ನಮಗೂ ಬೇಕು ಒಂದೊಳ್ಳೆಯ ನುಡಿ-ನೀತಿ

ರತೀಶ ರತ್ನಾಕರ

multilingual

ಇಂಡಿಯಾದ ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ನೀಡಬೇಕು ಎಂದು ಕೇಳಿದಾಗ ಕೆಲವರಿಂದ ಬರುವ ಉತ್ತರ ಇದಾಗಿರುತ್ತದೆ.

“ಹಲತನಗಳಿಂದ ಕೂಡಿರುವ ಇಂಡಿಯಾಕ್ಕೆ ಒಂದು ನುಡಿ-ನೀತಿ ತರುವುದು ದೊಡ್ಡ ಸವಾಲು, ಹಲವಾರು ನುಡಿಗಳು ನಮ್ಮಲ್ಲಿ ಮನೆ ಮಾಡಿರುವುದರಿಂದ ಕೇಂದ್ರ ಸರಕಾರಕ್ಕೆ ಎಲ್ಲಾ ನುಡಿಗಳನ್ನು ಬಳಸಲು ಆಗುವುದಿಲ್ಲ.”

ಹಾಗಾದರೆ, ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ಸಿಗುವ ರೀತಿಯಲ್ಲಿ ಬಾರತಕ್ಕೊಪ್ಪುವ ನುಡಿ-ನೀತಿಯನ್ನು ರೂಪಿಸುವುದು ನಿಜವಾಗಿಯೂ ಕಶ್ಟವೇ? ಜಗತ್ತಿನ ಬೇರೆ ಕಡೆಗಳಲ್ಲಿ, ಇಂತಹ ಹಲವು ನುಡಿಗಳಿರುವ ಒಕ್ಕೂಟದ ಏರ‍್ಪಾಡು ಒಂದೇ ನುಡಿಗೆ ಮನ್ನಣೆ ನೀಡಿದೆಯೇ? ಇಲ್ಲವೇ, ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ನೀಡಿದೆಯೇ? ಇವುಗಳ ಕುರಿತು ಹಲವು ವಿವರಗಳನ್ನು ಹುಡುಕಿದಾಗ ಪಡುವಣದಲ್ಲಿರುವ ಯುರೋಪಿಯನ್ ಒಕ್ಕೂಟದ ನುಡಿ-ನೀತಿ ಗಮನ ಸೆಳೆಯುತ್ತದೆ.

ಹಲವು ನುಡಿಗಳನ್ನು ಹೊಂದಿರುವ ನಾಡುಗಳಿಂದ ಮೂಡಿರುವ ಯುರೋಪಿಯನ್ ಒಕ್ಕೂಟ, ಅದರ ಸದಸ್ಯ ನಾಡುಗಳ ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ಸಿಗುವ ರೀತಿಯಲ್ಲಿ ನುಡಿ-ನೀತಿಯನ್ನು ಏರ‍್ಪಾಡು ಮಾಡಿದೆ. 28 ನಾಡುಗಳ ಒಕ್ಕೂಟದ ಯುರೋಪಿನಲ್ಲಿ 24 ಆಡಳಿತ ನುಡಿಗಳಿವೆ! ಒಕ್ಕೂಟ ಸರಕಾರವು ತನ್ನೊಳಗಿನ ಆಡಳಿತ ವ್ಯವಹಾರಕ್ಕೆ ಮೂರು ನುಡಿಗಳನ್ನು (ಇಂಗ್ಲೀಶ್, ಪ್ರೆಂಚ್ ಮತ್ತು ಜರ್‍ಮನ್) ಬಳಸುತ್ತದೆ. ಒಂದು ವೇಳೆ ಬೇರಾವುದಾದರು ಆಡಳಿತ ನುಡಿಯ ಬಳಕೆ ಮಾಡಬೇಕಾದರೆ ಅದಕ್ಕೆ ಯಾವುದೇ ತಕರಾರಿವುದಿಲ್ಲ. ಒಕ್ಕೂಟದೊಳಗಿರುವ ನಾಡಿನ ಸರಕಾರವು (ಪ್ರಾನ್ಸ್, ಜರ್‍ಮನಿ, ಇತರೆ) ತನ್ನದೇ ನುಡಿಯಲ್ಲಿ ಯುರೋಪಿಯನ್ ಪಾರ್‍ಲಿಮೆಂಟ್ ಜೊತೆ ವ್ಯವಹರಿಸಬಹುದಾಗಿದೆ. ಪಾರ್‍ಲಿಮೆಂಟ್ ಕೂಡ ಆಯಾ ನಾಡುಗಳ ಜೊತೆ ಅವರದೇ ನುಡಿಯಲ್ಲಿ ವ್ಯವಹರಿಸುತ್ತದೆ. ಒಕ್ಕೂಟದ ನೀತಿ-ನಿಯಮಗಳ ಕಡತಗಳು, ಕಾನೂನು ಕಡತಗಳು, ಶಾಸಕಾಂಗದ ಕಡತಗಳು, ಆಡಳಿತಕ್ಕೆ ಸಂಬದಿಸಿದ ಕಡತಗಳು ಹಾಗು ಯಾವುದೇ ಸರಕಾರಿ ಮಾಹಿತಿಗಳು ಎಲ್ಲಾ 24 ನುಡಿಗಳಲ್ಲಿ ಸಿಗುತ್ತವೆ. ಊರೊಟ್ಟಿನ ಮಂದಿಗೆ ನೀಡಬೇಕಾದ ಯಾವುದಾದರು ಒಂದು ಮಾಹಿತಿ ಇದ್ದರೆ ಅದನ್ನು ಎಲ್ಲಾ ಆಡಳಿತ ನುಡಿಗಳಲ್ಲಿ ನೀಡಲಾಗುವುದು. ಕೇವಲ ಒಂದು ನಾಡಿಗೆ ಸಂಬಂದಿಸಿದ ಮಾಹಿತಿಗಳಿದ್ದರೆ ಅದನ್ನು ಆ ನುಡಿಯಲ್ಲಿ ಮಾತ್ರ ನೀಡಲಾಗುವುದು. ಎತ್ತುಗೆಗೆ, ಜರ್‍ಮನಿಗೆ ಮಾತ್ರ ಸಂಬಂದಪಟ್ಟ ಮಾಹಿತಿ ಏನಾದರು ಇದ್ದರೆ ಅದನ್ನು ಜರ್‍ಮನ್‍ನಲ್ಲಿ ಮಾತ್ರ ನೀಡಲಾಗುವುದು.

ಹೀಗೆ, ಒಕ್ಕೂಟದಲ್ಲಿರುವ ಪ್ರತಿಯೊಬ್ಬ ನುಡಿಯಾಡುಗನಿಗೂ ಸರಕಾರದ ಮಾಹಿತಿಗಳು ಅವನದೇ ನುಡಿಯಲ್ಲಿ ಸಿಗುವಂತಹ, ಮತ್ತು ಸರಕಾರದ ಜೊತೆ ಆತ ತನ್ನದೇ ನುಡಿಯಲ್ಲಿ ವ್ಯವಹರಿಸುವಂತಹ ಏರ‍್ಪಾಡನ್ನು ಯುರೋಪ್ ಕಟ್ಟಿಕೊಂಡಿದೆ. ಈ ರೀತಿಯ ನುಡಿ-ನೀತಿಯ ಹಿಂದೆ ಈ ಕೆಳಗಿನ ಉದ್ದೇಶಗಳನ್ನು ಕೂಡ ಇಟ್ಟುಕೊಂಡಿದೆ:

  • ಯುರೋಪಿನ ಪ್ರತಿಯೊಬ್ಬರು, ಒಕ್ಕೂಟದ ಏರ‍್ಪಾಡನ್ನು ಚೆನ್ನಾಗಿ ತಿಳಿದುಕೊಂಡು ಒಕ್ಕೂಟವನ್ನು ಗಟ್ಟಿಯಾಗಿ ಕಟ್ಟುವಲ್ಲಿ ಕಯ್ ಜೋಡಿಸುವಂತಾಗಬೇಕು.
  • ಯುರೋಪಿಯನ್ ಒಕ್ಕೂಟ ಎಂಬ ಹೆಸರಿನಲ್ಲಿ, ಒಕ್ಕೂಟದ ಸರಕಾರವು ಏನೇನು ಕೆಲಸ ಮಾಡುತ್ತಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರಬೇಕು.
  • ಯುರೋಪಿನ ಕಾನೂನಿನ ಮಾಹಿತಿಯು, ಮಂದಿಗೆ ಅವರದೇ ನುಡಿಯಲ್ಲಿ ಸಿಗುವಂತಿರಬೇಕು.

ಒಟ್ಟಿನಲ್ಲಿ ಯುರೋಪಿನ ಮಂದಿಯು ಒಕ್ಕೂಟ ಸರಕಾರದ ಜೊತೆ ಅವರದೇ ನುಡಿಯಲ್ಲಿ ವ್ಯವಹರಿಸುವ ‘ಹಕ್ಕ’ನ್ನು ಹೊಂದಿರುತ್ತಾರೆ. ಯುರೋಪಿನ ಬೆಳವಣಿಗೆಗೆ ನುಡಿಯ ಹಲತನವು ಬೇಕೆ ಬೇಕು ಎಂದು ನಂಬಿರುವ ಸರಕಾರವು, ಹಲತನವನ್ನು ಕಾಪಾಡಲು ಮತ್ತು ಅದನ್ನು ಮತ್ತಶ್ಟು ಬೆಳಸಲು ’ಕವ್ನ್‍ಸಿಲ್ ಆಪ್ ಇಂಟಲೆಕ್ಚುವಲ್ಸ್’ ತಂಡವನ್ನು ಕಟ್ಟಿದೆ. ಈ ತಂಡವು ನುಡಿಯ ಹಲತನವನ್ನು ಬೆಳೆಸಲು ಹಲವಾರು ಹಮ್ಮುಗೆಗಳನ್ನು ಹಾಕಿಕೊಂಡಿದೆ. ಸರಕಾರವು ಕೂಡ ಇದಕ್ಕೆ ಬೆನ್ನೆಲುಬಾಗಿದೆ.

ಇದನ್ನೆಲ್ಲಾ ತಿಳಿದ ಮೇಲೆ ಇಂಡಿಯಾಕ್ಕೆ ಸರಿ ಹೊಂದುವ ನುಡಿ-ನೀತಿಯನ್ನು ರೂಪಿಸುವುದು ಕಶ್ಟದ ಕೆಲಸವೇನಲ್ಲ ಎಂದು ತಿಳಿಯುತ್ತದೆ. ಆದರೆ ಕೇಂದ್ರ ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದ ಇದು ಇನ್ನೂ ಕಯ್ಗೂಡಿಲ್ಲ. ಯುರೋಪಿನ ನೀತಿಗೆ ಎದುರಾದ ನೀತಿಯನ್ನು ಕೇಂದ್ರ ಸರಕಾರ ಹೊಂದಿದೆ. ಹಲವು ನುಡಿಗಳಿರುವ ದೇಶದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲೀಶ್ ಆಡಳಿತ ನುಡಿಗಳಾಗಿವೆ. ಕೇಂದ್ರ ಸರಕಾರದ ಕಡತಗಳು, ಸೇವೆಗಳು, ಮಾಹಿತಿ, ಕಾನೂನು ಮಾಹಿತಿ, ಹೀಗೆ ಎಲ್ಲದರಲ್ಲೂ ಹಿಂದಿ ಮತ್ತು ಇಂಗ್ಲೀಶಿಗೆ ಮಾತ್ರ ಮನ್ನಣೆ. ಹಯ್ ಕೋರ್‍ಟ್ ಮತ್ತು ಸುಪ್ರೀಂ ಕೋರ್‍ಟ್‍ನಲ್ಲಿ ಕಲಾಪಗಳು ಕೇವಲ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಮಾಡಬೇಕೆಂಬ ಕಾನೂನಿದೆ! ಹಿಂದಿ ಗೊತ್ತಿಲ್ಲದವರು ಎರಡನೆ ದರ್‍ಜೆಯ ಮಂದಿ ಎಂಬ ಬಾವನೆ ಮೂಡಿಸಿದೆ. ಹಿಂದಿಯೇತರರ ಕಲಿಕೆಯಲ್ಲಿ ತ್ರಿಬಾಶಾ ಸೂತ್ರ ಎಂಬ ನಿಯಮವನ್ನು ಹೇಳಿ ಹಿಂದಿಯನ್ನು ಹೇರುತ್ತಿದೆ. ಕೇಂದ್ರ ಸರಕಾರದ ಕೆಲಸ ಮಾಡಬೇಕು ಎಂದರೆ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಹಿಂದಿಯನ್ನು ಕಾಪಾಡಲು ಮತ್ತು ಬೆಳೆಸಲು ಹಿಂದಿ ಪ್ರಚಾರ ಸಬಾ, ಹಿಂದಿ ದಿವಸದಂತಹ ಕೇಂದ್ರ ಸರಕಾರಿ ಅನುದಾನಿತ ಕಾರ‍್ಯಕ್ರಮಗಳು ನಡೆಯುತ್ತಿವೆ. ಒಟ್ಟಿನಲ್ಲಿ ಕೇಂದ್ರ ಸರಕಾರವು ಹಿಂದಿಯ ಪ್ರವಾದಿಯಾಗಿದೆ.

ದೇಶದ ಎಲ್ಲಾ ನುಡಿಗಳನ್ನು ಸಮಾನವಾಗಿ ಕಾಣುವಂತಹ ಯಾವುದೇ ಕೆಲಸಗಳಾಗಲಿ, ಆ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಕೇಂದ್ರವು ಮಾಡುತ್ತಿಲ್ಲ. ಯುರೋಪಿಯನ್ ಒಕ್ಕೂಟವು ಒಪ್ಪಿಕೊಂಡಿರುವ ನುಡಿ-ನೀತಿಯು ಸಮಾನತೆ ಮತ್ತು ಹಲತನವನ್ನು ಗವ್ರವಿಸುವಂತದಾಗಿದೆ. ಹಾಗೆಯೇ ನಮ್ಮ ನಾಡಿನ ಹಲತನವನ್ನು ಎತ್ತಿ ಹಿಡಿಯುವ ನುಡಿ-ನೀತಿಯನ್ನು ಯುರೋಪಿಯನ್ ಮಾದರಿಯಲ್ಲಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.

ಮಾಹಿತಿ ಸೆಲೆ: ವಿಕಿಪೀಡಿಯಾ

(ಚಿತ್ರ ಸೆಲೆ: http://i0.wp.com/scoutmoderation.com/wp-content/uploads/2012/11/multilingual.jpg)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.