ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ

 

EMPEROR-articleLarge-nytimes-dot-com

 

’ಎಂಪರರ್’ ಹೆಸರಿನ ಇಂಗ್ಲೀಶ್ ಸಿನೆಮಾವೊಂದರಲ್ಲಿನ ಕತೆಯ ಬಗೆಗೆ ಈ ಬರಹ. ಇದು ನಿಜವಾಗಿ ನಡೆದ ಕತೆ ಎಂದೇ ಹೇಳಲಾಗುತ್ತದೆ. ಎರಡನೇ ಮಹಾ ಕಾಳಗದ ಬಳಿಕ ಅಮೇರಿಕ ಮತ್ತು ಜಪಾನಿನ ನಡುವೆ ನಡೆಯುವ ತಿಕ್ಕಾಟದ ಹಿನ್ನೆಲೆಯಲ್ಲಿ ಈ ಕತೆಯನ್ನು ಹೆಣೆಯಲಾಗಿದೆ.

ಕತೆಯ ಹಿನ್ನೆಲೆ

ಎರಡನೇ ಮಹಾ ಕಾಳಗದಲ್ಲಿ ಜಪಾನ್ ಮತ್ತು ಅಮೇರಿಕ ಎರಡೂ ನಾಡುಗಳು ಕಾದಾಡಿದ್ದವು. 1945ರಲ್ಲಿ ಹಿರೋಶಿಮಾ ಮತ್ತು ನಾಗಾಸಕಿ ಎಂಬ ಎರಡು ಊರುಗಳ ಮೇಲೆ ಅಮೇರಿಕ ಅಣುಬಾಂಬ್ ಎಸೆದು ಜಪಾನನ್ನು ಸದೆಬಡಿದಿತ್ತು. ಬಳಿಕ ಅಮೇರಿಕದ ಕಾಳಗ ಪಡೆಗಳು ಜಪಾನಿನಲ್ಲಿ ಬೀಡು ಬಿಟ್ಟಿದ್ದವು. ಜಪಾನಿನ ಕಾಳಗ ಪಡೆಗಳ ಮುಂದಾಳಾಗಿದ್ದವರನ್ನು ಸೆರೆ ಹಿಡಿದು, ಅವರನ್ನು ವಿಚಾರಣೆಗೊಳಪಡಿಸಿ, ಕಾಳಗಗಳಲ್ಲಿ ಅವರು ಮಾಡಿದಂದತಹ ಕೆಲಸಗಳನ್ನು ಜಗತ್ತಿಗೆ ತಿಳಿಯಪಡಿಸಿ ಆಮೇಲೆ ಅವರುಗಳಿಗೆ ಶಿಕ್ಶೆ ನೀಡುವುದು ಅಮೇರಿಕನ್ನರ ಗುರಿಯಾಗಿತ್ತು. ಜಪಾನನ್ನು ಅಮೇರಿಕದ ಒಂದು ವಸಾಹತನ್ನಾಗಿ ಮಾಡಿಕೊಂಡು, ಜಪಾನು ಎಂದೆಂದಿಗೂ ಅಮೇರಿಕದ ಅಡಿಯಾಳಾಗಿರುವಂತೆ ಮಾಡಿಕೊಳ್ಳುವ ಬಯಕೆಯೂ ಅಮೇರಿಕದ ಕೆಲ ಅದಿಕಾರಿಗಳಿಗಿತ್ತು.

ನಡೆದಿದ್ದೇನು

ನಿಜವಾಗಿ ನಡೆದ ಕತೆ ಎಂದು ಹೇಳಲಾಗುವ ಈ ಸಿನೆಮಾದಲ್ಲಿ, ಬೋನರ್ ಪೆಲ್ಲರ‍್ಸ್ ಎಂಬ ಹೆಸರಿನ ಅಮೇರಿಕದ ಕಾಳಗ ಪಡೆಯವನಿಗೆ, ಜಪಾನಿನ ಚಕ್ರವರ‍್ತಿ ಹಿರೋಹಿಟೋವನ್ನು ತಪ್ಪಿತಸ್ತ ಎಂದು ಗುರುತಿಸಲು ಬೇಕಾದ ಸಾಕ್ಶಿಗಳನ್ನು ಕಲೆಹಾಕುವ ಕೆಲಸ ನೀಡಲಾಗುತ್ತದೆ. ಬೋನರ್ ಪೆಲ್ಲರ‍್ಸ್ ಎಂಬಾತ ಜಪಾನೀಸ್ ನುಡಿಯನ್ನು ಬಲ್ಲವನಾದುದರಿಂದ ಆತನಿಗೆ ಈ ಕೆಲಸ ಇನ್ನಶ್ಟು ಸಲೀಸು ಎಂಬುದು ಆತನ ಮೇಲದಿಕಾರಿಯಾದ ಡಗ್ಲಾಸ್ ಮೆಕ್‍ಅರ‍್ತರ್ ಅವರ ಲೆಕ್ಕಾಚಾರವಾಗಿರುತ್ತದೆ. ದಿಟವನ್ನು ಹುಡುಕುತ್ತಾ ಸಾಗುವ ಬೋನರ್ ಪೆಲ್ಲರ‍್ಸಿಗೆ, ಚಕ್ರವರ‍್ತಿಗಿಂತಾ ಬಲವಾಗಿ ಬೆಳೆದ ಕೆಲವು ಅದಿಕಾರಿಗಳು ಇಡೀ ಜಪಾನನ್ನು ಮುನ್ನಡೆಸುತ್ತಿದ್ದರು ಎಂಬುದು ಕಂಡುಬರುತ್ತದೆ. ಆದರೆ, ಚಕ್ರವರ‍್ತಿಯನ್ನೇ “ಕೆಟ್ಟಕೆಲಸ ಮಾಡಿದವ” ಎಂದು ಸಾರಿ ಗಲ್ಲಿಗೇರಿಸಿಬಿಟ್ಟರೆ, ಇಡೀ ಜಪಾನು ತನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತದೆ, ಹಾಗಾದಾಗ ಜಪಾನನ್ನು ಅಮೇರಿಕದ ಅಡಿಯಾಳು ಮಾಡಿಕೊಳ್ಳುವುದು ಸುಲಬ ಎಂಬ ಲೆಕ್ಕಾಚಾರವುಳ್ಳ ಅದಿಕಾರಿಗಳು ಬೋನರ್ ಪೆಲ್ಲರ‍್ಸಿಗೆ ಇನ್ನೂ ಮಾಹಿತಿ ಕಲೆಹಾಕುವಂತೆ ಒತ್ತಡ ತರುತ್ತಾರೆ.

ಜಪಾನೀಸ್ ನುಡಿ ಬಲ್ಲವನಾದ್ದರಿಂದ ನೇರವಾಗಿ ಜಪಾನಿನ ಜನರೊಡನೆ ಮಾತುಕತೆಗೆ ಇಳಿಯುತ್ತಿದ್ದ ಬೋನರ್ ಪೆಲ್ಲರ‍್ಸಿಗೆ, ಜಪಾನಿನ ಮಂದಿ ತಮ್ಮ ಚಕ್ರವರ‍್ತಿಯನ್ನು ಯಾಕೆ ಪೂಜಿಸುತ್ತಾರೆ ಮತ್ತು ಎಶ್ಟು ಪೂಜಿಸುತ್ತಾರೆ ಎಂಬುದರ ಅರಿವಾಗುತ್ತದೆ. ಒಂದೊಮ್ಮೆ ಚಕ್ರವರ‍್ತಿಯನ್ನು ಗಲ್ಲಿಗೇರಿಸಿದ್ದೇ ಆದರೆ, “ನಮ್ಮ ನಡೆದಾಡುವ ದೇವರ”ನ್ನು ಗಲ್ಲಿಗೇರಿಸಿದವರು ಎಂದು ಅಮೇರಿಕನ್ನರನ್ನು ಎಂದೆಂದಿಗೂ ಜಪಾನಿಗರು ಮನ್ನಿಸುವುದಿಲ್ಲ ಎಂಬ ದಿಟವನ್ನು ಮನಗಾಣುತ್ತಾನೆ. ಆ ಸಿಟ್ಟು ಜಪಾನಿಗರನ್ನು ದಂಗೆಯೇಳುವಂತೆ ಮಾಡಿದರೆ, ಆ ನೆಲವನ್ನು ಹಿಡಿತದಲ್ಲಿಟ್ಟುಕೊಳ್ಳಲು ಅಮೇರಿಕ ಒದ್ದಾಡಬೇಕಾಗುತ್ತದೆ ಎಂಬುದನ್ನೂ ಆತ ಕಂಡುಕೊಳ್ಳುತ್ತಾನೆ.

ತಮ್ಮ ಹಳಮೆ ಬಲ್ಲವರನ್ನು ಅಡಿಯಾಳು ಮಾಡಿಕೊಳ್ಳುವುದು ಸುಲಬವಲ್ಲ

ಮಾಹಿತಿ ಕಲೆ ಹಾಕುವ ತನ್ನ ಕೆಲಸವನ್ನು ಮುಗಿಸಿದ ಬೋನರ್ ಪೆಲ್ಲರ‍್ಸ್, ಮೇಲದಿಕಾರಿಗೆ ನೀಡುವ ವರದಿಯಲ್ಲಿ, ಈ ಎಲ್ಲಾ ವಿವರಗಳನ್ನು ಬರೆಯುತ್ತಾನೆ.

“ಜಪಾನನ್ನು 1,000 ವರುಶಗಳಿಂದ ಮುನ್ನಡೆಸಿಕೊಂಡು ಬಂದಂತಹ ಮನೆತನಕ್ಕೆ ಸೇರಿರುವ ಚಕ್ರವರ‍್ತಿಯನ್ನು, ಜಪಾನಿಗರು “ನಡೆದಾಡುವ ದೇವರು” ಎಂದೇ ಪೂಜಿಸುತ್ತಾರೆ. ಜಪಾನಿಗರಿಗೆ ಇರುವ ಈ ಬಾವನೆ ನಾವು ಅಮೇರಿಕನ್ನರಿಗೆ ಅರಿವಾಗಬೇಕಾದರೆ ಬಹುಶ ನಮಗೂ 1,000 ವರುಶಗಳ ಹಳಮೆ ಇರಬೇಕಿತ್ತು. ಹಿಂದಿನೆಲ್ಲಾ ಚಕ್ರವರ‍್ತಿಗಳೂ ಮಾಡಿರುವ ಒಳ್ಳೆಯ ಕೆಲಸವನ್ನು ಬಲ್ಲಂತಹ ಜಪಾನಿಗರು, ಅಶ್ಟು ಸುಲಬಕ್ಕೆ ತಮ್ಮ ಚಕ್ರವರ‍್ತಿಯನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಹಳಮೆಯನ್ನು ಚೆನ್ನಾಗಿ ಬಲ್ಲ ಜಪಾನಿಗರನ್ನು ನಾವು ಅಡಿಯಾಳಾಗಿಸಿಕೊಳ್ಳುವುದು ಸುಲಬದ ಮಾತಲ್ಲ. ಬದಲಿಗೆ, ಜಪಾನಿಗರ ರೀತಿ-ನೀತಿಗಳನ್ನು ಗವ್ರವಿಸಿ ಅವರೊಡನೆ ಗೆಳೆತನ ಬೆಳೆಸುವುದೇ ಒಳಿತು. ನೆನಪಿರಲಿ, ಹಳಮೆಯನ್ನರಿಯದ ಮಂದಿಗುಂಪನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ, ಆದರೆ ತಮ್ಮ ನಾಡಿನ ಹಳಮೆಯನ್ನು ಬಲ್ಲ ಮಂದಿಗುಂಪನ್ನು ಅಡಿಯಾಳಾಗಿಸಿಕೊಳ್ಳುವುದು ತುಂಬಾ ಕಶ್ಟ”.

ಬೋನರ್ ಪೆಲ್ಲರ‍್ಸಿನ ಮಾತನ್ನು ತೂಗಿನೋಡಿದ ಮೇಲೆ, ಅಮೇರಿಕದ ಅದಿಕಾರಿಗಳು ಆತನ ಮಾತನ್ನು ಒಪ್ಪಿಕೊಳ್ಳುತ್ತಾರೆ. ಚಕ್ರವರ‍್ತಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವ ಹಮ್ಮುಗೆಯನ್ನು ಕಯ್ ಬಿಡುತ್ತಾರೆ. ಆಮೇಲಿನ ದಿನಗಳಲ್ಲಿ ಅಮೇರಿಕವು ಜಪಾನಿನೊಡನೆ ಗೆಳೆತನ ಬೆಳೆಸುತ್ತದೆ. ಇಂದಿಗೆ ಜಪಾನು ಅಮೇರಿಕದೊಂದಿಗೆ ಅತೀ ಹೆಚ್ಚು ವ್ಯಾಪಾರ-ವಹಿವಾಟು ಇಟ್ಟುಕೊಂಡಿರುವ ನಾಡಾಗಿದೆ. ಒಂದನ್ನೊಂದು ಬಿಟ್ಟುಕೊಡದಂತಹ ರೀತಿಯಲ್ಲಿ ಅವತ್ತಿನಿಂದಾ ಇವತ್ತಿನವರೆಗೆ ಈ ಎರಡೂ ನಾಡುಗಳು ನಡೆದುಕೊಂಡಿವೆ.

ನಮ್ಮಲ್ಲಿಯೂ ರಾಜಮನೆತನಗಳು ಆಗಿಹೋಗಿವೆ. ಕನ್ನಡನಾಡಿನ ರಾಜಮನೆತನದ ಕುಡಿಯೊಂದು ಮೊನ್ನೆ ಕಳಚಿಹೋಗಿದೆ. ಆ ರಾಜಮನೆತನವು ಜನರಿಗೆ ಮಾಡಿದ ಒಳಿತನ್ನು ಅಯ್ವತ್ತು ವರುಶಗಳ ಬಳಿಕವೂ ಜನರು ನೆನೆಯುತ್ತಿದ್ದಾರೆ. ಕನ್ನಡನಾಡಿನ ಹಳಮೆಯನ್ನು ನಾವು ಮರೆತಿಲ್ಲ ಎಂಬುದರ ಕುರುಹು ಎಂಬಂತೆ, ರಾಜರ ಕೊನೆಯ ಪಯಣಕ್ಕೆ ಕಡಲೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಆದರೆ, ನಮ್ಮಗಳ ಮನಸಿನಿಂದ ನಮ್ಮ ಹಳಮೆಯ ನೆನಪು ಮಾಸಿ ಹೋಗುತ್ತಿರುವುದರ ಕುರುಹೂ ಅಲ್ಲಲ್ಲಿ ಕಂಡುಬರುತ್ತಿದೆ. ನಾಡೊಂದಾಗಿಸಲು ದುಡಿದ ಆಲೂರು ವೆಂಕಟರಾಯರ ಬಗೆಗಾಗಲೀ, ಮಯ್ಸೂರಿಗೆ ಸಾಕಶ್ಟು ಒಳ್ಳೆಯ ಕೆಲಸ ಮಾಡಿಹೋದ ನಾಲ್ವಡಿ ಕ್ರಿಶ್ಣರಾಜ ಒಡೆಯರ ಬಗೆಗಾಗಲೀ, ಹಲವು ಯುವಕರಲ್ಲಿ ಅರಿವಿಲ್ಲ. ಇದು ಹೀಗೇ ಮುಂದುವರಿದರೆ, ನಮ್ಮ ಹಳಮೆಯನ್ನರಿಯದ ನಾಡು ನಾವಾಗುವೆವು, ಬಳಿಕ ನಮ್ಮನ್ನು ಅಡಿಯಾಳಾಗಿಸಿಕೊಳ್ಳುವುದು ಅಶ್ಟರ ಮಟ್ಟಿಗೆ ಸುಲಬವೇ.

(ಚಿತ್ರ ಸೆಲೆ: nytimes.com)

2 ಅನಿಸಿಕೆಗಳು

  1. ನಲ್ಮೆಯ ಪ್ರಿಯಾಂಕ್, ಒಳ್ಳೆಯ ಬರೆಹ. ಹಳಮೆ ಮತ್ತು ನುಡಿಯ ಸೊಬಗನ್ನು ಹಿರಿಮೆಯನ್ನು ಒಂದು ಇಂಗ್ಲೀಶ್ ಸಿನೆಮಾವೊಂದರ ಮೂಲಕ ಚೆನ್ನಾಗಿಯೇ ಬಣ್ಣಿಸಿದ್ದೀರಿ. ನೀವು ಹೇಳಿದ ಹಾಗೆ ನಮ್ಮ ಹಳಮೆಯ ಬಗ್ಗೆ ಕೇವಲ ನಮ್ಮ ಯುವಕರಲ್ಲಿ ಮಾತ್ರವಲ್ಲ, ಇಡೀ ಯುವಪೀಳಿಗೆಗೆ ಅಶ್ಟು ಅರಿವಿಲ್ಲ. ಹೀಗೆಯೇ ಬರೆಯುತ್ತಿರಿ.

  2. ಒಳ್ಳೆಯ ಲೇಖನ, ತಮ್ಮ ಹಳಮೆಯ ಅರಿವು ಇದ್ದಿದರೆ, ಮೈಸೂರು ಅರಮನೆ ಸ್ವಾದೀನಕ್ಕೆ ಕೈ ಹಾಕುತಿರಲ್ಲಿಲವೇನೋ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.