ಬ್ರಜಿಲ್‍ನ ತೊಂದರೆಗಳಿಂದ ಕಲಿಯಬೇಕಾದ ಪಾಟ

ಚೇತನ್ ಜೀರಾಳ್.

Brazil-Cost-to-Profit

ಇತ್ತೀಚಿಗೆ ಟ್ರಿಪ್ ಅಡ್ವಯ್ಸರ್ ಎಂಬ ಮಿಂದಾಣವೊಂದು ಹೆಚ್ಚು ತುಟ್ಟಿಯಾಗಿರುವ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲನೇ ಜಾಗದಲ್ಲಿ ನಾರ್‍ವೆಯ ನೆಲೆವೀಡು ಓಸ್ಲೋ ಇದೆ. ಆದರೆ ಗಮನ ಸೆಳೆದಿರುವ ಅಂಶವೆಂದರೆ ಮೇಲು ನಡು ಗಳಿಕೆ (Upper Middle Income) ಹೊಂದಿರುವ ಬ್ರಜಿಲ್ ಜಾಗ ಪಡೆದಿರುವುದು. ಸಾಮಾನ್ಯವಾಗಿರುವ ನಂಬಿಕೆಯಂದರೆ ಹೆಚ್ಚು ಶ್ರೀಮಂತ ನಾಡುಗಳಲ್ಲಿ ಜನರು ಹೆಚ್ಚಿನ ದುಡ್ಡು ಕರ್‍ಚು ಮಾಡಬೇಕಾಗುತ್ತದೆ ಎನ್ನುವುದು. ಆದರೆ ಬ್ರಜಿಲ್ ನಾಡು ಇಲ್ಲಿ ಜಾಗ ಪಡೆದಿರುವುದು ಹಲವರು ಅಚ್ಚರಿಯಿಂದ ನೋಡುವಂತೆ ಮಾಡಿದೆ. ಸಾವೋ ಪಾಲೋ ಅತವಾ ರಿಯೋ ಡಿ ಜನೀರೋದಲ್ಲಿನ ಹೋಟಲುಗಳು ಲಂಡನ್ ಅತವಾ ಜೂರಿಚ್‍ನಲ್ಲಿರುವ ಹೋಟಲ್‍ಗಳಿಗಿಂತಲೂ ತುಟ್ಟಿಯಾಗಿವೆ ಎಂದು ವರದಿ ಹೇಳುತ್ತದೆ. ಯಾಕೆ ಬ್ರಜಿಲ್ ಇಶ್ಟು ತುಟ್ಟಿಯಾಗಿದೆ? ಅಲ್ಲಿ ಸಿಗುವ ಸಾಮಾನುಗಳ ಬೆಲೆಯು ಹೆಚ್ಚಿರುವುದರಿಂದ ಅಲ್ಲಿನ ಸ್ತಳೀಯರಿಗೂ ಸಹ ಬೆಲೆಯೇರಿಕಯ ಬಿಸಿ ತಟ್ಟುತ್ತಿದೆ. ಬ್ರಜಿಲ್‍ನಂತಹದೇ ಗಳಿಕೆ ಹೊಂದಿರುವ ಬಾರತದಲ್ಲೂ ಸಹ ನಾವು ಪ್ರತಿ ದಿನ ಬೆಲೆಯೇರಿಕೆಯ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ. ಹಾಗಿದ್ದರೆ ಬ್ರಜಿಲ್‍ನಲ್ಲಿ ಬೆಲೆಯೇರಿಕೆಗೆ ಕಾರಣವಾಗಿರುವ ಅಂಶಗಳು ಬಾರತದಲ್ಲೂ ಕಾರಣವಾಗಿರಬಹುದೇ? ಮುಂದೆ ನೋಡೋಣ

ಬ್ರಜಿಲ್‍ನಲ್ಲಿ ಏನಾಗಿದೆ?

1990ರ ಹಣಕಾಸು ಸುದಾರಣೆಯ ಗಾಳಿಯಲ್ಲಿ ಬ್ರಜಿಲ್ ದೇಶ ಬಾರತದ ಹಾಗೆ ತನ್ನ ಲಯ ಕಂಡುಕೊಂಡಿತು. ಬ್ರಜಿಲ್ ದೇಶವೀಗ ಹಲವಾರು ಸಾಮಾನುಗಳನ್ನು ತಯಾರಿಸಿ ಹೊರಕಳುಹಿಸುವುದರಲ್ಲಿ (Export) ಮುಂದಾಳಾಗಿದೆ. ಹತ್ತು ವರ್‍ಶದ ಹಿಂದೆ ಒಂದು ಡಾಲರ್-ಗೆ 3.5 ರಿಯಲ್‍ಗಳು (ರಿಯಲ್ ಬ್ರಜಿಲ್ ನಾಡಿನ ಹಣ, ನಮ್ಮಲ್ಲಿನ ರೂಪಾಯಿಯ ಹಾಗೆ) ಸಿಗುತ್ತಿದ್ದವು, ಇಂದಿಗೆ 2.3 ರಿಯಲ್‍ಗಳು ಸಿಗುತ್ತವೆ. ಬ್ರಜಿಲ್ ದೇಶದಲ್ಲಿ ಬೆಲೆಯೇರಿಕೆ ಇದ್ದರೂ ಸಹ ಅದರ ಹಣದ ಬೆಲೆ ಕಡಿಮೆಯಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಹೀಗಿರುವಾಗ ಬ್ರಜಿಲ್‍ನ ಜನರಿಗೆ ಬೆಲೆಯೇರಿಕೆಯ ಬಿಸಿ ತಟ್ಟುತ್ತಿರುವುದಕ್ಕೆ ಕಾರಣವೇನು ಎಂದು ಹುಡುಕಲು ಹೊರಟರೆ ಉತ್ತರ ಹಲವಾರಿವೆ.

ಅಲ್ಲಿನ ಜನರೇ ಹೇಳುವ ಹಾಗೆ ಹೆಚ್ಚಿನ ತೆರಿಗೆ, ಒಳತರಿಸಿಕೊಳ್ಳುವುದರ ಮೇಲಿರುವ ಹೆಚ್ಚಿನ ಸುಂಕ, ಅಲ್ಲಿನ ಜನರನ್ನು ಸರಿಯಾಗಿ ಕೆಲಸದಲ್ಲಿ ಬಳಸಿಕೊಳ್ಳದಂತೆ ತಡೆಯುತ್ತಿರುವ ಕಾನೂನುಗಳು, ರಸ್ತೆ ಮತ್ತು ರಯ್ಲು ಸಂಪರ್‍ಕಗಳು ಸರಿಯಾಗಿಲ್ಲದಿರುವುದು ಮುಂತಾದವು ಹಲವಾರಿವೆ. ಇದರ ಜೊತೆಗೆ ಇನ್ನೊಂದು ಮುಕ್ಯವಾದ ಕಾರಣ ಅಲ್ಲಿನ ಮುರಿದು ಬಿದ್ದಿರುವ ಕಲಿಕೆ ಏರ್‍ಪಾಡು. ಬ್ರಜಿಲ್‍ನ ಕಲಿಕೆ ಏರ್‍ಪಾಡಿನಲ್ಲಿರುವ ತೊಂದರೆಗಳಿಂದಾಗಿ ಅಲ್ಲಿನ ಉದ್ದಿಮೆಗಳಿಗೆ ಬೇಕಾಗಿರುವ ನುರಿತ ಕೆಲಸಗಾರರು ದೊರೆಯದಂತಾಗಿದೆ. ಇತ್ತೀಚೆಗೆ ಮ್ಯಾನ್‍ಪವರ್ ಗ್ರೂಪ್ ಕಂಪನಿಯವರು ನಡೆಸಿದ ಒಂದು ಸಮೀಕ್ಶೆಯಂತೆ, ಜಗತ್ತಿನಲ್ಲೇ ನುರಿತ ಕೆಲಸಗಾರರ ಕೊರತೆಯಿರುವ ನಾಡುಗಳಲ್ಲಿ ಜಪಾನ್ ಮೊದಲನೇ ಜಾಗದಲ್ಲಿದ್ದರೆ, ಬ್ರಜಿಲ್ಲಿನದು ಎರಡನೇ ಜಾಗ. ನುರಿತ ಕಲಸಗಾರರು ಹೆಚ್ಚು ಹೆಚ್ಚು ಸಿಗದಿರುವ ತೊಂದರೆಗೆ ಸಿಲುಕಿ ಬ್ರಜಿಲ್ಲಿನ ಉದ್ದಿಮೆಗಳು ತತ್ತರಿಸುವಂತಾಗಿದೆ. ಇದರಿಂದಾಗಿ ದೊರೆಯುವ ಕಡಿಮೆ ಸಂಕ್ಯೆಯ ನುರಿತ ಕೆಲಸಗಾರರಿಗೆ ಹೆಚ್ಚಿನ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ತಿತಿ ಬಂದೊದಗಿದೆ. ಇದರಿಂದಾಗಿ ಉದ್ದಿಮೆಗಳಿಂದ ಹೊರಬೀಳುವ ಉತ್ಪನ್ನಗಳ ಬೆಲೆಯೂ ಹೆಚ್ಚಾಗುತ್ತದೆ. ಬ್ರಜಿಲ್‍ನ ಉತ್ಪನ್ನಗಳ ಬೆಲೆ ಎಶ್ಟು ಹೆಚ್ಚುತ್ತಿದೆಯಂದರೆ ಅಲ್ಲಿನ ಜನರಿಗೆ ಹೊರಗಡೆಯಿಂದ ಸಾಮಾನು ತರಿಸಿಕೊಳ್ಳುವುದೇ ಅಗ್ಗವಾಗಿದೆ.

ಕರ್‍ನಾಟಕ ಎಚ್ಚೆತ್ತುಕೊಳ್ಳಬೇಕಿದೆ!

ಹವ್ದು, ಮೇಲೆ ಬ್ರಜಿಲ್ ನಾಡಿನಲ್ಲಾಗುತ್ತಿರುವ ತೊಂದರೆಗಳು ಬಾರತದಲ್ಲೂ ಸಹ ಕಾಣಸಿಗುತ್ತಿವೆ. ಗಮನಿಸಬೇಕಾಗಿರುವ ಇನ್ನೊಂದು ಪ್ರಮುಕವಾದ ಅಂಶವೆಂದರೆ ಮೇಲೆ ನೋಡಿರುವ ಹಾಗೆ ಜಪಾನ್ ಮತ್ತು ಬ್ರಜಿಲ್ ದೇಶಗಳು ವಿಶ್ವದಲ್ಲೇ ನುರಿತ ಕೆಲಸಗಾರರು ಸಿಗದ ಮೊದಲೆರೆಡು ನಾಡುಗಳಾಗಿದ್ದರೆ, ಮೂರನೆಯ ಜಾಗದಲ್ಲಿ ಬಾರತವಿದೆ. ಜಪಾನ್ ನಾಡಿನಲ್ಲಿ ನುರಿತ ಕೆಲಸಗಾರರು ಸಿಗದಿರುವುದಕ್ಕೆ ಕಾರಣ ಅಲ್ಲಿ ಹದಿಹರೆಯದವರ ಸಂಕ್ಯೆ ಕಮ್ಮಿಯಿರುವುದು! ಅತೀ ಹೆಚ್ಚು ಜನರು ಅಲ್ಲಿ ವಯಸ್ಸಾಗಿರುವುದರಿಂದ ನುರಿತ ಯುವ ಕೆಲಸಗಾರರು ಸಿಗದಂತಾಗಿದೆ. ಇನ್ನು ಬ್ರಜಿಲ್ ನಲ್ಲಿ ನುರಿತ ಕೆಲಸಗಾರರು ಸಿಗದಿರುವುದಕ್ಕೆ ಅಲ್ಲಿನ ಕಲಿಕೆ ಏರ್‍ಪಾಡಿನಲ್ಲಿ ಇರುವ ತೊಂದರೆಗಳು ಕಾರಣ ಅನ್ನುವುದನ್ನು ಮೇಲೆ ನೋಡಿದ್ದೇವೆ. ಬಾರತದಲ್ಲಿ ಹದಿಹರೆಯದವರ ಎಣಿಕೆ ಹೆಚ್ಚಿದ್ದರೂ ನುರಿತ ಕೆಲಸಗಾರರ ಕೊರತೆ ಹೆಚ್ಚಿರುವುದಕ್ಕೆ ಕಾರಣ, ಬಾರತದ ಕಲಿಕೆಯೇರ್‍ಪಾಡಿನಲ್ಲಿರುವ ತೊಂದರೆಗಳು.

ಇಂದು ಕರ್‍ನಾಟಕದಲ್ಲೂ ಸಹ ಬೇಲೆಯೇರಿಕೆಯ ಬಿಸಿ ನಮಗೆ ದಿನವೂ ತಟ್ಟುತ್ತಿದೆ. ಹಾಲು, ತರಕಾರಿ, ದಿನಸಿ ಸಾಮಾನುಗಳು ಹೀಗೆ ಪ್ರತಿಯೊಂದರೆ ಬೆಲೆಯೂ ಹೆಚ್ಚುತ್ತಾ ಹೋಗುತ್ತಿದೆ. ಬ್ರಜಿಲ್ ದೇಶದಲ್ಲಿ ತುಂಬಾ ಹೆಚ್ಚೆನಿಸುವಶ್ಟು ಬೆಲೆಯೇರಿಕೆಗೆ ಕಾರಣವಾದವುಗಳೇ ಬಾರತದಲ್ಲೂ ಇವೆ, ಮತ್ತು ಕರ್‍ನಾಟಕದಲ್ಲೂ ಇವೆ. ನಮ್ಮ ನಾಡಿನಲ್ಲಿರುವ ರಸ್ತೆ ಸಂಪರ್‍ಕ ಸರಿಯಾಗಿಲ್ಲ, ರಯ್ಲು ಸಂಪರ್‍ಕದ ಬಗ್ಗೆ ಮಾತನಾಡದಿರುವುದೇ ಒಳಿತು. ಹೀಗಾಗಿ ಸಮಾನುಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುವುದರಲ್ಲೇ ಬೆಲೆ ಏರಿಕೆಯ ಅಂಶ ಸೇರಿಕೊಳ್ಳುತ್ತದೆ. ಇದರ ಜೊತೆಗೆ ಇನ್ನೊಂದು ಮುಕ್ಯವಾದ ಅಂಶ ನುರಿತ ಕೆಲಸಗಾರರು ಸಿಗದಿರುವುದು ನಮ್ಮಲ್ಲೂ ಸಮಸ್ಯೆಯಾಗಿದೆ. ಇದಕ್ಕೆ ಮುಕ್ಯ ಕಾರಣ ನಮ್ಮ ಕಲಿಕೆ ಏರ್‍ಪಾಡು.

ಪಿಸಾ (ಪ್ರೋಗ್ರಾಮ್ ಪಾರ್ ಇಂಟರ್ ನ್ಯಾಶನಲ್ ಸ್ಟುಡೆಂಟ್ ಅಸ್ಸೆಸ್ಮೆಂಟ್) ಪಟ್ಟಿಯ ಪ್ರಕಾರ ಒಟ್ಟು 73 ದೇಶಗಳ ಪಟ್ಟಿಯಲ್ಲಿ ಬಾರತದ ಕಲಿಕೆಯ ಮಟ್ಟ 72 ನೇ ಜಾಗದಲ್ಲಿದೆ! ಈ ಪಟ್ಟಿ ತಯಾರಿಸುವಾಗ ಕಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಸಹ ಗಣನೆಗೆ ತಗೆದುಕೊಳ್ಳಲಾಗಿದೆ. ಇದು ನಮ್ಮನ್ನೆಲ್ಲಾ ಬೆಚ್ಚಿಬೀಳಿಸಬೇಕಾದ ವಿಶಯ. ಇಂದು ನಮ್ಮಲ್ಲಿರುವ ಕಲಿಕೆ ಏರ್‍ಪಾಡಿನಲ್ಲಿರುವ ತೊಂದರೆಗಳಿಂದಾಗಿ ಹಲವಾರು ಹುಡುಗರು/ಹುಡುಗಿಯರು ಅರ್‍ದಕ್ಕೆ ಕಲಿಕೆಯನ್ನು ನಿಲ್ಲಿಸುತ್ತಿದ್ದಾರೆ. ಇನ್ನು ಒಂದು ಹಂತದ ಕಲಿಕೆಯ ಬಳಿಕ ಇಂಗ್ಲೀಶಿನಲ್ಲಿ ಮಾತ್ರ ಸಿಗುವ ಕಲಿಕೆಯನ್ನು ಪೂರ್‍ತಿ ಅರಗಿಸಿಕೊಳ್ಳಲಾಗದೇ ನುರಿತ ಕೆಲಸಗಾರರಾಗಲು ಬೇಕಾಗಿರುವ ಕಲಿಕೆ ಪಡೆಯದೇ, ಕಲಿಕೆ ಪಡೆದರೂ ಅರ್‍ಹತೆ ಪಡೆಯದೆ ಹಿಂದುಳಿಯುವ ವಿದ್ಯಾರ್‍ತಿಗಳ ಸಂಕ್ಯೆ ತುಂಬಾ ದೊಡ್ಡದಿದೆ. ಒಂದು ಶಕ್ತಿಶಾಲಿ ನಾಡು ಕಟ್ಟಬೇಕಾದಲ್ಲಿ ಅಲ್ಲಿಯ ಕಲಿಕೆಯೇರ್‍ಪಾಡು ಬಹುದೊಡ್ಡ ಪಾತ್ರ ವಹಿಸುತ್ತದೆ. ಇಂದು ಕಲಿಕೆ ಏರ್‍ಪಾಡಿನ ತೊಂದರೆಗಳನ್ನು ಅರಿತು ಆದಶ್ಟು ಬೇಗೆ ಸರಿ ಮಾಡುವ ಕೆಲಸವಾಗಬೇಕಿದೆ, ಇಲ್ಲವಾದಲ್ಲಿ ನಾವು ಹಿಂದುಳಿಯುವುದು ಕಂಡಿತ. ಕಲಿಕೆಯೇರ್‍ಪಾಡನ್ನು ತಿದ್ದಿದಾಗ ಮಾತ್ರ ನಾವು ಒಂದು ಸುಂದರ ನಾಡನ್ನು ಮುಂದಿನ ಪೀಳಿಗೆಗೆ ಕಟ್ಟಲು ಸಾದ್ಯ!

(ಮಾಹಿತಿ ಸೆಲೆ: economist.com)
(ಚಿತ್ರ ಸೆಲೆ: ricardo.parente.us)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s