ರಾಜ್ಯೋತ್ಸವದ ಸರಿಯಾದ ಆಚರಣೆ

ಎಂ. ಆರ್. ಎಸ್. ಶಾಸ್ತ್ರಿ.

ATT00001

ಪ್ರತಿ ವರುಶ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಂಬ್ರಮ, ಸಡಗರ ಎಲ್ಲ ಕಡೆ ಪ್ರಾರಂಬವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಬ ಏರ್‍ಪಡಿಸುವ ಸಂಬ್ರಮ ತಿಂಗಳಿಡೀ ನಡೆಯುತ್ತದೆ. ಇಂತಹ ಆಚರಣೆಯಿಂದ ಲಾಬವಾಗಿದೆಯೇ ಅತವಾ ಬೇರೆ ವಿದಾನದಲ್ಲಿ ಆಚರಿಸಬಹುದೇ ಎಂಬುದನ್ನು ವಿವೇಚಿಸುವ ಸಮಯವಿದು.

ಆಚರಣೆ ಯಾಂತ್ರಿಕವಾಗಿದ್ದರೆ ಜನಗಳಲ್ಲಿ ಉತ್ಸಾಹ ಕ್ರಮೇಣ ತಣ್ಣಗಾಗುತ್ತದೆ. ಆಚರಣೆಯಲ್ಲಿ ಚಲನಶೀಲತೆ, ಹೊಸತನ ಮತ್ತು ವಯ್ಚಾರಿಕತೆಯನ್ನು ಮಯ್ಗೂಡಿಸಿಕೊಂಡರೆ ಆಗ ಅದು ಅರ್‍ತಪೂರ್‍ಣವಾಗುತ್ತದೆ. “ಹೆಚ್ಚು ವೆಚ್ಚ ಮಾಡಿ ಅದ್ದೂರಿಯಾಗಿ ಆಚರಿಸಿದರೆ ಮಾತ್ರ ರಾಜ್ಯೋತ್ಸವ” ಎಂಬ ಗೊಡ್ಡು ಚಿಂತನೆ ಬಿಟ್ಟು, ಕಡಿಮೆ ವೆಚ್ಚದಲ್ಲಿ, ಸರಳವಾಗಿ, ಅರ್‍ತಪೂರ್‍ಣವಾಗಿ ವಿವೇಕಯುತವಾಗಿ ರಾಜ್ಯೋತ್ಸವ ಆಚರಿಸಲು ಸಾದ್ಯವಿದೆ ಎಂಬುದೇ ನನ್ನ ಅನಿಸಿಕೆ. ಇದರಿಂದ ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನೂ ಪಡೆಯಬಹುದು.

ಸ್ವ ಇಚ್ಚೆಯಿಂದ ಜನರು ಸಮಾರಂಬದಲ್ಲಿ ಬಾಗವಹಿಸುವ ವೇದಿಕೆಯೊಂದನ್ನು ಕಲ್ಪಿಸಬೇಕಾಗಿದೆ. ರಾಜ್ಯದ ಜನತೆಯಲ್ಲಿ ಕನ್ನಡ ನಾಡಿನ ಸಂಸ್ಕ್ರುತಿ, ಚರಿತ್ರೆ, ಬೂಗೋಳ, ಸಾಹಿತ್ಯ ಕುರಿತ ಅರಿವು ಮೂಡಿಸಿದರೆ ಅದೇ ನಿಜವಾದ ಯಶಸ್ಸು. ಇಂತಹ ಹೆಮ್ಮೆ ಪಡುವ ವಿಶಯಗಳ ಪರಿಚಯವೇ ಜನರಲ್ಲಿ ಇಲ್ಲವಾದರೆ ಕನ್ನಡದ ಬಗ್ಗೆ ಹೆಮ್ಮೆ ಮೂಡುವುದು ಕನಸೇ ಸರಿ. ಇಂತಹ ವಿಶಯಗಳನ್ನು ಕಲಿಯಲು, ಹಂಚಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಸಂಸ್ತೆಗಳಿಗೆ ಹಣಕ್ಕಿಂತ ನಿಜವಾದ ಕನ್ನಡ ಅಬಿಮಾನ, ಸ್ರುಜನಶೀಲತೆ, ಸ್ವಂತಿಕೆ ಮತ್ತು ಸದಸ್ಯರುಗಳಲ್ಲಿ ಒಗ್ಗಟ್ಟು ಅಗತ್ಯವಾಗಿರುತ್ತದೆ.

ಜನರು ಸೇರಲು ಅನುಕೂಲವಾಗುವ ಸ್ತಳದಲ್ಲಿ ರಸಪ್ರಶ್ನೆ ಕಾರ್‍ಯಕ್ರಮ ನಡೆಸುವುದು ಉತ್ತಮ. ಒಂದು ತಿಂಗಳು ಮುಂಚಿತವಾಗಿಯೇ ಸಂಸ್ತೆಯು ಈ ಕಾರ್‍ಯಕ್ರಮದ ವಿವರ ಪ್ರಕಟಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳುವ ಅವಕಾಶವನ್ನು ಜನರಿಗೆ ನೀಡಬೇಕು. ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ವಿಬಾಗಗಳಲ್ಲಿ ಸ್ಪರ್‍ದೆ ಏರ್‍ಪಡಿಸಿದರೆ ಹೊಸ ವಿಶಯ ಕಲಿಯುವ ಆಸಕ್ತಿ ಮತ್ತು ಗುಂಪಿನಲ್ಲಿ ಕಲಿಯುವ ಅವಕಾಶವನ್ನೂ ಎಲ್ಲರಿಗೆ ನೀಡಿದಂತಾಗುತ್ತದೆ. ರಸಪ್ರಶ್ನೆಯಲ್ಲಿ ಕೇಳುವ ಪ್ರಶ್ನೆಗಳು ಕರ್‍ನಾಟಕಕ್ಕೆ ಸಂಬಂದಿಸಿದ ಚರಿತ್ರೆ, ಸಂಗೀತ, ಸಾಹಿತ್ಯ, ಸಾಹಿತಿಗಳು, ಜಾನಪದ ಕಲೆಗಳು, ಒಗಟುಗಳು, ಪ್ರೇಕ್ಶಣೀಯ ಸ್ತಳಗಳು ಮುಂತಾದ ವಿಚಾರಗಳಿಗೆ ಸಂಬಂದಿಸಿರಬಹುದು. ಇಂತಹ ಪ್ರಯೋಗವನ್ನು ಹಿಂದೂಸ್ತಾನ್ ವಿಮಾನ ಕಾರ್‍ಕಾನೆಯ ರಾಜ್ಯೋತ್ಸವದಲ್ಲಿ ನಡೆಸಿದಾಗ ಉತ್ಸಾಹಕರ ಪ್ರತಿಕ್ರಿಯೆ ಕಂಡುಬಂತು.

ಕಲಿಕೆಯ ತರಗತಿ ಏರ್‍ಪಡಿಸಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಕನ್ನಡ ಕಲಿಕೆಯ ಸಮಯದಲ್ಲಿ ನಮ್ಮ ನಾಡಿನ ಪ್ರೇಕ್ಶಣೀಯ ಸ್ತಳಗಳ ಬಗ್ಗೆಯೂ ತಿಳಿಸಬೇಕು. ಕನ್ನಡ ಗೀತೆಗಳ ಸಮೂಹ ಗಾನ, ಆಟ ಇವುಗಳನ್ನು ಕಲಿಕೆಗಾಗಿ ಅಳವಡಿಸಿಕೊಂಡರೆ ಉತ್ತಮ. ಈ ತರಗತಿಯಲ್ಲಿ ಬಾಗವಹಿಸಿ ಕನ್ನಡ ಕಲಿತವರಿಗೆ ಪ್ರತ್ಯೇಕ ವಿಬಾಗದ ಸ್ಪರ್‍ದೆ ಏರ್‍ಪಡಿಸಿದರೆ ಹೆಚ್ಚು ಜನ ಪಾಲ್ಗೊಳ್ಳುವ ಸಾದ್ಯತೆ ಇದೆ.

ಓದುವ ಹವ್ಯಾಸವನ್ನು ಜನರಲ್ಲಿ ಬೆಳೆಸಲು ಸ್ಪರ್‍ದೆಗೆ ಉತ್ತಮ ಕತಾ ವಸ್ತು ಇರುವ ಕತೆ ಪುಸ್ತಕವೊಂದನ್ನು (ಉದಾ : ತೇಜಸ್ವಿಯವರ ಜುಗಾರಿ ಕ್ರಾಸ್) 15-20 ದಿನ ಮುಂಚಿತವಾಗಿಯೇ ವಿದಿಸಿ. ಇದರೊಂದಿಗೆ ಸ್ಪರ್‍ದೆಯಲ್ಲಿ ಪುಸ್ತುಕ ಬಳಕೆ, ನಿಗದಿತ ಸಮಯ ಇತ್ಯಾದಿ ಪೂರ್‍ವಬಾವಿ ಶರತ್ತುಗಳನ್ನೂ ಪ್ರಕಟಿಸಬೇಕು. ಸ್ಪರ್‍ದಿಗಳು ಪುಸ್ತಕವನ್ನು ಓದಿಕೊಂಡು, ನಿರ್‍ದಿಶ್ಟ ದಿನದಂದು ಗೊತ್ತುಪಡಿಸಿದ ಸ್ತಳ ಮತ್ತು ನಿರ್‍ದಿಶ್ಟ ಸಮಯದಲ್ಲಿ ಅದರ ಕುರಿತಾದ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಇದರಿಂದ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಲು ಸಾದ್ಯ.

ಕನ್ನಡ ಮಾತ್ರುಬಾಶೆ ಅಲ್ಲದಿದ್ದರೂ ಕನ್ನಡಕ್ಕೆ ಉತ್ತಮ ಕೊಡುಗೆ ನೀಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕಿಟ್ಟಲ್ ಮುಂತಾದ ಮಹನೀಯರ ವಿಚಾರವನ್ನು ಹೇಳಿ ಬಾಶಾ ಕಲಿಕೆ ಬಾಂದವ್ಯ ಬೆಳೆಸಬಲ್ಲುದು ಎಂಬ ವಿಶಯವನ್ನು ಅನ್ಯ ಬಾಶಿಗರಿಗೆ ಮನದಟ್ಟು ಮಾಡಿಸಬೇಕು. ಕನ್ನಡ ಗೀತ ಗಾಯನ ಸ್ಪರ್‍ದೆಯಲ್ಲಿ ಗೆದ್ದವರಿಗೆ ಕನ್ನಡ ಬಾವಗೀತೆ, ದೇವರನಾಮದ ಕ್ಯಾಸೆಟ್ ಅತವಾ ಸಿ.ಡಿ.ಯನ್ನು ಬಹುಮಾನವಾಗಿ ನೀಡಬಹುದು.

ಪಾರಿತೋಶಕವಾಗಿ ಉತ್ತಮ ಅಬಿರುಚಿಯ ಕನ್ನಡ ಪುಸ್ತಕಗಳನ್ನು ಮಾತ್ರ ನೀಡಬೇಕು. ಇಲ್ಲಿ ಹೆಚ್ಚು ಜನರಿಗೆ ಪುಸ್ತಕ ಬಹುಮಾನ ನೀಡುವ ಗುರಿ ಹೊಂದಿದ್ದರೆ ಉತ್ತಮ. ಸ್ಪರ್‍ದಾ ವಿಬಾಗದಲ್ಲಿ ಬಾಗವಹಿಸುವವರ ವಯಸ್ಸು, ಕನ್ನಡ ಜ್ನಾನ ಎರಡನ್ನೂ ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಆರಿಸಬೇಕು. ಕೆಲವು ಕನ್ನಡ ಪುಸ್ತಕ ಮಾರಾಟ ಮಳಿಗೆಗಳೊಂದಿಗೆ ಡಿಸ್ಕವುಂಟ್ ಹೊಂದಾಣಿಕೆ ಮಾಡಿಕೊಂಡು ರಿಯಾಯಿತಿಯಲ್ಲಿ ಕನ್ನಡ ಪುಸ್ತಕವನ್ನು ಕೊಳ್ಳುವಂತೆ ಬಹುಮಾನ ಕೂಪನ್ ನೀಡುವ ಯೋಚನೆಯಿಂದ ಉಳಿತಾಯವಾಗುವುದರಿಂದ ಹೆಚ್ಚು ಜನರಿಗೆ ಬಹುಮಾನ ನೀಡಲು ಸಾದ್ಯವಾಗುತ್ತದೆ.

ಬಡಾವಣೆಯಲ್ಲಿರುವ ಕನ್ನಡಿಗರು ಮತ್ತು ಕನ್ನಡೇತರರ ಸಂಕ್ಯೆ, ವಿವಿದ ವಯಸ್ಸಿನ ಮಕ್ಕಳ ಮತ್ತು ವಯಸ್ಕರ ಸಂಕ್ಯೆ ಆದರಿಸಿ ಇದರಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಕಾರ್‍ಯಕ್ರಮ ರೂಪಿಸಿ ನಿರ್‍ವಹಿಸಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇದಮಿತ್ತಂ ಎಂಬ ಸೂತ್ರ ಅತವಾ ಉತ್ತರವಿಲ್ಲ.

(ಚಿತ್ರ ಸೆಲೆ: sitharamsuri.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: