ಹೊನಲು – ನೂರು ದಿನಗಳ ಹರಿವು
– ಹೊನಲು ತಂಡ.
ಮೊನ್ನೆ ಜುಲಯ್ 24ರಂದು ನಮ್ಮ ‘ಹೊನಲು’ ಮಿಂಬಾಗಿಲು ಒಂದು ವಿಶೇಶವಾದ ಮಯ್ಲಿಗಲ್ಲನ್ನು ಮುಟ್ಟಿತು. ಅದೇನೆಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಹವ್ದು, ನಮ್ಮ ಈ ಹೊಸ ಮೊಗಸಿಗೆ 100 ದಿನಗಳಾಗಿವೆ! ಏಪ್ರಿಲ್ 15ರಂದು ಎರಡು ಅರಿಮೆಯ ಬರಹಗಳೊಂದಿಗೆ ಮೂಡಿದ ಈ ಮಿಂಬಾಗಿಲು, ಅರಿಮೆ, ನಾಡ ಕಾಳಜಿ, ನಡೆನುಡಿ ಮತ್ತು ನಲ್ಬರಹಗಳ ಹೊನಲನ್ನು ಎಡಬಿಡದೆ ಹರಿಸುತ್ತಿದೆ. ಇಶ್ಟು ಕಡಿಮೆ ಹೊತ್ತಲ್ಲಿ 243 ಬರಹಗಳು ಮೂಡಿ ಬಂದಿದ್ದು, 58 ದೇಶಗಳಿಂದ 32,000ಕ್ಕೂ ಹೆಚ್ಚು ನೋಟಗಳು ಬಂದಿವೆ. ಹಲವಾರು ಮಂದಿ ಪ್ರತಿದಿನ ನಮ್ಮ ಬರಹಗಳನ್ನು ಕಾದು ಓದುವುದಲ್ಲದೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರುವುದೂ ಸಂತಸದ ವಿಶಯ. ಈ ಪಾಲ್ಗೊಳ್ಳುವಿಕೆ ಬರೀ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮೀಸಲಾಗಿಲ್ಲ, ಹಲವು ಮಂದಿ ಮುಂದೆ ಬಂದು ಹೊನಲಿಗಾಗಿ ಬರಹಗಳನ್ನು ಮಾಡಿಕೊಡುತ್ತಿದ್ದಾರೆ. ಇದುವರೆಗೂ 59 ಮಂದಿ ನಮಗೆ ಬರಹಗಳನ್ನು ಮಾಡಿಕೊಟ್ಟಿದ್ದಾರೆ. ಇದರಲ್ಲಿ ಹಲವರು ಮೊದಲೇ ಬರಹಗಳನ್ನು ಮಾಡುತ್ತಿದ್ದವರಾಗಿದ್ದು ಅವರುಗಳು ಎಲ್ಲರಕನ್ನಡವನ್ನು ಅಪ್ಪಿಕೊಂಡಿದ್ದಾರೆ. ಮತ್ತು ಇನ್ನು ಹಲವರಿಗೆ ಬರವಣಿಗೆ ಎಂಬುದು ಮೊದಮೊದಲ ಮೊಗಸಾಗಿದ್ದು ಎಲ್ಲರಕನ್ನಡ ಅವರುಗಳಲ್ಲೆಲ್ಲ ಮಾಡುಗತನದ ಕಿಚ್ಚು ಹಚ್ಚಿಸಿರುವುದು ನಲಿವಿನ ಸಂಗತಿ.
ಪೇಸ್ಬುಕ್ ಕೂಡುತಾಣದ ಮೂಲಕ ಮಂದಿಯನ್ನು ಹೊನಲು ಮಿಂಬಾಗಿಲೊಂದಿಗೆ ಬೆಸೆಯಲು ಮತ್ತು ಕೂಡುತಾಣಗಳ ಓದುಗರೊಂದಿಗೆ ಒಡನಾಡಲು ಒಂದು ಪೇಸ್ಬುಕ್ ಪುಟ ಕೂಡ ಇದೆ. ಏಪ್ರಿಲ್ 15ರಂದೇ ತೊಡಗಿದ ಈ ಪುಟ ಓದುಗರನ್ನು ಹೊನಲಿನ ಕಡೆಗೆ ಸೆಳೆಯುತ್ತಲೇ ಇದ್ದು 850ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದೆ!
ಅರಿಮೆ ಬರಹಗಳು
ಹೊನಲು ಎಲ್ಲ ಬಗೆಯ ಬರಹಗಳಿಗೂ ವೇದಿಕೆಯಾಗಿದ್ದರೂ, ಈ ಸಂದರ್‍ಬದಲ್ಲಿ ‘ಅರಿಮೆ’ ಬರಹಗಳ ಬಗ್ಗೆ ವಿಶೇಶವಾಗಿ ಒಂದು ಮಾತು ಹೇಳಲೇಬೇಕು. ಇಂದಿನ ಕನ್ನಡದ ಬರಹದಲ್ಲಿ ನಮಗೆ ಕೊರತೆ ಕಾಣುವುದು ಅರಿಮೆಯ ಬರಹಗಳಲ್ಲಿಯೇ. ತಳಮಟ್ಟದ ಅರಿಮೆ, ಎಣಿಯರಿಮೆ, ಹಣಕಾಸಿನರಿಮೆ, ಹೀಗೆ ಕನ್ನಡದಲ್ಲಿ ಬದುಕಿಗೆ ಬೇಕಾದ ಅರಿಮೆಯ ಬರಹಗಳ ಕೊರತೆ ಇದೆ. ಕೊರತೆ ಇವುಗಳ ಅಳವಿ ಮತ್ತು ಗುಣಮಟ್ಟ ಎರಡರಲ್ಲೂ ಇದೆ. ಅಲ್ಲದೆ ಕೆಲವು ಮೇಲು ಮೇಲಿನ, ಮಂದಿ ಮೆಚ್ಚುವಂತಹ ವಿಶಯಗಳನ್ನು ಬಿಟ್ಟರೆ ಕನ್ನಡದ ಅರಿಮೆಯ ಬರಹಗಳು ಆಳಕ್ಕೆ ಇಳಿಯುವುದೇ ಇಲ್ಲ. ಈ ತೊಡಕನ್ನು ಬಗೆಹರಿಸುವ ಮೊದಲ ಹೆಜ್ಜೆಯಾಗಿ ಹೊನಲಿನಲ್ಲಿ ಅರಿಮೆಗಾಗಿಯೇ ಒಂದು ವರ್‍ಗವನ್ನು ಮಾಡಲಾಗಿತ್ತು. ಕಳೆದ ನೂರು ದಿನಗಳಲ್ಲಿ ಹಲವು ಬಗೆಯ ಅರಿಮೆಯ ಬರಹಗಳು ಹೊನಲಿನಲ್ಲಿ ಬಂದಿರುವುದಲ್ಲದೇ ಅವುಗಳಿಗೆ ಬಂದ ದೊಡ್ಡ ಮಟ್ಟದ ಓಗೊಡಿಕೆ (ನೋಟಗಳು, ಅನಿಸಿಕೆಗಳು) ಮುಂದಿನ ವರುಶಗಳಲ್ಲಿ ಕನ್ನಡ ಸಮಾಜವು ಈ ಕೊರತೆಯನ್ನು ನೀಗಿಸಿಕೊಳ್ಳಬಲ್ಲುದೆಂಬ ನಮ್ಮ ನಂಬಿಕೆಗೆ ಸಾಕಶ್ಟು ಬಲ ಕೊಟ್ಟಿದೆ.
ಎಲ್ಲರಕನ್ನಡಕ್ಕೆ ಸಿಕ್ಕ ಮೆಚ್ಚುಗೆ
ಹೊನಲು ತೊಡಗಿಸುವ ಮೊದಲು, ಕೆಲವು ವರುಶಗಳಿಂದ, ಎಲ್ಲರಕನ್ನಡದ ಬಗ್ಗೆ ಸಾಕಶ್ಟು ಚರ್‍ಚೆಗಳು ನಡೆದಿದ್ದವು. ಈ ಚರ್‍ಚೆಗಳ ನಡುವೆ ಕೆಲವು ಹೊತ್ತಗೆಗಳೂ ಎಲ್ಲರಕನ್ನದಲ್ಲಿ ಮೂಡಿಬಂದವು. ಆದರೆ ಎಲ್ಲರಕನ್ನಡದ ಬಳಕೆಯನ್ನು ಎಲ್ಲೆಡೆ ಹರಡುವ ಮೊಗಸು ಆಗಿರಲಿಲ್ಲ. ಎಲ್ಲರಕನ್ನಡದಲ್ಲಿ ಎಲ್ಲಾ ಬಗೆಯ ಮೇಲ್ಮಟ್ಟದ ಬರಹಗಳು ಸಾದ್ಯ ಮಾತ್ರ ಅಲ್ಲ ಒಗ್ಗಿದ ಮೇಲೆ ಹೆಚ್ಚು ಸುಲಬ ಎಂಬುದನ್ನು ಬಳಕೆಯ ಮೂಲಕ ತೋರಿಸಿಕೊಡಲು ಆಗಿರಲಿಲ್ಲ. ಸಾಮಾನ್ಯ ಕನ್ನಡಿಗರ ಮಾಡುಗತನವನ್ನು ಎಲ್ಲರಕನ್ನಡದ ಮೂಲಕ ಮೆರೆಸಬಹುದು ಎಂಬ ವಿಶಯವನ್ನು ಮಾಡಿ ತೋರಿಸಿರಲಿಲ್ಲ. ಆದರೆ ಈ ಎಲ್ಲ ಕೆಲಸಗಳಿಗೆ ಹೊನಲಿನ ಮೂಲಕ ನಾಂದಿ ಹಾಡಲಾಗಿದೆ. ಇನ್ನೂ ಮಾಡಬೇಕಿರುವುದು ಬೆಟ್ಟದಶ್ಟಿದೆ. ಆದರೆ, ಅದರ ಸಲುವಾಗಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಹೊನಲಿನ ಬರಹಗಳನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಮತ್ತೆ ನಿಮ್ಮಲ್ಲಿ ಕೆಲವರು ಬರಹಗಳನ್ನೂ ಕಳುಹಿಸಿ, ಹೀಗೆ ಹಲವು ರೀತಿಯಲ್ಲಿ ನಮ್ಮನ್ನು ಬೆಂಬಲಿಸಿ, ನೀವೂ ನಮ್ಮೊಂದಿಗೆ ಈ ಮೊದಲನೇ ಹೆಜ್ಜೆಯನ್ನು ಇಟ್ಟು ಹೊನಲು ತಂಡದ ಬಲವಾಗಿ ನಿಂತಿದ್ದೀರಿ. ಈ ನಿಮ್ಮ ಜೊತೆಗಾರಿಕೆಗೆ ಹೊನಲು ತಂಡ ನಿಮಗೆ ಬಾಗಿ ಮೆಚ್ಚುಗೆಯನ್ನು ತಿಳಿಸಬಯಸುತ್ತದೆ. ನೂರು ದಿನಗಳ ಈ ಒಂದಿಕೆ, ಒಗ್ಗಟ್ಟುಗಳು, ನಮ್ಮ ಕೂಡಣ ಮತ್ತು ನಾಡುಗಳನ್ನು ಕಟ್ಟುವ ಸಲುವಾಗಿ ಹೀಗೇ ಮುಂದುವರಿಯಲಿ, ಬೆಳೆಯಲಿ ಮತ್ತು ಗಟ್ಟಿಯಾಗಲಿ.
ಕನ್ನಡ ನುಡಿಗೆ ಸಂಬಂದಿಸಿದಂತೆ ಈ ಮಟ್ಟದ ಪ್ರಯತ್ನ ಹಿಂದೆ ನಡೆದಿರಲಿಲ್ಲ. ನಿಮ್ಮ ಪ್ರಯತ್ನಕ್ಕೆ ಶುಬ ಹಾರೈಕೆಗಳು…