ನಾವು ಕನ್ನಡ ಮಾದ್ಯಮದ ಮಹತ್ವ ಅರಿತುಕೊಳ್ಳಬೇಕಿದೆ

ಪ್ರಿಯಾಂಕ್ ಕತ್ತಲಗಿರಿ.

kannadamedium

ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಕ್ಕಳ ಕಲಿಕೆಗೆ ಒಳಿತು ಎಂಬುದನ್ನು ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರುತ್ತಿವೆ. ಆದರೆ ಈ ದಿಟವನ್ನು ಒಪ್ಪಿಕೊಳ್ಳಲು ನಮ್ಮ ಕನ್ನಡ ಸಮಾಜವು ಇಂದಿಗೂ ಮೀನಾಮೇಶ ಎಣಿಸುತ್ತಿರುವಂತೆ ಕಾಣುತ್ತದೆ. ಆ ಕಾರಣಕ್ಕಾಗಿಯೇ ಇರಬಹುದು ನಮ್ಮಲ್ಲಿ ಇಂಗ್ಲೀಶ್ ಮಾದ್ಯಮಗಳಲ್ಲಿ ಓದುತ್ತಿರುವ ಮಕ್ಕಳ ಎಣಿಕೆ ಹೆಚ್ಚುತ್ತಲೇ ಇದೆ. ನನ್ನ ಪರಿಚಯದ, ಅಕ್ಕ-ಪಕ್ಕದ ಮನೆಯವರ ಮತ್ತು ಜೊತೆಯಲ್ಲಿ ಕೆಲಸ ಮಾಡುವವರೊಡನೆ ಈ ವಿಶಯವಾಗಿ ಮಾತನಾಡಿದಾಗ ಎಲ್ಲರಲ್ಲೂ ಈ ಎರಡು ಪ್ರಶ್ನೆಗಳಿದ್ದುದು ಕಂಡುಬಂದಿತು.

ಇಡೀ ಕನ್ನಡಸಮಾಜದಲ್ಲಿ ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದರ ಕುರಿತು ಬೇರೆಯೂ ಪ್ರಶ್ನೆಗಳಿರಬಹುದು, ಗೊಂದಲಗಳಿರಬಹುದು. ಆದರೆ, ಈ ಬರಹದಲ್ಲಿ ನಾನು ಹೆಚ್ಚು ಕೇಳಲ್ಪಟ್ಟ ಎರಡು ಪ್ರಶ್ನೆಗಳನ್ನು ಎತ್ತಿಕೊಂಡು ಅವಕ್ಕೆ ಉತ್ತರ ಅರಸುವ ಕೆಲಸ ಮಾಡಿರುವೆ.

  1. ಕನ್ನಡ ಮಾದ್ಯಮದಲ್ಲಿ ಓದಿದರೆ ಇಂಗ್ಲೀಶ್ ಬರುವುದಿಲ್ಲವಲ್ಲ, ಇವತ್ತಿನ ದಿನ ಇಂಗ್ಲೀಶ್ ಅನಿವಾರ‍್ಯವಲ್ಲವೇ?
  2. ಜಪಾನು, ಜರ್‍ಮನಿಯಂತಹ ದೇಶಗಳಲ್ಲಿ ಒಂದೇ ನುಡಿಯಿದೆ, ಹಾಗಾಗಿ ಅವರು ತಮ್ಮದೇ ನುಡಿಯಲ್ಲಿ ಕಲಿತು ದಕ್ಕಿಸಿಕೊಳ್ಳಬಲ್ಲರು. ನಮ್ಮ ದೇಶದಲ್ಲಿ ಸಾವಿರಾರು ನುಡಿಗಳಿರುವುದರಿಂದ, ನಾವು ಕನ್ನಡವನ್ನು ಮಾತ್ರ ನೆಚ್ಚಿಕೊಂಡರೆ ಸಾಕೇ?

ಮೊದಲನೇ ಪ್ರಶ್ನೆಯನ್ನು ತೆಗೆದುಕೊಂಡರೆ, ಕನ್ನಡ ಮಾದ್ಯಮದಲ್ಲಿ ಓದಿದರೆ ಇಂಗ್ಲೀಶು ಬರುವುದಿಲ್ಲ ಎಂಬ ತಪ್ಪುನಂಬಿಕೆ ಎದ್ದು ಕಾಣುತ್ತದೆ. ಇನ್ಪ಼ೋಸಿಸ್‍ನಂತಹ ದೊಡ್ಡ ಕಂಪನಿಯನ್ನು ಕಟ್ಟಿ ಬೆಳೆಸಿದ ನಾರಾಯಣ ಮೂರ್‍ತಿಯವರು ತಮ್ಮ ಮೊದಲ ಹಂತದ ಕಲಿಕೆ ನಡೆಸಿದ್ದು ಕನ್ನಡ ಮಾದ್ಯಮದಲ್ಲಿಯೇ. ಇಂದು ಅವರು ಅಮೇರಿಕನ್ನರಶ್ಟೇ ನಿರರ್‍ಗಳವಾಗಿ ಇಂಗ್ಲೀಶಿನಲ್ಲಿ ಮಾತನಾಡಬಲ್ಲರು, ಮತ್ತು ವ್ಯವಹರಿಸಬಲ್ಲರು. ದೇಶದ ಹೆಸರುವಾಸಿ ವಿಗ್ನಾನಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ತಮ್ಮ ಮೊದಲ ಹಂತದ ಕಲಿಕೆ ನಡೆಸಿದ್ದು ತಮಿಳಿನಲ್ಲಿಯೇ. ದೇಶದ ರಾಶ್ಟ್ರಪತಿಯ ಹುದ್ದೆಯೇರುವಶ್ಟು ಬೆಳೆದ ಅವರು ಇಂಗ್ಲೀಶಿನಲ್ಲಿ ಹಲವು ಹೊತ್ತಗೆಗಳನ್ನೂ ಬರೆದಿದ್ದಾರೆ.

ಕನ್ನಡ ಮಾದ್ಯಮವೆಂದರೆ, ಅಲ್ಲಿ ವಿಶಯಗಳನ್ನು ಕನ್ನಡದ ಮೂಲಕ ಕಲಿಯುವುದಾಗಿರುತ್ತದೆ ಮತ್ತು ಅಲ್ಲಿ ಇಂಗ್ಲೀಶನ್ನೂ ಕಲಿಸಲಾಗುತ್ತದೆ. ಮೊದಲ ಹಂತದ ಕಲಿಕೆಯನ್ನು ತಮ್ಮ ನುಡಿಯಲ್ಲಿಯೇ ನಡೆಸುವ ಮಕ್ಕಳ ಓದಿನ ಅಡಿಪಾಯ ತುಂಬಾ ಗಟ್ಟಿಯಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಇಂಗ್ಲೀಶನ್ನೂ ಒಂದು ನುಡಿಯಾಗಿ ಕಲಿತುಕೊಳ್ಳುವ ಮಕ್ಕಳು ಮುಂದಿನ ದಿನಗಳಲ್ಲಿ ಎಲ್ಲರಿಗೂ ಸರಿಸಾಟಿಯಾಗಿ ನಿಲ್ಲಬಲ್ಲರು. ತಮ್ಮ ತಾಯ್ನುಡಿಯಲ್ಲಿಯೇ ಓದಿ ಬೆಳೆದು ತಮ್ಮ ವಲಯದಲ್ಲಿ ಎದ್ದು ಕಾಣುವಶ್ಟು ಸಾದನೆಗಯ್ದಿರುವ ಮಹನೀಯರ ಉದಾಹರಣೆ ನಮ್ಮ ಮುಂದಿದೆ.

ಎರಡನೇ ಪ್ರಶ್ನೆ ತೆಗೆದುಕೊಂಡರೆ, ಮುಂದುವರಿದ ನಾಡುಗಳೆಲ್ಲವೂ ಒಂದೇ ನುಡಿಯನ್ನು ಹೊಂದಿರುವ ನಾಡುಗಳು ಎಂಬ ನಂಬಿಕೆ ಕಾಣುತ್ತದೆ. ಆದರೆ, ನಿಜಸ್ತಿತಿ ಹಾಗಿಲ್ಲ. ಕೆನಡಾ ದೇಶದ ಕ್ವೆಬೆಕ್ ರಾಜ್ಯದಲ್ಲಿ ಪ್ರೆಂಚ್ ನುಡಿಯಾಡುಗರಿದ್ದು ಮಿಕ್ಕೆಲ್ಲಾ ರಾಜ್ಯಗಳಲ್ಲಿ ಇಂಗ್ಲೀಶ್ ನುಡಿಯಾಡುಗರಿದ್ದಾರೆ. ಕೆನಡಾದ ಬೇರೆಲ್ಲಾ ರಾಜ್ಯಗಳಲ್ಲೂ ಇಂಗ್ಲೀಶಿನಲ್ಲೇ ಕಲಿಕೆ ನಡೆಯುತ್ತದೆ, ಆದರೆ ಕ್ವೆಬೆಕ್ ರಾಜ್ಯದಲ್ಲಿ ಮಾತ್ರ ಪ್ರೆಂಚ್ ನುಡಿಯಲ್ಲಿ ಕಲಿಕೆ ನಡೆಸಲಾಗುತ್ತದೆ. ಕ್ವೆಬೆಕ್ ರಾಜ್ಯದಲ್ಲಿಯೇ ನೆಲೆಸಿರುವ ಪ್ರೆಂಚ್ ಬಾಶಿಕರು ಪ್ರೆಂಚ್ ಮಾದ್ಯಮ ಶಾಲೆಗಳಲ್ಲಿಯೇ ಓದಬೇಕು ಎಂಬ ನಿಯಮವಿದೆ. ಅಲ್ಲಿನ ಪ್ರೆಂಚ್ ಮಾದ್ಯಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ, ಇಂಗ್ಲೀಶನ್ನು ಒಂದು ನುಡಿಯನ್ನಾಗಿ ಕಲಿಸಲಾಗುತ್ತದೆ. ಕ್ವೆಬೆಕ್ ರಾಜ್ಯದಲ್ಲಿ ಪ್ರೆಂಚ್ ಮಾದ್ಯಮ ಶಾಲೆಯಲ್ಲಿ ಓದಿದ್ದ ನನ್ನ ಪರಿಚಯದವರೊಬ್ಬರು ಅಮೇರಿಕಾದ ಸಾಪ್ಟ್-ವೇರ್ ಕಂಪನಿಯೊಂದರಲ್ಲಿ ಮೇಲ್ಮಟ್ಟದ ಅದಿಕಾರಿಯಾಗಿದ್ದರು. ಅಯ್ದಾರು ತಿಂಗಳ ಕಾಲ ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ನನಗೊದಗಿಬಂದಿತ್ತು. ಅಮೇರಿಕನ್ನರ ಜೊತೆಯಲ್ಲಿ ಇಂಗ್ಲೀಶಿನಲ್ಲೇ ಚೆನ್ನಾಗಿ ವ್ಯವಹರಿಸಿಕೊಂಡು ಹೋಗುತ್ತಿದ್ದ ಅವರು, ತಮ್ಮ ಬುದ್ದಿಮಟ್ಟದಿಂದ ಕಂಪನಿಯೊಳಗೂ ಬೇಗ ಬೇಗ ಬೆಳೆಯುತ್ತಿದ್ದರು.

ನ್ಯೂಜೀಲ್ಯಾಂಡಿನಲ್ಲೂ ಎಲ್ಲರೂ ಇಂಗ್ಲೀಶ್ ನುಡಿಯಾಡುಗರೇ ಎಂಬ ನಂಬಿಕೆ ನಮ್ಮಲ್ಲಿ ಹಲವರಲ್ಲಿದೆ. ಆದರೆ, ಮವೋರಿ ಎಂಬ ನುಡಿಯ ತವರುಮನೆ ಕೂಡಾ ನ್ಯೂಜೀಲ್ಯಾಂಡ್. ಅಲ್ಲಿಯೂ ಇಂಗ್ಲೀಶ್ ಮಾದ್ಯಮ ಶಾಲೆಗಳಲ್ಲದೇ, ಮವೋರಿ ಮಾದ್ಯಮ ಶಾಲೆಗಳೂ ಇವೆ. ಮವೋರಿ ನುಡಿಯನ್ನಾಡುವ ಜನರು ಹೆಚ್ಚಾಗಿ ತಮ್ಮ ಮಕ್ಕಳನ್ನು ಮವೋರಿ ಮಾದ್ಯಮ ಶಾಲೆಗಳಿಗೇ ಕಳಿಸುತ್ತಾರೆ. ಅಲ್ಲಿ ವಿಶಯಗಳನ್ನು ಮವೋರಿ ನುಡಿಯಲ್ಲಿ ಕಲಿಸುತ್ತಾ ಮಕ್ಕಳಿಗೆ ಇಂಗ್ಲೀಶನ್ನೂ ಕಲಿಸುವ ಏರ್‍ಪಾಡು ಮಾಡಲಾಗಿರುತ್ತದೆ. ವಿಗ್ನಾನ ಗಣಿತದಂತಹ ವಿಶಯಗಳ ಅರಿವು ಸುಲಬವಾಗಿ ಮತ್ತು ಚೆನ್ನಾಗಿ ಮೂಡುವುದು ಕಲಿಕೆಯು ಮಕ್ಕಳ ತಾಯ್ನುಡಿಯಲ್ಲಿದ್ದಾಗಲೇ ಎಂಬ ದಿಟವನ್ನು ಅವರು ಅರಿತುಕೊಂಡಿದ್ದಾರೆ.

ಕೆನಡಾದ ಸರ್‍ಕಾರವು ಪ್ರೆಂಚ್ ಮಾದ್ಯಮ ಶಾಲೆಗಳನ್ನೂ, ನ್ಯೂಜೀಲ್ಯಾಂಡ್ ಸರ್‍ಕಾರವು ಮವೋರಿ ಮಾದ್ಯಮ ಶಾಲೆಗಳನ್ನೂ ಬೆಂಬಲಿಸುತ್ತಿವೆ. ಇಂಗ್ಲೀಶರು ಹೆಚ್ಚಿನ ಎಣಿಕೆಯಲ್ಲಿರುವ ನಾಡುಗಳಲ್ಲೂ ಬೇರೆ ನುಡಿಯ ಮಾದ್ಯಮಗಳಿಗೆ ಈ ಮಟ್ಟಿನ ಬೆಂಬಲ ಮತ್ತು ಪ್ರೋತ್ಸಾಹ ಸಿಗಲು “ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ಮಕ್ಕಳಿಗೆ ಒಳಿತು ಮಾಡುತ್ತದೆ” ಎಂಬ ಸತ್ಯದ ಅರಿವು ಅಲ್ಲಿನ ಸಮಾಜಗಳಲ್ಲಿ ಮೂಡಿರುವುದೇ ಕಾರಣವಾಗಿದೆ.

ಕನ್ನಡ ಮಾದ್ಯಮದಲ್ಲಿ ಓದುವುದೆಂದರೆ ಬೇರೆಲ್ಲಾ ನುಡಿಗಳ ಕಲಿಕೆಗೆ ಬಾಗಿಲು ಮುಚ್ಚಿದಂತೆ ಎಂಬ ನಂಬಿಕೆಯಿಂದ ನಾವು ಹೊರಬರಬೇಕಾಗಿದೆ. ಪ್ರೆಂಚ್ ನುಡಿಯಲ್ಲಿ ಕಲಿಯುವ ಕ್ವೆಬೆಕ್ ರಾಜ್ಯದ ಮಕ್ಕಳಾಗಲೀ ಅತವಾ ಮವೋರಿ ಮಾದ್ಯಮದಲ್ಲಿ ಕಲಿಯುವ ನ್ಯೂಜೀಲ್ಯಾಂಡಿನ ಮಕ್ಕಳಾಗಲೀ, ಯಾವುದೇ ಬೇರೆ ನುಡಿಯ ಕಲಿಕೆಗೆ ಬಾಗಿಲು ಎಳೆದುಕೊಂಡಿಲ್ಲ. ನಮ್ಮಲ್ಲಿಯೂ ಕನ್ನಡ ಮಾದ್ಯಮದಲ್ಲಿ ಓದುತ್ತಾ ವಿಶಯದ ಅರಿವು ಗಳಿಸಿಕೊಂಡ ಮಕ್ಕಳು, ಹೊರನಾಡಿನವರೊಡನೆ ವ್ಯವಹರಿಸಲು ಇಂಗ್ಲೀಶನ್ನು ಕಲಿತುಕೊಂಡರೆ ಸಾಕಾಗುತ್ತದೆ. ಇಂತಹ ಏರ್‍ಪಾಡೊಂದೇ ಹೆಚ್ಚು ಕಾಲ ಬಾಳಬಲ್ಲುದು, ಹೆಚ್ಚು ಜನರ ಬದುಕುಗಳನ್ನು ಬೆಳಗಬಲ್ಲುದು.

(ಚಿತ್ರ ಸೆಲೆ: kannadamadhyamavidyarthi)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಮುಂದಿನ ಹತ್ತರಿಂದ ಇಪ್ಪತ್ತು ವರ್ಷಗಳಲ್ಲಿ ಯಂತ್ರಗಳೇ ಚತುರವಾಗಿ ಭಾಷಾಂತರದಲ್ಲಿ ತೊಡಗುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಇಂದಿನ ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಇಂಗ್ಲಿಷ್ ಭಾರದೇ ಇರುವುದು ಯಾವುದೇ ಸಮಸ್ಯೆಯಾಗುವ ಸಾಧ್ಯತೆಯಿಲ್ಲವೆಂದು ನನ್ನ ಬಲವಾದ ನಂಬಿಕೆ.

ಅನಿಸಿಕೆ ಬರೆಯಿರಿ: