ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ.

ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ ಅಶ್ಟು ಚಳಿ ಇಲ್ಲ, ಅಲ್ಲಿ ಹೇಗೆ ಅಶ್ಟೊಂದು ಚಳಿ?’ ಎಂದು ಮನೆಯಲ್ಲಿ ಕೇಳಿದರು. ‘ಅದು ಹಾಗೆ ಇಲ್ಲಿ’ ಎಂದು ಮರುನುಡಿ ನೀಡಿ ಜಾರಿಕೊಂಡು ಬಿಟ್ಟೆ.

ಆಮೇಲೆ, ಆ ಕೇಳ್ವಿಯ ಕುರಿತು ಚಿಂತಿಸಿದೆ. ಗಾಳಿಪಾಡಿನ (weather)’ ಬದಲಾವಣೆಗಳಿಗೆ ನೆಲ ಮತ್ತು ನೇಸರನ ನಡುವಿನ ನಂಟು ಕಾರಣ ಎಂದು ಮೇಲಿಂದ ಮೇಲೆ ತಿಳಿದಿದ್ದರು ಮತ್ತಶ್ಟು ಕೆದಕುವ ಬಯಕೆ ಹುಟ್ಟಿತು.

ನೆಲದ ಒಂದು ಕಡೆಯಲ್ಲಿ ಸಾಮಾನ್ಯ ಚಳಿ, ಮಳೆ ಹಾಗು ಬಿಸಿಲಿದ್ದರೆ ಮತ್ತೊಂದು ಕಡೆಯಲ್ಲಿ ಹೆಚ್ಚಾಗಿಯೋ ಇಲ್ಲವೇ ಕಡಿಮೆಯಾಗಿಯೋ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ, ಕಡಲ ನೀರಿನ ಮಟ್ಟದಿಂದ ಒಂದು ಜಾಗ ಇರುವ ಎತ್ತರ, ಬೆಟ್ಟಗುಡ್ಡಗಳ ಜಾಗ, ಬಯಲು ಸೀಮೆ, ಗಾಳಿಯ ಹರಿಯುವಿಕೆ, ನೇಸರನ ಸುತ್ತ ನೆಲದ ಸುತ್ತುವಿಕೆ.

ಹೀಗೆ ಹಲವಾರು ಕಾರಣಗಳಿಂದ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಗಾಳಿಪಾಡಿನ ಬೇರ‍್ಮೆಯನ್ನು ಕಾಣಬಹುದು. ಈ ಎಲ್ಲಾ ಕಾರಣಗಳಲ್ಲಿ, ನೇಸರನ ಸುತ್ತ ನೆಲದ ಸುತ್ತುವಿಕೆ ಯಾವ ಬಗೆಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಈಗ ನೋಡೋಣ.

ಮೊದಲು ಕೆಲವು ಬೇಕಾಗಿರುವ ವಿಶಯಗಳನ್ನು ತಿಳಿದುಕೊಳ್ಳೋಣ. ನೆಲವು ತನ್ನ ಸುತ್ತು ಒಂದು ಸುತ್ತನ್ನು ಹಾಕುತ್ತ ನೇಸರನನ್ನು ಒಂದು ಸುತ್ತು ಹಾಕುತ್ತದೆ. ನೆಲವು ತನ್ಸುತ್ತ ತಿರುಗಲು ಸುಮಾರು 24 ಗಂಟೆಗಳು ತಗಲುತ್ತವೆ, ಹಾಗು ನೇಸರನನ್ನು ಒಂದು ಸುತ್ತು ಹಾಕಲು ಸುಮಾರು 365 ದಿನಗಳು ತಗಲುತ್ತವೆ. ಹೀಗೆ ಸುತ್ತುವ ನೆಲವು ಒಂದು ದಾರಿಯಲ್ಲಿ ಸಾಗುತ್ತಿರುತ್ತದೆ ಹಾಗು ಈ ದಾರಿಯ ಮಟ್ಟವನ್ನು ಹಾದಿಯ ಮಟ್ಟಸ (orbital plane) ಎಂದು ಕರೆಯುತ್ತಾರೆ.

ನೆಲವು ಈ ಹಾದಿಯ ಮಟ್ಟಸಕ್ಕೆ ಯಾವಾಗಲೂ ನೇರವಾಗಿ ಸಾಗುವುದಿಲ್ಲ ಇದು ಕೊಂಚ ಬಾಗಿಕೊಂಡು ಸಾಗುತ್ತಿರುತ್ತದೆ. ಈ ಕೆಳಗಿನ ತಿಟ್ಟ 1ಅ ನೋಡಿ, ನೆಲದ ಸುತ್ತುವಿಕೆಯ ನಡುಗೆರೆಯು ಹಾದಿಯ ಮಟ್ಟಸಕ್ಕೆ ಕೊಂಚ ಬಾಗಿಗೊಂಡಿದೆ, ಇದನ್ನು ‘ನಡುಗೆರೆಯ ಓರೆ’ (axis tilt ) ಎಂದು ಕರೆಯುತ್ತಾರೆ. ನೆಲವು ನೇಸರನನ್ನು ಸುತ್ತುವ ದಾರಿಯಲ್ಲಿ ಹಾದಿಯ ಮಟ್ಟಸಕ್ಕೆ 23.5 ಡಿಗ್ರಿಗಳಶ್ಟು ಓರೆಯಾಗಿ ಸುತ್ತುತ್ತಿರುತ್ತದೆ.

Thitta 1

ಈ ನಡುಗೆರೆಯ ಓರೆಯಿಂದಾಗಿ ನೇಸರನ ಬೆಳಕು, ನೇಸರನಿಗೆ ಮುಕ ಮಾಡಿರುವ ನೆಲದ ಒಂದು ಬಾಗಕ್ಕೆ ಹೆಚ್ಚಾಗಿ ಮತ್ತು ಇನ್ನೊಂದು ಬಾಗಕ್ಕೆ ಕಡಿಮೆ ಬೀಳುತ್ತಿರುತ್ತದೆ. (ತಿಟ್ಟ 1ಇ ನೋಡಿ – ನೆಲದ ಬಡಗಣ ಬಾಗಕ್ಕೆ ಬೆಳಕು ಕಡಿಮೆಯಾಗಿ ಮತ್ತು ತೆಂಕಣ ಬಾಗಕ್ಕೆ ಹೆಚ್ಚಾಗಿ ಬೀಳುತ್ತಿದೆ) ನೇಸರನ ಬೆಳಕು ನೇರವಾಗಿ ಮತ್ತು ಹೆಚ್ಚಾಗಿ ಬೀಳುವ ಕಡೆ ಹೆಚ್ಚು ಬಿಸಿ ಇರುತ್ತದೆ, ಬೆಳಕು ಕಡಿಮೆ ಬಿದ್ದ ಕಡೆ ಕಡಿಮೆ ಬಿಸಿ ಇರುತ್ತದೆ.

ಹಾಗಾದರೆ, ನೆಲವು ಓರೆಯಾಗಿ ಸುತ್ತುವುದರಿಂದ ಯಾವಾಗಲೂ ನೆಲದ ಬಡಗಣದ ಬಾಗ ನೇಸರನಿಂದ ದೂರವಾಗಿಯೇ ಇರುತ್ತದೆಯೇ ಎಂಬ ಕೇಳ್ವಿ ಏಳುತ್ತದೆ. ಅದಕ್ಕೆ ಮರುನುಡಿ ’ಇಲ್ಲ’ ಎಂಬುದಾಗಿದೆ, ನೇಸರನನ್ನು ಸುತ್ತುವ ನೆಲವು ತನ್ನ ಹಾದಿಯಲ್ಲಿ ಕೆಲವು ತಿಂಗಳುಗಳು ಬಡಗಣ ಬಾಗವನ್ನು ನೇಸರನ ಕಡೆ ಬಾಗಿಕೊಂಡು, ಇನ್ನು ಕೆಲವು ತಿಂಗಳು ನೇಸರನಿಂದ ದೂರವಾಗಿ ಬಾಗಿಕೊಂಡು ಸುತ್ತುತ್ತದೆ.

ತಿಟ್ಟ 2 ನ್ನು ನೋಡಿ, ಜೂನ್ ಮತ್ತು ಜುಲಯ್ ತಿಂಗಳುಗಳಲ್ಲಿ ನೆಲದ ಬಡಗಣ ಬಾಗವು ನೇಸರನ ಕಡೆ ಬಾಗಿಕೊಂಡಿದೆ. ಈ ಹೊತ್ತಿನಲ್ಲಿ ಬಡಗಣದಲ್ಲಿ ಬೇಸಿಗೆ ಹಾಗು ತೆಂಕಣದಲ್ಲಿ ಚಳಿ ಇರುತ್ತದೆ. ಹಾಗೆಯೇ ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ನೆಲದ ಬಡಗಣ ಬಾಗವು ನೇಸರನಿಂದ ದೂರವಾಗಿ ಬಾಗಿಕೊಂಡಿದೆ, ಈ ಹೊತ್ತಿನಲ್ಲಿ ಬಡಗಣದಲ್ಲಿ ಚಳಿ ಹಾಗು ತೆಂಕಣದಲ್ಲಿ ಬೇಸಿಗೆ ಇರುತ್ತದೆ. ಹೀಗೆ ನೆಲದ ಓರೆಯಾದ ನಡೆ ಒಂದೇ ತಿಂಗಳಲ್ಲಿ ತನ್ನ ಬಡಗಣ ಹಾಗು ತೆಂಕಣ ಬಾಗಗಳಲ್ಲಿ ಚಳಿ ಹಾಗು ಬೇಸಿಗೆಯಯೆಂಬ ಬೇರೆ ಬೇರೆ ಗಾಳಿಪಾಡನ್ನು ಹೊಂದಿರುತ್ತದೆ.

Thitta 2

ನಾವೆಲ್ಲಾ ಕೇಳಿರುವ ಹಾಗೆ, ನೆಲದ ತೆಂಕಣ ತುದಿ ಇಲ್ಲವೇ ಬಡಗಣ ತುದಿಗೆ ಹೋದ ಹಾಗೆ ಬಹಳಶ್ಟು ಚಳಿ ಇರುತ್ತದೆ, ಹಾಗಾದರೆ ಈ ನಡುಗೆರೆಯ ಓರೆ ಮತ್ತು ನೇಸರನ ಬೆಳಕು ಹೇಗೆ ಕಾರಣವಾಗುತ್ತವೆ ಎಂದು ತಿಳಿದುಕೊಳ್ಳೋಣ. ಇದಕ್ಕಾಗಿ ನಾವು ಕೊಂಚ ನೇಸರನ ಬೆಳಕಿನ ಗೆರೆಯರಿಮೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.

ತಿಟ್ಟ 3 ರಲ್ಲಿ ತೋರಿಸಿರುವಂತೆ, ಸುಮಾರು 1 ಮಯ್ಲಿ ಅಗಲದ ನೇಸರನ ಬೆಳಕು (ಬೆಳಕು 1) ಉದ್ದವಾಗಿ ಬಂದು 90 ಡಿಗ್ರಿ ಕೋನದಲ್ಲಿ ಬಂದು ನೆಲದ ಮೇಲ್ಮಯ್ಯನ್ನು ತಾಕಿದರೆ, ಆ 1 ಮಯ್ಲಿ ಅಗಲಕ್ಕೆ ಮಾತ್ರ ಬೆಳಕಿನ ಹುರುಪು ಹರಡುತ್ತದೆ. ಒಂದು ವೇಳೆ ಅದೇ 1 ಮಯ್ಲಿ ಅಗಲದ ಬೆಳಕು (ಬೆಳಕು 2) ಓರೆಯಾಗಿ, ಅಂದರೆ ಸುಮಾರು 30 ಡಿಗ್ರಿ ಕೋನದಲ್ಲಿ ನೆಲದ ಮೇಲ್ಮಯನ್ನು ತಾಕಿದರೆ 2 ಮಯ್ಲಿಗಳಶ್ಟು ಅಗಲದ ನೆಲಕ್ಕೆ ಬೆಳಕಿನ ಹುರುಪು ಹರಡುತ್ತದೆ.

Thitta 3

ಬೆಳಕು 1 ಮತ್ತು ಬೆಳಕು 2 ಎಂಬ ಎರಡು ನೇಸರನ ಬೆಲಗುಗಳು (sunbeam) ಒಂದೇ ಮೊತ್ತದ ಹುರುಪನ್ನು ಹೊಂದಿರುತ್ತವೆ, ಹೀಗಿದ್ದಾಗ 90 ಡಿಗ್ರಿ ಕೋನದಲ್ಲಿ ನೆಲವನ್ನು ತಾಕುವ ಬೆಳಕು ತನ್ನೆಲ್ಲಾ ಹುರುಪನ್ನು 1 ಮಯ್ಲಿ ಅಗಲದ ಜಾಗಕ್ಕೆ ಹರಡಿರುತ್ತದೆ, ಅದೇ 30 ಡಿಗ್ರಿ ಕೋನದಲ್ಲಿ ಬಿದ್ದ ಬೆಳಕು ಅಶ್ಟೇ ಮೊತ್ತದ ಬೆಳಕಿನ ಹುರುಪನ್ನು 2 ಮಯ್ಲಿಗೆ ಹರಡಿರುತ್ತದೆ. ಹೀಗಾದಾಗ ಬೆಳಕು 1 ಬಿದ್ದ ಒಂದು ಮಯ್ಲಿ ಜಾಗದಲ್ಲಿ, ಬೆಳಕು 2 ಬಿದ್ದ ಎರಡು ಮಯ್ಲಿ ಜಾಗಕ್ಕಿಂತ ಹೆಚ್ಚು ಬಿಸಿ ಇರುತ್ತದೆ (ಸುಮಾರು ಎರಡು ಪಟ್ಟು ಬಿಸಿ ಹೆಚ್ಚಿರುತ್ತದೆ).

ನೆಲನಡುವಿನ ಗೆರೆಯ (equator) ಬಾಗಗಳು ನೇಸರನಿಗೆ ಹತ್ತಿರವಾಗಿವೆ ಮತ್ತು ನೇಸರನ ಬೆಳಕು ಸುಮಾರು 90 ಡಿಗ್ರಿ ಕೋನದಲ್ಲಿ ನೆಲವನ್ನು ತಾಕುತ್ತದೆ ಮತ್ತು ಬೆಳಕಿನ ಹುರುಪು ನೇಸರನ ಬೆಲಗಿಗಿಂತ ದೊಡ್ಡದಾಗಿ ಹರಡಿಕೊಳ್ಳುವುದಿಲ್ಲ (ತಿಟ್ಟ 4 ನ್ನು ನೋಡಿ).

ನೆಲದ ತೆಂಕಣ ಹಾಗು ಬಡಗಣ ಬಾಗಕ್ಕೆ ಹೋದಂತೆ ನೇಸರನಿಂದ ನೆಲದ ದೂರ ಹೆಚ್ಚುತ್ತಾ ಹೋಗುತ್ತದೆ ಮತ್ತು ನೇಸರನ ಬೆಳಕು 90 ಡಿಗ್ರಿಗಿಂತ ಕಡಿಮೆ ಕೋನದಲ್ಲಿ ನೆಲವನ್ನು ತಾಕುತ್ತದೆ. ಮೊದಲೇ ತಿಳಿದಂತೆ ನೇಸರನ ಬೆಲಗಿನ ಕೋನ 90 ಡಿಗ್ರಿಗಿಂತ ಕಡಿಮೆ ಆದಂತೆ ಅದು ಹರಡಿಕೊಳ್ಳುವ ನೆಲದ ಜಾಗ ಹೆಚ್ಚುತ್ತಾ ಹೋಗುತ್ತದೆ ಜೊತೆಗೆ ಬೆಳಕಿನ ಹುರುಪು ಕೂಡ ಹರಡಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ನೆಲನಡುವಿನ ಗೆರೆಯ ಬಾಗಗಳಿಗಿಂತ ಕಡಿಮೆ ಬಿಸಿ ಹಾಗು ಹೆಚ್ಚು ಚಳಿ ಇರುತ್ತದೆ.

Thitta 4

ಹೀಗೆ ನೆಲವು ಒಂದೇ ಆಗಿದ್ದರೂ ಒಂದೊಂದು ಬಾಗದಲ್ಲಿ ಚಳಿ ಹಾಗು ಬೇಸಿಗೆಗಳ ಸಾಂದ್ರತೆ ಬೇರೆ ಬೇರೆಯಾಗಿರುತ್ತದೆ. ಈ ನೆಲದ ನಡುಗೆರೆಯ ಓರೆ ಮತ್ತು ನೇಸರನ ಬೆಳಕು ಬೀಳುವ ಕೋನಗಳು ನೆಲದ ಗಾಳಿಪಾಡಿನ ಬೇರ‍್ಮೆಗೆ ಇರುವ ಕಾರಣಗಳಲ್ಲಿ ಕೆಲವು.

(ಮಾಹಿತಿ ಸೆಲೆ: wikipedia)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.