ಜಪಾನಿಗರ ಜಾಣ್ಮೆ ಸಾರುತ್ತಿರುವ ಟೋಕಿಯೋ ಮೆಟ್ರೊ

ವಿವೇಕ್ ಶಂಕರ್.

Tokyo_Public_Transportation

ಟೋಕಿಯೋ ಜಗತ್ತಿನ ಪೆರ‍್ಪೊಳಲುಗಳಲ್ಲಿ (metropolis) ಒಂದು. ಕೋಟಿಗಟ್ಟಲೇ ಮಂದಿ ನೆಲೆಸಿರುವ ಊರಿನಲ್ಲಿ ಮಂದಿ ಕೆಲಸಕ್ಕೆ ಹೋಗಿ ಬರುವುದನ್ನು ನೆನೆದರೂ ಸಾಕು, ಅದೊಂದು ಆಗದ ಕೆಲಸ ಅಂತ ನಮ್ಮಲ್ಲಿ ಮೂಡಿ ಬರುವ ಯೋಚನೆ ಸಹಜ ಅನಿಸಿಬಿಡುತ್ತದೆ. ಆದರೆ ಇಶ್ಟೊಂದು ಮಂದಿ ಕೆಲಸಕ್ಕೆ ಹಾಗೂ ಮನೆಗೆ ಹೋಗಿ ಬರುವುದು ಇಲ್ಲಿ ಅಡೆತಡೆಯಿಲ್ಲದೇ ನಡೆಯುವುದಕ್ಕೆ ದೂಸರು ಟೋಕಿಯೋ ಮೆಟ್ರೊ (Tokyo Metro). ಟೋಕಿಯೋದಂತ ದಟ್ಟಣೆಯ ಊರಿನಲ್ಲಿ ಮಂದಿಯ ಸಾರಿಗೆಗಾಗಿ ಜಪಾನಿಗರು ಕಟ್ಟಿರುವ ಈ ಏರ‍್ಪಾಟು ಅವರ ಜಾಣ್ಮೆಗೆ ಹಿಡಿದ ಕಯ್ಗನ್ನಡಿಯಂತಿದೆ.

ಮೆಟ್ರೊ ನೆಲುಹು (network) ಇಡೀ ಟೋಕಿಯೋವನ್ನು ಸುತ್ತುವರೆದಿರುವುದರಿಂದ ಹೊಸಬರಿಗೆ ಗೊಂದಲವುಂಟು ಮಾಡುವುದರಲ್ಲಿ ಎರಡು ಮಾತಿಲ್ಲ. ಯಾವುದೇ ನಿಲ್ದಾಣಕ್ಕೆ ಹೋದರೆ ಸಾಕು, ಮಂದಿಯ ಅಟ್ಟುಳಿಗಳು (crowds), ಹಲವು ಹಳಿಬಂಡಿಗಳು ’ಸುಯ್’ ಅಂತಾ ಬರುವುದು, ಹೊರಡುವುದನ್ನು ನೋಡಿದರೆ ಎಂತವರೂ ತಬ್ಬಿಬ್ಬಾಗುತ್ತಾರೆ. ಮೆಟ್ರೊ ಸಾಗಣೆ ಒಂದು ಚಣಕ್ಕೂ ನಿಲ್ಲದೆ ನಡೆಯುತ್ತದೆ. ಇಲ್ಲಿ ಹೊತ್ತು ಅಂದರೆ ಹೊತ್ತು, ಅದಕ್ಕೆ ತುಂಬಾ ತುಂಬಾ ಬೆಲೆ ಇದೆ. ಓಡಾಡುವ ಹಳಿಬಂಡಿಗಳು ಗಡಿಯಾರದ ಸರಿಯಳತೆಯ (clock accuracy) ಹಾಗೆ ಓಡಾಡುತ್ತವೆ. ಇದನ್ನು ನೋಡಿದ ಬೇರೆ ನಾಡಿನವರು ತಾವೂ ಇಂತಹ ಏರ‍್ಪಾಟು ಕಟ್ಟಬೇಕೆಂಬ ಬಯಕೆಗಳಿದ್ದರೂ ಅದನ್ನು ದಿಟ ಮಾಡಲಾಗದೇ ಜಪಾನಿಗರ ಕರಾರುವಕ್ಕಾದ ಕೆಲಸಕ್ಕೆ ತಲೆದೂಗಿದ್ದಾರೆ.

ಮೆಟ್ರೊ ಸಾಗಾಣಿಕೆ ಸರಿಯಾಗಿ ಕೆಲಸ ಮಾಡಲು ಎಣ್ಣುಕಗಳ ಅಳವು ಬಳಸಲಾಗುತ್ತದೆ. ಮಂದಿಯಿಂದ ಆಗುವ ತಪ್ಪುಗಳನ್ನು ತಪ್ಪಿಸುವುದಕ್ಕೆ ಇಲ್ಲಿ ಮಂದಿ ಬದಲು ಎಣ್ಣುಕಗಳು ಈ ಸಾರಿಗೆಯ ಏರ‍್ಪಾಟನ್ನು ನೋಡಿಕೊಳ್ಳುತ್ತವೆ. ಮುಂಚೆ ಹೇಳಿದ ಹಾಗೆ ಇಲ್ಲಿ ಹೊತ್ತಿಗೆ ತುಂಬಾ ತುಂಬಾ ಬೆಲೆ ಇದೆ. ಒಂದು ಚೂರು ತಡವಾದರೂ ತಕ್ಕದುದಾದ ಸೇವೆ ದೊರೆಯವರೆಗೂ ನಿಲ್ದಾಣಗಳಲ್ಲಿ ಮನ್ನಣೆಯಿಂದ ಸಾರಿಕೆಗಳು (announcements) ಕೇಳಿ ಬರುತ್ತವೆ. ಸರಿಯಾದ ಹೊತ್ತಿಗೆ ತಮ್ಮ ಹಳಿಬಂಡಿಗಳು ಬರಬೇಕು, ಹೊರಡಬೇಕೆನ್ನುವುದು ಇಲ್ಲಿನ ಮಂದಿಯ ಬೇಡಿಕೆ ಹಾಗಾಗಿ ತಡವಾದರೆ ಅದನ್ನು ತಾಳಿಕೊಳ್ಳುವ ತಾಳ್ಮೆ ಜಪಾನಿಯರಲ್ಲಿ ತುಂಬಾ ಕಡಿಮೆ.

ಟೋಕಿಯೋದಲ್ಲಿ, ಟೋಕಿಯೋ ಮೆಟ್ರೊ ಮತ್ತು ಟೊಯ್ ಸಬ್-ವೇಯ್ ಎಂಬ ಎರಡು ಸಾರಿಗೆಯ ಏರ‍್ಪಾಟಗಳಿವೆ. ಇವುಗಳ ನಡುವೆ ಒಂದು ನಾಳಿನಲ್ಲೇ ಸುಮಾರು ಹತ್ತು ಮಿಲಿಯನ್ (ಒಂದು ಕೋಟಿ) ಮಂದಿ ಹಳಿಬಂಡಿಗಳಲ್ಲಿ ಓಡಾಡುತ್ತಾರೆ. ಊರಿನ ಮೇಲ್ಗಡೆ ಓಡಾಡುವ ಇತರ ಹಳಿಬಂಡಿಗಳ ಜೊತೆ ಕೂಡ ಹೊಂದಾಣಿಕೆ ಇಟ್ಟುಕೊಂಡಿವೆ. ಎಲ್ಲೇ ಒಂದು ಚೂರು ತಡವಾದರು ಅದರಿಂದ ಹಲವಾರು ಕಡೆ ಗೊಂದಲ, ತಡೆ ಉಂಟಾಗುತ್ತವೆ. ಆದರೆ ಇಂತ ತಡೆಗಳಾಗಿರುವುದು ತುಂಬಾ ತುಂಬಾ ಕಡಿಮೆ.

ಮೆಟ್ರೊ ಹಳಿಬಂಡಿಯಲ್ಲಿ, ನಿಲ್ದಾಣದಲ್ಲಿ ಮತ್ತು ಇತರ ಎಲ್ಲ ಸೇವೆಗಳಲ್ಲೂ ಅಲ್ಲಿನ ಜಪಾನೀಸ್ ನುಡಿಯನ್ನು ಯಾವುದೇ ಹಿಂಜರಿಕೆಯಿಲ್ಲದೇ ಬಳಸುತ್ತಿದ್ದಾರೆ. ಹಲವು ಬೇರೆ ನಾಡುಗಳಿಂದ ಬಂದಿಳಿಯುವ ಮಂದಿಗೆ ನೆರವಾಗಲೆಂದು ಟೋಕಿಯೋ ಮೆಟ್ರೊದಲ್ಲಿ ಇಂಗ್ಲಿಶ್ ಇಲ್ಲವೇ ಮತ್ತೊಂದು ಹೆರನುಡಿಯನ್ನು ಬೇಕಾಬಿಟ್ಟಿ ಹೇರಲಾಗುತ್ತಿಲ್ಲ. ಅದೇ ನಮ್ಮ ಬೆಂಗಳೂರು ಮೆಟ್ರೊದಲ್ಲಿ ಒಂಚೂರೂ ಬೇಕಿರದ ಹಿಂದಿ ಹೇರುತ್ತಿರುವುದು, ಬೇರೆಯವರಿಗೆ ನೆರವಾದರೆ ಸಾಕು ಕನ್ನಡಿಗರಿಗೆ ಏನಾದರೇ ನಮಗೇನು ಅಂತಾ ಇಂಗ್ಲಿಶನ್ನು ಎಗ್ಗಿಲ್ಲದೇ ಬಳಸುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ ಅಲ್ಲವೇ ?

ಒಟ್ಟಿನಲ್ಲಿ ಜಪಾನಿಗರ ಜಾಣ್ಮೆ, ತನ್ನತನವನ್ನು ಎತ್ತಿತೋರುತ್ತಿದೆ ಟೋಕಿಯೋ ಮೆಟ್ರೊ ಏರ‍್ಪಾಟು.

(ತಿಟ್ಟಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications