ಮಯ್ಯೊಂದು ಕನ್ನಡಿ

ಪ್ರಶಾಂತ ಸೊರಟೂರ.

  • ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು.
  • ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು.
  • ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು.
  • ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ ಬೆರಗಿನಿಂದ ಹುಬ್ಬೇರಿಸಿದರು.
  • ಅವರಲ್ಲಿ ಯಾವುದೋ ಕೊರಗಿದೆಯಂತಾ ಅವರ ಬಾಡಿದ ಮುಕವೇ ಹೇಳುತ್ತಿದೆ.
  • ಹೆಮ್ಮೆಯಿಂದ ಎದೆಯುಬ್ಬಿಸಿ ತನ್ನವರ ಕುರಿತು ಆತ ತಿಳಿಸಿಕೊಡುತ್ತಿದ್ದ.

ಇಂತಹ ಹಲವಾರು ಸಾಲುಗಳನ್ನು ಬದುಕಿನಲ್ಲಿ ಕಂಡ ಇಲ್ಲವೇ ಕತೆ-ಕಾದಂಬರಿಗಳಲ್ಲಿ ಓದಿದ ಅನುಬವ ನಿಮಗಾಗಿರಬಹುದು. ಬೇರೆ ಬೇರೆ ಬಾವನೆಗಳಿಗೆ ನಮ್ಮ ಮಯ್ಯಲ್ಲಿ ಬದಲಾಣೆಗಳಾಗುತ್ತವೆ ಅಂತಾ ಗೊತ್ತಿದ್ದರೂ ಅವುಗಳಿಗೆ ಕರಾರುವಕ್ಕಾದ ನಂಟನ್ನು ತೋರಿಸಬಹುದೇ? ಬಾವನೆ ಮತ್ತು ಮಯ್ಯಿಯ ನಂಟು ನಡೆ-ನುಡಿಗಳಿಗೆ, ನಾಡಿಗೆ ತಕ್ಕಂತೆ ಬೇರೆಯಾಗಿರುತ್ತದೆಯೇ? ಅನ್ನುವಂತ ಕೇಳ್ವಿಗಳು ಅರಿಗರನ್ನು ಹಿಂದಿನಿಂದಲೂ ಕಾಡಿದಂತವು.

ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಅರಕೆಯೊಂದು ಬೆಳಕುಚೆಲ್ಲಿದ್ದು, ಮೊಟ್ಟಮೊದಲ ಬಾರಿಗೆ ಬಾವನೆಗೆ ತಕ್ಕಂತೆ ನಮ್ಮ ಮಯ್ಯಿಯ ಯಾವ-ಯಾವ ಬಾಗಗಳು ಹೆಚ್ಚು ಹುರುಪುಗೊಳ್ಳುತ್ತವೆ ಎಂದು ತೋರಿಸಿಕೊಟ್ಟಿದೆ. ಇದರ ಜತೆಗೆ ಬಾವನೆಗಳಿಗೆ ಮಯ್ಯಿ ನಡೆದುಕೊಳ್ಳುವ ರೀತಿಯಲ್ಲಿ ನಾಡುಗಳ ಎಲ್ಲೆಗಳಾಚೆ ಹಲವಾರು ವಿಶಯಗಳಲ್ಲಿ ಒಂತನವಿರುವುದು ಈ ಅರಕೆಯಲ್ಲಿ ಕಂಡುಬಂದಿದೆ. ಈ ಅರಕೆಯ ದೊರೆತಗಳನ್ನು (results) ಕಳೆದ ವಾರ ಅಮೇರಿಕಾದ ನ್ಯಾಶನಲ್ ಆಕಾಡಮಿ ಆಪ್ ಸಯನ್ಸ್ ಹೊಮ್ಮಿಸಿದೆ.

ಪಿನ್‍ಲ್ಯಾಂಡ್, ಸ್ವೀಡನ್ ಮತ್ತು ತಯ್ವಾನ್ ನಾಡುಗಳ ಸುಮಾರು 700 ಮಂದಿ ಪಾಲ್ಗೊಂಡಿದ್ದ ಪ್ರಯೋಗದಲ್ಲಿ ಬೇರೆ ಬೇರೆ ಬಾವನೆಗಳನ್ನು ಹೊಮ್ಮಿಸುವ ಪದಗಳು, ಓಡುತಿಟ್ಟಗಳು (ವಿಡಿಯೋ), ಕತೆಗಳನ್ನು ಪಾಲ್ಗೊಂಡವರ ಮುಂದಿಡಲಾಯಿತು.

ಬಾವನೆಗೆ ತಕ್ಕಂತೆ ತಮ್ಮ ಮಯ್ಯಲ್ಲಿ ಎಂತ ಬದಲಾವಣೆಗಳಾದವು, ಯಾವ-ಯಾವ ಬಾಗಗಳು ಹೆಚ್ಚು ಹುರುಪುಗೊಂಡಿರುವಂತೆ ತೋರಿದವು ಅಂತಾ ಪಾಲ್ಗೊಂಡವರಿಂದಲೇ ಅರಕೆಗಾರರು ಪಡೆದುಕೊಂಡರು. ಆಮೇಲೆ ಅವರ ನಾಡುಗಳ ನಡೆ-ನುಡಿಗಳಿಂದಾಗಿಯೇ ಬಂದಿರಬಹುದಾದ ಕೆಲವು ಹೊರತುಗಳನ್ನು (exceptions) ಅರಕೆಗಾರರು ಕಯ್ಬಿಟ್ಟರು. ಹೀಗೆ ಬಾವನೆಗೆ ತಕ್ಕಂತೆ ಮಾರ‍್ಪಡುವ ಮಯ್ಗನ್ನಡಿಯ ಒಟ್ಟು ನೋಟವನ್ನು ಅಣಿಗೊಳಿಸಲಾಯಿತು.

Body_Emotions

(ಬಾವನೆ ಮತ್ತು ಮಯ್ಯಿ ಬಾಗಗಳ ನಂಟು ತೋರಿಸುತ್ತಿರುವ ತಿಟ್ಟ. ಎಲ್ಲಕ್ಕಿಂತ ಹೆಚ್ಚು ಹುರುಪುಗೊಂಡಿರುವ ಬಾಗಗಳು ಹಳದಿ ಬಣ್ಣದಲ್ಲಿ ಮತ್ತು ಕಡಿಮೆ ಹುರುಪುಗೊಂಡಿರುವ ಬಾಗಗಳನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ)

ಬೇರೆ ಬೇರೆ ಬಾವನೆಗಳಿಗೆ, ಮಯ್ಯಿಯ ಬೇರೆ ಬಾಗಗಳು ಹುರುಪುಗೊಂಡಿರುವುದು ಕಂಡಿತಾದರೂ ಕೆಲವು ಬಾವನೆಗಳಿಗೆ ಮಯ್ಯಿಯ್ ಅದೇ ಬಾಗಗಳು ಹೆಚ್ಚು ಹುರುಪುಗೊಂಡಿರುವುದು ಕಂಡಿತು. ಎತ್ತುಗೆಗೆ: ಸಿಟ್ಟು ಮತ್ತು ಅಂಜಿಕೆಗೆ ಎದೆಯ ಮೇಲ್ಗಾಗ ಹೆಚ್ಚು ಹುರುಪುಗೊಳ್ಳುವಂತಹ ವಿಶಯ. ಹೀಗಾಗಲು ಸಿಟ್ಟು ಇಲ್ಲವೇ ಅಂಜಿಕೆಯಾದಾಗ ಉಸಿರಾಟ ಮತ್ತು ನಾಡಿ ಮಿಡಿತ ಹೆಚ್ಚಾಗುವುದು ಮುಕ್ಯ ಕಾರಣವಿರಬಹುದೆಂದು ಅರಕೆಗಾರರು ತಿಳಿಸಿದ್ದಾರೆ.

ಈ ಅರಕೆಯಲ್ಲಿ ಇನ್ನೊಂದು ಕರಾರುವಕ್ಕಾಗಿ ಕಂಡುಬಂದಿದ್ದೆಂದರೆ, ’ನಲಿವು’ ಆದಾಗ ಅಶ್ಟೇ ಇಡೀ ಮಯ್ಯಿ ಹೆಚ್ಚು ಹುರುಪುಗೊಳ್ಳುತ್ತದೆ. ಗೊತ್ತಾಯಿತಲ್ಲ, ನಲಿವಿನ ’ಹುರುಪು’ ಎಂತದು ಅಂತಾ 🙂

(ತಿಳಿವಿನ ಮತ್ತು ತಿಟ್ಟಸೆಲೆ: discovermagazine)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: