ಸಂಸ್ಕ್ರುತವೆಂಬ ಹಳಮೆಯನ್ನು ಅರಿಮೆಯ ಕಣ್ಣಿಂದ ನೋಡಬೇಕಿದೆ

ಸಂದೀಪ್ ಕಂಬಿ.

sanskrit

‘ಸಂಸ್ಕ್ರುತ ಬಾರತಿ’ ಎಂಬ ದೆಹಲಿ ಮೂಲದ ಕೂಟವೊಂದು ಸಂಸ್ಕ್ರುತ ನುಡಿಯನ್ನು ಬಾರತ ಒಕ್ಕೂಟದ ಎಲ್ಲೆಡೆಯೂ ಹಬ್ಬುವ ಗುರಿ ಹೊಂದಿದ್ದು, ಇದರ ಸಲುವಾಗಿ ಹಲವು ವರುಶಗಳಿಂದ ಹಲವಾರು ಹಮ್ಮುಗೆಗಳನ್ನು ನಡೆಸುತ್ತ ಬಂದಿದೆ. ಇತ್ತೀಚಿಗೆ, ಸಂಸ್ಕ್ರುತ ನುಡಿಯು ಇಂದು ಏಕೆ ಪ್ರಸ್ತುತ ಮತ್ತು ಅದನ್ನು ಏಕೆ ಎಲ್ಲರೂ ಕಲಿಯಬೇಕು ಎಂಬುದರ ಬಗ್ಗೆ ‘ಸಂಸ್ಕ್ರುತ ಬಾರತಿ’ಯ ನಿಲುವನ್ನು ತಿಳಿಸುವ ಒಂದು ಬರಹವೂ rediff.com ಎಂಬ ಮಿನ್ನೆಲೆಯಲ್ಲಿ ಪ್ರಕಟವಾಗಿತ್ತು. ಮತ್ತು ಆ ನಿಲುವಿನ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಚರ್‍ಚೆ ಮಾಡುವುದಕ್ಕಾಗಿ ಬೆಂಗಳೂರಿನ ಆರ್‍ಟ್ ಆಪ್ ಲಿವಿಂಗ್‍ನ ನೆಲೆಯಲ್ಲಿ ಕಳೆದ ವಾರದ ಕೊನೆಯಲ್ಲಿ (ಅಕ್ಟೋಬರ್ 18-20) ‘ರಾಶ್ಟ್ರೀಯ ಸಮಾವೇಶ’ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ನುಡಿಯನ್ನು ಹೀಗೆ ಹಬ್ಬುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದಕ್ಕಾಗಿ ‘ಸಂಸ್ಕ್ರುತ ಬಾರತಿ’ಯವರು ನೀಡಿರುವ ಕೆಲವು ಕಾರಣಗಳು ಮತ್ತು ಉದ್ದೇಶಗಳು ಅರಿಮೆಗೇಡಿತನದಿಂದ (unscientific) ಕೂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಅವರು ನೀಡಿರುವ ಕೆಲವು ಹೇಳಿಕೆಗಳನ್ನು ಕೆಳಗೆ ನೋಡೋಣ.

ಬಾರತ ಒಕ್ಕೂಟದ ನುಡಿಗಳು ಅರೇಬಿಕ್, ಪರ್‍ಶಿಯನ್ ಮತ್ತು ಇಂಗ್ಲೀಶ್ ನುಡಿಗಳಿಂದ ಕೆಟ್ಟಿವೆ, ಅವುಗಳ ಶುದ್ದಿಗೆ ಸಂಸ್ಕ್ರುತ ಬೇಕು

ಯಾವುದೇ ಬದಿಹಿಡಿಯದೆ ಗಮನಿಸಿದರೆ, ಒಂದು ನುಡಿಯು ಬೇರೆ ನುಡಿಗಳ ಬೆರಕೆಯನ್ನು ತೊರೆದು ‘ಶುದ್ದ’ ಎನಿಸಿಕೊಳ್ಳಬೇಕಾದಲ್ಲಿ ಅದು ತನ್ನದೇ ಮೂಲದ ಪದಗಳನ್ನು ಇರಿಸಿಕೊಳ್ಳಬೇಕು. ಹೇಗೆ ಇಂಗ್ಲೀಶ್ ಮೂಲದ ಪದಗಳು ಹೆರತು ಎನ್ನಿಸಿಕೊಳ್ಳುತ್ತವೋ ಆ ನುಡಿಗೆ ಸಂಸ್ಕ್ರುತ ಮೂಲದ ಪದಗಳೂ ಹೆರತೇ. ಎತ್ತುಗೆಗೆ, ‘ರಯ್ಲು’ ಎಂಬ ಇಂಗ್ಲೀಶ್ ಮೂಲದ ಪದಕ್ಕೆ ಬದಲಾಗಿ ಕೆಲವರು ಸಂಸ್ಕ್ರುತ ಮೂಲದ ‘ದೂಮ್ರಶಕಟ’ವನ್ನು ಕನ್ನಡದಲ್ಲಿ ಸೂಚಿಸುತ್ತಾರೆ. ಆದರೆ ನಿಜವಾಗಿಯೂ ಈ ಎರಡೂ ಪದಗಳು ಕನ್ನಡಕ್ಕೆ ಪರ ನುಡಿಯ ಪದಗಳೇ. ಉಗಿಬಂಡಿ, ಇಲ್ಲವೇ ಹಳಿಬಂಡಿ ಎಂಬ ಪದಗಳು ಶುದ್ದ ಕನ್ನಡದ ಪದಗಳೆಂದು ಹೇಳಬಹುದು, ಮತ್ತು ಇವು ಜನರಿಗೆ ಹೆಚ್ಚು ಸರಿಯಾಗಿ ತಿಳಿಯುತ್ತದೆ ಕೂಡ. ಇನ್ನು ಶುದ್ದೀಕರಣ ಯಾಕೆ ಬೇಕು, ಎಶ್ಟು ಬೇಕು, ಅದರಿಂದಾಗುವ ಪ್ರಯೋಜನಗಳೇನೆಂಬುದರ ಬಗ್ಗೆ ಅರಿಮೆಯ ನೆಲೆಯಲ್ಲಿ ಅರಕೆ/ ಚರ್‍ಚೆಗಳು ನಡೆಯಬೇಕು. ಮತ್ತು ಇಂತಹ ಅರಕೆಗಳು ಒಂದೊಂದು ನುಡಿಯನ್ನೂ ಬೇರೆಯಾಗಿ ತೆಗೆದುಕೊಂಡು ಆ ನುಡಿ ಮತ್ತು ನುಡಿ ಆಡುಗರನ್ನು ಗುರಿಯಾಗಿಟ್ಟುಕೊಂಡು ನಡೆಸಬೇಕು. ಇಂತಹ ಅರಕೆಗಳ ಮೇಲೆ ಕಯ್ಗೊಳ್ಳುವ ತೀರ್‍ಮಾನಗಳನ್ನೂ ಆ ನುಡಿ ಸಮುದಾಯದವರೇ ತೆಗೆದುಕೊಳ್ಳಬೇಕು. ಹೀಗೆ ಪ್ರತಿಯೊಂದು ನುಡಿಯನ್ನೂ ಗಮನಿಸದೆ ದೆಹಲಿಯಲ್ಲಿರುವ ‘ಸಂಸ್ಕ್ರುತ ಬಾರತಿ’ ಕೂಟದವರು ಸಂಸ್ಕ್ರುತದಿಂದ ಒಕ್ಕೂಟದ ಎಲ್ಲ ನುಡಿಗಳ ಶುದ್ದೀಕರಣ ಆಗುತ್ತದೆಂದು ತೀರ್‍ಮಾನಿಸಿರುವುದು ಎಶ್ಟು ಸರಿ?

