ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ
– ರಗುನಂದನ್.
ಈ ಬೂಮಿಯ ಮೇಲೆ ನಯ್ಸರ‍್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ ಮುಂದೆ ಹೋಗುತ್ತಾ ಒಂದೊಂದು ಪ್ರದೇಶಕ್ಕೆ ತಕ್ಕಂತೆ ಅಲ್ಲಿಯ ಗಿಡ ಮರಗಳು ಪ್ರಾಣಿ ಪಕ್ಶಿಗಳು ಇರುವಂತೆ ಕಾಣಬಹುದು. ಅಂದರೆ ಮರಳುಗಾಡಿನಲ್ಲಿ ಕಾಣಸಿಗುವಂತಹ ಗಿಡಗಳು ದಟ್ಟ ಹಸಿರುಕಾಡಿನಲ್ಲಿ ಕಾಣಸಿಗುವುದಿಲ್ಲ. ಹಾಗೆ ಕಡಲಿನ ಆಳದಲ್ಲಿ ಇರುವಂತಹ ಪ್ರಾಣಿಗಳು ನೆಲದ ಮೇಲೆ ಕಾಣಸಿಗುವುದಿಲ್ಲ.
ಇದು ನುಡಿಗಳಿಗೂ ಕೂಡ ಅನ್ವಯಿಸುತ್ತದೆ. ಮಾನವ ಮಾತನಾಡಲು ಕಲಿತ ಮೇಲೆ ತನ್ನ ಸುತ್ತಲಿನ ಪರಿಸರ ಪ್ರಾಣಿ ಪಕ್ಶಿ ಗಿಡ ಮರಗಳನ್ನು ಗುರುತಿಸುವುದಕ್ಕೆ ಮತ್ತು ತನ್ನ ಒಡನೆ ಇರುವವರ ಜೊತೆ ಮಾತನಾಡಲು ಪದಗಳನ್ನು ಹುಟ್ಟುಹಾಕುತ್ತಾ ಬಾಶೆಯನ್ನು ಬೆಳೆಸುತ್ತಾ ಹೋದನು. ಪ್ರಪಂಚದ ಬೇರೆ ಬೇರೆ ಜಾಗಗಳಲ್ಲಿ ಹೀಗೆ ಬೇರೆ ಬೇರೆ ನುಡಿಗಳು ಹುಟ್ಟಿದವು. ಆದರೆ ಸಾವಿರಾರು ವರುಶಗಳ ಹಿಂದೆ ಈಗ ಇರುವಶ್ಟು ನುಡಿಗಳು ಇರಲಿಲ್ಲ. ಎರಡು ಮೂರು ಸಾವಿರ ವರುಶಗಳ ಹಿಂದೆ ಮೂಲನುಡಿ (proto language) ಎಂದು ಕರೆಯಬಹುದಾದಂತಹ ಕೆಲವು ನುಡಿಗಳಿದ್ದವು. ಹಾಗಾದರೆ ಇಂದು ಸಾವಿರಾರು ನುಡಿಗಳಾದದ್ದಾರೂ ಹೇಗೆ ?
ಹೊಸ ನುಡಿಗಳು ಹೇಗೆ ಹುಟ್ಟುತ್ತವೆ ?
ಮುಂಚೆ ಹೇಳಿದಂತೆ ಕೆಲವೇ ಕೆಲವು ಮೂಲನುಡಿಗಳಿಂದ ಇಂದು ಸಾವಿರಾರು ನುಡಿಗಳು ಜನ್ಮ ತಾಳಿವೆ. ಹೊಸ ನುಡಿಗಳ ಹುಟ್ಟುವಿಕೆಗೆ ಮೂಲ ಕಾರಣ ಬವ್ಗೋಳಿಕ ಅಡಚಣೆಗಳು (geographical barriers). ಮಾನವ ಹಿಂದಿನ ಕಾಲದಿಂದಲೂ ವಲಸೆ ಹೋಗುವ ಪ್ರವ್ರುತ್ತಿ ಬೆಳೆಸಿಕೊಂಡವನು. ಕಾಳಗ, ನೆರೆ, ಬರ ಮತ್ತೂ ಇನ್ನಶ್ಟು ಕಾರಣಗಳಿಗೆ ಮಂದಿ ಬೇರೆ ಜಾಗಗಳಿಗೆ ವಲಸೆ, ಗುಳೇ ಹೋಗಿರುವುದನ್ನು ಹಿನ್ನಡವಳಿಯಲ್ಲಿ ಕಾಣಬಹುದು. ಹೀಗೆ ಹೊಸ ಪರಿಸರಕ್ಕೆ ಹೋದ ಜನರ ಗುಂಪು ಕಾಲ ಕಳೆದಂತೆ ಹಳೆಯ ಗುಂಪಿನ ಜೊತೆ ಸಂಪರ್‍ಕ ಕಡಿದುಕೊಳ್ಳುತ್ತಾರೆ. ಬೆಟ್ಟ ಗುಡ್ಡ ನದಿ ಕಾಡುಗಳು ಅವರ ನಡುವಿನ ಸಂಪರ್‍ಕ ಕಡಿದುಹಾಕಿರುತ್ತದೆ.
ಹೊಸ ಜಾಗಕ್ಕೆ ಹೋದ ಗುಂಪು ಅಲ್ಲಿನ ಸುತ್ತಮುತ್ತಲಿಗೆ ತಕ್ಕನಾಗಿ ಬಾಶೆ ಮಾರ್‍ಪಡಿಸಿಕೊಂಡಿರುತ್ತಾರೆ. ಉದಾಹರಣೆಗೆ ಬೆಟ್ಟ ಗುಡ್ಡ ಕಾಡು ನದಿಗಳಿರುವ ಪಶ್ಚಿಮ ಗಟ್ಟದ ಸುಳ್ಯವನ್ನು ತೆಗೆದುಕೊಳ್ಳೋಣ. ಅಲ್ಲಿ ಮಾತನಾಡುವ ಬಾಶೆಗಳು – ತುಳು, ಕನ್ನಡ, ಅರೆಬಾಶೆ ಗವ್ಡ, ಕೊಡವ ಮತ್ತು ಮಲೆಯಾಳ. ಅಂದರೆ ಕೇವಲ 50 ಕಿಲೋಮೀಟರ್ ಹರವಿನಲ್ಲಿ ಅಯ್ದು ಬಾಶೆಗಳು ಸರಿಸುಮಾರು 2000 ವರುಶಗಳಿಂದ ಇವೆ. ಅದೇ 800 ಕಿಲೋಮೀಟರ ಉದ್ದ ಇರುವ ಚಾಮರಾಜನಗರ-ಬೀದರ್ ಚಪ್ಪಟೆ ನೆಲದಲ್ಲಿ ಬರಿ ಕನ್ನಡ ಮಾತ್ರವೇ ಮಾತಾನಾಡುತ್ತಾರೆ.
ಈಗ ಬಾರತದ ನುಡಿಕುಟುಂಬಗಳ (language family) ಎತ್ತುಗೆಯನ್ನು ತೆಗೆದುಕೊಳ್ಳೋಣ. ಬಾರತದಲ್ಲಿ ಮಾತಾಡುವ ಎಲ್ಲಾ ಬಾಶೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಇಂಡೋ-ಆರ್‍ಯನ್ ನುಡಿಗುಂಪು. ಈ ಗುಂಪಿಗೆ ಸೇರಿದ ಕೆಲವು ನುಡಿಗಳು ಮಾರಾಟಿ, ಪಂಜಾಬಿ, ಅಸ್ಸಾಮೀಸ್, ಹಿಂದಿ, ಮಯ್ತಿಲಿ. ಇವೆಲ್ಲಾ ನುಡಿಗಳ ಮೂಲ ಸಂಸ್ಕ್ರುತ/ಪ್ರಾಕ್ರುತ ನುಡಿಗಳು ಎಂದು ನುಡಿಯರಿಗರು (linguists) ತೀರ್‍ಮಾನಿಸಿದ್ದಾರೆ. ಇವುಗಳು ಇಂದು ಬೇರೆ ಬೇರೆ ಬಾಶೆಗಳಾಗಿ ಮಾರ್‍ಪಾಟಾಗಿವೆ. ಕೆಲವೊಂದು ನುಡಿಗಳು ಸ್ವಂತ ನುಡಿಯೋ ಇಲ್ಲವೇ ಒಳನುಡಿಯೋ (dialect) ಎಂಬ ಗೊಂದಲ ಇರುವ ಸಾದ್ಯತೆ ಇದೆ ಎಂದು ನುಡಿಯರಿಗರು ಯಾವಾಗಲೂ ಅನಿಸಿಕೆ ಪಡುತ್ತಾರೆ.
ತೆಂಕಣ ಬಾರತದಲ್ಲಿ ಮುಕ್ಯವಾಗಿ ಬಳಸಲ್ಪಡುವ ನುಡಿಗಳು ಕನ್ನಡ, ತುಳು, ತೆಲುಗು, ಮಲೆಯಾಳ ಮತ್ತು ತಮಿಳು. ಇವುಗಳು ಮೂಲದ್ರಾವಿಡ ನುಡಿಯೊಂದರಿಂದ ಕವಲೊಡೆದು ಕಾಲಾನುಕಾಲದಲ್ಲಿ ಬೇರೆ ನುಡಿಗಳಾಗಿ ಮಾರ್‍ಪಾಟಾಗಿವೆ. ಊಟಿಯಲ್ಲಿ ಮಾತನಾಡುವ ’ಬಡಗ’ ಎಂಬ ನುಡಿಯು ಸ್ವಂತ ನುಡಿಯೋ ಅತವಾ ಒಳನುಡಿಯೋ ಎಂಬ ಗೊಂದಲ ನುಡಿಯರಿಗರಿಗಿದೆ. ಕೇವಲ ನಾನೂರು ವರುಶಗಳ ಹಿಂದೆ ಮಯ್ಸೂರಿನಿಂದ ವಲಸೆ ಹೋದ ಮಂದಿಯೊಟ್ಟೊಂದು ಊಟಿಯಲ್ಲಿ ನೆಲೆಯೂರಿತು. ಅವರು ಮಾತನಾಡುವ ಕನ್ನಡವೇ ಈಗ ಬಡಗ ನುಡಿಯಾಗಿದೆ. ಮತ್ತೊಂದು ನುಡಿಗುಂಪಿನ ಹೆಸರು ಟಿಬೆಟೋ-ಬರ್‍ಮನ್. ಈ ನುಡಿಗುಂಪಿಗೆ ಬಡಗ-ಮೂಡಣ (north-east) ಬಾರತದಲ್ಲಿ ಮಾತಾಡುವ ನುಡಿಗಳು ಸೇರುತ್ತವೆ.
ಮೇಲಿನ ತಿಳಿವಿನ ತಿರುಳೇನೆಂದರೆ ಎರಡು ನುಡಿಗಳು ಒಂದೇ ಮೂಲನುಡಿಯಿಂದ ಬಂದಿದ್ದರೂ ಬೇರೆ ಬಾಶೆಗಳೆಂದೇ ಪರಿಗಣಿಸಲ್ಪಡುತ್ತವೆ. ಅಂದರೆ ರಾಜಸ್ತಾನಿಯೊಬ್ಬನ ನುಡಿ ಬಂಗಾಲಿಯವನಿಗೆ ಅರ್‍ತವಾಗದು. ಅವರು ಒಂದೇ ಮೂಲಪದ ಬಳಸುತ್ತಿದ್ದರೂ ಕೂಡ ಉಲಿ ಮಾರ್‍ಪಾಟುಗಳ (sound change) ಪರಿಣಾಮವಾಗಿ ಆ ನುಡಿಯಾಡುಗ (speaker)ರ ನಾಲಗೆಯಲ್ಲಿ ಬೇರೆ ರೀತಿಯಾಗಿಯೇ ಹೊರಳುತ್ತದೆ.
ಪಕ್ಕಪಕ್ಕದಲ್ಲಿ ಇದ್ದರೂ ಕೂಡ ಕನ್ನಡಿಗ, ತೆಲುಗ, ತಮಿಳರಿಗೆ ಒಬ್ಬರ ನುಡಿ ಮತ್ತೊಬ್ಬರಿಗೆ ಗೊತ್ತಿರುವುದಿಲ್ಲ. ಆದರೂ ಎರಡು ಬೇರೆ ಬೇರೆ ನುಡಿಗುಂಪುಗಳಿಗೆ ಸೇರಿದ ನುಡಿಗಳಿಗೆ ಪದಗಳ ಮೂಲಕ ಸಂಬಂದವನ್ನು ಕಲ್ಪಿಸಲು ಸಾದ್ಯವಿದೆ. ಇದಕ್ಕೆ ಕಾರಣ ಒಂದರ ನುಡಿ ಮೇಲೆ ಮತ್ತೊಂದರ ಪ್ರಬಾವ. ಸಾಮಾನ್ಯವಾಗಿ ದರ್‍ಮವನ್ನು ಸಾರುವ ನುಡಿಯಿಂದ ಬೇರೆ ನುಡಿಗಳಿಗೆ ಪದಗಳು ಹೋಗುವ ಸಾದ್ಯತೆ ಹೆಚ್ಚಿರುತ್ತದೆ.
ಹೀಗಾದಾಗ ಬೇರೆ ನುಡಿಗುಂಪಿಗೆ ಸೇರಿದ್ದರೂ ಎರಡು ನುಡಿಗಳ ನಡುವೆ ಕೆಲವು ಸಾಮಾನ್ಯ ಪದಗಳು ಕಾಣಬಹುದು. ನುಡಿಯರಿಮೆಯ ಪ್ರಕಾರ ಎರಡು ನುಡಿಗಳು ಒಂದೇ ಮೂಲನುಡಿಯಿಂದ ಬಂದಿದೆ ಎಂಬ ತೀರ್‍ಮಾನಕ್ಕೆ ಬರಬೇಕಾದರೆ ಉಲಿ ಮಾರ್‍ಪುಗಳ ಮೊರೆ ಹೋಗಬೇಕಾಗುತ್ತದೆ. ಇದರರ್‍ತ ಎರಡು ನುಡಿಗಳ ನಡುವೆ ಪದಗಳು ಸಾಮಾನ್ಯವಾಗಿದ್ದರೆ ಅವುಗಳು ಒಂದೇ ನುಡಿಗುಂಪಿನದೆಂದು ಅತವಾ ಒಂದರಿಂದ ಮತ್ತೊಂದು ಬಂದಿದೆ ಎಂದು ಹೇಳಲು ಬರುವುದಿಲ್ಲ. ಇದು ಇಂದು ನಡುವಣ ಏಶಿಯಾ ಮತ್ತು ಬಡಗಣ ಆಪ್ರಿಕಾದಲ್ಲಿ ಮಾತಾಡುವ ಮೂಲ-ಅರೇಬಿಕ್ ಇಂದ ಬಂದಂತಹ ನುಡಿಗಳಲ್ಲಿ ಯಾವ ಗೊಂದಲ ಹುಟ್ಟುಹಾಕಿದೆ ನೋಡೋಣ.
ಇಸ್ಲಾಮಿನ ಪವಿತ್ರ ನುಡಿ ಅರೇಬಿಕ್
ಮುಸ್ಲಿಮರ ಪವಿತ್ರ ಗ್ರಂತ ಎಂದು ಕರೆಯುವ ಕುರಾನ್ ಅನ್ನು ಪ್ರೊಪೆಟ್ ಮೊಹಮ್ಮದರು ಅರೇಬಿಕ್ ನುಡಿಯಲ್ಲಿ ಬರೆದಿದ್ದರು. ಅದು ಇಸ್ಲಾಮ್ ಹುಟ್ಟಿದಾಗ, ಅಂದರೆ ಸುಮಾರು 1400 ವರುಶಗಳ ಹಿಂದೆ. ದರ್‍ಮವನ್ನು ಸಾರುವ ಸಲುವಾಗಿ ಪ್ರೊಪೆಟ್ ಮಹಮ್ಮದರ ಹಿಂಬಾಲಕರು ನಡುವಣ ಏಶಿಯಾ, ಬಡಗಣ ಆಪ್ರಿಕಾ, ಇಂಡಿಯಾ ಮತ್ತಶ್ಟು ಜಾಗಗಳಿಗೆ ವಲಸೆ ಹೋದರು. ಅವರೊಡನೆ ಅವರ ನುಡಿಯನ್ನೂ ಕೊಂಡೊಯ್ದರು. ಈ ಅರೇಬಿಕ್ ನುಡಿ ಬೇರೆ ಬೇರೆ ನಾಡುಗಳಲ್ಲಿ ಬೇರೆ ಬೇರೆ ನುಡಿಗಳಾಗಿ ಮಾರ್‍ಪಾಟಾಯಿತು. ಇನ್ನೂ ಕೆಲವು ಕಡೆ ಅಲ್ಲಿನ ತವರು ನುಡಿ (local/regional language)ಗಳೊಂದಿಗೆ ಬೆರೆತು ಹೊಸ ನುಡಿಗಳಿಗೆ ಎಡೆಮಾಡಿಕೊಟ್ಟಿತು. ಇಂದು ಇವೆಲ್ಲವೂ ಬೇರೆ ಬಾಶೆಗಳಾಗಿ ಬದಲಾಗಿವೆ.
ಆಡುನುಡಿ ಹೀಗೆಲ್ಲಾ ಮಾರ್‍ಪಾಟಾದರೂ ಕುರಾನಿನಲ್ಲಿ ಬಳಸಿರುವ ಅರೇಬಿಕ್ ಮಾತ್ರ ಹಾಗೆ ಉಳಿಯಿತು. ಅದನ್ನು ನುಡಿಯರಿಗರು ಸ್ಟಾಂಡರ್‍ಡ್ ಅರೇಬಿಕ್ (standard arabic) ಎಂದು ಕರೆಯಲು ಮೊದಲು ಮಾಡಿದರು. ಈ ಸ್ಟಾಂಡರ್‍ಡ್ ಅರೇಬಿಕ್ ಎಲ್ಲರಿಗೂ ಅರ್‍ತವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಹೀಗಿದ್ದರೂ ಈ ಎಲ್ಲಾ ಇಸ್ಲಾಮ್ ನಾಡುಗಳಲ್ಲಿರುವ ಮಂದಿ ತಮ್ಮ ನುಡಿಯನ್ನು( ಅದು ಸ್ವಂತ ನುಡಿಯಾಗಿದ್ದರೂ ಕೂಡ) ಅರೇಬಿಕ್ ನುಡಿಯ ಅಪಬ್ರಂಶವೆಂದೇ ತಿಳಿದುಕೊಂಡಿದ್ದಾರೆ.
ಮಾತಾಡುವ ನುಡಿಗಳು ಬದಲಾಗುವ ಕಾರಣ ಒಂದೇ ಮೂಲನುಡಿಯಿಂದ ಬಂದಿದ್ದರೂ ಅತವಾ ಒಂದೇ ನುಡಿಯ ಪ್ರಬಾವ ಹೊಂದಿದ್ದರೂ ಇಂದು ಇರಾಕಿನಲ್ಲಿರುವ ಒಬ್ಬನ ಬಾಶೆ ಆಪ್ರಿಕಾದಲ್ಲಿರುವವನಿಗೆ ಅರ್‍ತವಾಗುವುದಿಲ್ಲ. ಆದರೆ ಕೆಲವು ಪದಗಳು ಸಾಮಾನ್ಯ ಇರುವ ಸಾದ್ಯತೆ ಇದ್ದೇ ಇರುತ್ತದೆ. ಆದರೆ ಉಲಿ ಮಾರ್‍ಪಾಟಿನ ಪರಿಣಾಮ ಅದು ಬೇರೆ ಬೇರೆ ನುಡಿಯಾಡುಗರ ನಾಲಗೆಯಲ್ಲಿ ಬೇರೆ ಬೇರೆ ರೀತಿಯಾಗಿ ಹೊರಳುವ ಸಾದ್ಯತೆ ಇರುತ್ತದೆ. ಇದೇ ಆಡುನುಡಿಗಳ ಮೇಲ್ಮೆ.
ಇವೊತ್ತು ಅರಬ್ಬಿನ ಕೆಲವು ಪ್ರಬಾವಿಗಳು ಒಂದು ಸುಳುವಾದ,(easy) ಎಲ್ಲರಿಗೂ ಅರ್‍ತವಾಗುವ ಸಾಮಾನ್ಯ ಅರೇಬಿಕ್(Common Arabic) ಅನ್ನು ಹುಟ್ಟುಹಾಕಲು ಮುಂದಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಇಸ್ಲಾಮ್ ದರ್‍ಮಕ್ಕೆಒಂದು ಗುರುತನ್ನು (pan-Islamic identity) ಕೊಡುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಎಲ್ಲಾ ಇಸ್ಲಾಮ್ ನಾಡುಗಳು ತಯಾರಿಲ್ಲ. 70 ಮತ್ತು 80 ರ ದಶಕದಲ್ಲಿ ಮುನ್ನೆಲೆಯಲ್ಲಿದ್ದ ಇಸ್ಲಾಮಿಕ್ ಚಳುವಳಿ ಬಳಿಕ ಹಿನ್ನೆಲೆಗೆ ಸರಿಯುತ್ತಾ ಬಂತು.
ಇಂದು ಇಸ್ಲಾಮ್ ದರ್‍ಮವನ್ನು ಪಾಲಿಸುತ್ತಿರುವ ದೇಶಗಳೂ ಕೂಡ ತಮ್ಮ ಪ್ರಾದೇಶಿಕತೆ, ಅಲ್ಲಿನ ಬಾಶೆ, ನಡೆ-ನುಡಿ(ಸಂಸ್ಕ್ರುತಿ/culture) ಬಗ್ಗೆ ಹೆಚ್ಚು ಒಲವು ತೋರುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ತವರು ನುಡಿ ಹೆಚ್ಚಿನ ಮಂದಿಯನ್ನು ತಲುಪಲು ನೆರವಾಗುತ್ತದೆ ಎಂಬುದೊಂದಾದರೆ ತಮ್ಮತನವನ್ನು ಕಾಪಾಡಿಕೊಳ್ಳುವುದರ ಮೂಲಕ ಹಲತನವನ್ನು ಎತ್ತಿಹಿಡಿಯುವ ಪ್ರಯತ್ನ. ಇದಕ್ಕೆ ಇಂಬು ಕೊಡುವಂತೆ ಈ ಕೆಲವು ಅರೇಬಿಕ್ ’ಒಳನುಡಿ’ಗಳನ್ನು ಮಾತಾಡುವವರು ತಮ್ಮ ತವರು ನುಡಿಯನ್ನು ಮಿಂಬಲೆಗಳ ಮೂಲಕ ಹೆಚ್ಚು ಪ್ರಚಾರ ಕೊಡಲು ಮುಂದಾಗುತ್ತಿದ್ದಾರೆ.
ಅಂದರೆ ಒತ್ತಾಯದ ಮೂಲಕ ಬಾಶೆ ಹೇರಿಕೆ ಮಾಡಲಾಗದು ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಒಂದು ಸ್ಟಾಂಡರ್‍ಡ್ ಅರೇಬಿಕ್ ಒಪ್ಪಿದ್ದೇ ಆದಲ್ಲಿ ಈ ಒಳನುಡಿ ಮಾತಾಡುವವರ ಪಾಡು ಕಶ್ಟವಾಗುತ್ತದೆ. ಯಾಕೆಂದರೆ ಒಂದಿಶ್ಟು ಪದಗಳು ಸಾಮಾನ್ಯ ಇದೆ ಎಂಬ ನೆಪ ಮುಂದಿಟ್ಟು ಅರ್‍ತವಾಗದ ಹೊಸ ಬಾಶೆ ಕಲಿಯವುದು ಸುಲಬದ ಮಾತಲ್ಲ. ಈ ಕಾರಣದಿಂದಾಗಿ ಈ ಸ್ಟಾಂಡರ್‍ಡ್ ಅರೇಬಿಕ್ ಅಶ್ಟು ಮನ್ನಣೆ ಗಳಿಸುವ ಸಾದ್ಯತೆ ಇಲ್ಲ.
ಬಾರತದಲ್ಲೂ ಇದೇ ಪ್ರಯತ್ನ
ಮುಂಚೆ ಹೇಳಿದಂತೆ ಬಾರತದಲ್ಲಿ ಮೂರು ನುಡಿಕುಟುಂಬಗಳಿವೆ. ಶೇಕಡ 95ರಶ್ಟು ಮಂದಿ ದ್ರಾವಿಡ ನುಡಿಕುಟುಂಬದ ನುಡಿಗಳನ್ನು ಇಲ್ಲವೇ ಇಂಡೋ-ಆರ್‍ಯನ್ ನುಡಿಕುಟುಂಬದ ನುಡಿಗಳನ್ನು ಮಾತಾಡುತ್ತಾರೆ. ಬಾರತದಲ್ಲಿ ಹೆಚ್ಚೆಣಿಕೆಯ ಮಂದಿ ಹಿಂದು ದರ್‍ಮದವರಾಗಿದ್ದಾರೆ. ಹಿಂದು ದರ್‍ಮ ಗ್ರಂತಗಳು, ಶ್ಲೋಕಗಳು, ಪುರಾಣಕತೆಗಳು ಸಂಸ್ಕ್ರುತದಲ್ಲಿ ಬರೆದ ಕಾರಣ ಬಾರತದ ಎಲ್ಲಾ ನುಡಿಗಳು ಮೇಲೆ ಕೊಂಚ ಮಟ್ಟಿಗೆ ಸಂಸ್ಕ್ರುತದ ಪ್ರಬಾವ ಇದೆ. ಇದಕ್ಕೆ ಮೀರಿ ಸಂಸ್ಕ್ರುತವನ್ನು ದೇವರ ನುಡಿ ಎಂದು ಪರಿಗಣಿಸುವ ಕಾರಣ ಅದು ಎಲ್ಲಾ ನುಡಿಗಳ ತಾಯಿ ಎಂದು ಬಾರತದಲ್ಲಿ ಸಾಕಶ್ಟು ಮಂದಿ ನಂಬಿದ್ದಾರೆ.
ಹಿಂದಿನ ಕಾಲದ ಅರಸರು, ಬ್ರಾಹ್ಮಣರು ಸಂಸ್ಕ್ರುತವನ್ನು ಕಲಿಯುತ್ತಿದ್ದ ಕಾರಣ ದರ್‍ಮದ ಪರಿಬಾಶೆಯಲ್ಲಿ (religious parlance) ಸಂಸ್ಕ್ರುತದ ಪದಗಳು ಸೇರಿಕೊಂಡವು. ಇದನ್ನೇ ನೆಪವಾಗಿಟ್ಟುಕೊಂಡು ಉತ್ತರ ಬಾರತದವರು ಮತ್ತು ಸಂಸ್ಕ್ರುತದ ಒಲವಿರುವವರು ಹೆಚ್ಚು ಹೆಚ್ಚು ಸಂಸ್ಕ್ರುತದ ಪದಗಳು ಬಾಶೆಯಲ್ಲಿ ಬಳಸಿದರೆ ಅದು ಇಂಡಿಯಾದ ಎಲ್ಲಾ ಮಂದಿಗೆ ತಿಳಿಯುತ್ತದೆ ಎಂಬುದಾಗಿ ಹೇಳುತ್ತಾರೆ. ಹೀಗಾದಾಗ ಬಾಶೆಯ ವಿಶಯವಾಗಿ ಒಂದೇ ನಡೆ-ನುಡಿ ಹೊಂದಬಹುದೆಂಬುದು ಅವರ ವಾದ. ಆದರೆ ಇದು ಸಾದ್ಯವಾಗುವ ಹಾಗೆ ಕಾಣುವುದಿಲ್ಲ.
ಸಂಸ್ಕ್ರುತಕ್ಕೆ ನಂಟಿರದ ದ್ರಾವಿಡ ನುಡಿಗಳಿರಲಿ, ಸಂಸ್ಕ್ರುತದಿಂದ ಹುಟ್ಟಿದ ನುಡಿಗಳ ಆಡುಗರಿಗೂ ಇದು ತೊಡಕಿನ ಏರ್‍ಪಾಟು. ಏಕೆಂದರೆ ಮುಂಚೆ ಹೇಳಿದಂತೆ ಉಲಿ ಮಾರ್‍ಪಿನ ಪರಿಣಾಮವಾಗಿ ಇಂದಿನ ನುಡಿ ಸಾಕಶ್ಟು ಬದಲಾಗಿರುತ್ತದೆ. ಹಾಗಾಗಿ ಒಂದು ಕೊಂಡಿ-ನುಡಿ (link language) ಹುಟ್ಟುಹಾಕಿದರೆ ಅದು ಕೆಲವರಿಗಶ್ಟೆ ಒಳಿತಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಬಾರತದ ಹಲತನವನ್ನು ಅಳಿಸಿಹಾಕಿದ ಹಾಗೆ ಆಗುತ್ತದೆ. ಇದು ನಮ್ಮ ಒಗ್ಗಟ್ಟಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ತಿಳಿವಿನ ಸೆಲೆ: www.economist.com
ಚಿತ್ರ: http://scitechdaily.com
ಇತ್ತೀಚಿನ ಅನಿಸಿಕೆಗಳು