ಕಡಲಿನಿಂದ ಕುಡಿಯುವ ನೀರು

ವಿವೇಕ್ ಶಂಕರ್.

convert-seawater-1

ನೀರಿಗೂ ನಮ್ಮ ಬದುಕಿಗೂ ಇರುವ ನಂಟು ಬೇರ‍್ಪಡಿಸಲಾಗದಂತದು. ನೆಲದಲ್ಲಿ 326 ಮಿಲಿಯನ್ ಟ್ರಿಲಿಯನ್ ಗ್ಯಾಲನ್ ನೀರು ಇದ್ದರೂ ಅದರ ಕೊರತೆಯ ಬಗ್ಗೆನೇ ನಾವೂ ತುಂಬಾ ಮಾತನಾಡುತ್ತೇವೆ. ಇದೊಂದು ಬಗೆಯಲ್ಲಿ ಬೆರಗು ಉಂಟು ಮಾಡುತ್ತದೆ ಅಲ್ವೇ? ಇದಕ್ಕೆ ಕಾರಣ ನೆಲದಲ್ಲಿರುವ ಒಟ್ಟು ನೀರಿನಲ್ಲಿ ನೂರಕ್ಕೆ 0.5 ಅಶ್ಟೇ ಕುಡಿಯುವ ನೀರು, 98.5 ರಶ್ಟು ಕಡಲಿನಲ್ಲಿರುವ ಉಪ್ಪು ನೀರು ಮತ್ತು ಮಿಕ್ಕ 1.5 ರಶ್ಟು ಮಂಜುಗಡ್ಡೆಯ ಬಗೆಯಲ್ಲಿ ಇದೆ. ನೆಲದ ಮಂದಿಯೆಣಿಕೆ (world population) ಹೆಚ್ಚಾಗುತ್ತಿದೆ, ಇದರ ಜೊತೆ ಸುಂಟರಗಾಳಿ, ನೆಲನಡುಕ (earthquake) ಮುಂತಾದ ಕೇಡಿನ ನೆಲದಾಗುಹಳಿಂದಲೂ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿದೆ.

ಇಶ್ಟೊಂದು ನೀರು ಕಡಲಿನಲ್ಲಿ ಇದ್ದ ಮೇಲೆ ಅದೇ ಕಡಲಿನ ನೀರನ್ನು ಚೊಕ್ಕಗೊಳಿಸಿ ಅದನ್ನು ಕುಡಿಯುವುದಕ್ಕೆ ಬಳಸಬಹುದೇ ಅಲ್ವೇ? ಈ ಕೇಳ್ವಿ ನಮ್ಮಲ್ಲಿ ಹಲವು ಸಲ ಮೂಡುತ್ತದೆ.  ಕಡಲಿನ ನೀರನ್ನು ಕುಡಿಯುವ ನೀರಾಗಿ ಮಾರ‍್ಪಡಿಸಬಹುದು ಆದರೆ ದೊಡ್ಡ ಮಟ್ಟದಲ್ಲಿ ಉಪ್ಪುನೀರನ್ನು ಚೊಕ್ಕಗೊಳಿಸುವ ಬೆಲೆ ತುಂಬಾ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚು ಕಡಿಮೆ ಕಯ್ಬಿಡಲಾಗಿದೆ. ಆದರೆ ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಿರುವುದರಿಂದ ಇದನ್ನು ಕೆಲವು ಕಡೆ ಮತ್ತೆ ಜಾರಿಗೆ ತರುತ್ತಿದ್ದಾರೆ. ಈ ಚೊಕ್ಕಗೊಳಿಕೆಯನ್ನು ಉಪ್ಪುತೆಗೆತ/ಉಪ್ಪುಗಳೆಯುವಿಕೆ (de-salination) ಅಂತ ಕರೆಯುತ್ತಾರೆ. ಇದರ ಬಗ್ಗೆ ತುಸು ತಿಳಿದುಕೊಳ್ಳೋಣ ಬನ್ನಿ.

ಉಪ್ಪುತೆಗೆತ ಹರಿಗೆಯಿಳಿಕೆಯ (distillation) ಅಡಿಕಟ್ಟಲೆಯ (principle) ಮೇಲೆ ನಿಂತಿದೆ. ನೀರನ್ನು ಕುದಿಸಿ ಅದು ಆವಿಯಾದ ಮೇಲೆ ಉಪ್ಪು ಮತ್ತು ಬೇರೆ ಕಲುಹೆಗಳನ್ನು (impurities) ಹಿಂದೆ ಬಿಟ್ಟು, ನೀರಾವಿಯನ್ನು(water-vapour) ಇಂಗಿಸಿದರೆ ಮತ್ತೆ ನೀರಾಗುತ್ತದೆ. ಹೀಗೆ ಚೊಕ್ಕ ಕುಡಿಯುವ ನೀರು ಪಡೆಯಬಹುದಾದರೂ ಈ ಕೆಲಸಕ್ಕೆ ಕಸುವಿನ ಬಳಕೆ ಹೆಚ್ಚು. ಆದುದರಿಂದಲೇ ಇಂತ ಹರಿಗೆಯಿಳಿಕೆ ಕಯ್ಗಾರಿಕೆಗಳು (distillation plants) ಮಿಂಚು ಕಯ್ಗಾರಿಕೆಗಳ (power plants) ಬಳಿ ಇರುತ್ತವೆ.

ಆವಿಯಾಗಿಸಿ ಕುಡಿಯುವ ನೀರು ಪಡೆಯುವ ಬಗೆಗಳಲ್ಲಿ ಒಂದಾದರೆ, ಇನ್ನೊಂದು ಬಗೆಯಲ್ಲಿ ಉಪ್ಪುನೀರನ್ನು ಚೊಕ್ಕಗೊಳಿಸಬಹುದು, ಅದೇ ಹಿನ್ನಡೆಸುವ ಪೊರೆತೂರ‍್ಪು (reverse osmosis) ಉಪ್ಪುತೆಗೆತ. ಇದರಲ್ಲಿ ನೀರನ್ನು ಹಲವು ಸೋಸುತಟ್ಟೆಗಳೊಳಗೆ (filters) ಕಳುಹಿಸಿ ಅದರಲ್ಲಿರುವ ಕಲುಹೆಗಳನ್ನು ಬೇರ‍್ಪಡಿಸಲಾಗುತ್ತದೆ. ಈ ಎರಡು ಹೊಲಬುಗಳಲ್ಲಿ ಉಪ್ಪಿನ ಜೊತೆ ಬೇಡದ ಕಲುಹೆಗಳನ್ನು ತೆಗೆಯಲಾಗುತ್ತದೆ. ಹಿನ್ನಡೆಸುವ ಪೊರೆತೂರ‍್ಪನ್ನು ಕಂಡುಹಿಡಿದಿದ್ದು 1960 ಹತ್ತೇಡಿನಲ್ಲಿ. 1970 ರಿಂದ ಇದನ್ನು ಹೆಚ್ಚು ಹೆಚ್ಚು ಬಳಕೆಗೆ ತರಲಾಯಿತು.

ಸವ್ದಿ ಅರೇಬಿಯಾದವರು ಉಪ್ಪುತೆಗೆತದಿಂದ ನೀರು ಚೊಕ್ಕಗೊಳಿಸುವ ಏರ‍್ಪಾಡುಗಳನ್ನು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬಳಸುತ್ತಾರೆ. ಅದೇ ಅಮೇರಿಕಾದಲ್ಲಿ ಕಾಳಗದ ಹಡಗುಗಳನ್ನು ಉಪ್ಪುತೆಗೆತದ ಕೆಲಸಕ್ಕೆ ಬಳಸುತ್ತಾರೆ. ಮೇಲೆ ತಿಳಿಸಿದಂತೆ ಉಪ್ಪುತೆಗೆತದಿಂದ ಕುಡಿಯುವ ನೀರು ಪಡೆಯಲು ಇರುವ ದೊಡ್ಡ ಅಡ್ಡಿ ಅಂತ ಏರ‍್ಪಾಡನ್ನು ನಡೆಸುವ ಬೆಲೆ. ಉಪ್ಪುತೆಗೆತ ಹಾಗೂ ಹಿನ್ನಡೆಸುವ ಪೊರೆತೂರ‍್ಪಿನ ಸೋಸುತಟ್ಟೆಗಳ ಬೆಲೆ ಮುಂಚೆಗಿಂತ ಈಗ ಕಡಿಮೆ ಆಗಿದೆಯಾದರೂ, ಈ ಕಯ್ಗಾರಿಕೆಗಳನ್ನು ನಡೆಸುವುದಕ್ಕೆ ಬೇಕಾಗಿರುವ ಕಸುವು (energy) ಬಳಕೆ ತುಂಬಾ ಹೆಚ್ಚು. ಉಪ್ಪುತೆಗೆತದ ಒಟ್ಟು ಬೆಲೆಯಲ್ಲಿ ಕಸುವು ಬಳಕೆಯೇ 1/3 ರಶ್ಟಿದೆ. ಕೊನೆಗೆ ಕುಡಿಯುವ ನೀರನ್ನು ಬೇರೆ ಕಡೆ ಸಾಗಿಸುವ ಬೆಲೆಯನ್ನು ಮರೆಯಬಾರದು. ಕರಾವಳಿಯಲ್ಲಿದ್ದರೆ ಇದು ಕಡಿಮೆ ಆದರೆ ನಾಡಿನೊಳಗೆ ಕುಡಿಯುವ ನೀರನ್ನು ಸಾಗಿಸುವುದು ದೊಡ್ಡ ಹಾಗು ಬೆಲೆಯುಳ್ಳ ಕೆಲಸವೇ.

ಈ ಎಲ್ಲ ಅಡ್ಡಿಗಳಿದ್ದರು ಮುಂದಿನ ನಾಳುಗಳಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚುವುದರಿಂದ ಉಪ್ಪುತೆಗೆತದ ಬಳಕೆ ಹೆಚ್ಚಾಗಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. smhamaha says:

    ವಿವೇಕಣ್ಣ ,

    ನಿಮ್ಮ ಪದಗಳ ಕಟ್ಟುವ ಅರಿಮೆಗೆ ನನ್ನ ಹದುಳೊರೆಗಳು

    ಹರಿಗೆಯಿಳಿಕೆ = ಹರಿಗೆ + ಇಳಿಕೆ .. ಇಳಿಕೆ ಏನು ಅಂತ ಗೊತ್ತು … ಆದರೆ ಹರಿಗೆ ಅಂದರೆ ???
    ಪೊರೆತೂರ‍್ಪು ಅಂದರೆ “ಪೊರೆ ಇಂದ ತೂರಿಕೊಂಡು ಬಂತು” ಅಂತ ಆಗುತ್ತಾ ??
    ವಸಿ ಬಿಡಿಸಿ ಹೇಳಿ

  2. ಮಾನ್ಯರೇ,

    ನಿಮ್ಮ ಕೇಳ್ವಿಗಳಿಗೆ ನನ್ನಿ.

    ಯಾವುದೇ ಹರಿಯುವ ವಸ್ತುವಿಗೆ ನಾನು “ಹರಿಗೆ” ಅಂತ ಪದವನ್ನು ಬಳಸುತ್ತಿದ್ದೇನೆ. ಇಲ್ಲಿ “ಹರಿ” ಪದಕ್ಕೆ “-ಗೆ” ಒಟ್ಟು ಸೇರಿಸಿ ಈ ಪದವನ್ನು ಕಟ್ಟಲಾಗುವುದು, ಅಂದರೆ “ಹರಿ” ಎಂಬ ಎಸಕಕ್ಕೆ ಒಳಗೊಳ್ಳುವ ವಸ್ತು ( ಸರಕು ) ಅಂತ ತಿಳಿಸಲು “-ಗೆ” ಒಟ್ಟನ್ನು ಬಳಸಲಾಗಿದೆ.

    ಇನ್ನೂ ಎರಡನೆಯ ಕೇಳ್ವಿ, ಒಂದು ಪೊರೆಯನ್ನು ತೂರುವು ಎಸಕವನ್ನು ತಿಳಿಸಲು ಈ ಪದದ ಬಳಕೆ ಮಾಡಲಾಗುವುದು. ತೂರು ತಮಗೆ ಗೊತ್ತಿರುವ ಹಾಗೆ ಎಸಕಪದ ಅದರ ಹೆಸರುಪದವೇ ತೂರ‍್ಪು.

    ಇಂತಿ,
    ವಿವೇಕ್ ಶಂಕರ್

    • smhamaha says:

      ಸಕತ್ ದೇವ್ರು .. “ಹರಿಗೆ” ತಲೆ ಒಳಿಕ್ಕೆ ಮಡಿಕೊತೀನಿ … ಈಗೆ ಇನ್ನು ಹೆಚ್ಚಗೆ ಬರಲಿ .. ಕನ್ನಡದ ನುಡಿ ಕಟ್ಟಲೆಗಳನ್ನು ಚನ್ನಗಿ ಅರೆದು ಕುಡಿದಿದ್ದೀರ

smhamaha ಗೆ ಅನಿಸಿಕೆ ನೀಡಿ Cancel reply

%d bloggers like this: