ಪಯಣದಲ್ಲಿನ ತಿರುವುಗಳು…

– ಶ್ವೇತ ಪಿ.ಟಿ.

 

bus

ಇದೇ ಮೊದಮೊದಲು ಮತ್ತೆ ಬಯಸದ ಅನುಬವ. ವಾಕಳಿಕೆ ಬಂದರೂ ಸಹಿಸಿಕೋ ಎನ್ನುವವಳಿಲ್ಲ, ಆಕಳಿಕೆ ಬಂದರೆ ಒರಗಲು ಬುಜವಿಲ್ಲ. ಜನುಮದ ಸೇಡು ತೀರಿಸಿಕೊಂಡೆಯಾ ನನ್ನೊಬ್ಬಳನೆ ಬಿಟ್ಟು? ಸುತ್ತಲೂ ಹತ್ತಾರು ಮಂದಿಯಿದ್ದರೂ ನೀನಿದ್ದ ಸಮಾದಾನವಿಲ್ಲ ನನಗೆ. ಅರೆಗಳಿಗೆಗೊಮ್ಮೆ “ಏನ್ ಬೇಕೆ” ಅನ್ನುತ್ತಿದ್ದ ನಿನ್ನ ಮಾತು ಅಂದು ಸ್ವಲ್ಪ ಕಿರಿಕಿರಿಯಾಗುತ್ತಿದ್ದರೂ ಇಂದು ಆ ಮಾತಿಗೆ ಹಾತೊರೆಯುತ್ತಿದ್ದೇನೆ. ನಿನ್ನ ಮಹತ್ವವನ್ನು ನನಗೆ ಹೀಗೆ ತಿಳಿಸಲು ಮೊದಲೇ ನಿಶ್ಚಯಿಸಿದ್ದೆಯಾ…? “ಅಮ್ಮ ಸ್ವಲ್ಪ ಕಿಟಕಿ ಹಾಕ್ತೀಯಾ?” ಅಂದಾಗ ನೆನಪಾಗಿದ್ದು ಅಯ್ಯೋ ನಾನು ಬಸ್‍ನಲ್ಲಿದ್ದೇನೆ ಎನ್ನುವ ವಾಸ್ತವ. ಅದಾಗಲೆ ಅರ್‍ದ ದಾರಿ ಮುಗಿಯಿತಾ! ಯಾವ ದಯ್ವ ಕಾಪಾಡಿತೋ ನನ್ನ. ಬಸ್‍ಸ್ಟ್ಯಾಂಡ್‍ನಿಂದಲೇ ವಾಕಳಿಸುವ ನನಗೆ ಅಂದು ಕಾಪಾಡಿದ್ದು ಅಮ್ಮನ ನೆನಪು.

ಅಂತೂ ನೆನಪಿಗೊಂದು ವಿರಾಮ, ಮುಂದಿನ ಗತಿ ಅನ್ನುವಶ್ಟರಲ್ಲಿ “ಹತ್ನಿಮ್ಶ ಪ್ರೀ ಎಲ್ಲಾ ಮುಗುಸ್ಕೊಳ್ಳಿ” ಎಂದ ಡ್ರಯ್ವರ್‍ ಹೋಟೆಲ್ ಒಳಗೆ ನುಗ್ಗಿದರು. ಕುಳಿತಲ್ಲೇ ಕಣ್ಣಾಡಿಸುತ್ತಿದ್ದ ನನ್ನ ಕಣ್ಣುಗಳಿಗೆ ಕಂಡದ್ದು ಆರಡಿ ಎತ್ತರದ, ಗೀಜಗನ ಗೂಡು ಗಡ್ಡದ ಮುಸಲ್ಮಾನ್. ಇನ್ನೇನು ಬಸ್ ಹೊರಟಿತು ಎನ್ನುವಶ್ಟರಲ್ಲಿ ಕಾಕಿ ಜೇಬಿನಿಂದ ಒಂದು ನೋಟು ತೆಗೆದು ಕುರುಡನ ಕಯ್ಗಿಟ್ಟು “ಅಲ್ಲಾ” ಎಂದರು. ಎಂತಾ ಒಳ್ಳೆಯ ವ್ಯಕ್ತಿ ಎನಿಸಿತು. ಅರೆರೆ ಅವರೇ ನಮ್ಮ ಬಸ್ ಕಂಡಕ್ಟರ್‍! ಈವರೆಗೂ ಕಂಡರೂ ಕಾಣದಂತಿದ್ದ ಅವರು ಅದೆಶ್ಟು ಬೇಗ ವಿಶೇಶವೆನಿಸುವಶ್ಟು, ಕಂಡಕ್ಟರ್‍ ಅಂಕಲ್ ಎಂದು ಕರೆಯಬಯಸುವಶ್ಟು ಹಿಡಿಸಿತ್ತು ಅವರ ನಡವಳಿಕೆ. ನಾ ಕಂಡಂತೆ “ಸಾಹೇಬರೆ” ಎಂದೇ ಮಾತಿಗಿಳಿಯುವ ಬಹುತೇಕ ಮುಸಲ್ಮಾನರು ಹಾಸ್ಯ ಪ್ರಿಯರು. ಹಾಸ್ಯ ಎಂದರೆ ಸಿಕ್ಕವರ ಕೆದಕಿ ಕುಶಿ ಪಡುವವರು. ಇಲ್ಲೂ ನಡೆದದ್ದು ಅದೇ, ಕಂಡಕ್ಟರ್‍ ಚಾಕಚಕ್ಯತೆ. ಕಿಚ್ ಕಿಚ್ ಎನ್ನುತ್ತಿದ್ದ ಬ್ರೇಕ್‍ನ ಸದ್ದಿಗೆ “ಕೋಳಿ ತಂದಿದ್ದಿರಾ ಗವ್ಡ್ರೇ?” ಎಂದು ನನ್ನ ಪಕ್ಕದ ಎಣ್ಣೆ ಪಾರ್‍ಟಿ ತಾತನ ಕಾಲೆಳೆದರು. ಮದ್ಯದ ಗುಂಗಿನಲ್ಲಿದ್ದ ತಾತ ಕಾಣದ ಹಕ್ಕಿಗೆ ಗುಬ್ಬಚ್ಚಿ ಎಂದೂ ಹೆಸರಿಟ್ಟರು. ಅಂತೂ ಇಂತೂ ಏನೋ ಸಾದಿಸಿದಂತೆ ಯಾರನ್ನೋ ಚೇಡಿಸಿದಂತೆ ಒಳಗೊಳಗೆ ಕುಶಿ ಪಡುತ್ತಿದ್ದರು ಕಂಡಕ್ಟರ್‍. ಇದ್ದಕಿದ್ದಂತೆ ವಿಶಯ ಗಂಬೀರವಾಯಿತು, ಇನ್ನೂ ಪ್ರಶ್ನೆಯಾಗಿ ಉಳಿದಿರುವ ಪ್ರಳಯದ ಸಂಗತಿ. ಕಂಡಕ್ಟರ್‍ ಸೇರಿದಂತೆ ನನ್ನ ವಾದ ಮಂಡಿಸಿದ್ದಾಯಿತು. “ತಾತಾ ನೀವೇನಂತೀರಾ?” ಎಂದು ಬಾಯ್ಮುಚ್ಚುವಶ್ಟರಲ್ಲಿ ಸರದಿಗೆ ಕಾದವರಂತೆ ಉದುರಿದವು ಮಾತುಗಳು, “ಕರ್‍ನಾಟಕ ಮುಳ್ಗಲ್ಲ, ಮುಳ್ಗಿದ್ರು ಮಂಡ್ಯ ಮುಳ್ಗಲ್ಲ” ಅಂದ್ರು! ಪಿಸುಕ್ ಎಂದು ನಕ್ಕ ಕಂಡಕ್ಟರ್‍ “ನೂರ್‍ರಲ್ ಒಂದ್ ಮಾತು ಗವ್ಡ್ರೇ” ಎಂದರು. ತಾತನ ಮಾತು ಮಹತ್ವದ್ದಾಗಿಲ್ಲದಿದ್ದರೂ ಇಲ್ಲಿ ಮೆರೆದದ್ದು ನಾನು ಮಂಡ್ಯದ ಗಂಡು ಎಂಬ ಗರಿಮೆ, ಪ್ರಾಂತ್ಯಪ್ರೇಮ…

ಇದ್ದಕ್ಕಿದ್ದಂತೆ ಪಾತ್ರ ಬದಲಾವಣೆ, ಹಿರೋ ಕಂಡಕ್ಟರ್‍ ಈಗ ಡ್ರಯ್ವರ್‍. ಅಯ್ಯೋ ಇದಾರನ್ನು ಮೆಚ್ಚಿಸುವ ಹುಚ್ಚು ಸಾಹಸವೋ ಎನ್ನುತ್ತಾ, ಯಾವ ದೇವರ ನೆನೆಯಲಿ ಎಂಬ ಗೊಂದಲದಲ್ಲಿದ್ದೆ. ಇನ್ನೇನು ಊರು ಬಂತಲ್ಲ ಎಂದು ನನ್ನನ್ನು ನಾನೆ ಸಮಾದಾನ ಮಾಡಿಕೊಂಡೆ. ಡ್ರಯ್ವರ್‍ ಆಗಿದ್ದ ಈಗಿನ ಕಂಡಕ್ಟರ್‍ ಆಚೆ ಬದಿಯ ಆಂಟಿ ಜೊತೆ ಮಾತಿಗಿಳಿದಿದ್ದರು. ಕಶ್ಟ ಪಟ್ಟು ಕಿವಿಯೊಡ್ಡಿದರೂ ತಪ್ಪಿಯೂ ಒಂದು ಮಾತು ಕಿವಿಗೆ ಬೀಳದಂತೆ ಪಿಸುಗುಡುತ್ತಿದ್ದರು. ಆವರು ಗಾರ್‍ಮೆಂಟ್ಸ್ ನಲ್ಲಿ ಕೆಲಸ ಮಾಡುವರೆಂಬುದು ಮೊದಲೇ ಗೊತ್ತಿದ್ದ ವಿಶಯ. “ಬಂದೇ ಬಿಡ್ತಾ ಊರು” ಎನ್ನುವಶ್ಟು ಬೇಗ ಬಂದಿತ್ತು ಇಳಿಯುವ ಸರದಿ. ಯಾರೂ ಪರಿಚಯವಿಲ್ಲದವರಂತೆ ಅವರವರ ಪಾಡಿಗೆ ಅವರು. ನಾನೂ ಹಾಗೇ ಹೊರಟೆ. “ಮೇಡಮ್‍ನೋರೆ ನಂಬರ್‍ ಕೊಟ್ಟಿದ್ರೆ ಮನೆ ಹತ್ರ ಬರ್‍ಬೋದಿತ್ತು” ಎಂದ ಆ ಡ್ರಯ್ವರ್‍ ನ (ಈಗಿನ ಕಂಡಕ್ಟರ್‍) ಮಾತುಗಳು ನನ್ನನ್ನು ತಡೆದವು. ತಿರುಗಿದೆ, ಕಂಡದ್ದು ಆಂಟಿಯ ಬ್ಯಾಗಿನಿಂದ ಹೊರಬಂದ ಪೆನ್ನು ಹಾಳೆ! ತೂ ಎನ್ನುವ ಹೊರತು ನನಗಲ್ಲಿ ಬೇರೆ ಮಾತುಗಳಿರಲಿಲ್ಲ. ಇಶ್ಟೊತ್ತಿನ ಇಡೀ ಚಿತ್ರಣವನ್ನು ಆ ಒಂದು ಸಾಲು ನುಂಗಿಹಾಕಿತು.

(ಚಿತ್ರ: ಶಾಹೇರ‍್ನಾಮ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: