’ಬ್ಯಾಂಗಲೋರ್’ ಗಿಂತ ಬೆಂಗಳೂರೇ ಚೆನ್ನ!

ರತೀಶ ರತ್ನಾಕರ
fsbengaluruclient

ಕೆಲವು ವರ್‍ಶಗಳ ಹಿಂದೆ ಕರ್‍ನಾಟಕ ರಾಜ್ಯ ಸರ್‍ಕಾರವು ಇಂಗ್ಲಿಶಿನಲ್ಲಿ ‘ಬ್ಯಾಂಗಲೋರ್‍’ (Bangalore) ಎಂದು ಬರೆಯಲಾಗುತ್ತಿದ್ದ ನಮ್ಮ ಬೆಂಗಳೂರಿನ ಹೆಸರನ್ನು ‘ಬೆಂಗಳೂರು’ (Bengaluru) ಎಂದು ಕನ್ನಡದಲ್ಲಿ ಬರೆಯುವಂತೆಯೇ ಬರೆಯಬೇಕೆಂದು ಅಪ್ಪಣೆ ಹೊರಡಿಸಿತು. ನಮ್ಮ ಮಣ್ಣಿನ ಗುಣಕ್ಕೆ ಹೊಂದಿಕೊಳ್ಳುವ ಈ ಹೆಸರನ್ನು ಉಳಿಸಿಕೊಂಡಿದ್ದಕ್ಕೆ ಹಲವು ಕನ್ನಡಿಗರಿಗೆ ನಲಿವಾಗಿತ್ತು ಜೊತೆಗೆ ಕೆಲವರಿಂದ ಇದಕ್ಕೆ ವಿರೋದವು ಕೇಳಿಬಂದಿತ್ತು. ಬೆಂಗಳೂರು ಎಂದು ಮರು ಹೆಸರಿಸಿದರೆ ‘ಬ್ರಾಂಡ್ ಬ್ಯಾಂಗಲೋರ್‍’ ಆಗಿ ಈ ಊರು ಬೆಳೆಯುವುದಿಲ್ಲ, ಅಂತರಾಶ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಎಂಬ ಹೆಸರು ಹೆಸರು ಮಾಡುವುದಿಲ್ಲ, ಬ್ಯಾಂಗಲೋರ್‍ ಒಂದು ಮೆಟ್ರೊಪಾಲಿಟನ್ ನಗರ ಬೇರೆ ಬೇರೆ ನುಡಿಯನ್ನಾಡುವ ಮಂದಿ ಇಲ್ಲಿರುವುದರಿಂದ ಇದು ಬ್ಯಾಂಗಲೋರ್‍ ಆಗಿಯೇ ಉಳಿದಿರಬೇಕು, ಬೆಂಗಳೂರು ಎಂಬ ಹೆಸರು ತೀರ ಲೋಕಲ್ ಆಗಿದೆ ಎಂಬ ವಾದವಿತ್ತು.

porsche_bengaluruಈಗ ನೋಡಿ, ಜಗತ್ತಿನ ಮಂದಿಮೆಚ್ಚಿರುವ ‘ಪೋರ್‍ ಸೀಸನ್ಸ್ ಹೊಟೇಲ್’ ಮತ್ತು ‘ಪೋಶೆ’ ಕಾರಿನ ಕಂಪನಿಯವರು ಬೆಂಗಳೂರು ಎಂಬ ಹೆಸರನ್ನು ತಮ್ಮ ಬಯಲರಿಕೆಗಳಲ್ಲಿ ಬಳಸುತ್ತಿದ್ದಾರೆ. ‘ಪೋರ್‍ ಸೀಸನ್ಸ್ ಹೊಟೇಲ್’ ನವರು ಜಗತ್ತಿನ ಬೇರೆ ಬೇರೆ ಕಡೆ 50ಕ್ಕೂ ಹೆಚ್ಚಿನ ಅಯ್ದುಸ್ಟಾರ್‍ (five star) ಹೋಟೆಲ್ ಗಳನ್ನು ಹೊಂದಿದ್ದು ವರ್‍ಶಕ್ಕೆ 3.6 ಬಿಲಿಯನ್ ಡಾಲರ್‍ ನಶ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಜಗತ್ತಿನ ಪ್ರತಿಶ್ಟೆಯ ಕಾರಿನ ಬ್ರಾಂಡ್ ಎಂದೇ ಹೆಸರಾದ ಪೋಶೆ ಕಂಪನಿಯವರು ವರ್‍ಶಕ್ಕೆ 10 ಸಾವಿರ ಮಿಲಿಯನ್ ಯುರೋ ನಶ್ಟು ಆದಾಯ ಗಳಿಸುತ್ತಿದ್ದಾರೆ. ಹೀಗೆ ಜಗತ್ತಿನಾದ್ಯಂತ ಹಲವು ಕವಲು (ಶಾಕೆ) ಗಳನ್ನು ಹೊಂದಿ ವಿಶ್ವ ಮಟ್ಟದಲ್ಲಿ ತಮ್ಮದೇ ಆದ ಬ್ರಾಂಡ್ ಅನ್ನು ಕಟ್ಟಿಕೊಂಡಿರುವ ಈ ಕಂಪನಿಗಳು ಬೆಂಗಳೂರು ಎಂಬ ಹೆಸರನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಂಡಿವೆ. ಇದನ್ನು ನೋಡಿದರೆ ಬೆಂಗಳೂರು ಹೆಸರಿಗೆ ವಿರೋದಿಸುವವರ ವಾದಕ್ಕೆ ಯಾವುದೇ ಹುರುಳಿಲ್ಲ ಎಂದು ತಿಳಿಯುತ್ತದೆ. ತಮ್ಮ ನುಡಿಯ ಮೇಲಿರುವ ಕೀಳರಿಮೆ ಹಾಗು ಬ್ರಾಂಡ್ ಕುರಿತ ಅರೆಬರೆಯ ಅರಿವಿನಿಂದ ಬೆಂಗಳೂರು ಎಂಬ ಹೆಸರನ್ನು ಒಪ್ಪಿಕೊಳ್ಳಲು ಅವರು ಹಿಂಜರಿದಿದ್ದಾರೆ ಎನಿಸುತ್ತದೆ.

ಮಂದಿಮೆಚ್ಚುವ ‘ಬ್ರಾಂಡ್’ ಅನ್ನು ಕಟ್ಟುವುದು ಬಾಳೆಹಣ್ಣನ್ನು ಸುಲಿದಶ್ಟು ಸುಳುವೇನಲ್ಲ. ಹಲವು ಮಾರುಕಟ್ಟೆ ತಂತ್ರಗಳನ್ನು ಬಳಸಿ ಗ್ರಾಹಕರನ್ನು ಸೆಳೆಯಬೇಕಾಗುತ್ತದೆ, ಗುಣಮಟ್ಟದ ಸೇವೆಯಿಂದ ಗ್ರಾಹಕನ ಬೇಡಿಕೆಗಳನ್ನು ಈಡೇರಿಸಿ ಮೆಚ್ಚುಗೆಯನ್ನು ಪಡೆಯಬೇಕಾಗುತ್ತದೆ, ಉತ್ಪನ್ನಗಳು ಮತ್ತು ಸೇವೆಯ ಮೇಲೆ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಕಟ್ಟಿಕೊಳ್ಳುವ ‘ಬ್ರಾಂಡ್’ ಎಂಬುವುದು ಮಾರುಕಟ್ಟೆಯಲ್ಲಿ ಆ ಕಂಪನಿಗೊಂದು ಗುರುತನ್ನು ತಂದುಕೊಡುತ್ತದೆ, ಕಂಪನಿಯು ಅಂತರಾಶ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಲ್ಲಿ ಇದು ಮುಕ್ಯ ಪಾತ್ರ ವಹಿಸುತ್ತದೆ. ಹೀಗೆ ಬ್ರಾಂಡ್ ಕಟ್ಟಿಕೊಂಡ ಹಲವು ಕಂಪನಿಗಳಲ್ಲಿ ‘ಪೋರ್‍ ಸೀಸನ್ಸ್ ಹೊಟೇಲ್’ ಮತ್ತು ‘ಪೋಶೆ’ಯವರು ಇಬ್ಬರು. ‘ಬ್ರಾಂಡ್ ಬೆಂಗಳೂರು’ ವಿಶ್ವ ಮಟ್ಟದಲ್ಲಿ ಬೆಳೆದಿದ್ದರಿಂದ ಬೆಂಗಳೂರು ಎಂಬ ಹೆಸರಿನ ಜೊತೆ ಇವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಒಂದು ಅಂತರಾಶ್ಟ್ರೀಯ ಬ್ರಾಂಡ್ ಕಟ್ಟುವಲ್ಲಿ ಇರುವ ದುಡಿಮೆಯನ್ನು ಸರಿಯಾಗಿ ಅರಿತುಕೊಂಡಿದ್ದರೆ, ತಾವೇ ಒಂದು ಬ್ರಾಂಡನ್ನು ಕಟ್ಟಿ ಗೆದಿದ್ದರೆ ಇಲ್ಲವೇ ‘ಬ್ಯಾಂಗಲೋರ್‍’ ನ ಜಾಗದಲ್ಲಿ ಬೆಂಗಳೂರು ಇರುವುದರ ಹೆಚ್ಚುಗಾರಿಕೆಯನ್ನು ತಿಳಿದಿದ್ದರೆ ಬೆಂಗಳೂರಿನ ಹೆಸರಿಗೆ ತಗಾದೆ ಬರುವುದಿಲ್ಲ. ಇವೆಲ್ಲವನ್ನು ಅರಿಯದೆ ಕೆಲವರು ಬೆಂಗಳೂರು ಎಂಬ ಹೆಸರನ್ನು ಆಗ ವಿರೋದಿಸಿರಬಹುದು. ಹಲನಾಡಿನ ಕಂಪನಿಗಳು ಬೆಂಗಳೂರು ಎಂದು ಬಳಸುತ್ತಿರುವುದು ವಿರೋದದ ವಾದಕ್ಕೆ ಮರುನುಡಿಯನ್ನು ನೀಡಿದಂತಾಗಿದೆ. ಎಲ್ಲರೂ ತಮ್ಮ ನುಡಿ ಹಾಗು ತಮ್ಮತನದ ಮೇಲಿರುವ ಕೀಳರಿಮೆಯಿಂದ ಹೊರಬರಬೇಕಾಗಿದೆ.

ಚಿತ್ರ: icodesign.com, porsche.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: