ಪಿನ್‍ಲ್ಯಾಂಡಲ್ಲಿ ನಡೆದ ನುಡಿ ಹೋರಾಟ

ಸಂದೀಪ್ ಕಂಬಿ.

ಕಾಲೆವಾಲ

ಪಿನ್‍ಲ್ಯಾಂಡ್ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಅಲೆಯುಲಿಗಳನ್ನು ಮಾಡುವ ಹೆಸರಾಂತ ಕಂಪನಿ ‘ನೋಕಿಯಾ’ ಮತ್ತು ಅಲ್ಲಿನ ಕಲಿಕೆ ಏರ್‍ಪಾಡು. ತಾಯ್ನುಡಿಯ ನೆಲೆಯ ಮೇಲೆ ನಿಂತ ಈ ಏರ್‍ಪಾಡು ಜಗತ್ತಿನಲ್ಲೇ ಸಾಟಿಯಿಲ್ಲದ್ದು ಎಂದು ಹೆಸರು ಮಾಡಿದೆ. ಇಂತಹ ಕಲಿಕೆ ಏರ್‍ಪಾಡು ಇರುವುದರಿಂದಲೇ 50 ಲಕ್ಶ ಮಂದಿಯೆಣಿಕೆ ಇರುವ ಈ ಪುಟ್ಟ ದೇಶದಲ್ಲಿ ನೋಕಿಯಾದಂತಹ ಒಂದು ದೊಡ್ಡ ಕಂಪನಿಯೊಂದನ್ನು ಕಟ್ಟಲಾಯಿತು ಎಂದು ಹೇಳಲಾಗುತ್ತದೆ.

ಈಗ ಇಶ್ಟು ಮುಂದುವರಿದಿರುವ ಪಿನ್ನರು, ಬರಿ 100 ವರುಶಗಳ ಕೆಳಗೆ ತಮ್ಮ ನುಡಿಯನ್ನು ಆಡಳಿತದಲ್ಲಿ ತರಲು ಸಾಕಶ್ಟು ಕಶ್ಟ ಪಡಬೇಕಾಯಿತಂತೆ. ಪಿನ್ನಿಶ್ ನುಡಿಗೆ ಆಡಳಿತದಲ್ಲಿ ಮೇಲುಗಯ್ ತಂದು ಕೊಡಲು 19ನೇ ನೂರ್‍ಮಾನದ ನಡುವಿನಿಂದ ಹಿಡಿದು ಸುಮಾರು 1930ರ ವರೆಗೂ ಹೋರಾಟ ನಡೆಸಬೇಕಾಯಿತು. ಪಿನ್‍ಲ್ಯಾಂಡ್‍ನ ಹಳಮೆಯಲ್ಲಿ ಇದು ‘ನುಡಿ ಹೋರಾಟ’ (Language Strife) ಎಂಬ ಹೆಸರನ್ನು ಪಡೆದುಕೊಂಡಿದೆ. ಬನ್ನಿ, ಇದರ ಹಿನ್ನೆಲೆಯನ್ನು ಕೊಂಚ ತಿಳಿದುಕೊಳ್ಳೋಣ.

ಸುಮಾರು 13ನೇ ನೂರ್‍ಮಾನದಲ್ಲಿ ಸ್ವೀಡನ್ ಸಾಮ್ರಾಜ್ಯದ ಹಿಡಿತದಲ್ಲಿ ಸಿಕ್ಕ ಪಿನ್‍ಲ್ಯಾಂಡ್‍ನಲ್ಲಿ, ಮೆಲ್ಲಗೆ ಕಲಿಕೆ ಮತ್ತು ಆಡಳಿತದಲ್ಲಿ ಪಿನ್ನರಲ್ಲಿಯೇ ಸ್ವೀಡಿಶ್ ನುಡಿ ಮೇಲುಗಯ್ ಪಡೆಯಲು ತೊಡಗಿತು. ಲ್ಯಾಟಿನ್ ಅನ್ನು ಕೂಡ ಕಲಿಕೆ ಮತ್ತು ಆಡಳಿತದಲ್ಲಿ ಬಳಕೆಗೆ ತರಲಾಯಿತಾದ್ದರಿಂದ ಪಿನ್ನಿಶ್ ನುಡಿಯು ಆಡಳಿತದಿಂದ ಸರಿದು ಹೋಯಿತು. ಜೊತೆಯಲ್ಲೇ ಹಲವು ಸ್ವೀಡಿಶ್ ಮಾತಾಡುವ ಮಂದಿ ಪಿನ್‍ಲ್ಯಾಂಡ್‍ನ ಕರಾವಳಿಯಲ್ಲಿಗೆ ವಲಸೆ ಬಂದು ನೆಲೆಸಿದರು. 1809ರಲ್ಲಿ ಹೆಲ್ಸಿಂಕಿಯಂತಹ ಕರಾವಳಿಯ ಪಟ್ಟಣಗಳಲ್ಲಿ ಸುಮಾರು 80% ಮಂದಿ ಸ್ವೀಡಿಶ್ ಮಾತಾಡುವವರಿದ್ದರಂತೆ. ಇದರಿಂದಾಗಿ ಆಡಳಿತದಲ್ಲಿ ಸ್ವೀಡಿಶ್ ನುಡಿಯನ್ನು ಬಳಸುವುದಕ್ಕೆ ಇನ್ನೂ ಹೆಚ್ಚಿನ ಒತ್ತು ಕೊಟ್ಟಂತಾಯಿತು.

ಮೇಲಿನ ಕಾರಣಗಳಿಂದಾಗಿ ಮೇಲುಮಟ್ಟದ ಕಲಿಕೆಯಲ್ಲಿ ಲ್ಯಾಟಿನ್ ನುಡಿಯ ಮೇಲುಗಯ್ ಇದ್ದರೆ ಇಡೀ ಆಡಳಿತವು ಸ್ವೀಡಿಶ್ ಮಯವಾಗಿತ್ತು. ಆದರೆ 19ನೇ ನೂರ್‍ಮಾನದ ಮೊದಲಲ್ಲಿ ಸ್ವೀಡನ್ ಮತ್ತು ರಶ್ಯಾ ಸಾಮ್ರಾಜ್ಯಗಳ ನಡುವೆ ಪಿನ್‍ಲ್ಯಾಂಡಿಗಾಗಿ ನಡೆದ ಒಂದು ಕಾಳಗ ಪಿನ್‍ಲ್ಯಾಂಡ್‍ ಇತಿಹಾಸದ ದಿಕ್ಕನ್ನೇ ಬದಲಿಸಿತು.

1809ರಲ್ಲಿ ನಡೆದ ಈ ಪಿನ್ನಿಶ್ ಕಾಳಗದಿಂದಾಗಿ ಸ್ವೀಡನ್ ಸಾಮ್ರಾಜ್ಯವು ಪಿನ್‍ಲ್ಯಾಂಡ್‍ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಿತು. ಕಾಳಗದ ಬಳಿಕ ಆದ ಒಪ್ಪಂದದ ಪ್ರಕಾರ ಪಿನ್‍ಲ್ಯಾಂಡನ್ನು ರಶ್ಯಾ ಸಾಮ್ರಾಜ್ಯದ ಒಂದು ತಮಾಳ್ವಿಕೆಯ ಕಂಬಲವನ್ನಾಗಿ (autonomous region) ಒಳಗೊಳ್ಳಲಾಯಿತು. ಹೀಗೆ ಸ್ವೀಡನ್ ಹಿಡಿತದಿಂದ ಬಿಡುಗಡೆ ಹೊಂದಿ ತಮ್ಮಾಳ್ವಿಕೆಯ ಹಕ್ಕನ್ನು ಪಡೆದುಕೊಂಡ ಪಿನ್‍ಲ್ಯಾಂಡಲ್ಲಿ ನಾಡೊಲುಮೆಯ ಚಳುವಳಿ ಏಳಲು ಹೆಚ್ಚು ತಡವಾಗಲಿಲ್ಲ.

ಈ ಬೆಳವಣಿಗೆಗಳ ನಡುವೆಯೇ 1835ರಲ್ಲಿ ‘ಕಾಲೆವಾಲ’ ಎಂಬ ನಾಡುಗಬ್ಬ ಬೆಳಕು ಕಂಡಿತು. ಈ ಕಬ್ಬವು ನಾಡೊಲುಮೆಯ ಕಿಚ್ಚನ್ನು ನಾಡಿನೆಲ್ಲೆಡೆ ಹಬ್ಬಲು ನೆರವಾಯಿತು. ಇದರಿಂದ ಎಚ್ಚೆತ್ತ ಪಿನ್ನರು ತಮ್ಮ ನುಡಿಯನ್ನು ಆಡಳಿತದಲ್ಲಿ ಮತ್ತು ಕಲಿಕೆಯಲ್ಲಿ ತರಲು ತೊಡಗಿದರು. ಆಡಳಿತಿದಲ್ಲಿ ಸ್ವೀಡಿಶ್ ಬಳಸಲಾಗುತ್ತಿತ್ತಾದರೂ ನಾಡೊಲುಮೆಯ ಅಲೆಗೆ ಸಿಕ್ಕ ಅಲ್ಲಿನ ಆಡಳಿತ ವರ್‍ಗ ಪಿನ್ನಿಶ್ ಬೇರ್‍ಮೆಯನ್ನು ಎತ್ತಿ ಹಿಡಿಯುವ ಎಲ್ಲದರಲ್ಲೂ ಆಸಕ್ತಿ ತೋರಿಸಲು ತೊಡಗಿತು. ಹಾಗಾಗಿ ಪಿನ್ನಿಶ್ ನುಡಿಯು ಪಿನ್‍ಲ್ಯಾಂಡ್‍ ನಾಡಿನ ಬೇರ್‍ಮೆಯನ್ನು, ಗುರುತನ್ನೂ ಎತ್ತಿ ಹಿಡಿಯುವ ಮುಕ್ಯವಾದ ಮೆರೆಗುರುತಾಗಿ ಹೊರಹೊಮ್ಮಿತು.

ಒಂದು ವಿಶೇಶವೇನೆಂದರೆ, ಈ ನುಡಿ ಹೋರಾಟದಲ್ಲಿ ಪಾಲ್ಗೊಂಡು, ಮುಂದೆ ನಡೆಸಿದವರಲ್ಲಿ ಸ್ವೀಡಿಶ್ ಮಾತಾಡುವ ಮೇಲ್ವರ್‍ಗದ ಮಂದಿಯೂ ಇದ್ದರು. ಇವರ ಪಾಲ್ಗೊಳ್ಳುವಿಕೆ ಎಶ್ಟರ ಮಟ್ಟಿಗೆ ಇತ್ತೆಂದರೆ ತಮ್ಮ ಅಡ್ಡ ಹೆಸರುಗಳನ್ನೂ ಪಿನ್ನಿಶ್ ನುಡಿಗೆ ಒಗ್ಗಿಸಿಕೊಂಡು ಮನೆಯಲ್ಲೂ ಪಿನ್ನಿಶ್ ಮಾತಾಡಲು ತೊಡಗಿದರು. ಹೀಗೆ ಮುಂದುವರಿದ ಹೋರಾಟದ ಸಲುವಾಗಿ ಪಿನ್ನಿಶ್ ನುಡಿಗೆ ಸ್ವೀಡಿಶ್ ನುಡಿಯ ಸಮಾನ ಸ್ತಾನ ಮಾನಗಳು ಸಿಕ್ಕವು.

ಮೊದಮೊದಲು ಈ ಎರಡೂ ನುಡಿಗಳ ಬೆಂಬಲಿಗರ ನಡುವೆ ತಿಕ್ಕಾಟಗಳು ನಡೆದರೂ ಅವು ಮೇಲ್ವರ್‍ಗಕ್ಕೆ ಮಾತ್ರ ಸೀಮಿತವಾಗಿದ್ದವು. ಸಾಮಾನ್ಯ ಮಂದಿಗೆ ಮಾತ್ರ ಮೊದಲ ದಿನದಿಂದಲೇ ಪಿನ್ನಿಶ್ ನುಡಿಯ ಬಳಕೆಯಿಂದ ಒಳಿತಾಗಲು ಶುರುವಾಯಿತು.

ಹೀಗೆ ಮುಂದೆ ರಶ್ಯಾದಿಂದ ಬಿಡುಗಡೆ ಪಡೆದಾಗಲೂ ಎರಡೂ ನುಡಿಗಳಿಗೆ ಆಡಳಿತದಲ್ಲಿ ಸಮಾನ ಸ್ತಾನ ಮಾನಗಳನ್ನು ಕೊಡಲಾಯಿತು. ಈಗಲೂ ಇದೇ ಸ್ತಿತಿಯನ್ನು ಕಾಪಾಡಿಕೊಂಡು ಬರಲಾಗಿದೆ. ಆದರೆ ನಾಡಲ್ಲೆಲ್ಲ ಪಿನ್ನಿಶ್ ಬಳಕೆ ತೊಡಗಿಸಿದಾಗಿನಿಂದ ಕೊರೆಯೆಣಿಕೆಯಲ್ಲಿರುವ (minority) ಸ್ವೀಡಿಶ್ ಮಾತಾಡುವ ಮಂದಿಯೂ ಚೆನ್ನಾಗಿ ಪಿನ್ನಿಶ್ ಕಲಿತು ಪಿನ್ನರ ಸಮಾಜದಲ್ಲಿ ಬೆರೆತು ಹೋಗಿದ್ದಾರೆ. ದಿನ ನಿತ್ಯದ ಬಳಕೆಯಲ್ಲಿ ಎಲ್ಲೂ ಸ್ವೀಡಿಶ್ ಬಳಕೆಯಾಗುವುದಿಲ್ಲ, ಆದರೆ ಸರಕಾರಿ ಕಚೇರಿಗಳಲ್ಲಿ ಸ್ವೀಡಿಶ್ ನುಡಿಗರಿಗೆ ಅವರದೇ ನುಡಿಯಲ್ಲಿ ವ್ಯವಹರಿಸುವ ಹಕ್ಕುಗಳು ಇನ್ನೂ ಇವೆ.

ಇದರಿಂದ ನಾವೇನು ಕಲಿಯಬಹುದು?

ಆಡಳಿತವು ಮಂದಿಯ ಕಯ್ಗೆ ಸಿಕ್ಕರೆ ಹೇಗೆ ತಮ್ಮ ಏಳ್ಗೆಯ ಬಗ್ಗೆ ತಾವೇ ಚಿಂತಿಸಿ, ಅದಕ್ಕೆ ತಕ್ಕುದಾದ ತೀರ್‍ಮಾನಗಳನ್ನು ತೆಗೆದುಕೊಂಡು ನಾಡು ಕಟ್ಟಬಹುದು ಎಂಬುದಕ್ಕೆ ಪಿನ್‍ಲ್ಯಾಂಡ್‍ ಒಂದು ಜೀವಂತ ಉದಾಹರಣೆ. ಇಂದು ನಮ್ಮ, ಅಂದರೆ ಕನ್ನಡ ನಾಡಿನ ಮಂದಿಯ ಬದುಕಿಗೆ ನೇರವಾಗಿ ನಂಟಿರುವ ವಿಶಯಗಳ ಬಗ್ಗೆ ದೂರದ ದೆಹಲಿಯಲ್ಲಿ ಕಟ್ಟಲೆಗಳನ್ನು ಮಾಡಲಾಗುತ್ತಿದೆ ಮತ್ತು ಹಲವು ತೀರ್‍ಮಾನಗಳನ್ನು ಅಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ (ಸ್ವೀಡಿಶ್ ಹಿಡಿತದಲ್ಲಿದ್ದ ಪಿನ್‍ಲ್ಯಾಂಡಿಗೆ ಹೋಲಿಸಬಹುದು). ಹೀಗೆಯೇ ಮುಂದುವರಿದರೆ ಕನ್ನಡಿಗರು ಕಲಿಕೆಯಲ್ಲಿ, ಹಣಕಾಸಿನಲ್ಲಿ ಏಳಿಗೆಯನ್ನು ಸಾದಿಸಲು ಆಗದು, ಕನ್ನಡ ನೆಲದಿಂದ ನೋಕಿಯಾದಂತಹ ಕಂಪನಿ ಹುಟ್ಟಿ ಬರಲೂ ಆಗದು.

ನಮ್ಮ ತೀರ್‍ಮಾನಗಳನ್ನು ನಾವೇ ತೆಗೆದುಕೊಳ್ಳಲು ನಿಜವಾದ ಒಪ್ಪುಕೂಟದ ಏರ್‍ಪಾಟು ಬರಬೇಕು (ರಶ್ಯಾ ಸಾಮ್ರಾಜ್ಯದಲ್ಲಿ ಪಿನ್‍ಲ್ಯಾಂಡಿಗೆ ತಮ್ಮಾಳ್ವಿಕೆಯ ಹಕ್ಕುಗಳು ಇದ್ದಂತೆ). ಈಗ ನಮ್ಮ ನಾಡಲ್ಲಿ ನೆಲೆಸಿರುವ (ಕನ್ನಡಿಗರೂ ಸೇರಿದಂತೆ) ಇಂಗ್ಲೀಶ್ ಮಾತಾಡುವ ಕೆಲ ಮೇಲ್ವರ್‍ಗದ ಮಂದಿಯನ್ನು ಕನ್ನಡ ಸಮಾಜದ ಒಳಗೆ ಸೇರಿಕೊಳ್ಳುವಂತೆ ಪ್ರೇರೇಪಿಸಬೇಕು. ಇತರೆ ನುಡಿ ಆಡುಗರನ್ನೂ ಕನ್ನಡ ಸಮಾಜದಲ್ಲಿ ಬೆರೆಯುವಂತೆ ಮಾಡಿ, ನಾಡೊಲುಮೆಯ ಚಳುವಳಿಯಲ್ಲಿ ಸೇರಿಸಿಕೊಳ್ಳಬೇಕು. ನಮಗೆ ಯಾವುದು ಒಳಿತು, ಯಾವುದು ಏಳಿಗೆಯ ದಾರಿ (ಕಲಿಕೆ, ಹಣಕಾಸು, ಹೂಡಿಕೆ, ರಾಜಕೀಯ ಮುಂತಾದ ವಿಶಯಗಳಲ್ಲಿ) ಎಂಬುದನ್ನು ಚಿಂತಿಸಿ, ಚರ್‍ಚಿಸಿ, ಬೇಕಾದ ತೀರ್‍ಮಾನಗಳನ್ನು ನಾವೇ ತೆಗೆದುಕೊಂಡು ಮುನ್ನಡೆಯಬೇಕು.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: juhannuskostaja.wordpress.com)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , ,

9 replies

 1. ಇಲ್ಲಿ ಫಿನ್‌ಲ್ಯಾಂಡಿಗೆ ಪಿನ್‌ಲ್ಯಾಂಡ್ ಎಂದು ಕರೆಯುವುದು ತಪ್ಪಲ್ಲವೆ?

 2. ಒಪ್ಪೋಣ, ಆದರೆ, ಇದು ಒಂದು ಹೆಸರಾಗಿರುವದರಿಂದ, ತಪ್ಪಾಗಿ ಬರೆದಂತಾಗುತ್ತದಲ್ಲಾ? ಕನ್ನಡವನ್ನು ತಿಳಿಯದ ಮಂದಿ ಅದನ್ನು ಕನ್ನಡ್ ಎಂದು ಬರೆದಾಗ ಅದನ್ನು ತಪ್ಪು ಎನ್ನುವ ನಾವು, ಇದನ್ನು ಹೇಗೆ ಒಪ್ಪಬೇಕು ಹೇಳಿ?

 3. ಶ ಮತ್ತು ಷ ಗಳನ್ನು ನುಡಿಯುವಾಗ ಒಂದೇ ರೀತಿ ಬರಬಹುದು, ಆದರೆ ಪ ಮತ್ತು ಫ ಗಳ ನಡುವೆ ನಿಜವಾಗಲೂ ವ್ಯತ್ಯಾಸವಿದೆ.

  • ಒಂದು ನುಡಿಯ ಪದವನ್ನು ಬೇರೆ ನುಡಿಯವರು ತೆಗೆದುಕೊಂಡಾಗ ಇಲ್ಲವೇ ಬಳಸಿದಾಗ, ತಮ್ಮ ನುಡಿಯ ಉಲಿಯರಿಮೆಗೆ (phonetics) ತಕ್ಕಂತೆ ಬದಲಾವಣೆಗಳನ್ನು (ಹಲವು ಸಲ ತಮಗೆ ಗೊತ್ತಿಲ್ಲದೆಯೇ) ಮಾಡಿಕೊಳ್ಳುತ್ತಾರೆ. ‘ಫ’ ಎಂಬುದು ‘ಪ’ ಸದ್ದಿನ ಮಹಾಪ್ರಾಣ ರೂಪವೇ ಹೊರತು ‘F’ ಸದ್ದಲ್ಲ. ಎರಡೂ ಬೇರೆ. ಹಾಗಾಗಿ Fin = ಫಿನ್ ಅಲ್ಲ. ಹಾಗೆಯೇ, land ಎಂಬಲ್ಲಿ ಬರುವ ಕೊನೆಯ ಸದ್ದು ‘d’ ಅನ್ನು ನಮ್ಮ ಕನ್ನಡದ ‘ಡ್’ ಸದ್ದು ಉಲಿದಂತೆ ಉಲಿಯಲಾಗುವುದಿಲ್ಲ. ಇದನ್ನು ಇಂಗ್ಲೀಶಿನಲ್ಲಿ ಬೇರೆಯೇ ರೀತಿಯಲ್ಲಿ ಉಲಿಯಲಾಗುತ್ತದೆ.

   ಹಾಗಾಗಿ, ‘Finland’ ಎಂಬ ಪದವನ್ನು ನಾವು ಕನ್ನಡ ಬರಹದಲ್ಲಿ ‘ಫಿನ್‌ಲ್ಯಾಂಡ್’ ಎಂದು ಕನ್ನಡದ (ಅಂದರೆ ಈಗಿನ ಕನ್ನಡ ಬರಹದ) ಉಲಿಕೆಗೆ ತಕ್ಕಂತೆ ಬದಲಾಯಿಸಿಕೊಂಡು ಬರೆಯುತ್ತೇವೆ. ಆದರೆ ನಿಜವಾಗಿಯೂ ಮೂಲ ಪದದ ಉಲಿಕೆ ‘ಫಿನ್‌ಲ್ಯಾಂಡ್’ ಎಂದು ಅಲ್ಲ. ಆದರೆ ಮಾತಿನಲ್ಲಿ ಮಹಾಪ್ರಾಣಗಳು ಕಾಣದಿರುವ ಕಾರಣ ಹೆಚ್ಚಿನ ಕನ್ನಡದ ಮಂದಿ ಇದನ್ನು ಪಿನ್‌ಲ್ಯಾಂಡ್ ಎಂದೇ ಉಲಿಯುತ್ತಾರೆ. ಹಾಗಾಗಿ ಕನ್ನಡ ಮಾತಿನ ಉಲಿಕೆಯಂತೆ ಪಿನ್‌ಲ್ಯಾಂಡ್ ಎಂಬುದೇ Finland ಪದದ ಹೆಚ್ಚು ಸರಿ ಹೊಂದುವ ಹೊಂದಾಣಿಕೆ.

   • ಸಂದೀಪ್ ಅಣ್ಣ .. ಒಂದು ಕೇಳ್ವಿ.. ” ‘ಫ’ ಎಂಬುದು ‘ಪ’ ಸದ್ದಿನ ಮಹಾಪ್ರಾಣ ರೂಪವೇ ಹೊರತು ‘F’ ಸದ್ದಲ್ಲ” ಒಪ್ಪುವೆ ಇದನ್ನು .. ಆದರೆ F ಸಪ್ಪಳಕ್ಕೆ ಹೊಂದುವ ಫ಼ ಬಳಿಸಬಹುದು ಅಲ್ಲವೇ ??? ಎಸ ಎಲ್ ಬೈರಪ್ಪನವರ “ಆವರಣ” ದಲ್ಲಿ F ಮತ್ತು Z ಗೆ ಫ಼ ಮತ್ತು ಜ಼ ಬಳಿಸಿದ್ದಾರೆ … “ಎಲ್ಲರಕನ್ನಡ” ಮತ್ತು ಈಗಿನ “school” ಕನ್ನಡದಲ್ಲಿ ಫ಼ ಮತ್ತು ಜ಼ ಇಲ್ಲ .. ಆದರೆ ಹೊಸದಾಗಿ ನಾವುಗಳು ಸೇರಿಸಬಹುದು ಅಲ್ಲವೇ ?? ಗೊತ್ತು english ನಿಂದ ಕನ್ನಡದ ಸೊಗಡು ಹೋಗುತ್ತೆ ಅಂತೆ .. ಆದರೆ ಕಲ ಕಾಲಕ್ಕೆ ಬದಲಾಗಬೇಕು ಅಲ್ಲವೇ ?

 4. ಫ಼ ಬಳಸಬೇಕಿಲ್ಲ. ಪಿನ್ಲ್ಯಾಂಡ್ ಅನ್ನುವುದರ ಉಲಿ Finland ಎಂದು ಮಾತಿನಲ್ಲಿ ಕೇಳಿ ಪಾಟವಾಗಬಲ್ಲದು (ರೂಡಿಯಾಗಬಲ್ಲದು). ಪಿನ್ಲ್ಯಾಂಡ್ ಎಂದು ಬರೆದು Finland ಎಂದೇ ಓದಬಹುದು. ಹಳೇ ಮಯ್ಸೂರಿನ ಬಾಗದಲ್ಲಿರುವ ನಮ್ಮೂರಲ್ಲಿ ‘ಕರಿ’ ಎಂದು ಬರೆಯಲಾಗುವ ಮೂರು ಉಲಿಗಳಿವೆ. ‘ಹಾಲನ್ನು ಕರಿ’, ‘ಇದ್ದಿಲ ಬಣ್ಣ ಕರಿ’, ‘ಮಹೇಶನನ್ನು ಕರಿ’ ಎಂಬ ಮೂರು ‘ಕರಿ’ಗಳು ಮಾತಿನಲ್ಲಿ ಮೂರು ಬಗೆಯಲ್ಲಿ ಕೇಳಿಸುತ್ತವೆ. ‘ಕರಿ’ ಎಂದು ಒಂದೇ ಬಗೆಯಲ್ಲಿ ಬರೆಯುವುದರಿಂದ ಏನೂ ತೊಡಕಾಗುವುದಿಲ್ಲ. ಬರಹದ ಕುಳ್ಳಿಹ (context) ಮತ್ತು ಪಾಟವಾಗುವುದರಿಂದ (by practice) ಸರಿಯಾಗಿ ಓದಿಕೊಳ್ಳಬಹುದು. ‘phonetic writing’ ನಿಗಂಟಿನ ಪದವಿವರಣೆಗಶ್ಟೆ ಸರಿ. ಕನ್ನಡಿಗರು ಇಂಗ್ಲಿಶ್, ಸಂಸ್ಕ್ರುತ, ಪರ್ಸಿಯನ್, ಚಯ್ನೀಸ್ ಉಲಿಗಳಿಗೆಲ್ಲಾ ಕನ್ನಡದಲ್ಲಿ ಬರಿಗೆಗಳನ್ನು ಕಟ್ಟುತ್ತಾ ಕೂರಬೇಕಿಲ್ಲ.

 5. ಇದುವರೆಗೂ ಕನ್ನಡಿಗರು ಫಿನ್ಲ್ಯಾಂಡ್ (Phinland) ಎಂದು ಬರೆದು Finland ಎಂದು ಓದಿಕೊಳ್ಳುತ್ತಿದ್ದರು ಎಂಬುದೇ ನನ್ನ ಮೇಲಿನ ವಿವರಣೆಗೆ ಸಾಕ್ಶಿ.

 6. ಸಿದ್ದರಾಜು, ಸರಿಯಾಗಿ ಹೇಳಿದ್ದೀರಿ. ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ.

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s