ಸ್ಪರ‍್ದಾತ್ಮಕ ಪರೀಕ್ಶೆಗಳಿಗೆ ತರಬೇತಿ: ಸರ‍್ಕಾರ ದಿಟ್ಟ ನಿಲುವು ತಾಳಲಿ

– ಶ್ರೀನಿವಾಸಮೂರ‍್ತಿ ಬಿ.ಜಿ.

UPSC

KAS, IAS ತೆರನ ಸ್ಪರ‍್ದಾತ್ಮಕ ಪರೀಕ್ಶೆಗಳಲ್ಲಿ ತೇರ‍್ಗಡೆ ಹೊಂದಲು ಬಯಸಿ ಅದೆಶ್ಟು ಮಂದಿ ಬೆಂಗಳೂರಿಗೇನೆ ಬರುತ್ತಾರೆ? ಉಹುಂ ಇಂದಿಗೂ ತಿಳಿದುಕೊಳ್ಳಲು ಆಗಿಯೇ ಇಲ್ಲ. ಹೀಗೆ ಹುದ್ದೆಯ ಪರೀಕ್ಶೆಗಳನ್ನು ಬರೆಯಲೋಸುಗ ಬರುವವರು ಬಾಡಿಗೆ ಮನೆಗಳಲ್ಲಿ ಉಳಿದುಕೊಂಡಿರುತ್ತಾರೆ. ಅವರು ಊರಿಗೆ ಹೋಗುವುದು ಹಬ್ಬ ಮತ್ತು ತರಬೇತಿಯವರು ರಜೆ ನೀಡಿದಾಗ ಮಾತ್ರ. ಬಾಡಿಗೆಯನ್ನು ಕಟ್ಟಲು ಕೆಲವೊಮ್ಮೆ ಸಾಲ ಮಾಡುತ್ತಾರೆ. ಇಲ್ಲವೆ ಮನೆ ಒಡೆಯನಿಂದ ಬಯ್ಗುಳಗಳನ್ನು ಕೇಳುತ್ತಾರೆ. ಅದೂ ಆಗದಿದ್ದರೆ, ತನ್ನವರಿಂದಲೇ ಹಿಂಜರಿಕೆಯ ಮಾತುಗಳನ್ನು ಕೇಳುತ್ತಾರೆ. ಒಟ್ಟಿನಲ್ಲಿ ಒಂದಲ್ಲಾ ಒಂದು ನಿಟ್ಟಿನಲ್ಲಿ ತೊಳಲಾಟದಲ್ಲಿಯೇ ಅಂದುಕೊಂಡದ್ದನ್ನು ಆಗಿಸಿಕೊಳ್ಳುವ ಗುರಿಯತ್ತಲಿನ ದಾರಿಯನ್ನು ಬಿಡದವರು ಆಗಿರುತ್ತಾರೆ.

ಎಲ್ಲಾ ತರಬೇತಿ ನೀಡುಗರು ಬೆಂಗಳೂರಿಗೇನೆ ಬಂದು ನೆಲೆಸಿಬಿಟ್ಟರೆ ತರಬೇತಿಯನ್ನು ಪಡೆಯುವವರು ತಾನೆ ಏನು ಮಾಡಿಯಾರು? ಹಾ! ಅವರೂ ಬೆಂಗಳೂರಿಗೇನೆ ಬಂದು ನೆಲೆಗೊಳ್ಳಲೇ ಬೇಕು. ಅವರಿಗೆ ಮತ್ತೊಂದು ದಾರಿಯೇ ಇರುವುದಿಲ್ಲ. ಸರ‍್ಕಾರ ಈ ನಿಟ್ಟಿನಲ್ಲಿಯಾದರೂ ಒಂದು ಕಟ್ಟಲೆಯನ್ನು ಮಾಡಬೇಕಾಗಿದೆ. ಅದು ಹೇಗಿರಬೇಕೆಂದರೆ,
ಈಗ ರಾಜ್ಯದಲ್ಲಿ ತರಬೇತಿ ನೀಡುತ್ತಿರುವವರನ್ನು ಗುರುತಿಸಿ ಅವರನ್ನು ಇಂತಿಶ್ಟು ತಾಲ್ಲೂಕುಗಳಿಗೆ ಹಂಚಿಕೆ ಮಾಡಿ ಆ ತಾಲ್ಲೂಕಿನ ಆಸಕ್ತರಿಗೆ ತರಬೇತಿಯನ್ನು ನೀಡುವಂತೆ ಆಗಿಸುವ ಕಟ್ಟಲೆ ಅದಾಗಿರಬೇಕು. ಈ ತೆರನ ಕಟ್ಟಲೆಯಲ್ಲಿಯೇ ಸಂಸ್ತೆ/ಮಂದಿಕೂಟಗಳು ಆಸಕ್ತರಿಂದ ಪಡೆಯಬೇಕಾಗಿರುವ ಹಣವನ್ನೂ ಕೂಡ ನಿಗದಿಪಡಿಸಿರಬೇಕು. ಏಡಿಗೊಮ್ಮೆ ಸಂಸ್ತೆ/ಮಂದಿಕೂಟಗಳನ್ನು ಗಾಲಿ ತಿರುಗುವಂತೆ ಬದಲಿಸಬೇಕು. ಇದರಿಂದ ಸಂಸ್ತೆ/ಮಂದಿಕೂಟಗಳಲ್ಲಿಯೂ ಹುರುಪು ಇರುತ್ತದೆ. ಈ ಲಾಬವನ್ನು ಆಸಕ್ತರು ಪಡೆದುಕೊಳ್ಳಲು ನೆರವಾಗುತ್ತದೆ.

ಈ ತೆರನ ಕಟ್ಟಲೆ ಜಾರಿಯಾದಲ್ಲಿ ಬೆಂಗಳೂರಿಗೆ ಬರುವವರ ಎಣಿಕೆಯಲ್ಲಿ ಇಳಿಕೆಯಾಗುವುದಲ್ಲದೆ ತರಬೇತಿಯನ್ನು ಬಯಸಿದವರು ತೀರಾ ಹಣದ ತೊಂದರೆ ಇಲ್ಲದೆ, ತಂದೆ-ತಾಯಿಗಳಿಗೆ ಹೆಚ್ಚು ಹೊರೆಯಾಗದೆ ನೆಮ್ಮದಿಯಿಂದ ತಾವು ಅಂದುಕೊಂಡ ಗುರಿಯನ್ನು ಮುಟ್ಟಬಲ್ಲರು.

ಬೆಂಗಳೂರಿನಲ್ಲಿ ಈಗ ರೂ.600ಗೂ ಮೇಲ್ಪಟ್ಟು ಬಾಡಿಗೆ ಮನೆ ಸಿಗುತ್ತದೆ. ಅದಕ್ಕಿಂತ ಕಡಿಮೆ ಮನೆ ಬಾಡಿಗೆಗೆ ಸಿಗುತ್ತದೆಯಾದರೂ ಆಸಕ್ತರು ತಮ್ಮ ಓದಿಗೆ ಬಳಸುವ ಓದುಗೆಗಳನ್ನು/ಹೊತ್ತಗೆಗಳನ್ನು ಇಟ್ಟುಕೊಳ್ಳಲು ಅಂತಹ ಮನೆಯಲ್ಲಿ ಆಗುವುದೇ ಇಲ್ಲ. ಇನ್ನು ದಿನಸಿಗಳಿಗೆ ಇವರು ಹಣವನ್ನು ಹೊಂಚಿಕೊಳ್ಳಲು ತೊಳಲಾಡಬೇಕಾಗಿಯೇ ಇದೆ. ಒಡನೆ ಇಟ್ಟುಕೊಂಡಿರುವ ವಸ್ತುಗಳನ್ನು ಕಾಪಾಡಿಕೊಳ್ಳಲು ಎಶ್ಟು ಎಚ್ಚರದಿಂದ ಇದ್ದರೂ ಪರದಾಡುವುದು ಇವರಿಗೆ ತಪ್ಪಲಾರದು. ವಿದ್ಯುತ್, ನೀರಿಗಾಗಿ ನೀಡಬೇಕಾಗಿರುವ ಹಣ ಹಾಗೂ ಆರೋಗ್ಯದ ತೊಂದರೆ ಉಂಟಾದರೆ ಅದಕ್ಕಾಗಿನ ಹಣ ಎಲ್ಲವನ್ನು ಲೆಕ್ಕ ಮಾಡಿದರೆ ಅಬ್ಬಾ! ಹಣಕ್ಕೆ ಇವರ ಹೋರಾಟ ಹೇಗಿದೆ? ಎಂಬ ಬಡಿತ ಮನಸ್ಸಿಗೆ ಗುದಿಯುತ್ತದೆ.

ಏಡುಏಡಿಗೂ 1000ಕ್ಕೂ ಹೆಚ್ಚು ಆಸಕ್ತ ಮಂದಿ ಇದಕ್ಕಾಗಿಯೇ ಬೆಂಗಳೂರಿಗೆ ಬರುತ್ತಾ ಇದ್ದಾರೆ ಎಂದೇ ನನ್ನ ಅನಿಸಿಕೆಯಾಗಿದೆ. ಇವರಲ್ಲಿ ಎಶ್ಟು ಮಂದಿ ಗೆಲ್ಲುವರೋ? ಸೋಲುವರೋ ಆ ದೇವನನೇ ಬಲ್ಲ. ಆದರೆ ಅವರ ಹುಮ್ಮಸ್ಸಂತೂ ಬತ್ತಲಾರದು. ದಿನಕ್ಕೆ 3ರಿಂದ 4 ಸಲ ತರಬೇತಿ ನೀಡುಗರು ತರಗತಿಯನ್ನು ನಡೆಸುತ್ತಿದ್ದಾರೆ. ಯಾವುದೇ ಕೆಲಸವನ್ನು ಮಾಡದೆ ಇರುವವರು 2ರಿಂದ 3 ತರಗತಿಗಳಿಗೆ ಹೋಗಿ ಪಾಟವನ್ನು ಆಲಿಸುತ್ತಾರೆ. ಆದರೆ, ತರಬೇತಿಯನ್ನು ಪಡೆಯುತ್ತಲೇ ಹಣಗಳಿಕೆ ಮಾಡುವವರಿಗೆ ದಿನಕ್ಕೆ 1ರಿಂದ 2 ತರಗತಿಯಲ್ಲಶ್ಟೇ ಪಾಟವನ್ನು ಕೇಳಲು ಆಗುತ್ತದೆ. ಇಂತಹವರು ಬಹಳಶ್ಟು ಒತ್ತಡದಲ್ಲಿಯೇ ಇರುತ್ತಾರೆ. ಇವರ ಹುರುಪು ಸರ‍್ಕಾರಿ ಹುದ್ದೆಯನ್ನು ಪಡೆಯುವುದಶ್ಟೇ ಇರುತ್ತದೆಯಾದ್ದರಿಂದ ಈ ಹುದ್ದೆಗೆ ಬೇಕಾದ ಸಿದ್ದತೆಯನ್ನು ನಡೆಸುತ್ತಿರುತ್ತಾರೆ. ತರಗತಿಗೆ ಹೋದಾಗ ಹುರುಪಿನಿಂದ ಇದ್ದು ತರಗತಿಯಿಂದ ಹೊರಬಂದ ಕೂಡಲೆ ಹೊಟ್ಟೆಯ ಕಡೆಗೆ ಗಮನವನ್ನು ನೀಡುವುದರಲ್ಲಿ ಇವರು ಹೆಣಗಬೇಕಾಗಿದೆ.

ನಿಯತಕಾಲಿಕೆಗಳನ್ನು ಹೊರಡಿಸುವವರೂ ಹಾಗೂ ಇತರರು ತರಬೇತಿ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರು ಅವರಿಗೆ ತೋಚಿದ ಹಣವನ್ನು ಆಸಕ್ತರಿಂದ ವಸೂಲಿ ಮಾಡುತ್ತಿದ್ದಾರೆ. ಇವರು ವಸೂಲಿ ಮಾಡುತ್ತಿರುವ ಹಣ 4000ರಿಂದ-50000ವರೆಗೂ ಇದೆ. ಇದು ಬಡತನದಲ್ಲಿರುವವರಿಗೆ ಎಟುಕಲಾರದ ಹಣಗಂಟಾಗಿದೆ. ಹೀಗಾಗಿ ಸರ‍್ಕಾರ ಇಂತವರ ನೆರವಿಗೆ ಬಂದು ಆಸಕ್ತರಲ್ಲಿ ಆಸಕ್ತಿಯನ್ನು ನೂರ‍್ಮಡಿಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ.

ಈ ತೆರನ ಕೆಲಸ ಸರ‍್ಕಾರದಿಂದ ಆಗಿಬಿಟ್ಟರೆ ಕಂಡಿತವಾಗಿಯೂ ವಲಸೆಗೆ ಇರುವ ಎಶ್ಟೋ ಕಾರಣಗಳಲ್ಲಿ ಒಂದಂತೂ ಇಲ್ಲವಾಗುತ್ತದೆ. ಉಳುಮೆ ಮಾಡುತ್ತಲೇ ತರಬೇತಿ ಪಡೆವ ಆಸಕ್ತರಿಗೂ ನೆರವಾಗುವುದಲ್ಲದೆ ತಂದೆ-ತಾಯರೊಂದಿಗೆ ಇದ್ದುಕೊಂಡೇ ತರಬೇತಿಯನ್ನು ಪಡೆವ ಅವಕಾಶವೂ ಇದರಿಂದ ಆಗುತ್ತದೆ. ಒಟ್ಟಾರೆ ಇದರಿಂದಾಗಿ ನಮ್ಮ ನಾಡಿನಲ್ಲಿ ಬೆಳಕಿಗೆ ಬಾರದ ಎಶ್ಟೋ ಮಂದಿಯನ್ನು ಬೆಳಕಾಗಿ ಹೊಮ್ಮಿಸುವ ಸುತ್ತಣ ಏರ‍್ಪಾಟಾಗುತ್ತದೆ. ಈ ತೆರನ ಏರ‍್ಪಾಟಿನಿಂದ ಸರ‍್ಕಾರಕ್ಕೂ ಒಳಿತಾಗುವುದರಿಂದ ಸರ‍್ಕಾರ ದಿಟ್ಟ ನಿಲುವನ್ನು ತಾಳಬೇಕಾಗಿದೆ.

(ಚಿತ್ರ ಸೆಲೆ: jobsfall.in)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.