒಟ್ಟುಗೂಡಿಸುವಲ್ಲಿ ಆಟೋಟಗಳು ಮುಕ್ಯವಾಗಿತ್ತು ಎಂದು ತಿಳಿದುಬರುತ್ತದೆ.
ಒಂದೇ ನಾಡಿನ ಮಂದಿ ತಮ್ಮ ದೇಶ ಬೇರೆ ದೇಶಗಳ ಎದುರು ಆಡುತ್ತಿರಬೇಕಾದರೆ ಒಟ್ಟಗೆ ಪರದೆಯ ಎದುರು ಕುಳಿತು ನೋಡುತ್ತಾರೆ. ಆ ಸಮಯದಲ್ಲಿ ತಮ್ಮ ನಡುವಿನ ಬೇದ-ಬಾವಗಳನ್ನು ಮರೆತು ಆಟದಲ್ಲಿ ಮಗ್ನರಾಗುತ್ತಾರೆ. ಆಟೋಟಗಳು ಹರೆಯದವರನ್ನು ಬೇಗನೇ ಸೆಳೆಯುತ್ತದೆ ಎಂಬುದು ತಿಳಿದಿರುವ ವಿಚಾರ. ಈ ಅಟೋಟಗಳ ಮೂಲಕವೇ ತೆಂಕಣ ಆಪ್ರಿಕಾವನ್ನು ಒಗ್ಗೂಡಿಸಬೇಕೆಂದು ಹಂಬಲಿಸಿದ್ದರು ನೆಲ್ಸನ್ ಮಂಡೇಲಾ. ಒಂದೇ ಉಡುಪನ್ನು ತೊಟ್ಟು ದೇಶಕ್ಕಾಗಿ ಒಟ್ಟಿಗೆ ಆಡಿದ ಯುವಕರು ಮುಂದೆ ಹಾಗೆಯೇ ಒಗ್ಗಟ್ಟಾಗಿ ನಾಡನ್ನು ಕಟ್ಟಬಹುದೆಂಬ ಹೆಬ್ಬಯಕೆ ಹೊಂದಿದ್ದರು.
ತೆಂಕಣ ಆಪ್ರಿಕಾದಲ್ಲಿ ಹೆಚ್ಚು ಆಡಲ್ಪಡುವ ಆಟಗಳೆಂದರೆ ರಗ್ಬಿ, ಕ್ರಿಕೆಟ್, ಹಾಕಿ, ಪುಟ್ಬಾಲ್ ಮತ್ತು ಟೆನ್ನಿಸ್. ತೆಂಕಣ ಆಪ್ರಿಕಾದ ಬಿಳಿಯರ ಅಚ್ಚುಮೆಚ್ಚಿನ ಆಟ ರಗ್ಬಿ. ಇದನ್ನು ಮುಂಚೆ ಕರಿಯರು ಅಶ್ಟಾಗಿ ಇಶ್ಟಪಡುತ್ತಿರಲಿಲ್ಲ. ಅದು ಬಿಳಿಯರ ಆಟವೆಂದೇ ಪರಿಗಣಿಸಲಾಗುತ್ತಿತ್ತು. ತೆಂಕಣ ಆಪ್ರಿಕಾದ ರಗ್ಬಿ ತಂಡವನ್ನು ಸ್ಪ್ರಿಂಗ್‍ಬಾಕ್ಸ್(springboks) ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಹತ್ತು ಹಲವು ದೇಶಗಳು ರಗ್ಬಿ ಆಟವನ್ನು ಆಡುತ್ತವೆ.
1995ರ ರಗ್ಬಿ ವಿಶ್ವಕಪ್ ತೆಂಕಣ ಆಪ್ರಿಕಾದಲ್ಲಿ ಏರ‍್ಪಡಿಸಲಾಗಿತ್ತು. ಪಯ್ನಲ್ ಪಂದ್ಯದಲ್ಲಿ ಬಲಿಶ್ಟ ನ್ಯೂಜಿಲ್ಯಾಂಡ್ ಎದುರು ಗೆಲುವು ಸಾದಿಸಿದ ಆಪ್ರಿಕಾ ಆ ಸರತಿಯ ವಿಶ್ವಕಪ್ಪನ್ನು ತನ್ನ ಮಡಲಿಗೆ ಹಾಕಿಕೊಂಡಿತ್ತು. ಆಟ ಮುಗಿದ ಮೇಲೆ ಉಡುಗೊರೆ ಕೊಡುವ ಸಂದರ‍್ಬದಲ್ಲಿ ಮಂಡೇಲಾ ತಾವಾಗಿಯೇ ಮುಂದೆ ಬಂದು ಬಿಳಿಯನಾಗಿದ್ದ ಕ್ಯಾಪ್ಟನ್ ಪಿಯೆನಾರ್‍ಗೆ ಪ್ರಶಸ್ತಿಯನ್ನು ಕೊಟ್ಟಿದ್ದರು. ಇದು ಕರಿಯರ-ಬಿಳಿಯರ ನಡುವೆ ನಂಟು ಬೆಸೆಯುವಲ್ಲಿ ಒಂದು ದೊಡ್ಡಮಟ್ಟದ ಹೆಜ್ಜೆ ಎಂದು ಪರಿಗಣಿಸಲಾಗಿತ್ತು.
ಮಂಡೇಲಾರವರು ಆಟೋಟಗಳ ಮೂಲಕ ಬೇರೆ ಬೇರೆ ಜನಾಂಗದ ಮಂದಿಯನ್ನು ಬೆಸೆಯುವ ಕಲೆಯನ್ನು ತಮ್ಮ ಆಳ್ವಿಕೆಯ ಒಂದು ಬಾಗವನ್ನಾಗಿ ಮಾಡಿಕೊಂಡಿದ್ದರು. ಆದರೆ ಅವರು ರಾಜಕಾರಣಕ್ಕೆ ಬಂದ ಮೇಲೆ ಆಟೋಟಗಳ ಮೇಲೆ ಒಲವು ಬೆಳೆಸಿಕೊಂಡವರಲ್ಲ.
ಚಿಕ್ಕಂದಿನಿಂದಲೇ ದಿನಾಲೂ ದೂರ ದೂರ ಓಡುತ್ತಿದ್ದ ನೆಲ್ಸನ್ ಒಬ್ಬ ಬಾಕ್ಸರ್ ಕೂಡ ಆಗಿದ್ದರು. ತೊಂಬತ್ತರ ವಯಸ್ಸಿನ ವರೆಗೂ ಒಳ್ಳೆ ಹದುಳವನ್ನು ಕಾಪಾಡಿಕೊಂಡಿದ್ದ ನೆಲ್ಸನ್ ಮಂಡೇಲಾ ಎಪ್ಪತ್ತು ವಯಸ್ಸಿನ ವರೆಗೂ ಗಟ್ಟಿಯಾದ ಮಯ್ಕಟ್ಟನ್ನು ಹೊಂದಿದ್ದರು. ಒಳ್ಳೆಯ ಆರೋಗ್ಯ ಉಳ್ಳ ನಾಡಿಗರಿಂದಲೇ ನಾಡು ಕಟ್ಟುವ ಕೆಲಸ ಮತ್ತು ಏಳಿಗೆ ಎಂದು ಅವರು ಬಲವಾಗಿ ನಂಬಿದ್ದರು. ತಾವು ಸೆರೆಮನೆಯಲ್ಲಿ ಇದ್ದಾಗ ಕೂಡ ಜೊತೆ ಇದ್ದವರನ್ನು ತಮ್ಮೊಡನೆ ಬೆಳಿಗ್ಗೆ ಬಯಲಿನಲ್ಲಿ ಓಡಲು ಹುರಿದುಂಬಿಸುತ್ತಿದ್ದರು.
ಬರಿಯ ಕಾಳಗಗಳು, ಕಿತ್ತಾಟಗಳು ಮತ್ತು ಹಗೆ ಕಾರುವಿಕೆಯನ್ನು ಕಂಡ ನಾಡು ಒಗ್ಗೂಡಬೇಕಾದರೆ ಆಟೋಟದ ಮೂಲಕವೇ ಎಂದು ನಂಬಿದ್ದ ಮಂಡೇಲಾರ ಕನಸು ನಿಜವಾಗುತ್ತಾ ಬಂದಿತು. ಹಲವು ಆಟಗಳ ಮೂಲಕ ಬೇರೆ ಬೇರೆ ಜನಾಂಗದ ಯುವ ಪ್ರಜೆಗಳು ದಾರಿ ತಪ್ಪದ ಹಾಗೆ ನೋಡಿಕೊಳ್ಳುವುದರಲ್ಲಿ ಮಂಡೇಲಾ ಗೆಲುವು ಸಾದಿಸಿದ್ದರು.
ಆಟಕ್ಕೆ ಪ್ರಪಂಚವನ್ನು ಬದಲಾವಣೆ ಮಾಡುವ ಶಕ್ತಿಯಿದೆ ಎಂದು ನಂಬಿದ್ದರು ನೆಲ್ಸನ್ ಮಂಡೇಲಾ. ಈ ಬಲವಾದ ನಂಬಿಕೆಯ ತಳಹದಿ ಮೇಲೆ ತೆಂಕಣ ಆಪ್ರಿಕಾ ದೇಶದ ಪ್ರಜೆಗಳನ್ನು ಒಗ್ಗೂಡಿಸಲು ಮೊಗಸಿ ಗೆದ್ದಿದ್ದರು. ಮುಂದೆ 2003ರಲ್ಲಿ ತೆಂಕಣ ಆಪ್ರಿಕಾ ಕ್ರಿಕೆಟ್ ವಿಶ್ವಕಪ್ ಏರ‍್ಪಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.್
ಇತ್ತೀಚಿಗೆ 2010ರಲ್ಲಿ ತೆಂಕಣ ಆಪ್ರಿಕಾ ಪುಟ್ಬಾಲ್ ವಿಶ್ವಕಪ್ ಕೂಡ ಆಯೋಜಿಸಿತ್ತು. ಇಂದು ತೆಂಕಣ ಆಪ್ರಿಕಾದಲ್ಲಿ ಜನಾಂಗೀಯ ತಾರತಮ್ಯ ಕಡಿಮೆ ಆಗಿದೆ. ಶಾಂತಿ ಮತ್ತು ನೆಮ್ಮದಿ ನೆಲೆಯೂರಿದೆ. ಮಂದಿಯಾಳ್ವಿಕೆಯುಳ್ಳ ಸರ‍್ಕಾರ ಕೆಲಸ ಮಾಡುತ್ತಿದೆ. ವಿಗ್ನಾನ ಮತ್ತು ತಂತ್ರಗ್ನಾನದಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ ಆಪ್ರಿಕಾ. ಇದೆಲ್ಲಾ ಸಾದ್ಯವಾಗಿದ್ದು ನೆಲ್ಸನ್ ಮಂಡೇಲಾ ಅವರಿಂದ ಎಂದರೆ ತಪ್ಪಾಗುವುದಿಲ್ಲ. ಬರಿಯ ಮೋಜಿಗಾಗಿ ಆಡುವ ಆಟಗಳಿಂದ ನಾಡಿನ ಮಂದಿಯನ್ನು ಒಗ್ಗೂಡಿಸಬಹುದೆಂದು ತೋರಿಸಿಕೊಟ್ಟ ಹಿರಿಯ ಮುಂದಾಳು ನೆಲ್ಸನ್ ಮಂಡೇಲಾ.
ತಿಳಿವಿನ ಸೆಲೆ: www.sportsillustrated.com, www.thinkprogress.com, www.nytimes.com
(ಚಿತ್ರ: www.thehindu.com)
ಇತ್ತೀಚಿನ ಅನಿಸಿಕೆಗಳು