ಬೇಕೆಂತಲೇ ಕನ್ನಡದೊಳಕ್ಕೆ ಆಂಗ್ಲವನ್ನು ತುರುಕದಿರೋಣ

 ಶ್ರೀನಿವಾಸಮೂರ‍್ತಿ ಬಿ.ಜಿ.

19-english.jpg

ಸುಗ್ಗಿ ಹಬ್ಬದ ಸಂಜೆ, ಕಾಲೇಜು ಹುಡುಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಎಲ್ಲಿಗೋ ಹೋಗಲು ಬಸ್ಸನ್ನು ಹತ್ತಿದಳು. ಕಂಡೆಕ್ಟರ್ ಎಂದಿನಂತೆ ಚೀಟಿ ತೆಗೆದುಕೊಳ್ಳುವಂತೆ ಹುಡುಗಿಗೆ ಹೇಳಿದರು. ಹುಡುಗಿ “ಪಾಸ್” ಎಂದಳು. ಆಗ ಕಂಡೆಕ್ಟರ್ “ಕಾಲೇಜು ಪಾಸ್ ನಡೆಯೊಲ್ಲ. ಕಾಲೇಜು ದಿನಗಳಲ್ಲಿ ಮಾತ್ರ ಅಶ್ಟೆ” ಎಂದರು. ಹುಡುಗಿ “G.H ಗೆ ಪಾಸ್ ನಡೆಯೊಲ್ಲ ಅಂತ ಎಲ್ಲಾದ್ರು ಇದ್ರೆ ತೋರ್‍ಸಿ” ಎಂದು ಕೋಪದಿಂದಲೇ ಕಂಡೆಕ್ಟರಿಗೆ ಹೇಳಿದಳು. ಕಂಡೆಕ್ಟರಿಗೆ ಈ G.H ಪದವನ್ನು ಬಳಸಿದ್ದರ ಹಿಂದಿನ ಹುರುಳು ತಿಳಿಯದಾಯಿತು. ಆಗ ಕಂಡೆಕ್ಟರ್ ತುಸು ಸುಮ್ಮನಾದರು. ಹುಡುಗಿ “General Holiday” ಎಂದು ಹೇಳಿದಳು. ಕೊನೆಗೂ ಕಂಡೆಕ್ಟರ್ ಹಣ ಪಡೆದು ಚೀಟಿ ನೀಡಿದರು. ಇಬ್ಬರ ನಡುವಿನ ಮಾತುಗಳ ಕೊನೆಗೊಂಡಿತು.

ಹೇಳುತ್ತಾ ಹೋದರೆ ಬಹಳಶ್ಟು ಈ ತೆರನ ಪದಗಳನ್ನು ಬಳಸುತ್ತಿರುವ ಎತ್ತುಗೆಗಳು ಸಿಗುತ್ತವೆ. ಹೊತ್ತನ್ನು ಉಳಿಸುವುದಕ್ಕೋ, ಇನ್ಯಾವುದಕ್ಕೋ ಒಟ್ಟಿನಲ್ಲಿ ಪದಗಳನ್ನು ಚಿಕ್ಕದಾಗಿ ಹೇಳಿ ತನ್ಮೂಲಕ ತನ್ನ ಕೆಲಸವನ್ನು ಆಗಿಸಿಕೊಳ್ಳುವುದರ ಜೊತೆಗೆ ಬೇರೆಯವರೂ ಈ ತೆರನ ಪದಗಳನ್ನು ಬಳಸುವಂತೆ ಆಗುತ್ತಿದೆ. ಇದು ಸರಿಯೋ ತಪ್ಪೋ ನಿಮಗೆ ಬಿಟ್ಟಿದ್ದು. ಆದರೆ ಬೇಕೆಂತಲೇ ಈ ತೆರನ ಪದಗಳು ನಮ್ಮ ನುಡಿಯೊಳಕ್ಕೆ ನುಸುಳಿಸುವುದರಿಂದ ನಮ್ಮ ನುಡಿಯ ಪದಗಳ ಬಳಕೆಯು ಇಲ್ಲವಾಗುತ್ತದಲ್ಲಾ? ಹಾಗಾಗಿಯೇ ಕಾಲೇಜುಗಳಲ್ಲಿ ಆಗಿಂದಾಗ್ಗೆ ಕನ್ನಡದಲ್ಲಿಯೇ ಮಾತನಾಡುವ ಪೋಟಿಯನ್ನು ತಿಂಗಳಿಗೊಮ್ಮೆಯೋ 5 ತಿಂಗಳಿಗೊಮ್ಮೆಯೋ ಏರ್‍ಪಡಿಸಿ ತುಸುವಾದರೂ ಇಂತಹ ಮಾತ್ದಾರಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

ನಾನು ಶಾಲೆಯಲ್ಲಿದ್ದಾಗ ಕನ್ನಡದಲ್ಲೇ ಮಾತನಾಡುವ ಮಾತು ಪೋಟಿಯನ್ನು ಗೆಳೆಯರೊಡನೆ ಏರ್‍ಪಡಿಸಿ ಒಮ್ಮೊಮ್ಮೆ ಸೋಲುತ್ತಿದ್ದೆ, ಗೆಲ್ಲುತ್ತಿದ್ದೆ. ಗುರುಗಳು ಕೆಲವೊಮ್ಮೆ ತಿಳಿಯದ ಆಂಗ್ಲದ ಪದಗಳಿಗೆ ಕನ್ನಡದ ಪದಗಳನ್ನು ಹೇಳುತ್ತಿದ್ದರು. ಇದರಿಂದ ಬಹಳಶ್ಟು ಅನುಕೂಲವೂ ಆಗುತ್ತಿತ್ತು. ಕೆಲವೊಮ್ಮೆ ನಾನೂ ಕೂಡ Thanks, Sir, OK… ಹೀಗೆ ಪದವನ್ನು ಬಳಸುತ್ತಿರುತ್ತೇನೆ. ಈ ತೆರನ ಪದಗಳು ಹುಟ್ಟಿನಾಗಿನಿಂದ ಕಿವಿಗೆ ಬಿದ್ದುಬಿದ್ದೂ ಕನ್ನಡದವೇನೋ ಎಂಬಂತೆ ಬಳಸುವಂತೆ ಆಗಿದ್ದಾಗ್ಯೂ, ನನ್ನಲ್ಲಿ ಕನ್ನಡ ಪದಗಳ ಬಳಕೆಯ ಕೊರತೆ ಉಂಟಾಗಿದ್ದಾಗ್ಯೂ ಹೊನಲು ತಾಣಿಗರ ಒಡನಾಟವು ಈ ಕೊರತೆಯನ್ನು ಇಲ್ಲವಾಗಿಸುತ್ತಿದೆ ಎಂದು ಹೇಳಿಕೊಳ್ಳಲು ಸಂತಸವಾಗುತ್ತಿರುವುದರ ಜೊತೆಗೆ ನಮ್ಮ ನುಡಿಯ ಪದಗಳು ನಮ್ಮಿಂದಲೇ ಬಳಸಲಾಗುತ್ತಿಲ್ಲವಲ್ಲಾ ಎಂದು ಬೇಸರವೂ ಆಗುತ್ತಿದೆ.

(ಚಿತ್ರ ಸೆಲೆ: kannada.boldsky.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: