ಇಂಗ್ಲಿಶ್ ಯಾರ ಆಸ್ತಿ?

ರಗುನಂದನ್.

Simon_Roberts-We_English_Logo

ಕಳೆದ ಒಂದೆರಡು ಬರಹಗಳಲ್ಲಿ ಉಲಿ ಮಾರ‍್ಪಾಟುಗಳ ಮೂಲಕ ನುಡಿಯರಿಮೆಯ ಕೆಲವು ಹೊಳಹುಗಳನ್ನು ಕಂಡುಕೊಂಡಿದ್ದೆವು. ಒಂದು ಬರಹದಲ್ಲಿ ಬವ್ಗೋಳಿಕ ಅಡಚಣೆಗಳು ಹೊಸ ನುಡಿಗಳ ಹುಟ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಿದ್ದೆವು. ಮತ್ತೊಂದು ಬರಹದಲ್ಲಿ ಇಂಗ್ಲಿಶ್ ನುಡಿಯು ಹೇಗೆ ಕಳೆದ ನಾನೂರು ಏಡು(ವರುಶ)ಗಳಲ್ಲಿ ಮಾರ‍್ಪಾಟಾಗಿದೆ ಎಂಬುದನ್ನೂ ನೋಡಿದ್ದೆವು.

ಉಲಿ ಮಾರ‍್ಪಾಟಿನಿಂದ ಉಲಿಕಂತೆಗಳು ಬದಲಾಗುತ್ತವೆ. ಉಲಿಕಂತೆಗಳಿಂದ ಒರೆ(ಪದ)ಗಳು ಬದಲಾಗುತ್ತವೆ. ಬಳಿಕ ನುಡಿಯೂ ಬದಲಾಗುತ್ತದೆ ಎಂಬುದನ್ನು ನೋಡಿದ್ದೆವು. ಒಂದು ನುಡಿಯು ಬೇರೆ ಬೇರೆ ಪ್ರದೇಶಗಳಲ್ಲಿ ಬಳಸುತ್ತಿದ್ದರೆ ಈ ಬಗೆಯ ಮಾರ‍್ಪಾಟುಗಳು ಸಾಕಶ್ಟು ಕಾರಣಗಳಿಂದಾಗಿ ಎಲ್ಲಾ ಕಡೆಯೂ ಒಂದೇ ರೀತಿಯಲ್ಲಿ ಆಗುವುದಿಲ್ಲ. ಹಾಗಾಗಿ ವರುಶಗಳು ಕಳೆದಂತೆ ಇಡೀ ನುಡಿಯೇ ಬದಲಾಗಿರುತ್ತದೆ. ನುಡಿಯರಿಮೆಯ ಪ್ರಕಾರ ಬೇರೆ ನುಡಿಯೆಂದೇ ಪರಿಗಣಿಸಬಹುದು.

ಜಗತ್ತಿನಲ್ಲಿ ಇಂಗ್ಲಿಶನ್ನು ಎರಡನೆಯ/ಮೂರನೆಯ ನುಡಿಯಾಗಿ ಎಶ್ಟೊಂದು ನಾಡುಗಳು ಬಳಸುತ್ತವೆ. ಈಗ ಇಂಗ್ಲಿಶ್ ನುಡಿ ಕೂಡ ಹೀಗೆ ಆಗುವ ಸಾದ್ಯತೆ ಇದೆಯೆಂದು ಹೇಳಬಹುದು. ಇಲ್ಲಿ ಎರಡು ಮುಕ್ಯ ಕೇಳ್ವಿಗಳು ಬರುತ್ತವೆ. ಒಂದು ಇಂಗ್ಲಿಶ್ ತಾಯ್ನುಡಿಯಾಗಿ ಬಳಸುವ ಮಂದಿಯ ಇಂಗ್ಲಿಶನ್ನೇ ಎಲ್ಲರೂ ಹಿಂಬಾಲಿಸಬೇಕೋ ಇಲ್ಲವೇ ಬೇರೆ ಬೇರೆ ನುಡಿಯಾಡುಗರ ಇಂಗ್ಲಿಶನ್ನು ಅರಗಿಸಿಕೊಂಡು ಮುನ್ನಡೆಯಬೇಕೋ ಎಂಬುದು.

ಈ ಗೊಂದಲಗಳ ಸಲುವಾಗಿ ಇಂದು ಇಂಗ್ಲಿಶ್ ನುಡಿಯ ಮುಂಬಾಳಿನ (ಬವಿಶ್ಯದ) ಕುರಿತಾಗಿ ಸಾಕಶ್ಟು ಚರ‍್ಚೆ ಏರ‍್ಪಟ್ಟಿದೆ. ಈ ಎರಡೂ ಪಂಗಡದವರು ಏನು ಹೇಳುತ್ತಾರೆ ನೋಡೋಣ.

1.  ತಾಯ್ನುಡಿ ಆಡುಗರು ಬದಲಾವಣೆಯನ್ನು ಗವ್ರರಿಸಿ ಹೊಸತನಕ್ಕೆ ತೆರೆದುಕೊಳ್ಳಬೇಕು. ಇಲ್ಲದಿದ್ದರೆ ನುಡಿಯು ಪಳೆಯುಳಿಕೆಯಂತೆ ಆಗಿಹೋಗುತ್ತದೆ.

2.  ಇಲ್ಲ. ಹೀಗೆ ಹೆಚ್ಚು ಹೆಚ್ಚು ಬದಲಾವಣೆಯನ್ನು ಮಾಡುತ್ತಾ ಹೋದರೆ ನುಡಿಗೆ ಒಂದು ಸ್ಟಾಂಡರ‍್ಡ್ ಎಂಬುದೇ ಇರುವುದಿಲ್ಲ. ಬೇರೆ ನುಡಿಯಾಡುಗರು ಇಂಗ್ಲೆಂಡಿನ/ಅಮೇರಿಕಾದವರ ಮಟ್ಟಕ್ಕೆ ಇಂಗ್ಲಿಶನ್ನು ಕಲಿಯಲೇಬೇಕು.

ಈ ಚರ‍್ಚೆಯ ಒಳಹೊಕ್ಕರೆ ಸಾಕಶ್ಟು ವಿಶಯಗಳನ್ನು ಕಾಣಬಹುದು. ಸಾಂಪ್ರಾದಾಯಿಕವಾಗಿ ಇಂಗ್ಲಿಶ್ ಮಾತಾನಾಡಿಕೊಂಡು ಬಂದಿರುವ ಬ್ರಿಟನ್/ಅಮೇರಿಕಾ ಮಂದಿ ಇಂಗ್ಲಿಶ್ ನುಡಿಗೆ ಕಟ್ಟಲೆಗಳನ್ನು ಮಾಡಬೇಕಾಗಿಲ್ಲ. ಬೇರೆ ನುಡಿಯಾಡುಗರಿಗೂ ಇಂಗ್ಲಿಶನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಕಲಿವೀಡುಗಳ ಇಂಗ್ಲಿಶ್ ನುಡಿಯರಿಮೆ ವಿಬಾಗಗಳಲ್ಲಿ ಕೂಡ ಇದನ್ನು ಬೆಂಬಲಿಸುತ್ತಾರೆ. ಎಡಿನ್‌ಬರ‍್ಗ್ ಕಲಿವೀಡಿನ ನಿಕೋಲಾ ಗಾಲೋವೆ ಹೀಗೆ ಹೇಳುತ್ತಾರೆ,

ಬೇರೆ ನುಡಿಯಾಡುಗರಿಗೂ ಸ್ವಾತಂತ್ರ್ಯ ಕೊಡಬೇಕು. ಆಗಲೇ ಇಂಗ್ಲಿಶ್ ಹೊಸತನಕ್ಕೆ ತೆರೆದುಕೊಂಡು ಮುನ್ನಡೆಯುತ್ತದೆ. ಮಡಿವಂತಿಕೆ ಸಲ್ಲದು.

ಇಂಗ್ಲಿಶನ್ನು ಅಮೇರಿಕಾ/ಇಂಗ್ಲೆಂಡ್ ಮಂದಿಯಂತೆ ಮಾತನಾಡಲು ಬಯಸುವವರಿಗೆ ಇದು ಸೋಜಿಗವೆನಿಸಬಹುದು. ಆದರೆ ಇದರ ಬೆಂಬಲಿಗರು ಕೊಡುವ ಕಾರಣಗಳೇ ಬೇರೆ. ಅವರ ಪ್ರಕಾರ ಇಂಗ್ಲಿಶ್ ಬೇರೆ ಹೆಸರುವಾಸಿ ನುಡಿಗಳಂತೆ ಅಲ್ಲ. ಸ್ಪಾನಿಶ್, ಮಂಡಾರಿನ್. ಪ್ರೆಂಚ್, ಜರ‍್ಮನ್, ಕೊರಿಯನ್, ಜಪಾನೀಸ್ ನುಡಿಗಳಾದರೆ ಬರಿ ಅದರ ತಾಯ್ನುಡಿ ಆಡುಗರೊಂದಿಗೆ ವ್ಯವಹರಿಸಲು ಬಳಸುತ್ತೇವೆ.

ಆದರೆ ಇಂಗ್ಲಿಶನ್ನು ಬೇರೆ ಬೇರೆ ನುಡಿಯಾಡುಗರು ತಮ್ಮ ನಡುವೆ ಕೊಂಡಿ-ನುಡಿಯಾಗಿ ಬಳಸುತ್ತಾರೆ. ಹಾಗಾಗಿ ಅದು ಸ್ಟಾಂಡರ‍್ಡ್ ಇಂಗ್ಲಿಶಿನ ರೀತಿಯಲ್ಲಿಯೇ ಇರಬೇಕು ಎಂದು ಹೇಳುವುದು ಸರಿಯಲ್ಲ. ಮತ್ತೊಂದು ಕಡೆ ಇಂಗ್ಲಿಶನ್ನು ಇಂಗ್ಲೆಂಡ್/ಅಮೇರಿಕಾ ಮಂದಿಯ ಹಾಗೆಯೇ ಮಾತನಾಡಬೇಕೆಂದು ಹಂಬಲಿಸುವವರೂ ಇದ್ದಾರೆ. ಈಗ ಈ ಎರಡೂ ಇಂಗ್ಲಿಶುಗಳಲ್ಲಿ ಯಾವುದಕ್ಕೆ ಗೆಲುವು?

ತಿಳಿವಿಗರ ಪ್ರಕಾರ ಇಂಗ್ಲಿಶಿನ ಹರವನ್ನು ಹೇಗೆ ತಡೆಯುವುದಕ್ಕೆ ಆಗುವುದಿಲ್ಲವೋ ಹಾಗೆಯೇ ಅದು ಬದಲಾಗುವುದನ್ನೂ ತಡೆಯಲು ಕಶ್ಟ! ಎತ್ತುಗೆಗೆ ಇಂಡಿಯನ್ ಇಂಗ್ಲಿಶ್ ಎಂಬ ಒಂದು ಬಗೆಯ ಇಂಗ್ಲಿಶ್ ಇರುವುದು ತಿಳಿದಿರುವ ವಿಚಾರವಾಗಿದೆ. ಹೀಗೆ ಬದಲಾವಣೆ ಆಗುತ್ತಾ ಹೋದರೆ ಲಾಬವೋ ನಶ್ಟವೋ?

ಹಿಂದಿನ ಬರಹಗಳಲ್ಲಿ ನೋಡಿದಂತೆ ಬವ್ಗೋಳಿಕ ಅಡಚಣೆಗಳ ಕಾರಣ ಒಂದೇ ನುಡಿ ಕವಲೊಡೆದು ಹಲವಾರು ವರುಶಗಳ ಬಳಿಕ ಬೇರೆಯದೇ ನುಡಿಯಾಗುತ್ತದೆ. ಇದೇ ರೀತಿ ಇಂಗ್ಲಿಶ್ ಕೂಡ ಇನ್ನು ಮುಂದಿನ ಅಯ್ವತ್ತು ನೂರು ವರುಶಗಳಲ್ಲಿ ಬೇರೆ ಬೇರೆ ನಾಡುಗಳಲ್ಲಿ ಸ್ವತಂತ್ರ ನುಡಿಯಾಗಿ ಹೊರಹೊಮ್ಮಬಹುದು.

ಬಾರತದಂತಹ ಒಕ್ಕೂಟಗಳು ಹಣಕಾಸು, ಆಳ್ವಿಕೆ, ಅರಿಮೆ, ಚಳಕರಿಮೆ ವಿಶಯಗಳಲ್ಲಿ ಹಿಂದಿರುವ ಕಾರಣದಿಂದ ನಮ್ಮಲ್ಲಿ ಹೊಸದಾಗಿ ಹೊಮ್ಮುವ ’ಇಂಗ್ಲಿಶ್’ ನುಡಿಗೆ ಮೇಲ್ಮೆ ಬರಲು ಕಶ್ಟ ಎಂದೇ ಹೇಳಬೇಕು. ಇದರೊಟ್ಟಿಗೆ ಇಂಗ್ಲಿಶ್ ಮಾತನಾಡುವ ನಾಡುಗಳು ಮುಂದೆ ಮುಂದೆ ಸಾಗಿರುತ್ತವೆ.

(ತಿಳಿವಿನ ಸೆಲೆ: ಮಯ್ಕಲ್ ಸ್ಕಾಪಿಂಕರ್ ಅವರ Who owns English in the global market, Financial Times) 

(ತಿಟ್ಟಸೆಲೆ: simoncroberts.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: