ತನ್ನಿಡತದ ಕಾರಿಗೆ ಕಯ್ ಹಾಕಿದ ಎಲೊನ್ ಮಸ್ಕ್!

ಜಯತೀರ‍್ತ ನಾಡಗವ್ಡ.

Elon_Musk

ಕೊಳವೆ ಸಾರಿಗೆಯ ಹರಿಕಾರ ಮತ್ತು ತಾವು ಇತರರಿಗಿಂತ ಬೇರೆಯೇ (ನಮ್ಮ ಉಪ್ಪಿಯಂತೆ!) ಎಂದು ಹೊಸ ಹಮ್ಮುಗೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುವ ಎಲೊನ್ ಮಸ್ಕ್ (Elon Musk) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರೆನೊ-ನಿಸಾನ್ ಕೂಟದ ಕಾರ‍್ಲೊಸ್ ಗೋಸ್ನರಂತೆ ಯಾವತ್ತಿಗೂ ಚುರುಕಿನ ಚಟುವಟಿಕೆಗಳಿಂದ ಕೂಡಿರುವ 42 ರ ಹರೆಯದ ಮಸ್ಕ್, ಈ ಬಾರಿ ತಾವು ಕೂಡ ತಾನಾಗೇ ಓಡುವ ಕಾರುಗಳನ್ನು ತಯಾರಿಸುವ ಹೆಬ್ಬಯಕೆಯನ್ನು ಹೇಳಿಕೊಂಡಿದ್ದಾರೆ.

ಇದರ ವಿಶೇಶವೆಂದರೆ ಇದು ನೂರಕ್ಕೆ 90 ರಶ್ಟು ತನ್ನ ಹಿಡಿತದಲ್ಲೇ ಇರುವ ಕಾರು. ಗೂಗಲ್ ಜತೆ ಸೇರಿಕೊಂಡು ಟೊಯೊಟಾ, ಜಿ.ಎಂ. ಕೂಟಗಳು ಈಗಾಗಲೇ ತಾನಾಗೇ ಓಡುವ ಕಾರುಗಳಅರಕೆಯಲ್ಲಿ ತೊಡಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಇವುಗಳು ನೂರಕ್ಕೆ 70-80 ರಶ್ಟು ತನ್ನಿಡಿತ ಕಾರುಬಂಡಿಗಳಾಗಿವೆ ಅಶ್ಟೆ. 90% ತನ್ನಿಡಿತ ಒದಗಿಸುವ ಮೂಲಕ ಎಲೊನ್ ಮಸ್ಕ್ ರ ಟೆಸ್ಲಾ ಮೋಟರ‍್ಸ್ ಸಂಸ್ತೆ ಉಕ್ಕಾಳಿನ ಕಾರುಗಳ ಕಣಕ್ಕೆ ತೊಡೆ ತಟ್ಟಲು ಸಜ್ಜಾಗಿದೆ.

ಇತ್ತೀಚೆಗೆ ಪಯ್ನಾನ್ಸ್ ಟಾಯಮ್ಸ್ ಸುದ್ದಿ ಕೂಟಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಮಸ್ಕ್. ತಮ್ಮ ಸಂಸ್ತೆಯೇ ಈ ಹಮ್ಮುಗೆಯ ಪೂರ‍್ಣ ಜವಾಬ್ದಾರಿ ಹೊರಲಿದ್ದು, ಇತರೆ ಯಾವುದೇ ಪಾಲುದಾರರ ಜೊತೆಗೆ ಕೂಡಿ ಕೆಲಸ ಮಾಡುವ ಮನಸು ಮಾಡಿದಂತಿಲ್ಲ. ಮಿಂಚು ಬಂಡಿಗಳ (electric vehicle) ತಯಾರಿಕೆಯಲ್ಲಿ ಕೇವಲ ಹತ್ತು ವರುಶದಶ್ಟೇ ಅನುಬವ ಇರುವ ಕೂಟವೊಂದು ಇಂತ ದೊಡ್ಡ ಹಮ್ಮುಗೆಗೆ ಕಯ್-ಹಾಕಿ ಹಲವರನ್ನು ಬೆರಗುಗೊಳಿಸಿದೆ.

ನಿಸಾನ್ ನಂತ ದೊಡ್ಡ ಸಂಸ್ತೆ ತಾನಾಗೇ ಓಡುವ ಕಾರನ್ನು 2020 ರಲ್ಲಿ ಬೀದಿಗಿಳಿಸುವುದಾಗಿ ಹೇಳಿದ್ದರೆ, ತಮ್ಮ ಹಮ್ಮುಗೆಯನ್ನು ಮೂರೇ ವರುಶಗಳಲ್ಲಿ ಪೂರ‍್ಣಗೊಳಿಸುವುದಾಗಿ ಹೇಳಿಕೆ ನೀಡಿದ ಎಲಾನ್ ಮಸ್ಕ್ ರವರು ತಾನೋಡ ಕಯ್ಗಾರಿಕೆಗಳ ಪ್ರಮುಕರು ಹುಬ್ಬೇರಿಸುವಂತೆ ಮಾಡಿದ್ದಾರೆ. ಕೆಲವಾರಗಳ ಹಿಂದೆ ನಡೆದ ಪ್ರಾಂಕ್ ಪರ‍್ಟಿನ ಬಂಡಿಗಳ ತೋರ‍್ಪಿನಲ್ಲಿ (auto show) ಡಯ್ಮಲರ್‍ ಕೂಟದ ಮೇಲಾಳು ಕೂಡ ತನ್ನಿಡಿತದ ಮರ‍್ಸಿಡಿಸ್ ಬೆಂಜ್-ಎಸ್ ಮಾದರಿ ಕಾರಲ್ಲೇ ವೇದಿಕೆ ಮೇಲೆ ಕಾಣಿಸಿಕೊಂಡು ಈ ಪಯ್ಪೋಟಿಗೆ ಮೆರುಗು ಹೆಚ್ಚಿಸಿದ್ದಾರೆ.

ತನ್ನಿಡಿತದ ಬಂಡಿಗಳನ್ನು ತನ್ನೋಡುಗ (auto pilot) ಇರುವ ಬಾನೋಡಕ್ಕೆ ಹೋಲಿಕೆ ಮಾಡುವ ಮಸ್ಕ್, ಮಾಮೂಲು ಹಾರಾಟದ ವೇಳೆಯಲ್ಲಿ ಬಾನೋಡಗಳನ್ನು (aeroplane)  ತಮ್ಮಿಡಿತಕ್ಕೆ ಬಿಟ್ಟು, ಮೇಲೆರುವಾಗ, ಕೆಳಗಿಳಿಸುವಾಗ ಇಲ್ಲವೇ ಕಶ್ಟದ ಸ್ತಿತಿಗಳಲ್ಲಿ ಮಾತ್ರ ಓಡಿಸುಗರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತ ಏರ‍್ಪಾಟು ಈ ಕಾರುಗಳಲ್ಲಿ ಇರುತ್ತದಂತೆ.

ಅಮೆರಿಕಾ, ಕೆನಡಾ ಮುಂತಾದೆಡೆ ಮಿಂಚು ಬಂಡಿಗಳ ತಯಾರಿಸಿ ಗೆಲುವು ಕಂಡಿರುವ ಟೆಸ್ಲಾ ಸಂಸ್ತೆ ತನ್ನಿಡಿತದ ಬಂಡಿಗಳಲ್ಲೂ ಇದನ್ನು ಮರುಕಳಿಸಲಿದೆಯೇ? ಗೂಗಲ್ ನಂತ ದಿಗ್ಗಜ ಸಂಸ್ತೆಗಳು ಹೆಣಗುತ್ತಿರುವಾಗ ಟೆಸ್ಲಾ ತನ್ನ ಮೋಡಿ ಮಾಡಿ ಮುನ್ನುಗ್ಗುವುದೇ? ಕಾದು ನೋಡೊಣ!

(ಮಾಹಿತಿ ಮತ್ತು ಚಿತ್ರಸೆಲೆ: usatoday)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: