ಇಂಗ್ಲಿಶ್ ಪಟ್ಯದಲ್ಲಿ ಕನ್ನಡ: ಇಲಿಯೋ ಹುಲಿಯೋ?

ರತೀಶ ರತ್ನಾಕರ

gas

ಕರ‍್ನಾಟಕದಲ್ಲಿ ಒಂದು ಮತ್ತು ಎರಡನೆ ತರಗತಿಯ ಇಂಗ್ಲೀಶ್ ಮಾದ್ಯಮದ ಪಟ್ಯಪುಸ್ತಕ (Textbook) ದಲ್ಲಿ ಕನ್ನಡ ಪದ್ಯಗಳು ರೋಮನ್ ಲಿಪಿಯಲ್ಲಿ ಅಚ್ಚಾಗಿದೆ. ಈ ಕುರಿತು ವರದಿ ಮಾಡಿರುವ ’ಟಯ್ಮಸ್‍ ಆಪ್ ಇಂಡಿಯಾ’ ಸುದ್ದಿಹಾಳೆಯು (24 ಜುಲಾಯಿ 2013) ‘ಕರ‍್ನಾಟಕ ಪಟ್ಯಪುಸ್ತಕ ಸೊಸಯ್‍ಟಿ’ ಯವರು ಅತಿ ದೊಡ್ಡ ತಪ್ಪು ಮಾಡಿರುವವರೆಂದು ಜರಿದಿದ್ದಾರೆ. ಇಂಗ್ಲೀಶ್ ಮಾದ್ಯಮದ ಮಕ್ಕಳಿಗೆ ಕನ್ನಡ ಓದುವಂತೆ ಮಾಡುವುದು, ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲರಿಗೂ ಕನ್ನಡ ಗೊತ್ತಿರಬೇಕು ಎಂದು ಅಂದುಕೊಳ್ಳುವುದು ನಗೆಪಾಟಲಿನ ಹಾಗು ಬುದ್ದಿಯಿಲ್ಲದೆ ಮಾಡಿರುವ ಅತಿ ದೊಡ್ಡ ಅಪರಾದ (preposterous) ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿ ಹೇಳಿರುವಂತೆ ಇಂಗ್ಲೀಶ್ ಪಟ್ಯಪುಸ್ತಕದಲ್ಲಿ ಕನ್ನಡ ಪದ್ಯಗಳನ್ನು ನೀಡಿರುವುದು ಯಾವ ದೊಡ್ಡ ತಪ್ಪೇನಲ್ಲ. ಇದರಿಂದ ಇಂಗ್ಲೀಶ್ ಮಾದ್ಯಮವು ಮುಳುಗಿಯೇ ಹೋಯಿತು ಅನ್ನುವ ಹಾಗೆ ವರದಿ ಮಾಡಿರುವುದು ಅತಿಶಯೋಕ್ತಿ ಎನಿಸುತ್ತದೆ. ಇದಕ್ಕಿಂತ ಮಿಗಿಲಾದ ದೊಡ್ಡ ದೊಡ್ಡ ಅಪರಾದಗಳು ಕೇಂದ್ರ ಸರಕಾರದ ಕಡೆಯಿಂದ ಆಗುತ್ತಿದೆ ಆ ಕುರಿತು ಸುದ್ದಿಹಾಳೆಯವರು ಬೆಳಕುಚೆಲ್ಲಬಹುದು.

ನಗೆಪಾಟಲಿನ ಹಾಗು ಬುದ್ದಿಯಿಲ್ಲದೆ ಮಾಡುತ್ತಿರುವ ಹಲವು ಸುದ್ದಿಗಳು ದಿನನಿತ್ಯ ನಮ್ಮ ಕಣ್ಣಿಗೆ ಕಾಣುತ್ತಿವೆ. ಕರ‍್ನಾಟಕದಲ್ಲಿ ಮಾರಾಟವಾಗುವ ಅವ್ಶದಿ ಹಾಗು ಮಾತ್ರೆಗಳ ಮೇಲಿನ ಕೊನೆದಿನಾಂಕ (expiry date) ದ ಮಾಹಿತಿ ಕನ್ನಡದಲ್ಲಿ ಅಚ್ಚಾಗಿರುವುದಿಲ್ಲ, ಇದರಿಂದ ಕನ್ನಡ ಮಾತ್ರ ಬಲ್ಲ ಗ್ರಾಹಕನ ಬದುಕಿಗೆ ಕುತ್ತು ಬರುವುದೆಂದು ಹೇಳಿ ಇದುವರೆಗೂ ಯಾವ ಇಂಗ್ಲೀಶ್ ಸುದ್ದಿಹಾಳೆಗಳು ವರದಿ ಮಾಡಿರುವುದು ಕಾಣಸಿಗುವುದಿಲ್ಲ.  ಗ್ಯಾಸ್ ಸಿಲಿಂಡರಿನ ಮೇಲೆ ಸುರಕ್ಶತೆಯ ಮಾಹಿತಿ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಅಚ್ಚಾಗಿರುತ್ತದೆ, ಕನ್ನಡಿಗರ ಬದುಕಿಗೆ ಬೆಲೆಯನ್ನೇ ಕೊಡದೆ ಸುರಕ್ಷತೆ ಹಾಗು ಬಳಕೆಯ ಮಾಹಿತಿಯನ್ನು ಕನ್ನಡದಲ್ಲಿ ಕೊಡದೆ ಇರುವುದನ್ನು ಕೇಳಿರುವ ಇಂಗ್ಲೀಶ್ ಸುದ್ದಿಹಾಳೆಗಳ ವರದಿ ಕಾಣಸಿಗುವುದಿಲ್ಲ.

ಕರ‍್ನಾಟಕದಲ್ಲಿ ಓಡಾಡುವ ರಯ್‍ಲು ಬಂಡಿಗಳಲ್ಲಿ ಕೂಡ ಸುರಕ್ಶತೆಯ ಮಾಹಿತಿ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಇರುತ್ತದೆ ಇದು ಕೂಡ ಇಂಗ್ಲೀಶ್ ಸುದ್ದಿಹಾಳೆಗಳ ಕಣ್ಣಿಗೆ ಬಿದ್ದಂತಿಲ್ಲ. ಹೀಗೆ ಬದುಕಿಗೆ ಕುತ್ತು ಬರದಂತೆ ಕಾಪಾಡಿಕೊಳ್ಳಲು ಇರಬೇಕಾದ ಮಾಹಿತಿಗಳು ಕರ‍್ನಾಟಕದಲ್ಲಿ ಕನ್ನಡದಲ್ಲಿ ಇಲ್ಲ,ಇಂತಹವು ಕೆಂದ್ರ ಸರಕಾರ ಎಸಗುತ್ತಿರುವ  ಅತಿ ದೊಡ್ಡ ತಪ್ಪುಗಳು. ಇವುಗಳನ್ನು ಸುದ್ದಿಹಾಳೆಗಳು ವರದಿಮಾಡಿ ಕೇಂದ್ರ  ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಹಾಗು ಮಂದಿಯನ್ನು ಎಚ್ಚರಿಸಬೇಕು.

ಆದರೆ ಕನ್ನಡ ಪದ್ಯವನ್ನು ಕರ‍್ನಾಟಕದಲ್ಲಿ ಇಂಗ್ಲೀಶ ಮಾದ್ಯಮದ ಮಕ್ಕಳಿಗೆ ಕಲಿಸುವುದು ದೊಡ್ಡ ತಪ್ಪು ಎನ್ನುವುದು ‘ಇಲಿ ಹೋಯಿತು ಎಂಬುದನ್ನು ಹುಲಿ ಹೋಯಿತು’ ಎಂದು ಹೇಳಿದಂತೆ. ತಲೆ ತಲೆಯಾಂತರದಿಂದ ಕನ್ನಡವು ಬೆಂಗಳೂರಿನ ಮಂದಿ ನುಡಿಯಾಗಿದೆ ಹಾಗಾಗಿ ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಹಾಗು ಬಂದು ನೆಲಸಿದವರಿಗೆ ಕನ್ನಡ ಗೊತ್ತಿರಬೇಕು ಎಂದು ಅಂದುಕೊಳ್ಳುವುದರಲ್ಲಿ ಕೂಡ ಯಾವ ತಪ್ಪು ಇಲ್ಲ. ಸುದ್ದಿಯಲ್ಲದ ಸುದ್ದಿಯ ಮೇಲೆ ಸುಮ್ಮನೆ ಹಣ, ಹೊತ್ತು ಮತ್ತು ದುಡಿಮೆಯನ್ನು ಕರ್ಚು ಮಾಡುವುದಕ್ಕಿಂತ ಮಂದಿಯ ಒಳಿತಿಗೆ ಬೇಕಾದ ಇತರೆ ಸುದ್ದಿಗಳನ್ನು ನೀಡುವತ್ತ ಇವರು ಗಮನ ಹರಿಸಲಿ.

ಸುದ್ದಿ ಸೆಲೆ: ಟಯ್ಮ್ಸ್ ಆಪ್ ಇಂಡಿಯಾ

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *