ಹಣಕಾಸಿನ ವ್ಯವಸ್ತೆ ಮತ್ತು ಪಿಂಚಣಿ

ಚೇತನ್ ಜೀರಾಳ್.

pension

ಹಿಂದಿನ ಹಲವಾರು ಬರಹಗಳಲ್ಲಿ ಹಣಕಾಸಿನ ಹಿಂಜರಿತದಿಂದ ನಾಡಿನ ಮೇಲಾಗುವ ಪರಿಣಾಮ, ಉದ್ದಿಮೆಗಳ ಮೇಲಾಗುವ ಪರಿಣಾಮ, ಜನರ ಮೇಲಾಗುವ ಪರಿಣಾಮಗಳ ಬಗ್ಗೆ ನೋಡಿದ್ದೇವೆ. ಆದರೆ ಇಂದು ಹಣಕಾಸಿನ ಹಿಂಜರಿಕೆ ಇದ್ದರೂ ಇಲ್ಲದಿದ್ದರೂ ದುಡಿಯುವ ಜನರ ಮೇಲಾಗುವ ಪರಿಣಾಮದ ಬಗ್ಗೆ ಅದರಲ್ಲೂ ಕೆಲಸದಿಂದ ಬಿಡುವು ಪಡೆಯುವ ವಯಸ್ಸಾದವರ ಬಗ್ಗೆ ನೋಡೋಣ.

ಒಂದು ಸುದ್ದಿಯ ಪ್ರಕಾರ ಜಗತ್ತಿನ ಎಲ್ಲಾ ಕೆಲಸಗಾರರ ಮೇಲೆ ತಮ್ಮ ಬಿಡುವು ಪಡೆಯುವ ಸಮಯವನ್ನು ಮುಂದು ಹಾಕುವ ಒಂದು ಸನ್ನಿವೇಶ ಬರಲಿದೆ. 2008ರಲ್ಲಿ ಆದ ಹಣಕಾಸಿನ ಹಿಂಜರಿತ ಮತ್ತು ಹಣಕಾಸಿನ ಕುಸಿತದ ಪರಿಣಾಮದಿಂದಾಗಿ ಮೇಲಿನ ಸನ್ನಿವೇಶ ಹುಟ್ಟಿದೆ. ಇದರ ಪ್ರಬಾವ ಇನ್ನು ಹತ್ತೇಡುಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.

ಏನಾಗುತ್ತಿದೆ?

ಹಣಕಾಸಿನ ಹಿಂಜರಿತದಿಂದಾಗಿ ಬಹುತೇಕ ಜನರು ತಮ್ಮ ಕೆಲಸದಿಂದ ಬಿಡುವು ಪಡೆಯುವ ವಯಸ್ಸಾದ 65 – 70ರ ನಂತರವೂ ಕೆಲಸ ಮಾಡಬೇಕಾದ ಸ್ತಿತಿ ಎದುರಾಗಲಿದೆ. ಮುಂದುವರಿದ ದೇಶಗಳಲ್ಲಿರುವ ಮುಪ್ಪಿನ ಜನರ ಬಡತನ ಹೆಚ್ಚಾಗಲಿದೆ ಮತ್ತು ತಮ್ಮ ಜೀವನದ ಮಟ್ಟ ಕುಸಿತ ಕಾಣುತ್ತದೆ. ಇನ್ನು ಮುಂದುವರೆಯುತ್ತಿರುವ ದೇಶಗಳಲ್ಲಿ ಮುಂದುವರೆದ ದೇಶಗಳ ರೀತಿಯಲ್ಲಿ ಬಿಡುವುಪಡೆದ ನಂತರದ ವ್ಯವಸ್ತೆ ಬೇಕು ಎನ್ನುವ ಕೂಗು ಹೆಚ್ಚಾಗುತ್ತಿದ್ದು ಈ ಜನರು ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳಬೇಕೆಂದು ಬಯಸುತ್ತಿಲ್ಲ. ಇದಕ್ಕೆ ಮುಕ್ಯ ಕಾರಣ, ಎರಡನೇ ಮಹಾ ಯುದ್ದದ ನಂತರದ ಪೀಳಿಗೆ ಈಗ ಕೆಲಸದಿಂದ ಬಿಡುವುಪಡೆಯುವ ಹಂತಕ್ಕೆ ಬಂದಿರುವುದು.

ಹೀಗಾಗುತ್ತಿರುವುದಕ್ಕೆ ಈ ಕೆಳಗಿನವು ಮುಕ್ಯ ಕಾರಣ

ಹಲವು ನಾಡುಗಳು ಬಿಡುವು ಪಡೆದ ನಂತರ ನೀಡುತ್ತಿದ್ದ ಸವ್ಲಬ್ಯಗಳನ್ನು ಕಡಿತಗೊಳಿಸುತ್ತಿವೆ ಮತ್ತು ಇವುಗಳನ್ನು ಪಡೆಯಲು ಇದ್ದ ವಯಸನ್ನು ಹೆಚ್ಚಿಸಿವೆ. ಉದ್ದಿಮೆಗಳು ಈಗ ಮುಂಚಿನಂತ ಬಿಡುವುಪಡೆದ ನಂತರದ ಪಿಂಚಣಿಯನ್ನು ನಿಲ್ಲಿಸಿವೆ. ಜನರು ತಮಗೆ ಬರುತ್ತಿದ್ದ ಹೆಚ್ಚಿನ ದುಡ್ಡನ್ನೆಲ್ಲ ಕರ್‍ಚು ಮಾಡಿಕೊಂಡು, ಸ್ವಲ್ಪವೇ ಮೊತ್ತವನ್ನು ಉಳಿಸಿಕೊಂಡಿರುವುದು. ಮತ್ತು ಹಣಕಾಸು ಹಿಂಜರಿತದ ನಂತರ ಉಳಿಸಿಟ್ಟು ಹಲವೆಡೆ ತೊಡಗಿಸಿದ್ದ ದುಡ್ಡೆಲ್ಲವೂ ಮುಗಿದುಹೋಗಿದೆ.

ಬಂಗಾರದ ದಿನಗಳು ಮುಗಿದಿವೆ

ಪಿಂಚಣಿಯು ಮೊದಲಿಗೆ ಜಾರಿಗೆ ಬಂದಿದ್ದು 1889ರಲ್ಲಿ. ಜರ್‍ಮನಿಯ ಚಾನ್ಸಲರ್ ಆಗಿದ್ದ ಒಟ್ಟೋ ವಾನ್ ಬಿಸ್ಮಾರ್‍ಕ್ ಅವರು ಮೊದಲಿಗೆ ಕೆಲಸಗಾರರಿಗೆ ಪಿಂಚಣಿಯನ್ನು ಜಾರಿಗೆ ತಂದರು. ಇದಾದ ನಂತರ 1935ರಲ್ಲಿ ಅಮೇರಿಕಾ ದೇಶವು ಸಮಾಜಿಕ ಬದ್ರತೆಯನ್ನು ಜಾರಿಗೆ ತಂದಿತು.

ಎರಡನೇ ಮಹಾಯುದ್ದದ ನಂತರ ದಿನಗಳಲ್ಲಿ ಶ್ರೀಮಂತ ದೇಶಗಳಲ್ಲಿ ತಮ್ಮ ಪಿಂಚಣಿ ವ್ಯವಸ್ತೆಯನ್ನು ಇನ್ನಶ್ಟು ಹೆಚ್ಚಿಸಿದರು. ಇದರ ಜೊತೆಜೊತೆಗೆ ಉದ್ದಿಮೆಗಳು ಸಹ ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಜನರಿಗೆ ತಿಂಗಳಿಗೆ ಇಂತಿಶ್ಟು ಮೊತ್ತ ಎನ್ನುವಂತಹ ಒಂದು ಪಿಂಚಣಿಯನ್ನು ಜಾರಿಗೆ ತಂದವು. ಇದು 1980ರಲ್ಲಿ ಹಲವಾರು ದೇಶಗಳು ಯುವ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಮುಪ್ಪಾದ ಕೆಲಸಗಾರರನ್ನು ಮನೆಗೆ ಕಳುಹಿಸಲು ಶುರುಮಾಡಿದರು. ಇದಕ್ಕೆ ಮುಪ್ಪಾದವರನ್ನು ಒಪ್ಪಿಸಲು ಬಿಡುವುಪಡೆಯುವ ವಯಸ್ಸನ್ನು ಇಳಿಸಿದರು ಮತ್ತು ಇವರಿಗೆ ಎಲ್ಲಾ ಸವ್ಲಬ್ಯಗಳು ಸಿಗುವಂತೆ ಮಾಡಿದರು. 1949ರಲ್ಲಿ ಬಿಡುವುಪಡೆಯುವ ವಯಸ್ಸು 64.3ರಿಂದ 1999ರ ಹೊತ್ತಿಗೆ 62.4ಕ್ಕಾಗಿತ್ತು. ಈ ಹೊತ್ತಿಗಾಗಲೇ 60ರ ನಂತರ ಬಿಡುವುಪಡೆಯುವುದು ಮತ್ತು ಆರಾಮದಾಯಕ ಜೀವನ ನಡೆಸಬಹುದು ಎನ್ನುವ ಶಯ್ಲಿಗೆ ಜನರು ಹೊಂದಿಕೊಂಡಿದ್ದರು.

ತೊಂದರೆ ಶುರುವಾಯಿತು

2000ದಿಂದ ಈಚೆಗೆ ಸರಕಾರಗಳು ಮತ್ತು ಉದ್ದಿಮೆಗಳು ತಾವು ಮಾಡುತ್ತಿರುವ ಕರ್‍ಚು ಮತ್ತು ಜನನ-ಮರಣಗಳ ಪಟ್ಟಿ ತಯಾರಿಸಿದಾಗ ತಾವು ಜನರಿಗೆ ಮಾತು ನೀಡಿದ ರೀತಿಯಲ್ಲಿ ಪಿಂಚಣಿ ಕೊಡಲು ಸಾದ್ಯವಿಲ್ಲ ಎಂದು ಗೊತ್ತಾಯಿತು. ಇವತ್ತು ಜನರ ಬದುಕುವ ಸಮಯ ಹೆಚ್ಚಾಗಿದೆ. ಒಂದು ವರದಿಯ ಪ್ರಕರ ಒಬ್ಬ ಮನುಶ್ಯ ತಾನು ಕೆಲಸದಿಂದ ಬಿಡುವುಪಡೆದ ನಂತರ ಸರಾಸರಿ 19 ವರ್‍ಶಗಳ ಕಾಲ ಬದುಕುತ್ತಾನೆ. ಆದರೆ ಪಿಂಚಣಿಯನ್ನು ಜಾರಿಗೆ ತರುವ ಹೊತ್ತಿನಲ್ಲಿ ಇದು 13 ವರ್‍ಶಗಳಾಗಿತ್ತು.

ಈಗಿರುವ ಬದುಕುವ ಸಮಯವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಜನರ ಕೆಲಸದಿಂದ ಬಿಡುವುಪಡೆಯುವ ವಯಸ್ಸನ್ನು 66 – 67 ನೇ ವಯಸ್ಸಿಗೆ ಏರಿಸಬೇಕಾಗುತ್ತದೆ. ಸದ್ಯಕ್ಕೆ ಇರುವ ಸರಾಸರಿ ಬಿಡುವುಪಡೆಯುವ ವಯಸ್ಸು 63.

ಕುಸಿಯುತ್ತಿರುವ ಜನಸಂಕ್ಯೆ

ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಎನ್ನುವಂತೆ ಈಗಿರುವ ಸಮಸ್ಯೆಯ ಜೊತೆಗೆ ಎರಡನೇ ಮಹಾ ಯುದ್ದದ ನಂತರ ಮುಂದುವರಿದ ದೇಶಗಳಲ್ಲಿ ಜನಸಂಕ್ಯೆಯ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿದೆ. ಇದರಿಂದಾಗಿ ಜನಸಂಕ್ಯೆಯಲ್ಲಿ ಯುವಕರು ಕಮ್ಮಿ ಮತ್ತು ಮುಪ್ಪಿನವರು ಜಾಸ್ತಿ ಎಂಬಂತಾಗಿದೆ. ಹೆಚ್ಚಿನ ಜನರು ಪಿಂಚಣಿ ಪಡೆಯಲು ಶುರುಮಾಡಿದಾಗ ಅದನ್ನು ಸರಿದೂಗಿಸಲು ಸರಿಯಾದ ಪ್ರಮಾಣದಲ್ಲಿ ಯುವ ಸಮೂಹ ಕೆಲಸ ಮಾಡುತ್ತಿರಬೇಕು. ಆದರೆ ಇಂದು ಕುಸಿಯುತ್ತಿರುವ ಜನಸಂಕ್ಯೆಯಿಂದಾಗಿ ಸರಕಾರಗಳಿಗೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಕಶ್ಟವಾಗುತ್ತಿದೆ.

ವರದಿಯ ಪ್ರಕಾರ ಚೀನಾದಲ್ಲಿ 2010ರಲ್ಲಿ 65 ವಯಸ್ಸಿಗಿಂತ ಹೆಚ್ಚಿರುವವರು ಶೇ 11ರಶ್ಟು ದುಡಿಯುವ ವರ್‍ಗದಲ್ಲಿ ಸೇರಿದ್ದಾರೆ. 2050ರ ಹೊತ್ತಿಗೆ ಇದರ ಪ್ರಮಾಣ ಶೇ 42ಕ್ಕೆ ಏರುತ್ತದೆ. ಅಮೇರಿಕಾದಲ್ಲಿ ಇಂತಹವರು ಶೇ 20ರಶ್ಟು ಇದ್ದು ಮುಂದೆ 35ರಶ್ಟು ಆಗಲಿದ್ದಾರೆ.

ಸರಕಾರಗಳ ಮೇಲೆ ಹಿಂಜರಿತದ ಹೊಡೆತ

ಮೊದಲಿಗೆ ಸರಕಾರಕ್ಕೆ ಬರಬೇಕಾಗಿದ್ದ ಹಣ ಜನಸಂಕ್ಯೆಯ ಕೊರತೆಯಿಂದಾಗಿ ಬರುವುದು ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ಹಣಕಾಸಿನ ಹಿಂಜರಿತದ ಪರಿಣಾಮ ಸರಕಾರಗಳು ದೊಡ್ಡ ಹೊಡೆತವನ್ನೇ ಅನುಬವಿಸುತ್ತಿವೆ. 2008 ರಲ್ಲಿ ಆದ ಹಣಕಾಸಿನ ಹಿಂಜರಿತ 1930 ರಲ್ಲಿ ಆಗಿದ್ದ ಸಂದರ್‍ಬಕ್ಕೆ ಪ್ರಪಂಚವನ್ನು ಕೊಂಡ್ಯೊಯ್ದಿದೆ. ಸರಕಾರಗಳು ತಾವು ಮಾಡುವ ಕರ್‍ಚು ಮತ್ತು ತಾವು ಪಡೆಯುವ ತೆರಿಗೆಯ ನಡುವಿನ ಅಂತರ ಬಹುತೇಕ ಎಲ್ಲಾ ದೇಶಗಳಲ್ಲು ದೊಡ್ಡದಾಗುತ್ತಾ ಹೋಗುತ್ತಿದೆ.

ಇದರಿಂದಾಗಿ ಸರಕಾರಗಳು ಪಿಂಚಣಿಯ ಮೇಲೆ ಮಾಡುತ್ತಿರುವ ಕರ್‍ಚನ್ನು ಹಿಡಿದಿಡುವಂತೆ ಮಾಡಿದೆ. ಹಂಗೇರಿ ದೇಶದಲ್ಲಿ ಅಲ್ಲಿನ ಜನರು ತಾವು ಮುಪ್ಪಿನ ಕಾಲಕ್ಕೆ ಅಂತ ಮಾಡುವ ರಿಟಾಯರ್‍ಮೆಂಟ್ ಅಕವ್ಂಟ್ ಗಳನ್ನು ಸರಕಾರಕ್ಕೆ ನೀಡಬೇಕು ಎನ್ನುವ ಆದೇಶವನ್ನು ಸಹ ಮಾಡಿತ್ತು. ಪೋಲಾಂಡ್ ನಲ್ಲಿ ಈ ರಿಟಾಯರ್‍ಮೆಂಟ್ ಅಕವ್ಂಟ್ ಗಳ ಒಂದು ಅಂಶವನ್ನು ಸರಕಾರ ವಶಪಡಿಸಿಕೊಂಡರೆ, ಅಯ್ರ್ಲ್ಯಾಂಡ್ ನಲ್ಲಿ ರಿಟಾಯರ್‍ಮೆಂಟ್ ಅಕವ್ಂಟ್ ಮೇಲೆ ತೆರೆಗೆ ವಿದಿಸಲು ಶುರುಮಾಡಿವೆ.

ಏಶಿಯಾದಲ್ಲಿ ಬೇರೆಯದೇ ಕತೆ

ಪಡುವಣ ನಾಡುಗಳಲ್ಲಿ ಈ ಮೇಲಿನ ಕತೆಯಾದರೆ ಏಶಿಯಾ ಕಂಡದಲ್ಲಿ ಇನ್ನೊಂದು ತರಹದ ಕತೆ, ಚೀನಾ, ಕೊರಿಯಾ ಮತ್ತು ಬಾರತದಂತಹ ದೇಶಗಳಲ್ಲಿ ಅಲ್ಲಿನ ಜನರು ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮ ಮಕ್ಕಳು ತಮ್ಮನ್ನು ನೋಡುಕೊಳ್ಳಬೇಕು ಎಂದು ಅಪೇಕ್ಶಿಸುತ್ತಾರೆ. ಆದರೆ ಈಗಿನ ಯುವ ಪೀಳಿಗೆ ಹೆಚ್ಚಾಗಿ ತಾವು ಸ್ವತಂತ್ರವಾಗಿ ಬದುಕಬೇಕು ಎಂದು ಇಚ್ಚಿಸುತ್ತಾರೆ. ತಮ್ಮ ಕೆಲಸಗಳಿಗಾಗಿ ದೊಡ್ಡ ಊರು ಸೇರುತ್ತಿರುವ ಈ ಪೀಳಿಗೆ ತಮ್ಮ ತಂದೆ ತಾಯಿಯನ್ನು ಊರಿನಲ್ಲೇ ಬಿಟ್ಟು ಹೋಗುತ್ತಾರೆ. ಆದರೆ ಹೀಗೆ ಉಳಿದು ಹೋಗುವ ಜನರಿಗೆ ನೋಡಿಕೊಳ್ಳಲು ಯಾವುದೇ ವ್ಯವಸ್ತೆಯನ್ನು ಇವರಾಗಲಿ ಸರಕಾರವಾಗಲಿ ಮಾಡಿಲ್ಲ.

ಇದು ಕರ್‍ನಾಟಕದಲ್ಲೂ ಆಗಿದೆ

ನಿಮಗೆ ನೆನಪಿದ್ದರೆ ಕೆಲವು ವರ್‍ಶಗಳ ಹಿಂದೆ ಕರ್‍ನಾಟಕ ಸರಕಾರವು ಸಹ ಸರಕಾರಿ ಕೆಲಸಗಾರರ ಬಿಡುವುಪಡೆಯುವ ವಯಸ್ಸನ್ನು 58 ರಿಂದ 60 ಕ್ಕೆ ಏರಿಸಿತ್ತು. ಇದಕ್ಕೆ ಯುವಕರಿಂದ ವಿರೋದವಿದ್ದರೂ ಸಹ ಸರಕಾರ ಯುವಕರಿಗೆ ಕೆಲಸ ನೀಡದೆ ಇರುವವರನ್ನೇ ಮುಂದುವರಿಸಲು ಎಲ್ಲಾ ಸರಕಾರಿ ಕೆಲಸಗಾರರಿಗೂ ನೀಡಬೇಕಾದ ಬಿಡುವುಪಡೆಯುವ ದುಡ್ಡು ಮತ್ತು ಪಿಂಚಣಿಯನ್ನು ನೀಡಲು ಹಣವಿಲ್ಲದ್ದೇ ಕಾರಣ. ಇಂದು ನಮ್ಮ ನಾಡಿನಲ್ಲಿ ಯುವಕರಿಗೆ ಕೆಲಸಗಳು ಸಿಗುತ್ತಿಲ್ಲ. ಕುಸಿಯುತ್ತಿರುವ TFRನಿಂದಾಗಿ ಮುಂದೊಂದು ದಿನ ನಮ್ಮ ನಾಡನ್ನು ಮೇಲೆ ಹೇಳಿದ ನಾಡುಗಳ ಸಾಲಿನಲ್ಲಿ ನೋಡಬೇಕಾಗುತ್ತದೆ. ಇದಕ್ಕೆ ಪರಿಹಾರ ಹೆಚ್ಚು ಉದ್ದಿಮೆಗಳನ್ನು ತೆರೆಯುವುದು, ಹೆಚ್ಚು ಜನರು ದುಡಿಮೆಯಲ್ಲಿ ತೊಡಗುವಂತೆ ಮಾಡುವುದು ಮತ್ತು ಕನ್ನಡಿಗರ TFR 2.1ಕ್ಕಿಂತ ಕೆಳಗೆ ಕುಸಿಯದಂತೆ ನೋಡಿಕೊಳ್ಳುವುದು.

(ಚಿತ್ರ ಸೆಲೆ: businesstoday)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: