’ಕಾರ್’ಲೋಸ್ ’ಕಾರು’ಬಾರು ಮತ್ತು ನೀವು

ಪ್ರಿಯಾಂಕ್ ಕತ್ತಲಗಿರಿ.

Carlos-Ghosn

ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್ ಗೋಸ್ನ್ ಅವರು ಈ ಎರಡು ಕಂಪನಿಗಳ ಒಡಂಬಡಿಕೆಗೂ ಮುಂದಾಳಾಗಿದ್ದಾರೆ. ಇಂಡಿಯಾದಲ್ಲಿ ರೆನಾಲ್ಟ್ ಪಲ್ಸ್ ಹೆಸರಿನ ಕಾರೇ ತುಸು ಬದಲಾವಣೆಗಳೊಂದಿಗೆ ನಿಸ್ಸಾನ್ ಮಯ್ಕ್ರಾ ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಇಳಿದಿರುವುದನ್ನು ನೋಡಿದರೆ, ಈ ಎರಡು ಕಂಪನಿಗಳ ನಡುವಣ ಹೊಂದಾಣಿಕೆ ಎಂತದ್ದು ಎಂಬುದರ ಅರಿವಾಗುತ್ತದೆ.

1990ರಲ್ಲಿ ನಿಸ್ಸಾನ್ ಕಂಪನಿಯು ದಿವಾಳಿಯಾಗುವಂಚಿಗೆ ತಲುಪಿದ್ದಾಗ, ಅದರ ಮುಂದಾಳ್ತನವಹಿಸಿಕೊಂಡು, ಕಂಪನಿಯನ್ನು ಲಾಬದ ಹಾದಿಗೆ ಕರೆತಂದ ಹೆಗ್ಗಳಿಕೆ ಗೋಸ್ನ್ ಅವರದ್ದು. ಜಗಮೆಚ್ಚಿದ ಈ ಕೆಲಸದ ಬಳಿಕ ಗೋಸ್ನ್ ಅವರು “ಉದ್ದಿಮೆ ಮತ್ತು ರಾಜಕೀಯದಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾದ 50 ಜನರು” ಪಟ್ಟಿಯಲ್ಲೂ ಸೇರ‍್ಪಡೆಗೊಂಡರು. ಗೋಸ್ನ್ ಅವರನ್ನು “Mr. Fix it”, ಅಂದರೆ “ಸರಿಪಡಿಸಬಲ್ಲವ” ಎಂದೂ ಇದೇ ಕಾರಣಕ್ಕಾಗಿ ಕರೆಯುವುದುಂಟು.

ಗೋಸ್ನ್ ಅವರ ಜಾಣತನ

Renault-Duster

ಮಾರುಕಟ್ಟೆಯ ಬಗ್ಗೆ ಗೋಸ್ನ್ ಅವರಿಗಿರುವ ಜಾಣತನ ಬೆರಗುಗೊಳಿಸುವಂತದ್ದು ಎಂದು ಹಲವರು ಹೇಳುತ್ತಾರೆ. ಇಂಡಿಯಾದಲ್ಲೂ ಮೊದಲ ಬಾರಿಗೆ ರೆನಾಲ್ಟ್ ಕಂಪನಿಯು ಮಹಿಂದ್ರಾ ಅವರೊಡಗೂಡಿ ಮಾರುಕಟ್ಟೆಗೆ ಇಳಿದಿತ್ತು. ಜಂಟಿಯಾಗಿ ಕಟ್ಟಿದ ಲೋಗನ್ ಹೆಸರಿನ ಕಾರಿನ ಮಾರಾಟ ಅಂದುಕೊಂಡಂತೆ ನಡೆಯದಿದ್ದ ಕೂಡಲೇ ಮಹಿಂದ್ರಾ ಜೊತೆಗಿನ ಹೊಂದಾಣಿಕೆಯಿಂದ ರೆನಾಲ್ಟ್ ಕಂಪನಿ ಹೊರನಡೆದಿತ್ತು. ಇಂಡಿಯಾದ ಮಾರುಕಟ್ಟೆಯಲ್ಲಿ ಈ ಒಂದು ಎಡವಟ್ಟು ಮಾಡಿಕೊಂಡಿದ್ದಾಗ ಗೋಸ್ನ್ ಅವರನ್ನು ಅನುಮಾನದಿಂದಲೇ ನೋಡಲಾಗಿತ್ತು. ಮತ್ತೆ ಇಂಡಿಯಾದ ಮಾರುಕಟ್ಟೆಯಲ್ಲಿ ರೆನಾಲ್ಟ್-ನಿಸ್ಸಾನ್ ನೇರವಾಗಿ ಇಳಿಯಿತು. ಆದರೆ, ಎರಡನೇ ಬಾರಿಗೆ ಮಾರುಕಟ್ಟೆಯಲ್ಲಿ ಇಳಿದಾಗ, ರೆನಾಲ್ಟ್ ಡಸ್ಟರ್ ಹೆಸರಿನ ಕಾರೊಂದನ್ನು ಬಿಡುಗಡೆ ಮಾಡಲಾಯಿತು. ಇದುವರೆಗೂ ಯಾರೂ ಇಡದಿದ್ದ ಬೆಲೆಗೆ (8 – 12 ಲಕ್ಶ) ಡಸ್ಟರಿನಂತಹ ಎಸ್‍ಯುವಿ ಕಾರನ್ನು ಮಾರುಕಟ್ಟೆಯಲ್ಲಿ ಇರಿಸಿದ್ದು, ನಿಜಕ್ಕೂ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿತ್ತು. ಎಸ್‍ಯುವಿ ಕಾರುಗಳ ಮಾರುಕಟ್ಟೆಯ ಲೆಕ್ಕಾಚಾರವೇ ಬುಡಮೇಲಾಗಿಸಿದ್ದು ರೆನಾಲ್ಟ್ ಅವರ ಡಸ್ಟರ್ ಕಾರು. ಡಸ್ಟರ್ ಕಾರು ಜನಮೆಚ್ಚುಗೆ ಪಡೆದ ಕೂಡಲೇ ಉಳಿದ ಕಂಪನಿಗಳು ತಂತಮ್ಮ ಎಸ್‍ಯುವಿ ಕಾರುಗಳು ಮುಂಬರುವ ದಿನಗಳಲ್ಲಿ ಹೇಗಿರಬೇಕು ಎಂಬ ಬಗ್ಗೆ ಹೊಸದಾಗಿ ಚರ‍್ಚೆ ಶುರು ಮಾಡಿಕೊಂಡವು.

ತೊಡೆ ತಟ್ಟಿದ ಪೋರ‍್ಡ್

Ford-eco-sport

2010ರಲ್ಲಿ ಪೋರ‍್ಡ್ ಕಂಪನಿಯು ಇಂಡಿಯಾದ ಮಾರುಕಟ್ಟೆಯಲ್ಲಿ ಪೀಗೋ (Figo) ಹೆಸರಿನ ಚಿಕ್ಕ ಕಾರೊಂದನ್ನು ಬಿಟ್ಟು ಮಾರುಕಟ್ಟೆಯಲ್ಲಿ ಗೆದ್ದಿತ್ತು. ಕಾರನ್ನು ಮಾರುಕಟ್ಟೆಯಲ್ಲಿ ಬಿಟ್ಟ 100 ದಿನಗಳಲ್ಲಿ ಸುಮಾರು 25,000 ಜನರು ಪೀಗೋ ಕಾರನ್ನು ಕಾಯ್ದಿರಿಸಿದ್ದರು. ಪೀಗೋ ಕಾರನ್ನು ಬಿಟ್ಟರೆ ಪೋರ‍್ಡ್ ಅವರ ಬೇರಾವ ಕಾರುಗಳೂ ಅಶ್ಟೊಂದು ಜನಮೆಚ್ಚುಗೆ ಪಡೆದಿರಲಿಲ್ಲ. ಇದೀಗ ಮೊನ್ನೆ, ಪೋರ‍್ಡ್ ಕಂಪನಿಯು ಇಕೋ ಸ್ಪೋರ‍್ಟ್ ಹೆಸರಿನ ಕಾರೊಂದನ್ನು ಮಾರುಕಟ್ಟೆಗೆ ಬಿಟ್ಟಿದೆ. 5.6 ಲಕ್ಶ ರುಪಾಯಿಯಿಂದ ಶುರುವಾಗುವ ಇಕೋ ಸ್ಪೋರ‍್ಟ್ ಕಾರಿನ ಬೆಲೆಯು ರೆನಾಲ್ಟ್ ಕಂಪನಿಯ ಡಸ್ಟರ್ ಕಾರಿಗೇ ನೇರಾನೇರ ಪಯ್ಪೋಟಿ ನೀಡುತ್ತದೆ. ಇಂಡಿಯಾದಲ್ಲಿ ಕಡಿಮೆ ಬೆಲೆಯ ಗುಣಮಟ್ಟದ ಎಸ್‍ಯುವಿ ಕಾರುಗಳಿಗೆ ಒಳ್ಳೆಯ ಬೇಡಿಕೆಯಿದೆ ಎಂದು ತೋರಿಸಿಕೊಟ್ಟಿದ್ದು ರೆನಾಲ್ಟ್ ಕಂಪನಿ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಆ ಮಾರುಕಟ್ಟೆಯನ್ನು ಇಡಿಯಾಗಿ ಕಬಳಿಸಲು ಪೋರ‍್ಡ್ ಮುಂದಾಗಿದೆ. ಇದನ್ನೆದುರಿಸಲು ಗೋಸ್ನ್ ಅವರು ಯಾವ ನಡೆಯನ್ನು ಆಯ್ದುಕೊಳ್ಳುತ್ತಾರೋ ಕಾದು ನೋಡಬೇಕು.

(ಚಿತ್ರ: www.autonews.com, www.renault.co.in, www.ibnlive.com)

3 ಅನಿಸಿಕೆಗಳು

  1. ಕನ್ನಡದಲ್ಲಿ ಟೆಕ್ನಾಲಜಿಯ ಬಗ್ಗೆ ಓದೋದು ನಲಿವಿನ ವಿಶಯ. ಆ ಕಾರಣಕ್ಕೆ ಪ್ರಿಯಾಂಕ್ ರಿಗೆ ಇನ್ನು ಮುಂದೆಯೂ ಇಂತಹ ಬರೆಹಗಳನ್ನು ಬರೆಯಿರೆಂದು ಕೇಳಿಕೊಳ್ಳುತ್ತೇನೆ. ಒಂದೇ ಒಂದು ಸಣ್ಣ ತಿದ್ದುಪಡಿ ಸೂಚಿಸಬಯಸುತ್ತೇನೆ. ರೆನಾಲ್ಟ್(Renault) ನ್ನು ರೆನೊ ಎಂದು ಕರೆಯುತ್ತಾರೆ. ಅದು ಫ್ರೆಂಚ್ ಹೆಸರಾದ್ದರಿಂದ ನಾವು ನುಡಿಯುವುದು ಮತ್ತು ಬರೆಯುವುದು ಬೇರೆಬೇರೆ ರೀತಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.