ಈಗಾಗಲೇ ಎಲ್ಲ ನುಡಿಗಳಲ್ಲೂ ಸಂಸ್ಕ್ರುತ ಪದಗಳು ಹಾಸು ಹೊಕ್ಕಾಗಿರುವುದರಿಂದ ಅದನ್ನು ಕಲಿಯುವುದು ಬಲು ಸುಲಬ

ಸಂಸ್ಕ್ರುತ ಮೂಲದ ಪದಗಳು ಹಲವು ನುಡಿಗಳಲ್ಲಿ ಇವೆಯಾದರೂ ಇವುಗಳು ಆಡು ನುಡಿಗಿಂತ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಸಾಮಾನ್ಯವಾಗಿ ಹೇಳುವುದಾದರೆ, ಆಡು ನುಡಿಗಳಲ್ಲಿ ಸಂಸ್ಕ್ರುತ ಪದಗಳ ಸಂಕ್ಯೆ ಕಡಿಮೆಯೇ ಮತ್ತು ಅವು ಸಂಸ್ಕ್ರುತದಲ್ಲಿರುವಂತೆಯೇ ತಮ್ಮ ಮೂಲ ರೂಪದಲ್ಲಿ ಉಳಿದುಕೊಳ್ಳುವುದೂ ವಿರಳ. ಮತ್ತು ಎಶ್ಟು ಸಂಸ್ಕ್ರುತ ಮೂಲದ ಪದಗಳಿವೆ ಎಂಬುದು ನುಡಿಯಿಂದ ನುಡಿಗೆ ಬೇರೆಯಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಒಂದು ನುಡಿಯನ್ನು ಕಲಿಯುವುದಕ್ಕೆ ಅದರಲ್ಲಿರುವ ಪದಳನ್ನು ತಿಳಿದುಕೊಂಡರೆ ಸಾಲದು. ಪದಗಳನ್ನು ಬಳಸಿ ವಾಕ್ಯಗಳನ್ನು ಕಟ್ಟುವುದು ತೀರಾ ಮುಕ್ಯ. ಆದರೆ ಕನ್ನಡದಂತಹ ದ್ರಾವಿಡ ನುಡಿಯನ್ನು ಆಡುವವರಿಗೆ ಕೆಲವು ಪದಗಳು ಗೊತ್ತಿದ್ದ ಮಾತ್ರಕ್ಕೆ ಸಂಸ್ಕ್ರುತದಲ್ಲಿ ವಾಕ್ಯಗಳನ್ನು ಕಟ್ಟಲು ಕಲಿಯುವುದು ಸುಲಬ ಎಂದು ಹೇಳಲು ಬರುವುದಿಲ್ಲ.

ಸಂಸ್ಕ್ರುತ ಅರಿವು/ ತಿಳಿವಿನ ನುಡಿ, ಅದನ್ನು ಕಲಿಯುವುದರಿಂದ ಹಳೆಯ ಗ್ರಂತಗಳಲ್ಲಿರುವ ತಿಳಿವು ಸಿಕ್ಕಂತಾಗುತ್ತದೆ

ಸಂಸ್ಕ್ರುತವನ್ನು ಕೊಂಚ ಮಾತಾಡಲು, ಓದಲು ಕಲಿತವನಿಗೆ ಸಂಸ್ಕ್ರುತ ಗ್ರಂತಗಳು ತಿಳಿದುಬಿಡುವುದಿಲ್ಲ. ಅಂತಹ ಗ್ರಂತಗಳನ್ನು ಕಲಿಯಲು ಹಲವಾರು ವರುಶಗಳೇ ಬೇಕಾದೀತು. ಮತ್ತು ಸಾಮಾನ್ಯರು ಯಾರೂ ಇದಕ್ಕೆ ಕಯ್ ಹಾಕುವುದಿಲ್ಲ. ಆಸಕ್ತಿ ಇರುವ ಕೆಲವೇ ಕೆಲವು ಮಂದಿ ಹಳೆಯ ಗ್ರಂತಗಳ ಮೇಲೆ ಅರಕೆ ನಡೆಸಲು ಮುಂದಾಗುತ್ತಾರೆ. ಅಂತಹ ಬೆರಳೆಣಿಕೆಯಶ್ಟು ಮಂದಿಗೆ ಈ ಮೇಲಿನ ವಾದ ಹೊಂದುತ್ತದೆಯೇ ಹೊರತು ಸಾಮಾನ್ಯರು ಈ ಕಾರಣಕ್ಕೆ ಸಂಸ್ಕ್ರುತವನ್ನು ಕಲಿಯುವುದು ಬೇಕಾಗಿಲ್ಲ. ಅಲ್ಲದೆ ಅರಿವು ಎಂಬುದು ಯಾವುದೇ ಒಂದು ನುಡಿಯ ಸೊತ್ತಲ್ಲ. ಅದನ್ನು ಬೇರೆ ನುಡಿಗಳಿಗೆ ತರಬಹುದು. ಎತ್ತುಗೆಗೆ, ಜಪಾನಿ ನುಡಿಯಲ್ಲಿ ಹೆಚ್ಚು ಕಡಿಮೆ ಪ್ರಪಂಚದ ಎಲ್ಲ ಅರಿಮೆಗಳ ವಿಶಯಗಳನ್ನು ಪಡೆಯಬಹುದಾಗಿದೆ. ಜರ್‍ಮನಿಯಲ್ಲಿ ಯಾವುದೋ ಒಂದು ಅರಿಮೆಯ ಹೊಸ ವಿಶಯ ಮೂಡಿದರೆ ಅದನ್ನು ಕಲಿಯುವಾಗ ಜಪಾನಿಯರು ತಮ್ಮ ನುಡಿಗೆ ಮಾರ್‍ಪಡಿಸಿಕೊಂಡು ಕಲಿಯುತ್ತಾರೆ, ಜರ್‍ಮನ್ ನುಡಿಯನ್ನು ಕಲಿಯಲು ಹೋಗುವುದಿಲ್ಲ. ಅಂತೆಯೇ, ಜಪಾನಿನಲ್ಲಿ ರೂಬಿ ಎಂಬ ಹಮ್ಮುಗಾರಿಕೆಯ ನುಡಿಯನ್ನು (programming language) ಕಂಡು ಹಿಡಿಯಲಾಗಿತ್ತು. ಇದು ಇಂದು ಹೆಚ್ಚು ಕಡಿಮೆ ಎಲ್ಲ ದೇಶಗಳಲ್ಲೂ ಬಳಕೆಗೆ ಬಂದಿದೆ. ಆದರೆ ಇದನ್ನು ಕಲಿಯಲು ಬೇರೆ ದೇಶದ ಹಮ್ಮುಗಾರರು (programmers) ಜಪಾನಿ ನುಡಿಯನ್ನು ಕಲಿಯಲು ಹೋಗಲಿಲ್ಲ!

ಸಂಸ್ಕ್ರುತವು ನಮ್ಮ ಸಂಸ್ಕ್ರುತಿಯ ಹೆಗ್ಗುರುತು, ಅದರಿಂದ ಬಾರತೀಯತೆಯ ಅರಿವು ಮೂಡುತ್ತದೆ

ಬಾರತದ ಎಲ್ಲ ನುಡಿಗಳೂ ಬಾರತೀಯತೆಯ ಗುರುತುಗಳೇ. ಒಬ್ಬ ಕನ್ನಡಿಗನ ಕನ್ನಡತನವೇ ಅವನ ಬಾರತೀಯತೆಯ ಗುರುತು. ಇದನ್ನು ನಾವು ಹೆಮ್ಮೆಯಿಂದ, ಗವ್ರವದಿಂದ ಕಾಣಬೇಕಾಗಿದೆ. ಆಗ ಹಲವು ಬೇರ್‍ಮೆಯ ಮಂದಿಯ ನಡುವೆ ಪರಸ್ಪರ ಗವ್ರರವ, ಹೊಂದಾಣಿಕೆ ಹೆಚ್ಚಾಗಿ ಒಗ್ಗಟ್ಟು ಹೆಚ್ಚಾಗುತ್ತದೆ, ಬಾರತೀಯತೆಯ ಬಾವನೆಯೂ ಹೆಚ್ಚಾಗುತ್ತದೆ. ಸಂಸ್ಕ್ರುತದಿಂದ ಬಾರತೀಯತೆಯ ಅರಿವು ಮೂಡುತ್ತದೆ ಎಂದರೆ ಒಕ್ಕೂಟದ ಬೇರೆ ಎಲ್ಲ ನುಡಿಗಳಿಗೂ ಈ ಯೋಗ್ಯತೆ ಇಲ್ಲ ಎಂದು ಹೇಳಿದಂತೆ, ಮತ್ತು ಆ ನುಡಿ ಆಡುಗರ ಬೇರ್‍ಮೆಯನ್ನು ಕೀಳಾಗಿ ಕಂಡಂತಾಗುತ್ತದೆ. ಇದರಿಂದ ಒಡಕು ಹೆಚ್ಚಾಗುತ್ತದೆಯೇ ಹೊರತು ಬಾರತೀಯತೆಯ ಬಾವನೆಯಲ್ಲ.

ಸಂಸ್ಕ್ರುತವು ಒಳ್ಳೆಯ ಸಂಸ್ಕಾರಗಳ ನುಡಿ, ಇದನ್ನು ಕಲಿಸುವುದರಿಂದ ಬ್ರಶ್ಟಾಚಾರ, ಅತ್ಯಾಚಾರಗಳು ನಿಲ್ಲುತ್ತವೆ

ಮೇಲೆ ಹೇಳಿದ ಅಂಶಗಳೇ ಈ ವಾದಕ್ಕೂ ಅನ್ವಯಿಸುತ್ತವೆ. ಒಳ್ಳೆಯ ಸಂಸ್ಕಾರ ಎಂಬುದು ಯಾವುದೇ ನುಡಿಯಲ್ಲಿ ಕಲಿಸಬಹುದು. ಎತ್ತುಗೆಗೆ, ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’, ‘ಕುಲಕುಲಕುಲವೆಂದು ಹೊಡೆದಾಡದಿರಿ’ ಎಂಬಂತಹ ಚಿಂತನೆಗಳು ತಾಯ್ನುಡಿಯೊಂದರಲ್ಲೇ ಕಲಿಯಲು ಸಾಕು. ಇಂತಹವನ್ನು ತಾಯ್ನುಡಿಯಲ್ಲಿ ಹೇಳಿಕೊಟ್ಟರೆ ಜನರು ಚೆನ್ನಾಗಿ ಮಯ್ಗೂಡಿಸಿಕೊಳ್ಳಲು ಆಗುತ್ತದೆ. ಹಾಗೆಯೇ, ಕೆಟ್ಟ ಸಂಸ್ಕಾರವು, ಸಂಸ್ಕ್ರುತವೂ ಸೇರಿದಂತೆ ಯಾವುದೇ ನುಡಿಯಲ್ಲಿ ಕಲಿಯಬಹುದು ಮತ್ತು ಕಲಿಸಬಹುದು. ಎತ್ತುಗೆಗೆ, ಸಂಸ್ಕ್ರುತದಲ್ಲಿ ಒಂದೆಡೆ ಗೀತೆಯಂತಹ ಗ್ರಂತಗಿಳಿದ್ದರೆ, ವಾಮಾಚಾರದಂತಹ ‘ಕೆಟ್ಟ ಸಂಸ್ಕಾರ’ ಎಂದು ಕರೆಯಿಸಿಕೊಳ್ಳುವ ಪದ್ದತಿಗಳ ಗ್ರಂತಗಳೂ ಬಂದಿವೆ. ಇಂತಹ ಗ್ರಂತಗಳನ್ನು ಬರೆದವರು ಸಂಸ್ಕ್ರುತವನ್ನು ತಿಳಿದಿದ್ದರೂ ಅವರಲ್ಲಿ ಯಾವುದೇ ಬದಲಾವಣೆ ಬಂದಂತಿಲ್ಲ. ಬದಲಾಗಿ ಅವರುಗಳೂ ತಮ್ಮ ಮತವನ್ನು ಬೆಳೆಸಲು ಸಂಸ್ಕ್ರುತವನ್ನೇ ಬಳಸಿಕೊಂಡಂತಿದೆ!

ಹಿಂದಿನ ಕೆಲವು ನಂಬಿಕೆಗಳಿಂದ ಮತ್ತು ಸಂಸ್ಕ್ರುತ ನುಡಿಯ ಮೇಲಿನ ಅಬಿಮಾನದಿಂದ ‘ಸಂಸ್ಕ್ರುತ ಬಾರತಿ’ಯವರು ಇಂತಹ ನಿಲುವುಗಳನ್ನು ತಳೆದಿರಬಹುದು. ಆದರೆ ಈ ಹಳೆಯ ನಂಬಿಕೆಗಳನ್ನು ಬಿಟ್ಟು ಮೇಲಿನ ಎಲ್ಲ ವಿಶಯಗಳನ್ನೂ ಅರಿಮೆಯ ನೋಟದಿಂದ ನೋಡ ಬೇಕಾಗಿದೆ. ಸಂಸ್ಕ್ರುತವನ್ನು ಜನ ಸಾಮಾನ್ಯರಿಗೆ ಕಲಿಸುವುದು ತಪ್ಪಲ್ಲ, ಆದರೆ ಅರಿಮೆಯ ನೆಲೆಯಲ್ಲಿ ನಮಗೆ ಕಾಣುತ್ತಿರುವ ಹೊಸ ಸತ್ಯಗಳನ್ನು ಇಂದು ನಾವು ಒಪ್ಪಿಕೊಳ್ಳಲೇ ಬೇಕು. ಇದರಿಂದ ನಮ್ಮ ನಾಡಿಗೂ ನಾಡ ಮಂದಿಗೂ ಒಳಿತಿದೆ, ಮತ್ತು ಸಂಸ್ಕ್ರುತಕ್ಕಿರುವ ಹಿರಿಮೆಯೇನು ಕುಂದುವುದಿಲ್ಲ.

(ಚಿತ್ರ ಸೆಲೆ: behance.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. “ಸಂಸ್ಕ್ರುತವು ಒಳ್ಳೆಯ ಸಂಸ್ಕಾರಗಳ ನುಡಿ, ಇದನ್ನು ಕಲಿಸುವುದರಿಂದ ಬ್ರಶ್ಟಾಚಾರ, ಅತ್ಯಾಚಾರಗಳು ನಿಲ್ಲುತ್ತವೆ.” ಓಹ್ ಹಾಗಾದರೆ ಈಗ ದೇಶದಲ್ಲಿ ಅವೇ ತಾನೆ ನಿಂತಿರೋದು? ಸುಮ್ಮಸುಮ್ಮನೆ ದೇಶದ ನುಡಿ ಹಲತನವನ್ನು ಹಾಳುಗೆಡುವ ಜಾಣ್ಮೆ ಇವರಲ್ಲಿ ಮೊಳಕೆ ಚಿಗುರಿದೆ. ಈ ನಾಡಿನ ಎಲ್ಲಾ ನಾಡಿಗಳಾದವರೂ ಕೂಡ ಸರಿಸಾಟಿಯಾಗಿ ತಮ್ಮ ನುಡಿಯನ್ನು ಕಾಪಾಡಿಕೊಳ್ಳಲು ಮುಂದಾಗಲೇಬೇಕು. ಅದು ಇರಲಿ ಜೊತೆಗೆ ರುಣಕ್ಕೆ-ಬಳಕೆಗೆ ನಮ್ಮ ನುಡಿ ಇರಲಿ. “ಎಲ್ಲರೊಳಗೊಂದಾಗು ಮಂಕು ತಿಮ್ಮ. ನುಡಿಯ ಮುಂದಿಟ್ಟುಕೊಂಡು ಜಗಳವ ಆಡದಿರು; ಜೋಳದ ಕೊರತೆಯಲಿ ಬೇಯುತಿರುವವರಿಗೆ ತಿಳಿನಲ್ಮಿಗಳಾಗಿ” ಅಂತ ಅವರಿಗೆ ಸಾರಿ ಹೇಳುವ ಹೊತ್ತು ಬಂದಿದೆ.

ಅನಿಸಿಕೆ ಬರೆಯಿರಿ: