ಮಂಗಳದೆಡೆಗೆ ಇಂದು ನೆಗೆಯಲಿದೆ ಇಸ್ರೋ ಬಂಡಿ

– ಪ್ರಶಾಂತ ಸೊರಟೂರ.

ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಲಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ ಕಸುವನ್ನು ಎತ್ತಿ ತೋರಿಸಲಿದೆ.

MOM_1

(ಶ್ರೀಹರಿಕೋಟಾದ ಏರುನೆಲೆಯಲ್ಲಿ ಬಾನಬಂಡಿಯನ್ನು ಬಾನಿಗೇರಿಸಲು ಅಣಿಯಾಗಿರುವ PSLV C25 ಏರುಬಂಡಿ)

ಇಸ್ರೋ ಕಯ್ಗೊಳ್ಳಲಿರುವ ಈ ಹಮ್ಮುಗೆಯ ಕುರಿತು ತಿಳಿದುಕೊಳ್ಳುವ ಮುನ್ನ ಮಂಗಳ ಸುತ್ತುಗದ ಬಗ್ಗೆ ತುಸು ತಿಳಿದುಕೊಳ್ಳೋಣ ಬನ್ನಿ.

ಮಂಗಳ, ನೇಸರ ಕೂಟದಲ್ಲಿನ (solar system) ಎರಡನೇ ಚಿಕ್ಕ ಸುತ್ತುಗ. (ಬುದ ಎಲ್ಲಕ್ಕಿಂತ ಚಿಕ್ಕದು) ನೆಲಕ್ಕಿಂತ ಮಂಗಳವು ನೇಸರನಿಂದ ಹೆಚ್ಚಿಗೆ ದೂರದಲ್ಲಿದ್ದು, ನೇಸರನಿಂದ ಅದರ ಸರಾಸರಿ ದೂರ 1.5 ಬಾನಳತೆ (Astronomical Unit – AU) ಅಂದರೆ ಸುಮಾರು 23,00,00,000 ಕಿಲೋ ಮೀಟರಗಳಾಗಿವೆ.

ಮಂಗಳ ತನ್ನದೇ ಸುತ್ತ ಒಂದು ಸುತ್ತ ತಿರುಗಲು ಸರಿ ಸುಮಾರು ನೆಲದಶ್ಟೇ ಹೊತ್ತನ್ನು ತೆಗೆದುಕೊಳ್ಳುವುದರಿಂದ, ಅದರ ಒಂದು ದಿನ ಸುಮಾರು ನೆಲದಶ್ಟು ಅಂದರೆ 24 ಗಂಟೆಗಳ ಗಡುವು ಹೊಂದಿದೆ. ನೇಸರನ ಸುತ್ತ ಒಂದು ಸುತ್ತು ಹಾಕಲು ಮಂಗಳಕ್ಕೆ ಸುಮಾರು 687 ದಿನಗಳು ಬೇಕು. ಹಾಗಾಗಿ ಅದರ ಒಂದು ವರುಶದಲ್ಲಿ 687 ದಿನಗಳಿರುತ್ತವೆ. ದುಂಡಳತೆಯಲ್ಲಿ ನೆಲಕ್ಕಿಂತ ಸುಮಾರು ಅರ‍್ದದಶ್ಟಿರುವ ಮಂಗಳದ ರಾಶಿ (mass) ನೆಲದ 11% ರಶ್ಟಿದೆ.

ಮಂಗಳದ ಮೇಲ್ಮೆ ತುಂಬಾ ಚಳಿಯಿಂದ ಕೂಡಿದ್ದು, ಅದರ ಸರಾಸರಿ ಬಿಸುಪು (temperature) -63 ಡಿ.ಸೆ. ಆಗಿದೆ. ನೆಲದಂತೆ ಮಂಗಳವೂ ಕೂಡ ಹಲವಾರು ಬಗೆಯ ಜಲ್ಲಿ, ಅದಿರುಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಮಂಗಳ ಸುತ್ತುಗದ ಮೇಲ್ಮೆಯ ಹೆಚ್ಚಿನ ಪಾಲು ಕಬ್ಬಿಣದ ಆಕ್ಸಾಯಡ್‍ನಿಂದ ಕೂಡಿದುದರಿಂದಾಗಿ ಅದರ ಮಯ್ ಬಣ್ಣ ಕೆಂಪಾಗಿ ಕಾಣುತ್ತದೆ. ಹಾಗಾಗಿ ಇದನ್ನು ’ಕೆಂಪು ಸುತ್ತುಗ’ (Red Planet) ಅಂತಾನೂ ಕರೆಯುತ್ತಾರೆ.

Mars

(1999 ರಲ್ಲಿ ಹಬಲ್ ನೋಟುಕದ ಮೂಲಕ ಕಂಡುಬಂದ ಮಂಗಳ ಸುತ್ತುಗದ ನೋಟ)

ಮಂಗಳ, ನೆಲದಾಚೆಗಿನ ಬದುಕಿನ ಹುಡುಕಾಟದಲ್ಲಿ ಮನುಶ್ಯರ ಕುತೂಹಲ ಆಗಾಗ ಕೆರಳಿಸುತ್ತಿರುವ ಸುತ್ತುಗ. ಬದುಕಿಗೆ ಎಲ್ಲಕ್ಕಿಂತ ಮುಕ್ಯವಾಗಿ ಬೇಕಾದ ನೀರು, ಮಂಗಳದಲ್ಲಿ ಇರಬಹುದು ಇಲ್ಲವೇ ಒಂದು ಕಾಲಕ್ಕೆ ಇದ್ದಿರಬಹುದು ಅನ್ನುವಂತ ವಿಶಯಗಳು ಅರಕೆಯಲ್ಲಿ ಆಗಾಗ ಕಂಡುಬಂದಿವೆ. ಆದರೆ ಮಂಗಳದಲ್ಲಿರುವ ತುಂಬಾ ಕಡಿಮೆ ಒತ್ತಡದಿಂದಾಗಿ ನೀರು ಒಂದು ವೇಳೆ ಇದ್ದರೂ, ಅದು ತುಂಬಾ ಗಟ್ಟಿ ರೂಪದಲ್ಲಿಯೇ ಇರಬಹುದು. ಇದರಿಂದಾಗಿ ಜೀವಿಗಳು ಹುಟ್ಟಲು ಮತ್ತು ಬದುಕುಳಿಯಲು ತುಂಬಾ ಪಾಡು ಪಡೆಬೇಕಾಗುತ್ತದೆ.

ಬದುಕು, ಬದುಕುಳಿಯುವಲ್ಲಿ ಏನೇ ತೊಡಕುಗಳಿದ್ದರೂ ಮಂಗಳ ಕುರಿತಾದ ಅರಕೆಯಂತೂ ಇನ್ನೂ ಬಿರುಸಾಗಿಯೇ ಮುಂದುವರೆಯುತ್ತಿದೆ. ಇದಕ್ಕೆ ಮುಕ್ಯ ಕಾರಣವೆಂದರೆ ನೇಸರ ಕೂಟದಲ್ಲಿ ಬದುಕುಳಿಯಲು ಬೇಕಾದಂತಹ ತಕ್ಕಮಟ್ಟಿನ ಸುತ್ತಣವನ್ನು ಹೊಂದಿರಬಹುದಾದ ’ನೆಲೆಯೊಡಲು’ (habitable zone) ಶುಕ್ರ ಸುತ್ತುಗದಿಂದ ಹಿಡಿದು ಮಂಗಳದ ಅರ‍್ದ ಬಾಗದವರೆಗೆ ಹರಡಿಕೊಂಡಿರುವುದು.

’ಮಂಗಳ ಸುತ್ತುವ ಹಮ್ಮುಗೆ’ (Mars Orbiter Mission – MOM) ಎಂದು ಹೆಸರಿಸಲಾಗಿರುವ ಈ ಹಮ್ಮುಗೆಯಲ್ಲಿ, ಬಾನಬಂಡಿ ಸುಮಾರು 299 ದಿನಗಳ ಪಯಣದ ನಂತರ ಮಂಗಳದ ತಿರುಗುದಾರಿಯನ್ನು ಸೇರಲಿದ್ದು, ಆ ತಿರುಗುದಾರಿಯಲ್ಲಿ ಸುತ್ತುತ್ತಾ ಮಂಗಳದ ಕುರಿತು ವಿಶಯಗಳನ್ನು ತಿಳಿಸಲಿದೆ.

ನೆಲದಾಚೆಗೆ ಇಶ್ಟೊಂದು ದೂರದಲ್ಲಿ ಬಾನಬಂಡಿಯನ್ನು ಕಳಿಸುತ್ತಿರುವುದು ಇಸ್ರೋದ ಮಟ್ಟಿಗೆ ಇದೇ ಮೊದಲು. ಹಾಗಾಗಿ ಮಂಗಳ ಸುತ್ತುಗದ ಕುರಿತಾಗಿ ತಿಳಿದುಕೊಳ್ಳುವುದರ ಜತೆಗೆ ಅಲ್ಲಿಗೆ ಬಾನಬಂಡಿಯನ್ನು ಕಳುಹಿಸಲು ಮತ್ತು ಅಶ್ಟು ದೂರದವರೆಗೆ ಬಾನಬಂಡಿಯೊಂದಿಗೆ ಒಡನಾಡಲು ಬೇಕಾದ ಚಳಕಗಳನ್ನು ಕಯ್ಗೂಡಿಸಿಕೊಳ್ಳುವುದು ಇಸ್ರೋದ ಮುಕ್ಯ ಗುರಿ.

ಬಾನಬಂಡಿಯನ್ನು ಮಂಗಳದ ತಿರುಗುದಾರಿಯಲ್ಲಿ ಸೇರಿಸುವ ಕೆಲಸ ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರು ಹಂತಗಳನ್ನು ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ.

Spacecraft_trajectoryMars orbitter mission

(ಬಾನಬಂಡಿ ಸಾಗಾಟದ ಮೇಲ್ನೋಟ)

1. ನೆಲ ನಡುವಣದ ಹಂತ (Geo Centric Phase): ಈ ಹಂತದಲ್ಲಿ ಏರುಬಂಡಿ ತನ್ನ 6 ಮುಕ್ಯ ಬಿಣಿಗೆಗಳ ನೆರವಿನೊಂದಿಗೆ ಬಾನಬಂಡಿಯನ್ನು 918347 ಕಿ.ಲೋ. ದೂರದಲ್ಲಿ ನೆಲದಂಚಿನ ಮೊಟ್ಟೆಯಾಕಾರದ ತಿರುಗುದಾರಿಯಲ್ಲಿ ಚಿಮ್ಮಲಿದೆ. ಅಲ್ಲಿಂದ ಬಾನಬಂಡಿ ತನ್ನದೇ ಕಸುವಿನಿಂದ ಮಂಗಳದೆಡೆಗೆ ಸಾಗಬೇಕು. ಇಸ್ರೋದ ಮುಂದಿರುವ ದೊಡ್ಡ ಸವಾಲೆಂದರೆ ತುಂಬಾ ಕಡಿಮೆ ಉರುವಲು ಬಳಸಿ ಬಾನಬಂಡಿಯನ್ನು ಮಂಗಳದ ತಿರುಗುದಾರಿಯವರೆಗೆ ಸಾಗಿಸುವುದು.

ಇದಕ್ಕಾಗಿ ’ಹೋಮನ್ ಸಾಗಾಣಿಕೆಯ ತಿರುಗುದಾರಿ’ (Hohmann transfer orbit) ಇಲ್ಲವೇ ’ಎಲ್ಲಕ್ಕಿಂತ ಕಡಿಮೆ ಕಸುವಿನ ಸಾಗಾಣಿಕೆಯ ತಿರುಗದಾರಿ’ (minimum energy transfer orbit) ಎಂದು ಕರೆಯಲಾಗುವ ಬಗೆಯನ್ನು ಇಸ್ರೋ ಆಯ್ದುಕೊಂಡಿದೆ. ಈ ಬಗೆಯಲ್ಲಿ ಬಾನಬಂಡಿಯು ’ಮೊಟ್ಟೆಯಾಕಾರದ’ (elliptical) ದಾರಿಯಲ್ಲಿ ಸಾಗಿ ನೆಲಕ್ಕಿಂತ ಬೇರೆ ಎತ್ತರದಲ್ಲಿರುವ ಮಂಗಳದ ತಿರುಗುದಾರಿಯನ್ನು ಸೇರಲಿದೆ.

2. ನೇಸರ ನಡುವಣದ ಹಂತ (Helio Centric Phase): ತನ್ನ ಪಯಣದ ಕೊನೆಯಲ್ಲಿ ಬಾನಬಂಡಿಯು ಮಂಗಳದ ತಿರುಗುದಾರಿಯನ್ನು, ಮಂಗಳ ಅಲ್ಲಿರುವಾಗಲೇ ಸೇರಲಿದೆ. ಈ ಬಗೆಯಲ್ಲಿ ಮಂಗಳ ಹತ್ತಿರವಾಗುವುದು ಎರಡು ವರಶಕ್ಕೊಮ್ಮೆ. ನೇಸರ, ನೆಲ ಮತ್ತು ಮಂಗಳ ಒಂದಕ್ಕೊಂದು 44 ಡಿಗ್ರಿ ಕೋನದಲ್ಲಿ ಬಂದಾಗ ಇಂತ ಆಗುಹ ನಡೆಯುತ್ತದೆ.

3. ಮಂಗಳಿಗರ ಹಂತ (Martian Phase): ಜಗತ್ತಿನ ಹಲವಾರು ಕಟ್ಟುಕತೆಗಳಲ್ಲಿ ಮಂಗಳದಲ್ಲಿ ನಮ್ಮಂತೆ ಜೀವಿಗಳಿವೆ ಅನ್ನುವ ಕತೆಗಳನ್ನು ಹೆಣೆಯಲಾಗಿದ್ದು, ಮಂಗಳದ ಜೀವಿಗಳನ್ನು ಮಂಗಳಿಗರು (Martians) ಅಂತಾ ಕರೆಯಲಾಗುತ್ತದೆ. ಅರಿಮೆಯ ನೆಲದಲ್ಲಿ ಈ ಪದವನ್ನು ಮಂಗಳದ ಎಲ್ಲೆಯನ್ನು ಗುರುತಿಸಲು ಬಳಸಲಾಗುತ್ತದೆ.

ಈ ಎಲ್ಲೆ ಮಂಗಳದ ಸುತ್ತ 5,73,473 ಕಿ.ಮೀ.ವರೆಗೆ ಹರಡಿಕೊಂಡಿದೆ. ಇಸ್ರೋದ ಬಾನಬಂಡಿ ತನ್ನ ಮೂರನೇ ಹಂತದಲ್ಲಿ ಮಂಗಳಿಗರ ಈ ಪ್ರದೇಶವನ್ನು ಹೊಕ್ಕಲಿದ್ದು, ಅಲ್ಲಿಂದ ಮಂಗಳದ ಸುತ್ತ ತಿರುಗುತ್ತ ತನ್ನ ಕೆಲಸವನ್ನು ಆರಂಬಿಸಲಿದೆ.

ಬಾನಬಂಡಿಯಲ್ಲಿನ ಸಲಕರಣೆಗಳು:

Spacecraft_parts

ಬಾನಬಂಡಿಯನ್ನು ನಡೆಸಲು ಬೇಕಾದ ಕಸುವು ನೀಡುವ ನೇಸರ ಪಟ್ಟಿಗಳು, ಉರುವಲು ತೊಟ್ಟಿ ಮತ್ತು ಇಸ್ರೋ ನೆಲೆಯೊಂದಿಗೆ ಒಡನಾಡಲು ಬೇಕಾದ ನಿಲುಕುಗಳ ಜತೆಗೆ ಬಾನಬಂಡಿಯಲ್ಲಿ ಕೆಳಗಿನ ಸಲಕರಣೆಗಳನ್ನು ಅಳವಡಿಸಲಾಗಿದೆ.

1. ಲೇಮನ್ ಅಲ್ಪಾ ಬೆಳಕಿನಳಕ (Lyman-Alpha Photometer-LAP): ಈ ಸಲಕರಣೆಯು ಮಂಗಳದ ಸುತ್ತಣದಲ್ಲಿ ಡಿಟೋರಿಯಮ್ ಮತ್ತು ಹಯಡ್ರೋಜನ್‍ಗಳ ಪ್ರಮಾಣವನ್ನು ಅಳೆಯಲಿದೆ. ಇದರಿಂದಾಗಿ ಮಂಗಳದಲ್ಲಿರುವ ನೀರು ಕಾಣಿಯಾದ ಬಗೆಯನ್ನು ತಿಳಿಯಲು ನೆರವಾಗುತ್ತದೆ.

2. ಮಂಗಳದ ಮಿತೇನ್ ತಿಳಿಯುಕ (Methane sensor for Mars-MSM): ಈ ಸಲಕರಣೆಯಿಂದ ಮಂಗಳದ ಮೇಲ್ಮೆಯಲ್ಲಿರುವ ಮಿತೇನ್ ಪ್ರಮಾಣವನ್ನು ಅಳೆಯಲಾಗುವುದು.

3. ಮಂಗಳ ಹೊರಸುತ್ತಣ ಒರೆಹಚ್ಚುಕ (Mars exospheric neutral composition analyzer-MENCA): ಇದು ಮಂಗಳದ ಹೊರ ಹೊದಿಕೆಯಲ್ಲಿನ ವಸ್ತುಗಳನ್ನು ಒರೆಗೆಹಚ್ಚಲಿದೆ.

4. ಮಂಗಳದ ಬಣ್ಣದ ತಿಟ್ಟುಕ (Mars color camera-MCC): ಇದನ್ನು ಬಳಸಿ ಮಂಗಳ ಮೇಲ್ಮೆ ಮತ್ತು ಅದರ ಸುತ್ತಣದಲ್ಲಿ ಕಂಡುಬರುವ ಇತರ‍ ವಸ್ತುಗಳ ತಿಟ್ಟಗಳನ್ನು ಸೆರೆಹಿಡಿಯಲಾಗುವುದು. ಜತೆಗೆ ಮಂಗಳದ ಮರಿ-ಸುತ್ತುಗಗಳಾದ ಪೋಬೋಸ್ ಮತ್ತು ಡಿಮೋಸ್ ಕುರಿತಾಗಿಯೂ ಮಾಹಿತಿಯನ್ನು ಕಲೆಹಾಕಲಾಗುವುದು.

5. ಬಿಸುಪು ಸೂಸಳೆಯುಕ (Thermal infrared imaging spectrometer-TIS): ಇದರಿಂದ ಮಂಗಳದ ಮೇಲ್ಮೆ ಸೂಸುವ ಬಿಸುಪು ಅಳೆಯಲಾಗುವುದು. ಇದರ ನೆರವಿನಿಂದ ಮಂಗಳದಲ್ಲಿರುವ ಮಣ್ಣು ಮತ್ತು ಅದಿರುಗಳ ಗುಣಗಳನ್ನು ತಿಳಿದುಕೊಳ್ಳಲಾಗುವುದು.

ಬಾನರಿಮೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಿಡಲು ಅಣಿಯಾಗಿರುವ ನಮ್ಮ ಇಸ್ರೋ ಕೂಟಕ್ಕೆ ಗೆಲುವಾಗಲೆಂದು ಹಾರಯ್ಸೋಣ.

(ತಿಳಿವಿನ ಮತ್ತು ತಿಟ್ಟಗಳ ಸೆಲೆಗಳು: ಇಸ್ರೋ ಮಿಂಬಲೆದಾಣ, ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

9 Responses

  1. Anil Kumar says:

    ಸರ್ ನಿಜಕ್ಕೂ ಅತ್ಯಂತ ಉಪಯುಕ್ತ ಮಾಹಿತಿಯನ್ನ ನಮಗೆಲ್ಲ ತಿಳಿಸಿದ್ದೀರ . ಧನ್ಯವಾದಗಳು .
    ಕನ್ನಡ ದಲ್ಲಿ ಇಂತ ಕ್ಲಿಷ್ಟಕರ ಬರಹವನ್ನು ಬರೆದದ್ದು ನಿಜಕ್ಕೂ ಒಂದು ಅದ್ಬುತವೆನ್ನಬಹುದು .

  2. ಅನೀಲ ಅವರೇ,
    ನಿಮ್ಮ ನಲ್ಮೆಯ ಮಾತುಗಳಿಗೆ ನನ್ನಿಗಳು/ದನ್ಯವಾದಗಳು.

  3. Varun Vivek says:

    ವಾಹ್ ವಾಹ್!!!! ನಿಮ್ಮ ಈ ಕನ್ನಡಕ್ಕೆ ಮನಸ್ಸೋತೆ ಕಣ್ರೀ… ನಿಜ ಹೇಳ್ಬೇಕು ಅಂದ್ರೆ, ಕನ್ನಡ ಪದಗಳ ಬಳಕೆ ಮತ್ತು ಅವುಗಳ ಇರುವಿಕೆ ಇಷ್ಟು ಚೆನ್ನಾಗಿ ಮಾಡಬಹುದು ಅಂತ ನಮಗೆ ತಿಳಿಸಿ ಕೊಟ್ಟಿದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು….. ಅದು ಮೊದಲನೇ ವಿಷಯ
    ಇನ್ನೊಂದ್ ಏನ್ ಅಂದ್ರೆ, ಈ ರೀತಿಯ ಕನ್ನಡದಲ್ಲಿ ಯಾರು ವಿವರಿಸಿರಲಿಲ್ಲ… ನಿಮ್ಮ ಈ ಎಲ್ಲ ಜ್ಞಾನಾರ್ಜನೆಗೆ ಮತ್ತೊಮ್ಮೆ ಕೋಟಿ ನಮನ—–

  1. 05/01/2014

    […] ಬೆನ್ನಿಗೆ ಇತ್ತೀಚಿನ ಮಂಗಳಯಾನ, IRNSS-1A, INSAT-3D ಹಮ್ಮುಗೆಗಳ ಗೆಲುವಿನ […]

  2. 06/01/2014

    […] ಮಂಗಳಯಾನದಂತಹ ದೊಡ್ಡ ಹಮ್ಮುಗೆ ನೀಡಿದ ಸವಾಲುಗಳನ್ನು ಮೀರಿಸುವಂತೆ GSLV ಹಮ್ಮುಗೆ ಇಸ್ರೋ ಕೂಟವನ್ನು ಕಾಡಿಸಿತ್ತು. ಇದಕ್ಕಾಗಿಯೇ GSLV-D5 ಹಾರಿಸಿದ ಬಳಿಕ ಇಸ್ರೋ ತನ್ನ ಪೇಸಬುಕ್ ಪುಟದಲ್ಲಿ ’ಗೆದ್ದ ತುಂಟ ಹುಡುಗ’ ಅಂತಾ ಬರೆದುಕೊಂಡಿತು […]

  3. 11/08/2014

    […] ಮಂಗಳಯಾನದಂತಹ ದೊಡ್ಡ ಹಮ್ಮುಗೆ ನೀಡಿದ ಸವಾಲುಗಳನ್ನು ಮೀರಿಸುವಂತೆ GSLV ಹಮ್ಮುಗೆ ಇಸ್ರೋ ಕೂಟವನ್ನು ಕಾಡಿಸಿತ್ತು. ಇದಕ್ಕಾಗಿಯೇ GSLV-D5 ಹಾರಿಸಿದ ಬಳಿಕ ಇಸ್ರೋ ತನ್ನ ಪೇಸಬುಕ್ ಪುಟದಲ್ಲಿ ’ಗೆದ್ದ ತುಂಟ ಹುಡುಗ’ ಅಂತಾ ಬರೆದುಕೊಂಡಿತು 🙂 […]

  4. 23/09/2014

    […] ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ […]

  5. 11/11/2014

    […] ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ […]

  6. 16/01/2015

    […] ಮಂಗಳ ಬಾನಬಂಡಿ ಪರಿಣತರ ತಂಡಕ್ಕೆ 2015ರ ಸ್ಪೇಸ್ ಪಯೊನೀರ್ ಎಂಬ […]

ಅನಿಸಿಕೆ ಬರೆಯಿರಿ: